ದುರಂತದನಂತರ ಅಮೃತ ಸ್ನಾನವನ್ನು ಕೆಲವು ಗಂಟೆಗಳ ಕಾಲ ನಿಲ್ಲಿಸಲಾಯಿತು !

ಪ್ರಯಾಗರಾಜ್ ಕುಂಭಮೇಳ 2025

ಕುಂಭ ಕ್ಷೇತ್ರದಿಂದ ದೈನಿಕ ’ಸನಾತನ ಪ್ರಭಾತ’ ಯು ನೇರ ವರದಿ….

ಪ್ರಯಾಗರಾಜ – ತ್ರಿವೇಣಿ ಸಂಗಮದಲ್ಲಿ ದುರಂತದ ನಂತರ, ಆಡಳಿತವು ತ್ರಿವೇಣಿ ಸಂಗಮ ಸೇರಿದಂತೆ ಕುಂಭಕ್ಷೇತ್ರದ ಎಲ್ಲಾ ಘಾಟ್‌ಗಳಲ್ಲಿ ಸ್ನಾನ ಮಾಡುವುದನ್ನು ನಿಲ್ಲಿಸಿತು. ಬೆಳಗ್ಗೆ ಶೋಭಾಯಾತ್ರೆಯೊಂದಿಗೆ ತ್ರಿವೇಣಿ ಸಂಗಮಕ್ಕೆ ಬರುವ ಅಖಾಡದಾರರಿಗೆ ಅಖಾಡದಲ್ಲಿ ಉಳಿಯುವಂತೆ ಆಡಳಿತ ಮಂಡಳಿಯು ಸೂಚನೆ ನೀಡಿದೆ. ರಾತ್ರಿಯಿಂದಲೇ ಎಲ್ಲಾ ಅಖಾಡಾಗಳು ರಥಗಳನ್ನು ಅಲಂಕರಿಸಲಾಗಿತ್ತು. ಬೆಳಗ್ಗೆ ೭.೩೦ಕ್ಕೆ ತ್ರಿವೇಣಿ ಸಂಗಮದ ಹೊರತಾಗಿ ಗಂಗಾ ನದಿಯ ಕೆಲವು ದಡದಲ್ಲಿ ಭಕ್ತರಿಗೆ ಸ್ನಾನಕ್ಕೆ ಬಿಡಲಾಯಿತು.

ಲಕ್ಷಾಂತರ ಭಕ್ತರು ಸ್ನಾನಕ್ಕಾಗಿ ಬೆಳಗಿನ ಜಾವದವರೆಗೂ ಕಾಯುತ್ತಿದ್ದರು !

ತ್ರಿವೇಣಿ ಸಂಗಮದಲ್ಲಿ ಮುಂಜಾನೆ ಸ್ನಾನ ಮಾಡಲು ಸಂಗಮ ಮಾರ್ಗದಲ್ಲಿ ಜನವರಿ ೨೮ ರ ರಾತ್ರಿಯಿಂದ ಲಕ್ಷಾಂತರ ಭಕ್ತರು ಬೀದಿಗಳಲ್ಲಿ ನಿಂತಿದ್ದರು. ಅನೇಕ ಭಕ್ತರು ಸಂಗಮ ಮಾರ್ಗದ ಬದಿಯಲ್ಲೇ ಮಲಗಿದ್ದರು. ಈ ಮಾರ್ಗದಲ್ಲಿ ಸುಮಾರು ೨ ಕಿಲೋಮೀಟರ್ ವರೆಗೆ ಭಕ್ತರ ದಂಡು ಇತ್ತು. ಈ ಎಲ್ಲ ಭಕ್ತರು ಬೆಳಗಿನ ಜಾವ ರಸ್ತೆಯಲ್ಲೇ ನಿಂತಿದ್ದರು.

ಅವಘಡದಿಂದ ಸಾಧುಗಳಿಗೂ ಸ್ನಾನ ಮಾಡದಂತೆ ತಡೆ !

ಮುಂಜಾನೆಯಿಂದಲೇ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಲು ವಿವಿಧ ಅಖಾಡಾದ ಸಾಧುಗಳು ಬರುತ್ತಿದ್ದರು; ಆದರೆ ಅಪಘಾತದಿಂದ, ಸಾಧುಗಳನ್ನು ಸ್ನಾನಕ್ಕೆ ಹೋಗದಂತೆ ತಡೆಯಲಾಯಿತು. ಈ ವೇಳೆ ಸಾಧು ಒಬ್ಬರು, ’ಲಕ್ಷಾಂತರ ಭಕ್ತರು ಸ್ನಾನಕ್ಕೆ ನಿಂತಿದ್ದಾರೆ. ಕನಿಷ್ಠ ಪಕ್ಷ ತ್ರಿವೇಣಿ ಸಂಗಮ ಹೊರತುಪಡಿಸಿ ಉಳಿದ ಘಾಟ್‌ಗಳಲ್ಲಿ ಭಕ್ತರಿಗೆ ಸ್ನಾನ ಮಾಡಲು ಅವಕಾಶ ನೀಡಬೇಕು’, ಎಂದು ಪೊಲೀಸರಿಗೆ ಮನವಿ ಮಾಡಿದರು; ಆದರೆ, ಎಲ್ಲಾ ಘಾಟ್‌ಗಳಲ್ಲಿ ಸ್ನಾನ ಮಾಡುವುದನ್ನು ಸ್ಥಗಿತಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ವೇಳೆ ಸಾಧು ಬಾಟಲಿಯಿಂದ ಗಂಗಾಜಲ ತರುವಂತೆ ಮನವಿ ಮಾಡಿದರು. ಪೊಲೀಸರು ಗಂಗಾಜಲವನ್ನು ತಂದಾಗ ಅಲ್ಲಿದ್ದ ಸಾಧುಗಳು ಮತ್ತು ಭಕ್ತರು ಎಲ್ಲರಿಗೂ ಬಾಟಲಿಯಲ್ಲಿ ಗಂಗಾಜಲವನ್ನು ಚಿಮುಕಿಸಿ ಅಲ್ಲಿಂದ ಗಂಗಾಮಾತೆಗೆ ಪ್ರಾರ್ಥಿಸಿದರು.

ಭಕ್ತರ ಅಸಾಧಾರಣ ತಾಳ್ಮೆ ಮೆಚ್ಚುವಂತದ್ದು!

ತ್ರಿವೇಣಿ ಸಂಗಮಕ್ಕೆ ಲಕ್ಷಾಂತರ ಭಕ್ತರು ಇದ್ದರು. ಅದಕ್ಕೆ ಹೋಲಿಸಿದರೆ ಪೊಲೀಸರ ಸಂಖ್ಯೆ ಕಡಿಮೆ ಇತ್ತು. ಸಂಗಮ ಮಾರ್ಗದಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ತ್ರಿವೇಣಿ ಸಂಗಮಕ್ಕೆ ತೆರಳುತ್ತಿದ್ದ ಭಕ್ತರನ್ನು ಪೊಲೀಸರು ತಡೆದರು. ರಾತ್ರಿಯಿಂದಲೇ ಲಕ್ಷಾಂತರ ಭಕ್ತರು ಸ್ನಾನಕ್ಕಾಗಿ ಕಾಯುತ್ತಿದ್ದರೂ ಎಲ್ಲರೂ ಅಸಾಧಾರಣ ತಾಳ್ಮೆಯನ್ನು ಪ್ರದರ್ಶಿಸಿ ಪೊಲೀಸರಿಗೆ ಸಹಕರಿಸಿದರು. ಭಕ್ತರ ಈ ತಾಳ್ಮೆ ಖಂಡಿತ ಮೆಚ್ಚುವಂತದ್ದು ಇತ್ತು.

ಕ್ಷಣಚಿತ್ರ

೧. ಅನೇಕ ಭಕ್ತರು ’ಶ್ರೀ ರಾಮ ಜಯ ರಾಮ ಜಯ ರಾಮ’, ’ಹರ ಹರ ಮಹಾದೇವ’, ’ಗಂಗಾ ಮಾತಾ ಕೀ ಜೈ’ ಎಂಬ ಘೋಷಣೆಗಳನ್ನು ಕೂಗುತ್ತಾ ಸ್ನಾನಕ್ಕೆ ಹೋಗುತ್ತಿದ್ದರು.

೨. ಕೆಲವು ಭಕ್ತರು ಕೈಯಲ್ಲಿ ಜಪಮಾಲೆ ಹಿಡಿದು ಜಪ ಮಾಡುತ್ತಿದ್ದರೆ, ಹಲವು ಭಕ್ತರು ಸಾಮೂಹಿಕವಾಗಿ ನಾಮಜಪ ಮಾಡುತ್ತಿದ್ದರು.

೩. ಸಂತರು ಮತ್ತು ನಾಗಾ ಸಾಧುಗಳು ಮಾರ್ಗದಿಂದ ಹೋದ ನಂತರ, ಅನೇಕ ಭಕ್ತರು ತಮ್ಮ ಹಣೆಯ ಮೇಲೆ ರಸ್ತೆಯ ಧೂಳನ್ನು ಲೇಪಿಸುತ್ತಿದ್ದರು.

೪. ಅನೇಕ ಸಾಧುಗಳು ಖಡ್ಗ, ಪರಶು, ಗದೆ, ತ್ರಿಶೂಲ ಮೊದಲಾದ ಆಯುಧಗಳೊಂದಿಗೆ ಸ್ನಾನಕ್ಕೆ ಬರುತ್ತಿದ್ದರು.

೫. ಕುಂಭ ಕ್ಷೇತ್ರದಲ್ಲಿ ಆಂಬ್ಯುಲೆನ್ಸ್ ಮತ್ತು ಅಗ್ನಿಶಾಮಕ ವಾಹನಗಳು ಸಂಚರಿಸುತ್ತಿದ್ದವು.

೬. ಪೊಲೀಸರು ಕುದುರೆ ಏರಿ ತ್ರಿವೇಣಿ ಸಂಗಮದಲ್ಲಿ ಜನರನ್ನು ನಿಯಂತ್ರಿಸುತ್ತಿದ್ದರು.

೭. ರಾತ್ರಿ ವಾಸ್ತವ್ಯವಿಲ್ಲದ ಭಕ್ತರು ರಸ್ತೆ ಬದಿಯ ನಾಗಾ ಸಾಧುಗಳ ಗುಡಿಗಳಲ್ಲಿ ಆಶ್ರಯ ಪಡೆದರು.

೮. ಭಕ್ತರಲ್ಲಿ ಮಹಿಳೆಯರೇ ಹೆಚ್ಚಿದ್ದರು. ಸಂಗಮಮಾರ್ಗದಲ್ಲಿ ಮುಂಜಾನೆಯೇ ಅನೇಕ ವೃದ್ಧರು ಕೋಲುಗಳನ್ನು ಊರಿಕೊಂಡು ಸ್ನಾನಕ್ಕೆ ಬಂದಿದ್ದರು.