ಒಡಿಶಾ ರಾಜ್ಯದಲ್ಲಿ ಗುಟ್ಕಾ ನಿಷೇಧ! – Odisha Gutkha Banned

ಒಡಿಶಾದ ಭಾಜಪ ಸರಕಾರಕ್ಕೆ ಅಭಿನಂದನೆಗಳು!

ಭುವನೇಶ್ವರ (ಒಡಿಶಾ) – ಒಡಿಶಾ ರಾಜ್ಯ ಸರಕಾರವು ರಾಜ್ಯಾದ್ಯಂತ ಗುಟ್ಕಾ, ಪಾನ್ ಮಸಾಲಾ, ಜರ್ದಾ, ಖೈನಿ, ತಂಬಾಕು ಅಥವಾ ನಿಕೋಟಿನ್‌ನಿಂದ ತಯಾರಿಸಿದ ಎಲ್ಲಾ ಉತ್ಪನ್ನಗಳು, ಅವುಗಳ ಪ್ಯಾಕೇಜಿಂಗ್, ಸಂಗ್ರಹಣೆ ಮತ್ತು ಮಾರಾಟದ ಮೇಲೆ ಸಂಪೂರ್ಣ ನಿಷೇಧ ಹೇರಿದೆ. ಈ ಕುರಿತು ಸರಕಾರವು ಜನವರಿ 21 ರಂದು ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ಸುಪ್ರೀಂ ಕೋರ್ಟ್ ಮತ್ತು ‘ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ’ (FSSAI) ನೀಡಿದ ಮಾರ್ಗಸೂಚಿಗಳ ಆಧಾರದ ಮೇಲೆ ಈ ನಿಷೇಧವನ್ನು ಜಾರಿಗೆ ತರಲಾಗಿದೆ. ಹೊಸ ನಿಯಮಗಳನ್ನು ಪಾಲಿಸುವಂತೆ ಮತ್ತು ಆರೋಗ್ಯವಂತ ಹಾಗೂ ‘ತಂಬಾಕು ಮುಕ್ತ ಒಡಿಶಾ’ ನಿರ್ಮಾಣಕ್ಕೆ ಸಹಕರಿಸುವಂತೆ ಸರಕಾರವು ನಾಗರಿಕರಿಗೆ ಕರೆ ನೀಡಿದೆ.

ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳು!

ಆರೋಗ್ಯ ಅಧಿಕಾರಿಗಳ ಪ್ರಕಾರ, ತಂಬಾಕು ಮತ್ತು ನಿಕೋಟಿನ್ ಯುಕ್ತ ಉತ್ಪನ್ನಗಳು ಬಾಯಿ ಕ್ಯಾನ್ಸರ್, ಗಂಟಲು ಕ್ಯಾನ್ಸರ್ ಹಾಗೂ ದೇಹದ ಆಂತರಿಕ ಅಂಗಗಳ ಮೇಲೆ ಪರಿಣಾಮ ಬೀರುವ ಮಾರಣಾಂತಿಕ ಕಾಯಿಲೆಗಳಿಗೆ ಕಾರಣವಾಗುತ್ತವೆ. ಇಂತಹ ಪದಾರ್ಥಗಳಿಂದಾಗಿ ವಿಶೇಷವಾಗಿ ಮಕ್ಕಳು ಮತ್ತು ಯುವಜನತೆಯ ಆರೋಗ್ಯಕ್ಕೆ ತೀವ್ರ ಅಪಾಯ ಎದುರಾಗುತ್ತದೆ.

ಇತರ ರಾಜ್ಯಗಳಿಂದ ಒಡಿಶಾಗೆ ಮಾರಾಟವಾಗುತ್ತಿತ್ತು ಗುಟ್ಕಾ!

ಒಡಿಶಾ ಸರಕಾರವು ಈ ಹಿಂದೆಯೇ 2013 ರಲ್ಲಿ ತಂಬಾಕು ಮತ್ತು ನಿಕೋಟಿನ್ ಯುಕ್ತ ಉತ್ಪನ್ನಗಳ ಉತ್ಪಾದನೆ ಮತ್ತು ಮಾರಾಟವನ್ನು ನಿಷೇಧಿಸಿತ್ತು. ಆದರೂ, ಇತರ ರಾಜ್ಯಗಳಿಂದ ಈ ಉತ್ಪನ್ನಗಳನ್ನು ಒಡಿಶಾಗೆ ತಂದು ಮಾರಾಟ ಮಾಡಲಾಗುತ್ತಿತ್ತು. ಕಳೆದ ವರ್ಷ ಮಾರ್ಚ್‌ನಲ್ಲಿ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಅವರು, 16 ರಾಜ್ಯಗಳಿಂದ ತಂಬಾಕು ಮತ್ತು ನಿಕೋಟಿನ್ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದರು. ಕಳೆದ 11 ವರ್ಷಗಳಲ್ಲಿ ಈ ಉತ್ಪನ್ನಗಳ ಮಾರಾಟದಿಂದ ರಾಜ್ಯ ಸರಕಾರಕ್ಕೆ 6 ಸಾವಿರದ 596 ಕೋಟಿ ರೂಪಾಯಿ ಆದಾಯ ಬಂದಿದೆ.

ಮುಖ್ಯಮಂತ್ರಿಗಳು ಮಾತು ಮುಂದುವರೆಸಿ, 2014-15 ರಲ್ಲಿ ತಂಬಾಕು ಮತ್ತು ಪಾನ್ ಮಸಾಲಾ ಮಾರಾಟದಿಂದ 175 ಕೋಟಿ ರೂಪಾಯಿ ಆದಾಯ ಬಂದಿತ್ತು, ಅದು 2024-25 ರ ವೇಳೆಗೆ 1 ಸಾವಿರದ 48 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ ಎಂದು ಸ್ಪಷ್ಟಪಡಿಸಿದ್ದರು. ಈಗ ಪಾನ್ ಮಸಾಲಾ, ತಂಬಾಕು, ಜರ್ದಾ, ಖೈನಿ ಮತ್ತು ನಿಕೋಟಿನ್ ಮಿಶ್ರಿತ ಎಲ್ಲಾ ಪದಾರ್ಥಗಳ ಮೇಲೆ ಸಂಪೂರ್ಣ ನಿಷೇಧ ಹೇರಿರುವುದರಿಂದ ಒಡಿಶಾದಲ್ಲಿ ಈ ಉತ್ಪನ್ನಗಳು ಲಭ್ಯವಿರುವುದಿಲ್ಲ. ಈ ನಿರ್ಧಾರದಿಂದ ರಾಜ್ಯ ಸರಕಾರದ ಆದಾಯದ ಮೇಲೆಯೂ ಪರಿಣಾಮ ಬೀರುವ ಸಾಧ್ಯತೆಯಿದೆ.

ಸಂಪಾದಕೀಯ ನಿಲುವು

ಭಾಜಪ ಆಡಳಿತವಿರುವ ಒಡಿಶಾ ಸರಕಾರವು ಗುಟ್ಕಾವನ್ನು ನಿಷೇಧಿಸಬಹುದಾದರೆ, ಇತರ ಭಾಜಪ ಆಡಳಿತದ ರಾಜ್ಯಗಳು ಏಕೆ ಮಾಡುತ್ತಿಲ್ಲ? ಎಂಬ ಪ್ರಶ್ನೆ ಈಗ ಉದ್ಭವಿಸಿದೆ!