MHA Action Against Infiltrators : 30 ದಿನಗಳೊಳಗೆ ಒಳನುಸುಳುಕೋರರನ್ನು ಗುರುತಿಸಿ, ದಾಖಲೆಗಳನ್ನು ಪರಿಶೀಲಿಸಿ ಮತ್ತು ಅವರನ್ನು ದೇಶದಿಂದ ಹೊರಗಟ್ಟಿ!

ಒಳನುಸುಳುಕೋರರ ಬಗ್ಗೆ ಕೇಂದ್ರ ಗೃಹ ಸಚಿವಾಲಯದಿಂದ ರಾಜ್ಯ ಸರಕಾರಗಳಿಗೆ ಆದೇಶ

ನವದೆಹಲಿ – ಕೇಂದ್ರ ಗೃಹ ಸಚಿವಾಲಯವು ಬಾಂಗ್ಲಾದೇಶಿ ಮತ್ತು ಮ್ಯಾನ್ಮಾರ್ ನುಸುಳುಕೋರರ ವಿರುದ್ಧ ಇನ್ನಷ್ಟು ಕಠಿಣ ಕ್ರಮ ಕೈಗೊಂಡಿದೆ. ನುಸುಳುಕೋರರನ್ನು ಗುರುತಿಸಲು ಮತ್ತು ಅವರ ದಾಖಲೆಗಳನ್ನು ಪರಿಶೀಲಿಸಲು ಸಚಿವಾಲಯವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮೇ 18 ರಿಂದ ಮುಂದಿನ 30 ದಿನಗಳ ಗಡುವನ್ನು ನೀಡಿದೆ. ಎಲ್ಲಾ ರಾಜ್ಯಗಳು ನುಸುಳುಕೋರರನ್ನು ಗುರುತಿಸಲು ತಮ್ಮ ಶಾಸನಬದ್ಧ ಅಧಿಕಾರಗಳನ್ನು ಬಳಸಬೇಕು ಮತ್ತು ಪರಿಶೀಲನೆಯ ನಂತರ ಗಡಿಪಾರು ಪ್ರಕ್ರಿಯೆಯನ್ನು ಪ್ರಾರಂಭಿಸಬೇಕು ಎಂದು ಗೃಹ ಸಚಿವಾಲಯ ನಿರ್ದೇಶನ ನೀಡಿದೆ. ಹಾಗೂ ಪ್ರತಿ ರಾಜ್ಯಕ್ಕೂ ಜಿಲ್ಲಾ ಮಟ್ಟದಲ್ಲಿ ಸಾಕಷ್ಟು ಬಂಧನ ಕೇಂದ್ರಗಳನ್ನು (ಡಿಟೆನ್ಷನ್ ಸೆಂಟರ್) ಸ್ಥಾಪಿಸಲು ಆದೇಶಿಸಲಾಗಿದೆ, ಅಲ್ಲಿ ಶಂಕಿತ ವಲಸಿಗರನ್ನು ಗಡಿಪಾರು ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಇರಿಸಲಾಗುವುದು. ಭವಿಷ್ಯದಲ್ಲಿ ಈ ಜನರು ಯಾವುದೇ ರೀತಿಯ ವಂಚನೆ ಮಾಡುವುದನ್ನು ತಡೆಯಲು, ಅವರ ಬಯೋಮೆಟ್ರಿಕ್ (ಬೆರಳಚ್ಚುಗಳು ಇತ್ಯಾದಿ) ಮಾಹಿತಿಯನ್ನು ಸಹ ಈ ಕೇಂದ್ರಗಳಲ್ಲಿ ಸಂಗ್ರಹಿಸಲಾಗುವುದು. ಗಡಿಯಲ್ಲಿ ಅಕ್ರಮ ನುಸುಳುಕೋರರ ಮೇಲೆ ನಿಗಾ ಇಡಲು ಗಡಿ ಭದ್ರತಾ ಪಡೆ ಮತ್ತು ಅಸ್ಸಾಂ ರೈಫಲ್ಸ್ ನಂತಹ ಭದ್ರತಾ ಪಡೆಗಳನ್ನು ಸಹ ಈ ಪ್ರಕ್ರಿಯೆಯಲ್ಲಿ ಸೇರಿಸಿಕೊಳ್ಳಲಾಗಿದೆ.

ಸಚಿವಾಲಯವು ತನ್ನ ಸೂಚನೆಗಳಲ್ಲಿ ನುಸುಳುಕೋರರು ಎಂದು ಶಂಕಿತರ ದಾಖಲೆಗಳನ್ನು 30 ದಿನಗಳೊಳಗೆ ಪರಿಶೀಲಿಸುವುದು ಅವಶ್ಯಕ ಎಂದು ತಿಳಿಸಿದೆ. ಒಂದು ವೇಳೆ ವ್ಯಕ್ತಿಯು ಭಾರತೀಯ ನಾಗರಿಕ ಎಂದು ಹೇಳಿಕೊಂಡರೆ, ಅವರ ಗುರುತು ಮತ್ತು ಹಿನ್ನೆಲೆ ಮಾಹಿತಿಯನ್ನು ಸಂಗ್ರಹಿಸುವ ಜವಾಬ್ದಾರಿ ಸಂಬಂಧಪಟ್ಟ ರಾಜ್ಯ ಸರಕಾರದ್ದಾಗಿರುತ್ತದೆ.