ದೇವಸ್ಥಾನಗಳ ರಕ್ಷಣೆಗಾಗಿ ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ವತಿಯಿಂದ ದೇವಸ್ಥಾನಗಳ ರಕ್ಷಣಾ ಅಭಿಯಾನಕ್ಕೆ ಚಾಲನೆ !

ಮಂಗಳೂರಿನಲ್ಲಿ ಮಂಗಳಾದೇವಿಯ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ

ಮಂಗಳೂರಿನ ಗ್ರಾಮದೇವತೆ ಶ್ರೀ ಮಂಗಳಾದೇವಿ ಸನ್ನಿಧಿಯಲ್ಲಿ ದೇವಸ್ಥಾನ ರಕ್ಷಣಾ ಅಭಿಯಾನದ ಯಶಸ್ಸಿಗಾಗಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸುತ್ತಿರುವ ಪೂ. ರಮಾನಂದ ಗೌಡ, ಶ್ರೀ. ಸುನೀಲ್ ಘನವಟ್, ಮತ್ತು ಇತರ ಧರ್ಮಪ್ರೇಮಿಗಳು

ಮಂಗಳೂರು – ಮಾರ್ಚ್ ೩ ರಂದು ಮಂಗಳೂರಿನಲ್ಲಿ, “ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ” ವತಿಯಿಂದ ದೇವಸ್ಥಾನಗಳ ರಕ್ಷಣಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಅಭಿಯಾನದ ಮುಂದಿನ ದಿಶೆಯನ್ನು ನಿರ್ಧಾರ ಮಾಡಲು ಹಾಗೂ ದೇವಸ್ಥಾನಗಳ ಸದ್ಯದ ಸ್ಥಿತಿಗತಿಗಳ ಬಗ್ಗೆ ದೇವಸ್ಥಾನ ರಕ್ಷಣಾ ಅಭಿಯಾನವನ್ನು ಪ್ರಾರಂಭ ಮಾಡಲು ಸದಸ್ಯರ ಸಭೆಯನ್ನು ಕರೆಯಲಾಗಿತ್ತು. ಈ ಸಭೆಯಲ್ಲಿ ಸನಾತನ ಸಂಸ್ಥೆಯ ಧರ್ಮಪ್ರಚಾರಕ ಸಂತರಾದ ಪೂ. ರಮಾನಂದ ಗೌಡ, ಮಹಾಸಂಘದ ಮಹಾರಾಷ್ಟ್ರ ರಾಜ್ಯದ ವಕ್ತಾರರಾದ ಶ್ರೀ. ಸುನೀಲ್ ಘನವಟ್, ಮಹಾಸಂಘದ ಕರ್ನಾಟಕ ರಾಜ್ಯ ವಕ್ತಾರರಾದ ಶ್ರೀ. ಗುರುಪ್ರಸಾದ ಗೌಡ, ಸದಸ್ಯರುಗಳಾದ, ಶ್ರೀ. ಪ್ರಭಾಕರ ನಾಯ್ಕ್, ಶ್ರೀ. ಶ್ರೀನಿವಾಸ್, ಉದ್ಯೋಗಪತಿಗಳಾದ ಶ್ರೀ. ದಿನೇಶ ಎಮ್. ಪಿ ಮತ್ತು ಇತರ ಧರ್ಮಪ್ರೇಮಿಗಳು ಉಪಸ್ಥಿತರಿದ್ದರು.

ಶ್ರೀ. ಸುನಿಲ್ ಘನವಟ್

ಈ ಸಂದರ್ಭದಲ್ಲಿ ಮಾತನಾಡಿದ ಮಹಾರಾಷ್ಟ್ರ ದೇವಸ್ಥಾನ ಮಹಾಸಂಘದ ವಕ್ತಾರರಾದ ಶ್ರೀ. ಸುನಿಲ್ ಘನವಟ್ ಇವರು, ಮಹಾರಾಷ್ಟ್ರದಲ್ಲಿ ಸರಕಾರದ ವಶದಲ್ಲಿರುವ ದೇವಸ್ಥಾನಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ದೇವಸ್ಥಾನ ಭೂಮಿಯ ಒತ್ತುವರಿ, ಮತ್ತಿತರ ವಿಷಯಗಳ ಬಗ್ಗೆ ಉಪಸ್ಥಿತರಲ್ಲಿ ಗಂಭೀರತೆಯನ್ನು ಮೂಡಿಸಿದರು.

ಶ್ರೀ. ಗುರುಪ್ರಸಾದ್ ಗೌಡ

ಮಹಾಸಂಘದ ಕರ್ನಾಟಕ ರಾಜ್ಯ ವಕ್ತಾರರಾದ ಶ್ರೀ. ಗುರುಪ್ರಸಾದ್ ಗೌಡರವರು ಕರ್ನಾಟಕದಲ್ಲಿಯೂ ಸರಕಾರದ ಅಡಿಯಲ್ಲಿರುವ ದೇವಸ್ಥಾನಗಳ ದುಃಸ್ಥಿತಿಯ ಬಗ್ಗೆ ಮತ್ತು ಇಲ್ಲಿಯ ದೇವಸ್ಥಾನಗಳ ರಕ್ಷಣೆಯ ದೃಷ್ಟಿಯಿಂದ ನಾವು ಹೇಗೆ ಪ್ರಯತ್ನ ಮಾಡಬೇಕಾಗಿದೆ ಎಂಬುವುದರ ಅರಿವನ್ನು ಮೂಡಿಸಿದರು.

ಪೂ. ರಮಾನಂದ ಗೌಡ

ಸನಾತನ ಸಂಸ್ಥೆಯ ಧರ್ಮಪ್ರಚಾರಕ ಸಂತರಾದ ಪೂ. ರಮಾನಂದ ಗೌಡ ಇವರು ದೇವಸ್ಥಾನಗಳು ನಮ್ಮ ಆಧಾರಸ್ಥಂಭ ಮಾತ್ರವಲ್ಲದೇ ಶ್ರದ್ಧಾಕೇಂದ್ರವಾಗಿವೆ ಅವುಗಳನ್ನು ರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಮತ್ತು ಈ ಕಾರ್ಯದಲ್ಲಿ ಭಗವಂತನ ಆಶೀರ್ವಾದ ಅವಶ್ಯವಾಗಿ ಸಿಗಲಿದೆ ಎಂಬ ಆಶೀರ್ವಾದರೂಪಿ ಮಾರ್ಗದರ್ಶನವನ್ನು ಮಾಡಿದರು.

ಮಂಗಳೂರಿನ ಗ್ರಾಮದೇವತೆ ಶ್ರೀ ಮಂಗಳಾದೇವಿ ಸನ್ನಿಧಿಯಲ್ಲಿ ದೇವಸ್ಥಾನ ರಕ್ಷಣಾ ಅಭಿಯಾನದ ಯಶಸ್ಸಿಗಾಗಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.

ದೇವಸ್ಥಾನ ಮಹಾಸಂಘದ ಧೇಯೋದ್ದೇಶ

ದೇವಸ್ಥಾನ ಮಹಾಸಂಘವು ಕಳೆದ ಅನೇಕ ವರ್ಷಗಳಿಂದ ಕಾರ್ಯನಿರತವಾಗಿದ್ದು, ದೇವಸ್ಥಾನಗಳ ಪಾವಿತ್ರ್ಯ, ಸಂಪ್ರದಾಯ, ಪೂಜಾಪದ್ದತಿ ಇತ್ಯಾದಿಗಳ ರಕ್ಷಣೆಗಾಗಿ ನಿರಂತರವಾಗಿ ಪ್ರಯತ್ನವನ್ನು ಮಾಡುತ್ತಿದೆ. ಅನೇಕ ಅಭಿಯಾನಗಳ ಮೂಲಕ ಈಗಾಗಲೇ ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ದೇವಸ್ಥಾನಗಳ ರಕ್ಷಣೆಯ ಜೊತೆಯಲ್ಲಿ ಸರಕಾರದ ವಶದಲ್ಲಿರುವ ದೇವಸ್ಥಾನಗಳ ಸದ್ಯದ ಸ್ಥಿತಿ, ಅಲ್ಲಿಯ ವ್ಯವಸ್ಥೆಗಳಲ್ಲಿನ ಕುಂದುಕೊರತೆಗಳು ಮಾತ್ರವಲ್ಲದೇ ದೇವಸ್ಥಾನದ ಚರ ಮತ್ತು ಸ್ಥಿರ ಆಸ್ಥಿಗಳ ಮಾಸಿಕ ಲೆಕ್ಕಾಚಾರಗಳಲ್ಲಿ ಆಗುವ ವಂಚನೆಗಳ ಬಗ್ಗೆಯೂ ನಿರಂತರ ಅಧ್ಯಯನ ಮಾಡಿ ಭಕ್ತರ ಮುಂದಿಡುವ ದೃಷ್ಠಿಯಿಂದ ವಿವಿಧ ಆಂದೋಲನಗಳನ್ನು ಹಮ್ಮಿಕೊಂಡು ದೇವಸ್ಥಾನಗಳ ರಕ್ಷಣೆಗಾಗಿ ಕಾರ್ಯನಿರತವಾಗಿದೆ.

ಮುಂದಿನ ದಿಶೆ

ದೇವಸ್ಥಾನಗಳನ್ನು ಸರಕಾರೀಕರಣದಿಂದ ಮುಕ್ತಗೊಳಿಸುವುದು, ದೇವಸ್ಥಾನಗಳ ಪಾವಿತ್ರ್ಯವನ್ನು ಉಳಿಸುವುದು, ಮತ್ತು ದೇವಸ್ಥಾನಗಳ ರಕ್ಷಣೆಯ ದೃಷ್ಠಿಯಿಂದ ಇನ್ನು ಒಂದು ವಾರದ ಕಾಲಾವಧಿಯಲ್ಲಿ ಕರ್ನಾಟಕದಲ್ಲಿ ಪತ್ರಿಕಾಗೋಷ್ಠಿಯ ಜೊತೆಗೆ ವಿವಿಧ ಜಿಲ್ಲೆಗಳಲ್ಲಿ ಆಂದೋಲನಗಳನ್ನು ಪ್ರಾರಂಭ ಮಾಡಲಾಗುವುದು ಮತ್ತು ದೇವಸ್ಥಾನಗಳ ರಕ್ಷಣೆಯ ದೃಷ್ಠಿಯಿಂದ ಪೂರ್ಣ ಪ್ರಯತ್ನ ಮಾಡಲಾಗುವುದು ಎಂದು ಮಹಾಸಂಘದ ಕರ್ನಾಟಕ ರಾಜ್ಯ ವಕ್ತಾರರಾದ ಶ್ರೀ. ಗುರುಪ್ರಸಾದ್ ಗೌಡರವರು ಕರೆ ನೀಡಿದರು.