ನವದೆಹಲಿ – ಸಾರಾಯಿ ಹಗರಣ ಪ್ರಕರಣದಲ್ಲಿ ಬಂಧನವಾಗಿದ್ದರೂ ಕೂಡ ರಾಜೀನಾಮೆ ನೀಡದೆ ಅರವಿಂದ ಕೇಜ್ರಿವಾಲ್ ಅವರು ರಾಷ್ಟ್ರೀಯ ಹಿತಕ್ಕಿಂತಲೂ ತಮ್ಮ ವೈಯಕ್ತಿಕ ಹಿತಕ್ಕೆ ಪ್ರಾಧಾನ್ಯತೆ ನೀಡಿದ್ದಾರೆ ಎಂದು ದೆಹಲಿ ಉಚ್ಚ ನ್ಯಾಯಾಲಯವು ದೆಹಲಿಯ ಮುಖ್ಯಮಂತ್ರಿ ಕೇಜ್ರಿವಾಲ್ ಅವರನ್ನು ಕಠೋರ ಶಬ್ದಗಳಿಂದ ಖಂಡಿಸಿದೆ. ಮುಖ್ಯ ನ್ಯಾಯಾಧೀಶರಾದ ಮನಮೋಹನ ಮತ್ತು ನ್ಯಾಯಮೂರ್ತಿ ಮನಮಿತ ಪ್ರೀತಮ ಸಿಂಹ ಅರೋರ ಅವರ ಪೀಠವು ಒಂದು ಪ್ರಕರಣದ ವಿಚಾರಣೆಯ ವೇಳೆ ಈ ಮೇಲಿನ ಹೇಳಿಕೆ ನೀಡಿದೆ. ಕೇಜ್ರಿವಾಲ್ ಅವರಿಗೆ ಕೇವಲ ಅಧಿಕಾರದ ಹಸಿವಿದೆ. ಸಮಸ್ಯೆ ಏನೆಂದರೆ, ನೀವು ಅಧಿಕಾರ ಕಬಳಿಸಲು ಪ್ರಯತ್ನಿಸುತ್ತಿದ್ದೀರಾ. ಇದರಿಂದ ನಿಮಗೆ ಅಧಿಕಾರ ದೊರೆಯುತ್ತಿಲ್ಲ. ಸಮಾಜ ಸೇವೆಯ ಸಂಸ್ಥೆಯೊಂದು ನ್ಯಾಯಾಲಯದಲ್ಲಿ ದಾಖಲಿಸಿರುವ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯ ಕುರಿತು ವಿಚಾರಣೆ ನಡೆಯುತ್ತಿರುವಾಗ ನ್ಯಾಯಾಲಯವು ಈ ಟೀಕೆ ಮಾಡಿದೆ.
ದೆಹಲಿ ಮಹಾನಗರ ಪಾಲಿಕೆಯ ಶಾಲೆಗಳಲ್ಲಿ ಓದುವ ವಿದ್ಯಾರ್ಥಿಗಳಿಗೆ ಪುಸ್ತಕಗಳು ದೊರೆತಿಲ್ಲ, ಇದರ ಸಂದರ್ಭದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿತ್ತು. ಮಹಾನಗರ ಪಾಲಿಕೆಯ ಆಯುಕ್ತರು ನ್ಯಾಯಾಲಯದಲ್ಲಿ, ಮಹಾನಗರ ಪಾಲಿಕೆಯ ಶಿಕ್ಷಣ ಇಲಾಖೆಯಲ್ಲಿ ಯಾವುದೇ ಸ್ಥಾಯಿ ಸಮಿತಿ ಇಲ್ಲದಿರುವುದರಿಂದ ಈ ಬಗ್ಗೆ ಯಾವುದೇ ನಿರ್ಣಯ ತೆಗೆದುಕೊಳ್ಳಲಾಗುತ್ತಿಲ್ಲ ಎಂದು ದೂರಿದ್ದರು. ಈ ಬಗ್ಗೆ ಪ್ರತಿವಾದ ಮಾಡಿದ ಸರಕಾರಿ ನ್ಯಾಯವಾದಿ, ದೆಹಲಿ ಸರಕಾರದ ಸಚಿವ ಸೌರಭ ಭಾರದ್ವಾಜ್ ಅವರಿಂದ ತಿಳಿದು ಬಂದಿರುವುದು ಏನೆಂದರೆ, ಸ್ಥಾಯಿ ಸಮಿತಿಯ ಅನುಪಸ್ಥಿತಿಯಲ್ಲಿ ಯೋಗ್ಯ ಪ್ರಾಧೀಕರಣದ ಕಡೆ ಅಧಿಕಾರ ವಹಿಸುವುದಕ್ಕಾಗಿ ಮುಖ್ಯಮಂತ್ರಿಗಳ ಅನುಮತಿ ಆವಶ್ಯಕವಾಗಿದೆ ಎಂದು ವಾದಿಸಿದರು. ಈ ವಾದವನ್ನು ಆಲಿಸಿದ ನ್ಯಾಯಾಲಯವು ಕೇಜ್ರಿವಾಲ್ ಬಗ್ಗೆ ಈ ಮೇಲಿನ ಟೀಕೆ ಮಾಡಿದೆ.