ಕೊಲಕಾತಾ – ಬಂಗಾಳದಲ್ಲಿನ ಮಾಲದಾ ಜಿಲ್ಲೆಯಲ್ಲಿನ ಸುಖದೇವಪುರದಲ್ಲಿರುವ ಭಾರತ-ಬಾಂಗ್ಲಾದೇಶ ಅಂತರಾಷ್ಟ್ರೀಯ ಗಡಿಯ ಬಳಿ ಭಾರತೀಯ ಸುರಕ್ಷಾ ದಳದ ಸೈನಿಕರು ೩೫೯ ಮೊಬೈಲುಗಳನ್ನು ಜಪ್ತು ಮಾಡಿದ್ದಾರೆ. ಸುಖದೇವಪುರದಲ್ಲಿನ ಗಡಿಯ ಚೌಕಿಯಲ್ಲಿ ನೇಮಕಗೊಂಡಿರುವ ಸೈನಿಕರಿಗೆ ೧೦-೧೨ ಕಳ್ಳಸಾಗಣಿಕೆ ಮಾಡುವವರು ಕೆಲವು ಗಂಟುಗಳನ್ನು ತೆಗೆದುಕೊಂಡು ಹೋಗುತ್ತಿರುವುದು ಕಾಣಿಸಿತು. ತಮ್ಮ ದಿಕ್ಕಿನಲ್ಲಿ ಸೈನಿಕರು ಬರುತ್ತಿರುವುದನ್ನು ನೋಡಿ ಕತ್ತಲು ಹಾಗೂ ಗಿಡಗಂಟಿಗಳ ಲಾಭ ಪಡೆದು ಕಳ್ಳರು ಓಡಿಹೋದರು. ನಂತರ ನಡೆಸಲಾದ ಹುಡುಕಾಟದಲ್ಲಿ ಸೈನಿಕರಿಗೆ ತಂತಿಯ ಗೋಡೆಯ ಬಳಿ ಇರುವ ಹೊಂಡದಲ್ಲಿ ೮ ಗಂಟುಗಳು ದೊರೆತವು. ಗಡಿ ಭದ್ರತಾ ಪಡೆಯ ಮೂಲಗಳಿಂದ ‘ಇವುಗಳಲ್ಲಿ ವಿವಿಧ ಸಂಸ್ಥೆಗಳ ೩೫೯ ಮೊಬೈಲಗಳಿದ್ದವು ಹಾಗೂ ಅವುಗಳ ಬೆಲೆಯು ಅಂದಾಜಿನಲ್ಲಿ ೩೯ ಲಕ್ಷದ ೨೯ ಸಾವಿರ ರೂಪಾಯಿಗಳಾಗಿದೆ, ಎಂಬ ಮಾಹಿತಿ ದೊರೆತಿದೆ. ಈ ಕಳ್ಳಸಾಗಾಣಿಕೆಯಲ್ಲಿ ಸಹಭಾಗಿಯಾಗಿರುವ ಅನೇಕ ಕಳ್ಳರ ಹೆಸರುಗಳು ಕಂಡುಬಂದಿದ್ದು ಅವರ ವಿರುದ್ಧ ವೈಷ್ಣವನಗರ ಪೊಲೀಸ ಠಾಣೆಯಲ್ಲಿ ದೂರನ್ನು ದಾಖಲಿಸಲಾಗಿದೆ. ಹಾಗೆಯೇ ಜಪ್ತು ಮಾಡಿರುವ ಮೊಬೈಲಗಳನ್ನು ಮುಂದಿನ ಕಾನೂನಾತ್ಮಕ ಕಾರ್ಯಾಚರಣೆಗಾಗಿ ಪೊಲೀಸ ಠಾಣೆಯಲ್ಲಿ ಜಮೆ ಮಾಡಲಾಗಿದೆ.
ಗಡಿ ಭದ್ರತಾ ಪಡೆಯು ಭಾರತ-ಬಾಂಗ್ಲಾದೇಶ ಗಡಿಯಲ್ಲಿ ನಡೆಯುವ ಕಳ್ಳಸಾಗಾಣಿಕೆಯನ್ನು ನಿಲ್ಲಿಸಲು ಕಠೋರ ಕ್ರಮಗಳನ್ನು ಕೈಗೆತ್ತಿಕೊಳ್ಳುತ್ತಿದೆ. ಕಳ್ಳತನದ ಕಾರ್ಯಾಚರಣೆಯಲ್ಲಿ ಭಾಗಿಯಾದ ಕೆಲವರನ್ನು ಬಂಧಿಸಲಾಗಿದೆ, ಎಂಬ ಮಾಹಿತಿಯನ್ನು ಗಡಿ ಭದ್ರತಾ ಪಡೆಯ ಅಧಿಕಾರಿಗಳು ನೀಡಿದ್ದಾರೆ.