‘ಬಹುಶಃ ಸಚಿವರ ಸ್ವಂತ ಮಕ್ಕಳು ಶಾಲೆಗೆ ಹೋಗುತ್ತಿಲ್ಲ ಎನಿಸುತ್ತದೆ ಮತ್ತು ಅವರು ಸ್ವತಃ ಇಡೀ ದಿನ ‘ಎಸಿ’ಯಲ್ಲಿ ಮಲಗಿರುತ್ತಾರೆ!

ಕಾಶ್ಮೀರದಲ್ಲಿ ಬಿಸಿಲು ಹೆಚ್ಚಾಗಿದ್ದರೂ ಶಾಲೆಗೆ ರಜೆ ನೀಡದಿದ್ದಕ್ಕಾಗಿ ಶಿಕ್ಷಣ ಸಚಿವರನ್ನು ಟೀಕಿಸಿದ 12 ವರ್ಷದ ವಿದ್ಯಾರ್ಥಿ

ಕಾಶ್ಮೀರ ಶಿಕ್ಷಣ ಸಚಿವ ಸಾಕಿನಾ ಇಟೂ (ಎಡ) ಮತ್ತು ವಿದ್ಯಾರ್ಥಿ ವಿಮರ್ಶಕ (ಬಲ)

ಶ್ರೀನಗರ (ಕಾಶ್ಮೀರ) – ಬಿಸಿಲು ಹೆಚ್ಚಾಗಿದ್ದರೂ ಶಾಲೆಗೆ ರಜೆ ನೀಡದಿದ್ದಕ್ಕಾಗಿ ಇಲ್ಲಿನ 12 ವರ್ಷದ ಶಾಲಾ ವಿದ್ಯಾರ್ಥಿಯೊಬ್ಬನು ಶಿಕ್ಷಣ ಸಚಿವೆ ಸಕೀನಾ ಇಟೂ ಅವರ ವಿರುದ್ಧ, ‘ಬಹುಶಃ ಸಚಿವರ ಸ್ವಂತ ಮಕ್ಕಳು ಶಾಲೆಗೆ ಹೋಗುತ್ತಿಲ್ಲ ಎನಿಸುತ್ತದೆ ಮತ್ತು ಅವರು ಸ್ವತಃ ಇಡೀ ದಿನ ‘ಎಸಿ’ಯಲ್ಲಿ ಮಲಗಿರುತ್ತಾರೆ’, ಎಂಬ ಪದಗಳಲ್ಲಿ ಟೀಕಿಸಿದ್ದಾನೆ. ಈ ವಿದ್ಯಾರ್ಥಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಾಶ್ಮೀರ ಕಣಿವೆಯ ಉಷ್ಣತೆ 35 ಡಿಗ್ರಿ ಸೆಲ್ಸಿಯಸ್‌ಗಿಂತ (35°C) ಹೆಚ್ಚಾಗಿರುವುದರಿಂದ, ಬಿಸಿಲಿನ ಬೇಗೆಯಿಂದ ಬೇಸತ್ತ ವಿದ್ಯಾರ್ಥಿ ಈ ರೀತಿ ಟೀಕಿಸಿದ್ದಾನೆ.

ವಿಡಿಯೋವನ್ನು ಮೊದಲು ಪ್ರಸಾರ ಮಾಡಿದ ಸುದ್ದಿ ಸಂಸ್ಥೆಗೆ ನೋಟಿಸ್!

ಸರಕಾರದ ‘ಬಾಲ ಕಲ್ಯಾಣ ಸಮಿತಿ’ಯು ಈ ಪ್ರಕರಣವನ್ನು ತಕ್ಷಣವೇ ಗಂಭೀರವಾಗಿ ಪರಿಗಣಿಸಿದ್ದು, ಸಂಬಂಧಿತ ವಿಡಿಯೋವನ್ನು ಮೊದಲು ಪ್ರಸಾರ ಮಾಡಿದ ಸುದ್ದಿ ಸಂಸ್ಥೆಗೆ ನೋಟಿಸ್ ಜಾರಿ ಮಾಡಿದೆ. ಅಲ್ಲದೆ, ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಿಂದ ತೆಗೆದುಹಾಕಲು ಮತ್ತು ಈ ಸಂದರ್ಶನವನ್ನು ಮಾಡಿದವರ ವಿರುದ್ಧ ಮೊಕದ್ದಮೆ ದಾಖಲಿಸಲು ಪೊಲೀಸರಿಗೆ ಆದೇಶಿಸಿದೆ. ಪೋಷಕರ ಅಥವಾ ಶಾಲಾ ಆಡಳಿತ ಮಂಡಳಿಯ ಅನುಮತಿ ಪಡೆಯದೆ ಅಪ್ರಾಪ್ತ ವಯಸ್ಸಿನ ಮಗುವಿನ ಸಂದರ್ಶನ ನಡೆಸಿ ಅದನ್ನು ಪ್ರಸಾರ ಮಾಡುವುದು ನಿಯಮಬಾಹಿರ ಎಂದು ಸಮಿತಿ ಹೇಳಿದೆ.