ಮಹಾರಾಣಾ ಪ್ರತಾಪ ಅವರ ಬಗ್ಗೆ ಅವಮಾನಕಾರಕ ಹೇಳಿಕೆ ನೀಡಿದ ಪಂಜಾಬ ರಾಜ್ಯಪಾಲರಿಗೆ ಕ್ಷತ್ರಿಯ ಕರಣಿ ಸೇನೆಯಿಂದ ಬೆದರಿಕೆ Maharana Pratap Controversy

ಜೈಪುರ (ರಾಜಸ್ಥಾನ) – ಕ್ಷತ್ರಿಯ ಕರಣಿ ಸೇನೆಯ ಸಂಸ್ಥಾಪಕ ರಾಜಸಿಂಹ ಶೇಖಾವತ್ ಅವರು ಪಂಜಾಬ್ ರಾಜ್ಯಪಾಲ ಗುಲಾಬ್ ಚಂದ್ ಕಠಾರಿಯಾ ಅವರಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಬೆದರಿಕೆ ಹಾಕಿದ್ದಾರೆ. ಕರಣಿ ಸೇನೆಯ ಸದಸ್ಯರಿಗೆ ಕರೆ ನೀಡಿದ ಅವರು, ‘ಈ ಮನುಷ್ಯ ಎಲ್ಲೇ ಕಂಡರೂ ಅಲ್ಲಿಯೇ ಅವನನ್ನು ಹತ್ಯೆ ಮಾಡಿ’ ಎಂದು ಹೇಳಿದ್ದಾರೆ. ೪ ದಿನಗಳ ಹಿಂದೆ ಕಠಾರಿಯಾ ಅವರು ಮಹಾರಾಣಾ ಪ್ರತಾಪ ಅವರ ಬಗ್ಗೆ ನೀಡಿದ ಹೇಳಿಕೆಯ ನಂತರ ಶೇಖಾವತ್ ಈ ಬೆದರಿಕೆ ಹಾಕಿದ್ದಾರೆ. ಕರಣಿ ಸೇನೆಯ ಅನೇಕ ಸದಸ್ಯರು ರಾಜ ಶೇಖಾವತ್ ಅವರ ಹೇಳಿಕೆಗೆ ಬೆಂಬಲ ಸೂಚಿಸಿದ್ದಾರೆ. ಬೆದರಿಕೆಯ ಕುರಿತು ಮಾಹಿತಿ ಬಂದ ನಂತರ ಉದಯಪುರದ ಪೊಲೀಸ್ ಅಧೀಕ್ಷಕ ಯೋಗೇಶ ಗೋಯಲ್ ಅವರು ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಗುಲಾಬ ಚಂದ ಕಠಾರಿಯಾ ಅವರು ಏನು ಹೇಳಿದ್ದರು?

ಡಿಸೆಂಬರ್ ೨೨ ರಂದು ಗುಲಾಬ ಚಂದ ಕಠಾರಿಯಾ ಅವರು ಉದಯಪುರ ಸಮೀಪದ ಗೋಗುಂಡಾದ ಧೂಲಿ ಘಾಟಿಯಲ್ಲಿ ಭೂಮಿಪೂಜೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಆ ಸಂದರ್ಭದಲ್ಲಿ ಭಾಷಣ ಮಾಡುತ್ತಾ, ಮಹಾರಾಣಾ ಪ್ರತಾಪ್ ಅವರ ಹೆಸರನ್ನು ಈ ಹಿಂದೆ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಕೇಳುತ್ತಿದ್ದೆವು; ಆದರೆ ಅವರನ್ನು ಮೊದಲು ಜನಸಂಘವೇ ಜೀವಂತವಾಗಿರಿಸಿತು ಎಂದು ಹೇಳಿದ್ದರು.

ಮಹಾರಾಣಾ ಪ್ರತಾಪ ಅವರನ್ನು ಮೊದಲ ಬಾರಿಗೆ ಜೀವಂತಗೊಳಿಸಿದ ಕುರಿತು ಕಠಾರಿಯಾ ಮಾಡಿದ ಉಲ್ಲೇಖವು ಕರಣಿ ಸೇನೆಯ ತೀವ್ರ ವಿರೋಧಕ್ಕೆ ಕಾರಣವಾಯಿತು. ಕ್ಷತ್ರಿಯ ಕರಣಿ ಸೇನೆಯು ಈ ಹೇಳಿಕೆಯನ್ನು ‘ಮೇವಾಡದ ಹೆಮ್ಮೆಗೆ ಮಾಡಿದ ಅವಮಾನ’ ಎಂದು ಹೇಳಿದೆ. ಇದೇ ಹಿನ್ನೆಲೆಯಲ್ಲಿ ರಾಜ ಶೇಖಾವತ್ ಅವರು ಕಠಾರಿಯಾ ವಿರುದ್ಧ ಕಠಿಣ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಕಠಾರಿಯಾ ಅವರು ಈ ಹಿಂದೆಯೂ ವಿವಾದಾತ್ಮಕ ಹೇಳಿಕೆ ನೀಡಿದ್ದರು

ಮಹಾರಾಣಾ ಪ್ರತಾಪ್ ಅವರ ಬಗ್ಗೆ ಗುಲಾಬಚಂದ್ ಕಠಾರಿಯಾ ಅವರು ಈ ಹಿಂದೆಯೂ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಆ ಸಮಯದಲ್ಲಿ ತೀವ್ರ ವಿರೋಧ ವ್ಯಕ್ತವಾದ ನಂತರ ಅವರು ಕ್ಷಮೆ ಕೇಳಬೇಕಾಯಿತು. ೨೦೨೦ ರಲ್ಲಿ ರಾಜಸಮಂದ ಸಾರ್ವಜನಿಕ ಸಭೆಯಲ್ಲಿ ಅವರು ನೀಡಿದ್ದ ಹೇಳಿಕೆಯಿಂದ ದೊಡ್ಡ ವಿವಾದ ಉಂಟಾಗಿತ್ತು ಮತ್ತು ಅಂತಿಮವಾಗಿ ಅವರು ೩ ಬಾರಿ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕಾಯಿತು.