ಧರ್ಮದ ಹೆಸರಿನಲ್ಲಿ ನದಿಗಳನ್ನು ಕಲುಷಿತಗೊಳಿಸುವ ಹಕ್ಕು ಯಾರಿಗೂ ಇಲ್ಲ! : Madras High Court

ತಮಿಳುನಾಡಿನ ತಾಮಿರಭರಣಿ ನದಿಯಲ್ಲಿನ ಧಾರ್ಮಿಕ ವಿಧಿಗಳ ಕುರಿತು ಮದ್ರಾಸ್ ಹೈಕೋರ್ಟ್‌ನ ಟಿಪ್ಪಣಿ

ಚೆನ್ನೈ (ತಮಿಳುನಾಡು) – ಧರ್ಮದ ಹೆಸರಿನಲ್ಲಿ ಜಲ ಮೂಲಗಳನ್ನು ಕಲುಷಿತಗೊಳಿಸುವ ಹಕ್ಕು ಯಾರಿಗೂ ಇಲ್ಲ, ಎಂದು ಮದ್ರಾಸ್ ಹೈಕೋರ್ಟ್‌ನ ಮದುರೈ ಪೀಠ ಹೇಳಿದೆ. ತಿರುನಲ್ವೇಲಿಯ ತಾಮಿರಭರಣಿ ನದಿಯಲ್ಲಿ ಮೃತರ ಅಂತ್ಯಕ್ರಿಯೆ ಮತ್ತು ಉತ್ತರಕ್ರಿಯೆಗಳನ್ನು ನಡೆಸುವಾಗ ಹೆಚ್ಚಿನ ಪ್ರಮಾಣದಲ್ಲಿ ಬಟ್ಟೆಗಳು ಮತ್ತು ಇತರ ವಸ್ತುಗಳನ್ನು ಎಸೆಯಲಾಗುತ್ತದೆ. ಈ ವಿಷಯದ ಬಗ್ಗೆ ನ್ಯಾಯಾಲಯವು ತೀವ್ರ ಕಳವಳ ವ್ಯಕ್ತಪಡಿಸಿದೆ. ‘ಈ ರೀತಿಯ ಕೆಲಸದಿಂದ ನದಿಯ ನಾಶವಾಗುತ್ತಿರುವುದರಿಂದ ನಮಗೆ ಇದರಲ್ಲಿ ಮಧ್ಯಪ್ರವೇಶಿಸುವುದು ಅನಿವಾರ್ಯವಾಗಿದೆ. ಆದಾಗ್ಯೂ, ಯಾವುದೇ ಅಂತಿಮ ಆದೇಶ ನೀಡುವ ಮೊದಲು ಸಂಬಂಧಪಟ್ಟ ಎಲ್ಲಾ ಪಕ್ಷಗಳ ಮಾತುಗಳನ್ನು ಕೇಳಬೇಕು’, ಎಂದು ನ್ಯಾಯಾಲಯ ಹೇಳಿದೆ. ಇಲ್ಲಿ ಪ್ರತಿದಿನ 1 ಟನ್ ತ್ಯಾಜ್ಯ ವಸ್ತುಗಳು ಸಿಗುತ್ತವೆ ಎಂದು ಅರ್ಜಿದಾರರು ತಿಳಿಸಿದ್ದಾರೆ.

1. ಪೀಠದ ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ಮತ್ತು ನ್ಯಾಯಮೂರ್ತಿ ಬಿ. ಪುಗಲೇಂದಿ ಅವರು ನೀಡಿದ ಆದೇಶದಲ್ಲಿ, ಸಂವಿಧಾನದ 25ನೇ ವಿಧಿಯ ಅಡಿಯಲ್ಲಿ ಲಭ್ಯವಿರುವ ಧಾರ್ಮಿಕ ಸ್ವಾತಂತ್ರ್ಯವು ಸಾರ್ವಜನಿಕ ಆರೋಗ್ಯಕ್ಕೆ ಒಳಪಟ್ಟಿದೆ ಎಂದು ಹೇಳಿದ್ದಾರೆ. ಭಕ್ತರಿಗೆ ಆಧ್ಯಾತ್ಮಿಕವಾಗಿ ಲಾಭದಾಯಕವಾದ ಪದ್ಧತಿಗಳನ್ನು ಪಾಲಿಸಲು ಅನುಮತಿ ನೀಡಲು ಸಾಧ್ಯವಿರುವುದು ಯಾವಾಗೆಂದರೆ, ಅಂತಹ ಪದ್ಧತಿಗಳಿಂದ ಪರಿಸರಕ್ಕೆ ಹಾನಿಯಾಗದಿದ್ದಾಗ ಅಥವಾ ಇತರರ ಹಕ್ಕುಗಳನ್ನು ಉಲ್ಲಂಘಿಸದಿದ್ದಾಗ ಮಾತ್ರ.

2. ನ್ಯಾಯಾಲಯದ ಆದೇಶದಲ್ಲಿ ಒಂದು ಕಿರುಪುಸ್ತಕವನ್ನು ಉಲ್ಲೇಖಿಸಲಾಗಿದೆ, ಅದರ ಪ್ರಕಾರ ಮೇ 7 ರಿಂದ ಮೇ 28 ರ ಅವಧಿಯಲ್ಲಿ ನಡೆಸಿದ ಸ್ವಚ್ಛತಾ ಅಭಿಯಾನದಲ್ಲಿ ನದಿಯಿಂದ ಬರೋಬ್ಬರಿ 86 ರಿಂದ 90 ಟನ್ ಬಟ್ಟೆಗಳನ್ನು ಹೊರತೆಗೆಯಲಾಗಿದೆ. ಸಂಗ್ರಹಿಸಿದ ತ್ಯಾಜ್ಯದಲ್ಲಿ 1,385 ಕೆಜಿ ಪ್ಲಾಸ್ಟಿಕ್, 374 ಕೆಜಿ ಸ್ಯಾನಿಟರಿ ನ್ಯಾಪ್ಕಿನ್‌ಗಳು ಮತ್ತು ಡೈಪರ್‌ಗಳು, 220 ಕೆಜಿ ಗಾಜಿನ ಬಾಟಲಿಗಳು ಮತ್ತು 115 ಕೆಜಿ ಚಪ್ಪಲಿಗಳು ಸೇರಿವೆ.

3. ನ್ಯಾಯಾಲಯವು ಗಮನಿಸಿದಂತೆ, ಪಾಲಿಯೆಸ್ಟರ್ ಬಟ್ಟೆಗಳು ವಿಘಟನೀಯವಲ್ಲ ಮತ್ತು ಅವು ನದಿಯ ಪಾತ್ರದಲ್ಲಿ ಸಿಕ್ಕಿಹಾಕಿಕೊಂಡ ನಂತರ ಬ್ಯಾಕ್ಟೀರಿಯಾಗಳ ಉತ್ಪತ್ತಿಯ ಕೇಂದ್ರಗಳಾಗಬಹುದು. ಅಲ್ಲದೆ, ನದಿಯಲ್ಲಿ ಕಂಡುಬರುವ ಇಂಡಿಯನ್ ಬ್ಲ್ಯಾಕ್ ಟರ್ಟಲ್ ಮತ್ತು ಇಂಡಿಯನ್ ಫ್ಲಾಪ್‌ಶೆಲ್ ಆಮೆಗಳು ಈ ಬಟ್ಟೆಗಳಲ್ಲಿ ಸಿಲುಕಿ ಉಸಿರುಗಟ್ಟಿ ಸಾಯಬಹುದು. ಮಾಲಿನ್ಯ ಮುಕ್ತ ನೀರನ್ನು ಪಡೆಯುವುದು ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಸಂರಕ್ಷಿಸಲ್ಪಟ್ಟ ಹಕ್ಕಾಗಿದೆ.

4. ಈ ಪ್ರಕರಣದಲ್ಲಿ ಮಧ್ಯಸ್ಥಿಕೆ ವಹಿಸಿ ತಮ್ಮ ವಾದವನ್ನು ಮಂಡಿಸಲು ನ್ಯಾಯಾಲಯವು ಧಾರ್ಮಿಕ ಸಂಸ್ಥೆಗಳು ಮತ್ತು ಕಾರ್ಯಕರ್ತರಿಗೆ ಅನುಮತಿ ನೀಡಿದೆ. ಅಲ್ಲದೆ, ಇದಕ್ಕೆ ಅಂತಿಮ ಪರಿಹಾರ ಕಂಡುಕೊಳ್ಳಲು ಜಿಲ್ಲಾಡಳಿತಕ್ಕೆ ನ್ಯಾಯಾಲಯದಲ್ಲಿ ಪ್ರಸ್ತಾವನೆ ಸಲ್ಲಿಸಲು ನಿರ್ದೇಶನ ನೀಡಲಾಗಿದೆ.