ನ್ಯಾಯಮೂರ್ತಿ ಪುಷ್ಪಾ ಗನೇಡಿವಾಲಾ, ಇವರು ನೀಡಿರುವ ಆಶ್ಚರ್ಯಕರ ತೀರ್ಪು ಮತ್ತು ಪೋಕ್ಸೊ ಕಾಯ್ದೆಯ ನಿರ್ಲಕ್ಷ !

೧. ಅಪ್ರಾಪ್ತ ವಯಸ್ಸಿನ ಬಾಲಕಿಯ ಮಾನಭಂಗ ಪ್ರಕರಣದಲ್ಲಿ ನ್ಯಾಯಮೂರ್ತಿ ಪುಷ್ಪಾ ಗನೇಡಿವಾಲಾ ಇವರು ನೀಡಿದ ತೀರ್ಪು ವಿವಾದಕ್ಕೀಡಾಗುವುದು

ಓರ್ವ ೧೨ ವರ್ಷದ ಹುಡುಗಿಯ ಮಾನಭಂಗ, ಅವಳ ಶರೀರದ ವಿಡಂಬನೆ ಮತ್ತು ಲೈಂಗಿಕ ಶೋಷಣೆ ಮಾಡಿರುವ ಪ್ರಕರಣದಲ್ಲಿ ಪೋಕ್ಸೊ ಕಾಯಿದೆಯಡಿಯಲ್ಲಿ ಸತೀಶ ಬಂಡೂ ರಗಡೆ ಇವನಿಗೆ ವಿಶೇಷ ಸತ್ರ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯನ್ನು ಮುಂಬಯಿ ಉಚ್ಚ ನ್ಯಾಯಾಲಯದ ನಾಗಪುರ ನ್ಯಾಯಮೂರ್ತಿ ಪುಷ್ಪಾ ಗನೇಡಿವಾಲಾ ಇವರು ಇತ್ತೀಚೆಗಷ್ಟೇ ರದ್ದು ಪಡಿಸಿದರು. ಈ ಶಿಕ್ಷೆಯನ್ನು ರದ್ದು ಪಡಿಸುವಾಗ ಉಚ್ಚ ನ್ಯಾಯಾಲಯವು ಉಪಯೋಗಿಸಿದ ಪದಗಳ ಬಗ್ಗೆ ಸದ್ಯ ದೊಡ್ಡ ಕೋಲಾಹಲ ಎದ್ದಿದೆ. ಬಾಲಕಿಯ ತಾಯಿಯ ಹೇಳಿಕೆಯಂತೆ ಬಾಲಕಿಯು ಮಾರುಕಟ್ಟೆಯಿಂದ ಪೇರಲೆಹಣ್ಣು ತರಲು ಹೋಗುತ್ತಿರುವಾಗ ಆರೋಪಿಯು ಅವಳನ್ನು ತನ್ನ ಮನೆಗೆ ಎಳೆದುಕೊಂಡು ಹೋದನು ಮತ್ತು ಈ ಹೀನಕೃತ್ಯವನ್ನು ಮಾಡಿದನು. ಬಾಲಕಿ ಮನೆಗೆ ಬರಲು ವಿಳಂಬವಾದ ಬಗ್ಗೆ ತಾಯಿ ವಿಚಾರಿಸಲು ಹೋದಾಗ ಬಾಲಕಿಯು ಆರೋಪಿಯ ಹೀನಕೃತ್ಯದ ವಿಷಯದ ಮಾಹಿತಿಯನ್ನು ತಿಳಿಸಿದಳು. ಆರೋಪಿಯು ಅವಳ ಒಂದು ಅವಯವವನ್ನು ಸ್ಪರ್ಶಿಸಿರುವುದಾಗಿ ಅವಳು ಹೇಳಿದಳು. ಲೈಂಗಿಕ ವಾಸನೆಯ ಶಮನಕ್ಕಾಗಿಯೇ ಆರೋಪಿಯು ಈ ಹೀನಕೃತ್ಯವನ್ನು ಮಾಡಿದ್ದನು. ಬಾಲಕಿಯ ತಾಯಿಯು ನೀಡಿದ ದೂರಿನ ಮೇರೆಗೆ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಖಟ್ಲೆ ದಾಖಲಾಯಿತು. ಈ ಖಟ್ಲೆಯಲ್ಲಿ ನ್ಯಾಯಾಲಯವು ಆರೋಪಿಗೆ ಕಠಿಣ ಶಿಕ್ಷೆಯನ್ನು ವಿಧಿಸಿತು. ಈ ಕಠಿಣ ಶಿಕ್ಷೆಯನ್ನು ಪ್ರಶ್ನಿಸಿ ಆರೋಪಿಯು ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದನು.

೨. ಅಜ್ಞಾನಿ ಜೀವದ ಶೀಲರಕ್ಷಣೆಗಾಗಿ ಜಾರಿಗೆ ತಂದಿರುವ ಪೋಕ್ಸೊ ಈ ಕಾನೂನನ್ನು ಮರೆತ ನ್ಯಾಯಮೂರ್ತಿಗಳು

ಪೂ. (ನ್ಯಾಯವಾದಿ) ಸುರೇಶ್ ಕುಲಕರ್ಣಿ

ಈ ಖಟ್ಲೆಯಲ್ಲಿ ಉಚ್ಚ ನ್ಯಾಯಾಲಯವು ಎಲ್ಲಿಯವರೆಗೆ ಸ್ಕಿನ್ ಟು ಸ್ಕಿನ್ (ತ್ವಚೆಗೆ ತ್ವಚೆಯ) ಸ್ಪರ್ಶವಾಗುವುದಿಲ್ಲವೋ, ಅಲ್ಲಿಯವರೆಗೆ ಲೈಂಗಿಕ ಶೋಷಣೆಯೆಂದು ಪರಿಗಣಿಸಲಾಗುವುದಿಲ್ಲ ಎಂದು ಬರೆದಿದೆ. ಆದುದರಿಂದ ಇದು ಪೋಕ್ಸೊ ಕಾನೂನಿನಡಿಯಲ್ಲಿ ಅಪರಾಧವಾಗುವುದಿಲ್ಲ. ಇಲ್ಲಿ ಮಹಿಳಾ ನ್ಯಾಯಮೂರ್ತಿಗಳು (ಸ್ತ್ರೀ ಶರೀರದ ಒಂದು ಅವಯವದ ಹೆಸರನ್ನು ಉಚ್ಚರಿಸಿ) ….ಇದನ್ನು ಬಟ್ಟೆಯ ಮೇಲಿನಿಂದ ಸ್ಪರ್ಶಿಸಿದರೆ ಅದು ಅಪರಾಧವಲ್ಲ, ಲೈಂಗಿಕ ವಾಸನೆಯನ್ನು ಶಮನಗೊಳಿಸಲು ಪ್ರಯತ್ನವಾಗಿದೆ ಎಂದರ್ಥವಲ್ಲ ಎಂದು ಬರೆದಿದ್ದಾರೆ. ನಿಜ ಹೇಳಬೇಕೆಂದರೆ ಈ ತರ್ಕವೇ ವಿತಂಡವಾದವಾಗಿದೆ. ಅಜ್ಞಾನಿ ಜೀವದ ಶೀಲರಕ್ಷಣೆಗಾಗಿ ಪೋಕ್ಸೊದಂತಹ ಈ ವಿಶೇಷ ಕಾನೂನನ್ನು ಜಾರಿಗೊಳಿಸಲಾಗಿದೆಯೆಂದು ನ್ಯಾಯಮೂರ್ತಿಗಳು ಮರೆತಿದ್ದಾರೆಂದು ಅನಿಸುತ್ತದೆ. ಯಾವಾಗ ವಿಶೇಷ ಕಾನೂನು ಜಾರಿಗೊಳಿಸಲಾಗುತ್ತದೆಯೋ, ಆಗ ಪ್ರಪ್ರಥಮವಾಗಿ ಅದನ್ನು ಮಾಡುವುದರ ಹಿಂದಿನ ಉದ್ದೇಶವನ್ನು ತಿಳಿದುಕೊಳ್ಳಬೇಕಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಕಾನೂನು ಇರುವಾಗ ಈ ವಿಶೇಷ ಕಾನೂನು ಏಕೆ ಮಾಡಬೇಕಾಯಿತು ? ಎನ್ನುವುದರ ಹಿನ್ನೆಲೆಯನ್ನು ಮತ್ತು ಆ ಕಾಲಾವಧಿಯ ಪರಿಸ್ಥಿತಿಯನ್ನು ಅಧ್ಯಯನ ಮಾಡುವುದು ಮಹತ್ವದ್ದಾಗಿರುತ್ತದೆ. ಇದನ್ನು ನಾವು ವ್ಯಾವಹಾರಿಕ ಜಾಣತನವೆನ್ನಬಹುದು.

೩. ಅಜ್ಞಾನಿ ಜೀವಗಳ ಲೈಂಗಿಕ ಶೋಷಣೆಯನ್ನು ತಡೆಗಟ್ಟಲು ರಚನೆಯಾದ ಪೋಕ್ಸೊ ಕಾನೂನು

ಸಮಾಜದಲ್ಲಿ ಮಹಿಳೆಯರು ಮತ್ತು ಬಾಲಕಿಯರ ಮೇಲಾಗುವ ಅತ್ಯಾಚಾರಗಳ ಸಂಖ್ಯೆಯಲ್ಲಿ. ಗಣನೀಯ ಹೆಚ್ಚಳವಾಗಿದೆ. ಹಾಗಾಗಿ ಉಚ್ಚ ನ್ಯಾಯಾಲಯ ಮತ್ತು ಸರ್ವೋಚ್ಚ ನ್ಯಾಯಾಲಯದ ಕಾನೂನು ಆಯೋಗವು ಈಗಾಗಲೇ ಜಾರಿಯಲ್ಲಿರುವ ಕಾನೂನಿನಲ್ಲಿ ಕಠಿಣ ಮತ್ತು ಅಮೂಲಾಗ್ರ ಬದಲಾವಣೆ ಮಾಡಿ ೨೦೦೯ ರಿಂದ ಪೋಕ್ಸೊ ಕಾನೂನು ಸಿದ್ಧಪಡಿಸುವ ಪ್ರಕ್ರಿಯೆ ಪ್ರಾರಂಭಿಸಿತು. ರಾಷ್ಟ್ರೀಯ ಮಕ್ಕಳ ಹಕ್ಕು ಸಂರಕ್ಷಣೆ ಆಯೋಗ ಮತ್ತು ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಲ್ಲದೇ ಅನೇಕ ವಿದ್ವಾಂಸರು ಸೇರಿ ೨೦೧೨ ನೇ ಇಸವಿಯಲ್ಲಿ ಈ ಕಾನೂನು ರಚಿಸಿದರು ಮತ್ತು ೧೪ ನವೆಂಬರ್ ೨೦೧೨ ರಂದು ಅದನ್ನು ದೇಶಾದ್ಯಂತ ಜಾರಿಗೊಳಿಸಿದರು. ಅದರಲ್ಲಿ ೨೦೧೯ ನೇ ಇಸವಿಯಲ್ಲಿ ಬದಲಾವಣೆಗಳಾಗಿ ಗಲ್ಲು ಶಿಕ್ಷೆಯನ್ನು ವಿಧಿಸಲು ಅವಕಾಶವನ್ನು ಕಲ್ಪಿಸಲಾಯಿತು. ನಿರ್ಭಯಾಳ ಮೇಲಾದ ಪೈಶಾಚಿಕ ಬಲಾತ್ಕಾರದ ಬಳಿಕ ಮಹಿಳಾ ಅತ್ಯಾಚಾರಗಳ ಸಂದರ್ಭದಲ್ಲಿ ಪ್ರಚಲಿತವಿರುವ ಕಾನೂನುಗಳು ಕಠೋರವಾದವು; ಆದರೆ ಅಜ್ಞಾನಿ ಜೀವದ ಶೀಲರಕ್ಷಣೆಗಾಗಿ ಮತ್ತು ಲೈಂಗಿಕ ಶೋಷಣೆಯನ್ನು ನಿಲ್ಲಿಸಲು ಪೋಕ್ಸೊ ಎಂಬ ವಿಶೇಷ ಕಾನೂನು ರಚಿಸಲಾಯಿತು.

೪. ನ್ಯಾಯಮೂರ್ತಿ ಗನೇಡಿವಾಲಾ ಇವರ ತೀರ್ಪಿನ ವಿರುದ್ಧ ರಾಷ್ಟ್ರೀಯ ಮಹಿಳಾ ಆಯೋಗವು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸುವುದು !

ಕಲಮ್ ೭ ಮತ್ತು ೮ ರಂತೆ ಬಾಲಕಿಯ ಗುಪ್ತಾಂಗವನ್ನು ಸ್ಪರ್ಶಿಸಿದರೆ, ೫ ರಿಂದ ೭ ವರ್ಷಗಳವರೆಗೆ ಶಿಕ್ಷೆ ವಿಧಿಸಲಾಗುತ್ತದೆ. ವಿಶೇಷ ಸತ್ರ ನ್ಯಾಯಾಲಯವು ಇಲ್ಲಿ ಅದನ್ನೇ ಮಾಡಿತ್ತು. ಕಲಮ್ ೧೧ ಕ್ಕನುಸಾರ ಕೆಟ್ಟ ಉದ್ದೇಶದಿಂದ ಮಕ್ಕಳನ್ನು ಸ್ಪರ್ಶಿಸಿದರೂ ೩ ವರ್ಷಗಳ ಶಿಕ್ಷೆಯಾಗುತ್ತದೆ. ಇಂತಹ ವಿಶೇಷ ಕಾನೂನಿನ ಅಡಿಯಲ್ಲಿ ಘಟಿಸಿರುವ ಅಪರಾಧದ ಸಂದರ್ಭದಲ್ಲಿ ತೀರ್ಪು ನೀಡುವಾಗ ನ್ಯಾಯಧೀಶರ ಸಾಮಾನ್ಯ ಬುದ್ಧಿವಂತಿಕೆ, ವ್ಯವಹಾರಿಕಜ್ಞಾನ ಮತ್ತು ವ್ಯಾವಹಾರಿಕ ಜಾಣ್ಮೆಗೆ ಹೆಚ್ಚು ಮಹತ್ವವಿರುತ್ತದೆ. ಅಲ್ಲದೇ ಇಲ್ಲಿ ನ್ಯಾಯ ನೀಡುವ ವ್ಯಕ್ತಿಯೂ ಸಂವೇದನಾಶೀಲ ಮಾನಸಿಕತೆಯವರೇ ಬೇಕಾಗುತ್ತಾರೆ. ಸಹಜವಾಗಿಯೇ ನ್ಯಾಯಮೂರ್ತಿ ಗನೇಡಿವಾಲಾ ಇವರ ತೀರ್ಪಿನ ವಿರುದ್ಧ ದೊಡ್ಡ ಪ್ರಮಾಣದಲ್ಲಿ ಗಲಾಟೆಯಾಯಿತು. ಈ ತೀರ್ಪನ್ನು ನಿಂದಿಸುವ ಲೇಖನಗಳು, ವಿಶೇಷ ಲೇಖನಗಳು ಮತ್ತು ಟೀಕೆ-ಟಿಪ್ಪಣೆಗಳು ದಿನಪತ್ರಿಕೆಗಳಲ್ಲಿ ಮತ್ತು ಸುದ್ದಿವಾಹಿನಿಗಳಲ್ಲಿ ಪ್ರಸಾರವಾದವು. ನಿರೀಕ್ಷೆಯಂತೆ ರಾಷ್ಟ್ರೀಯ ಮಹಿಳಾ ಆಯೋಗವು ಈ ತೀರ್ಪಿನ ವಿರುದ್ಧ ಮಹಾರಾಷ್ಟ್ರ ಸರಕಾರ ಅಪೀಲು ಮಾಡುವ ದಾರಿಯನ್ನು ಕಾಯದೇ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿತು. ಈ ತೀರ್ಪಿನ ವಿರುದ್ಧ ಕೇಂದ್ರ ಸರಕಾರದ ನ್ಯಾಯವಾದಿಗಳು ಸರ್ವೋಚ್ಚ ನ್ಯಾಯಾಲಯದಲ್ಲಿ ಮಾಡಿರುವ ಪ್ರತಿವಾದವು ನಾಗಪುರ ಉಚ್ಚ ನ್ಯಾಯಾಲಯ ನೀಡಿರುವ ತೀರ್ಪು ತಪ್ಪು ಉದಾಹರಣೆಯನ್ನು ಬಿಂಬಿಸುವುದು ಎಂದು ತೀರ್ಮಾನ ನೀಡಬಹುದು. (ಮುಂಬಯಿ ಉಚ್ಚ ನ್ಯಾಯಾಲಯದ ತೀರ್ಪನ್ನು ಮಹಾರಾಷ್ಟ್ರದ ಅಧೀನ ನ್ಯಾಯಾಲಯಗಳು ಪಾಲಿಸಲೇ ಬೇಕಾಗುತ್ತವೆ) ಇಂತಹ ತೀರ್ಪು ಮಹಿಳಾ ಮತ್ತು ಬಾಲಕಿಯರ ರಕ್ಷಣೆಯ ವಿರುದ್ಧ ಇರುವುದರಿಂದ, ಅವರ ಮೇಲಾಗುವ ಅಪರಾಧಗಳು ಹೆಚ್ಚಾಗುವ ಸಾಧ್ಯತೆಗಳಿವೆ.

೫. ಪೋಕ್ಸೊ ಕಾನೂನನ್ನು ನಿರ್ಲಕ್ಷಿಸಿ ನ್ಯಾಯಮೂರ್ತಿ ಗನೇಡಿವಾಲಾ ಇವರು ನೀಡಿದ ಅಸಂವೇದನಾಶೀಲ ತೀರ್ಪು

ನ್ಯಾಯಮೂರ್ತಿ ಗನೇಡಿವಾಲಾ

೫ ಅ. ಬಾಲಕಿಯ ಮನಸ್ಸಿಗೆ ನಾಚಿಕೆಯಾಗುವಂತೆ ಅಶ್ಲೀಲವಾಗಿ ವರ್ತಿಸುವವರನ್ನು ಹಾಗೆ ಬಿಡುವುದು : ನ್ಯಾಯಮೂರ್ತಿ ಗನೇಡಿವಾಲಾ ಇವರು ಒಂದರ ಹಿಂದೆ ಒಂದು ಆಶ್ಚರ್ಯಕರವಾದ, ಜನಸಾಮಾನ್ಯರ ಮನಸ್ಸು ಒಪ್ಪಿಕೊಳ್ಳದ ಮತ್ತು ಸಮಾಜದ ಸಂವೇದನೆಗೆ ನೋವಾಗುವಂತಹ ತೀರ್ಪು ನೀಡಿದ್ದಾರೆ. ಗಡಚಿರೋಲಿಯ ಒಬ್ಬ ಅಜ್ಞಾನಿ ಬಾಲಕಿಯ ತಾಯಿಯು ೫೦ ವರ್ಷದ ಆರೋಪಿಯು ಅವಳ ಬಾಲಕಿಯ ಕೈಹಿಡಿದು ಅವಳನ್ನು ತನ್ನೊಂದಿಗೆ ಮಲಗು ಎಂದು ಹೇಳಿ ತನ್ನ ಪ್ಯಾಂಟಿನ ಚೈನ ತೆರೆದಿದ್ದನು ಎಂದು ದೂರು ದಾಖಲಿಸಿದ್ದಳು ಈ ಪ್ರಕರಣದಲ್ಲಿ ವಿಶೇಷ ಸತ್ರ ನ್ಯಾಯಾಲಯವು ಆರೋಪಿಗೆ ಪೋಕ್ಸೊ ಕಾನೂನಿನಡಿಯಲ್ಲಿ ಶಿಕ್ಷೆಯನ್ನು ವಿಧಿಸಿತ್ತು. ಈ ತೀರ್ಪಿನ ವಿರುದ್ಧ ಅಪೀಲಿಗೆ ತೀರ್ಪು ನೀಡುವಾಗ ನ್ಯಾಯಮೂರ್ತಿ ಗನೇಡಿವಾಲಾ ಇವರು ಇಲ್ಲಿ ಪೋಕ್ಸೊ ಕಾನೂನಿನ ಅಡಿಯಲ್ಲಿ ಅಪರಾಧವೆಂದು ಪರಿಗಣಿಸಲು ಸಾಧ್ಯವಿಲ್ಲವೆಂದು ಹೇಳಿದರು. ಕೈಹಿಡಿಯುವುದು ಮತ್ತು ಪ್ಯಾಂಟಿನ ಚೈನ ತೆರೆಯುವುದು ಇದರಿಂದ ಲೈಂಗಿಕ ಶೋಷಣೆ ಆಗುವುದಿಲ್ಲ. ಹಾಗಾಗಿ ಇದನ್ನು ಅಪರಾಧವೆಂದು ಪರಿಗಣಿಸಲು ಸಾಧ್ಯವಿಲ್ಲ. ಅಲ್ಲದೇ ಇದು ಕೇವಲ ಮಾನಭಂಗವಾಗಿದೆ ಮತ್ತು ಇದಕ್ಕಾಗಿ ಆರೋಪಿಯು ಅನುಭವಿಸಿದ ಶಿಕ್ಷೆ ಸಾಕಾಗಿದೆ ಎಂದು ಹೇಳುತ್ತಾ ನ್ಯಾಯಮೂರ್ತಿ ಗನೇಡಿವಾಲಾ ಇವರು ಆರೋಪಿಯ ಅಪೀಲನ್ನು ಅಂಶಾತ್ಮಕವಾಗಿ ಒಪ್ಪಿಕೊಂಡರು. ಇಲ್ಲಿಯೂ ಈ ಅಜ್ಞಾನಿ ಬಾಲಕಿಯ ಶೀಲರಕ್ಷಣೆಗಾಗಿ ಮತ್ತು ಅವಳ ಲೈಂಗಿಕ ಶೋಷಣೆಯನ್ನು ತಡೆಯುವಲ್ಲಿ ಇರುವ ಪೋಕ್ಸೊದಂತಹ ವಿಶೇಷ ಕಾನೂನು ರಚಿಸಿರುವುದರ ಹಿಂದಿನ ಉದ್ದೇಶ ಮತ್ತು ಕಾರಣವನ್ನು ನ್ಯಾಯಮೂರ್ತಿಗಳು ಹೇಗೆ ಮರೆಯುತ್ತಾರೆ ಎನ್ನುವುದೇ ದೊಡ್ಡ ಒಗಟಾಗಿದೆ. ಈ ತೀರ್ಪಿನ ವಿರುದ್ಧವೂ ಎಲ್ಲೆಡೆ ಚರ್ಚೆಗಳಾದವು.

೫ ಆ. ಬಲಾತ್ಕಾರ ಪ್ರಕರಣದಲ್ಲಿಯೂ ಪೋಕ್ಸೊ ಕಾನೂನನ್ನು ಮೂಲೆ ಗುಂಪಾಗಿಸುವುದು : ನ್ಯಾಯಮೂರ್ತಿ ಗನೇಡಿವಾಲಾ ಇವರು ಸೂರಜ ಚಂದೂ ಕಾಸಾರಕರ ಈ ಆರೋಪಿಯ ಅಪೀಲನ್ನು ದಾಖಲಿಸಿಕೊಳ್ಳುವಾಗಲೂ ಪೋಕ್ಸೊ ಕಾನೂನನ್ನು ಬದಿಗೆ ಸರಿಸಿದರು. ಒಬ್ಬ ೧೫ ವರ್ಷದ ಅಜ್ಞಾನಿ ಬಾಲಕಿಯು ನೀಡಿದ ದೂರಿನಂತೆ ಅವಳ ತಾಯಿಯು ನೈರ್ಸಗಿಕ ವಿಧಿಗಾಗಿ ರಾತ್ರಿ ಮನೆಯ ಹೊರಗೆ ಹೋಗಿದ್ದಳು ಮತ್ತು ಅವಳ ಸಹೋದರ ಮಲಗಿದ್ದನು. ಆ ಸಮಯದಲ್ಲಿ ಆರೋಪಿ (ಸೂರಜ) ಅವಳ ಬಾಯಿಯನ್ನು ಮುಚ್ಚಿ, ಅವಳ ಮತ್ತು ತನ್ನ ಬಟ್ಟೆಯನ್ನು ತೆಗೆದು ಅವಳ ಮೇಲೆ ಬಲಾತ್ಕಾರ ಮಾಡಿದನು. ಈ ಪ್ರಕರಣದಲ್ಲಿ ಯವತಮಾಳದ ವಿಶೇಷ ನ್ಯಾಯಾಲಯವು ಆರೋಪಿಗೆ ೧೦ ವರ್ಷದ ಶಿಕ್ಷೆಯನ್ನು ವಿಧಿಸಿತ್ತು. ಹೀಗಿರುವಾಗ ಮುಂಬಯಿ ಉಚ್ಚ ನ್ಯಾಯಾಲಯದ ನಾಗಪುರ ವಿಭಾಗೀಯಪೀಠವು (ನ್ಯಾಯಮೂರ್ತಿ ಗನೇಡಿವಾಲಾ ಇವರು) ಅವನನ್ನು ನಿರ್ದೋಷಿಯೆಂದು ಘೋಷಿಸುವಾಗ ಆರೋಪಿಯ ಒಂದೇ ಸಲಕ್ಕೆ ಬಾಲಕಿಯ ಬಾಯಿಯನ್ನು ಮುಚ್ಚುವುದು, ತನ್ನ ಬಟ್ಟೆಯೊಂದಿಗೆ ಅವಳ ಬಟ್ಟೆಯನ್ನು ಕೂಡ ತೆಗೆಯುವುದು ಮತ್ತು ಬಲಾತ್ಕಾರವನ್ನೂ ಮಾಡುವುದು ಇಷ್ಟು ಕ್ರಿಯೆಗಳನ್ನು ಒಮ್ಮೆಲೆ ಮಾಡಲು ಸಾಧ್ಯವಿಲ್ಲ. ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿತು. ಇಂತಹ ಪ್ರಕರಣಗಳಲ್ಲಿ ಪೋಕ್ಸೊ ಕಾನೂನನ್ನು ಮೂಲೆ ಗುಂಪು ಮಾಡಲಾಗಿದೆ ಎಂದು ಜನಸಾಮಾನ್ಯರಿಗೆ ಅನಿಸಿದರೆ ಇದರಲ್ಲಿ ಆಶ್ಚರ್ಯವೇನಿದೆ ?

೫ ಇ. ಆತ್ಮಹತ್ಯೆ ಮಾಡಲು ಪ್ರಚೋದಿಸಿರುವ ಪ್ರಕರಣದಲ್ಲಿ ಆರೋಪಿಯನ್ನು ಮುಕ್ತಗೊಳಿಸುವುದು : ಪ್ರಶಾಂತ ಜಾರೆ ಇವನು ಪತ್ನಿಗೆ ಆತ್ಮಹತ್ಯೆ ಮಾಡಲು ಪ್ರಚೋದಿಸಿದ ಮೇರೆಗೆ ದಾರವ್ಹಾದ ವಿಶೇಷ ನ್ಯಾಯಾಲಯವು ಅವನ್ನು ದೋಷಿಯೆಂದು ತೀರ್ಮಾನಿಸಿ ಶಿಕ್ಷೆ ವಿಧಿಸಿತು. ಈ ಪ್ರಕರಣದಲ್ಲಿ ಕ್ರಿಮಿನಲ್ ಪ್ರಕರಣವನ್ನು ಆಲಿಸುವಾಗ ನ್ಯಾಯಮೂರ್ತಿ ಗನೇಡಿವಾಲಾ ಇವರು ಭಾರತೀಯ ದಂಡ ಸಂಹಿತೆ ಕಲಂ ೩೦೬ ಗನುಸಾರ ಆತ್ಮಹತ್ಯೆಗೆ ಪ್ರಚೋದಿಸಿರುವುದು ಸಿದ್ಧವಾಗುತ್ತಿಲ್ಲವೆಂದು ನಿರ್ಧರಿಸಿದರು. ಅದರಂತೆ ಶ್ಯಾಮರಾವ ವೈದ್ಯ ಮತ್ತು ರಾಹುಲ ವೈದ್ಯರ ಅಪೀಲನ್ನು ಅಂಶಾತ್ಮಕವಾಗಿ ಒಪ್ಪಿಕೊಳ್ಳುವಾಗ ಭಾರತೀಯ ದಂಡ ಸಂಹಿತೆ ಕಲಂ ೩೦೭ ರ ಶಿಕ್ಷೆಯನ್ನು ರದ್ದುಗೊಳಿಸಿದರು ಮತ್ತು ಆರೋಪಿಯು ಅನುಭವಿಸಿರುವ ಶಿಕ್ಷೆಯು ಸಾಕಾಗುತ್ತದೆಯೆಂದು ನಿರ್ಧರಿಸಿ ಆರೋಪಿಯನ್ನು ದೋಷಮುಕ್ತಗೊಳಿಸಿದರು.

೬. ಮಹಿಳೆ ಮತ್ತು ಬಾಲಕಿಯರ ಮೇಲಿನ ಅತ್ಯಾಚಾರಗಳ ಸಂದರ್ಭದಲ್ಲಿ ನೀಡುವ ತಪ್ಪು ತೀರ್ಪುಗಳು ಸಮಾಜದಲ್ಲಿ ತಪ್ಪು ಸಂದೇಶವನ್ನು ನೀಡುತ್ತದೆ

ನ್ಯಾಯಮೂರ್ತಿ ಗನೇಡಿವಾಲಾ ಇವರು ೧೫ ಮತ್ತು ೧೯ ಜನವರಿ ಈ ಎರಡು ದಿನಗಳಲ್ಲಿ ೬ ಪ್ರಕರಣಗಳನ್ನು ಮುಕ್ತಾಯಗೊಳಿಸಿದರು. ಇದರಲ್ಲಿ ೨ ದಿವಾಣಿ ಮತ್ತು ಕ್ರಿಮಿನಲ್ ಪ್ರಕರಣಗಳಿದ್ದವು. ಇದರಲ್ಲಿ ಕೆಳ ನ್ಯಾಯಾಲಯವು ಆರೋಪಿಯನ್ನು ಲೈಂಗಿಕ ಅಪರಾಧಕ್ಕಾಗಿ ದೋಷಿಯೆಂದು ನಿರ್ಧರಿಸಿತ್ತು.

ನ್ಯಾಯಮೂರ್ತಿ ಗನೇಡಿವಾಲಾ ಅವರ ಪ್ರತಿಯೊಂದು ತೀರ್ಪು ಮಹಿಳೆಯರ ಮತ್ತು ಬಾಲಕಿಯರ ಸುರಕ್ಷೆಯ ದೃಷ್ಟಿಯಿಂದ ಅಸಂವೇದನಾಶೀಲವಾಗಿತ್ತು. ಮಹಿಳಾ ಆಯೋಗವು ದಾಖಲಿಸಿರುವ ಅಪೀಲಿನ ಮೇರೆಗೆ ನೊಟೀಸು ತೆಗೆದು ಸರ್ವೋಚ್ಚ ನ್ಯಾಯಾಲಯವು ಸದರಿ ತೀರ್ಪನ್ನು ಸ್ಥಗಿತಗೊಳಿಸಿರುವುದು ನಿಜವಾಗಿದ್ದರೂ ಅದು ಸ್ಟೇ ಅಟ್ ರೆಮ್ ಅಲ್ಲ. ಈ ಸ್ಥಗಿತದ ಆದೇಶವು ಆ ತೀರ್ಪಿಗೆ ಮಾತ್ರ ಸಂಬಂಧಿಸಿದೆ. ಇಂತಹ ಆಶ್ಚರ್ಯಕರ ತೀರ್ಪುಗಳು ಮಹಿಳೆ ಮತ್ತು ಬಾಲಕಿಯರ ಮೇಲಾಗುವ ಅತ್ಯಾಚಾರಗಳಲ್ಲಿ ಹೆಚ್ಚಳವಾಗುವ ಮತ್ತು ಅಪರಾಧ ವೃತ್ತಿಯಿರುವ ವ್ಯಕ್ತಿಯ ಮಾನಸಿಕತೆಗೆ ನೀರುಗೊಬ್ಬರ ಎರೆಯುವಂತಹದ್ದಾಗಿದೆ. ಇದು ಸಮಾಜದಲ್ಲಿ ತಪ್ಪು ಸಂದೇಶವನ್ನು ತಲುಪಿಸಿ ಕೆಟ್ಟ ಪರಿಣಾಮವನ್ನು ಬೀರುತ್ತದೆ.

೭. ಕೆಳ ನ್ಯಾಯಾಲಯದ ನ್ಯಾಯಾಧೀಶರಂತೆ ಉಚ್ಚ ನ್ಯಾಯಮೂರ್ತಿಗಳಿಗೂ ತಪ್ಪು ತೀರ್ಪು ನೀಡಿರುವ ಪ್ರಕರಣದಲ್ಲಿ ತನಿಖಾ ಸಂಸ್ಥೆಯನ್ನು ನೇಮಿಸುವ ವಿಚಾರವಾಗಬೇಕು

ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳು ನ್ಯಾಯಮೂರ್ತಿ ಗನೇಡಿವಾಲಾರವರಿಂದ ಕ್ರಿಮಿನಲ್ ಕೆಲಸಗಳನ್ನು ತಕ್ಷಣವೇ ಹಿಂಪಡೆಯುವುದು ಮತ್ತು ಅವರಿಗೆ ಇನ್ನಿತರೆ ಪ್ರಕರಣಗಳ ಅಂದರೆ ದಿವಾಣಿ ಪ್ರಕರಣಗಳನ್ನು ಒಪ್ಪಿಸಬೇಕು. ಮುಂಬಯಿ ಉಚ್ಚ ನ್ಯಾಯಾಲಯವು ಕೆಳಮಟ್ಟದ ನ್ಯಾಯಾಲಯಗಳ ನ್ಯಾಯಾಧೀಶರ ತೀರ್ಪನ್ನು ಪರಿಶೀಲಿಸುತ್ತಿರುತ್ತದೆ. ಅದರಂತೆಯೇ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಿಗಾಗಿಯೂ ಇಂತಹ ಸಮಿತಿಯನ್ನು ಜಾರಿಗೊಳಿಸುವ ಅಗತ್ಯವಿದೆಯೇ ಎಂದು ಪರಿಶೀಲಿಸಬೇಕು. ಮುಂಬಯಿ ಉಚ್ಚ ನ್ಯಾಯಾಲಯವು ಕೆಳಗಿನ ನ್ಯಾಯಾಲಯಗಳ ನ್ಯಾಯಾಧೀಶರು ನೀಡಿರುವ ತಪ್ಪು ತೀರ್ಪುಗಳ ವಿಷಯದಲ್ಲಿ ಪರಿಹಾರೋಪಾಯಗಳನ್ನು ಕಂಡುಹಿಡಿಯುವಾಗ ಇಂತಹ ಕೆಳ ನ್ಯಾಯಾಲಯದ ನ್ಯಾಯಾಧೀಶರ ವರ್ಗಾವಣೆ ಇತ್ಯಾದಿ ಕ್ರಮಗಳನ್ನು ಕೈಕೊಳ್ಳುತ್ತದೆ. ಅದರಂತೆಯೇ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಿಗೂ ಇಂತಹ ನಿಯಮಗಳನ್ನು ಏಕೆ ಜಾರಿಗೊಳಿಸಿಲ್ಲ ?

೮. ಕೆಳಗಿನ ನ್ಯಾಯಾಲಯಗಳಂತೆ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಿಗೂ ಕಾರ್ಯಾಗಾರದ ಆಯೋಜನೆಯನ್ನು ಮಾಡುವ ಆವಶ್ಯಕತೆಯಿರುವುದು

ಹಿಂದೂ ಹೃದಯಸಾಮ್ರಾಟ ಮಾ. ಬಾಳಾಸಾಹೇಬ ಠಾಕರೆಯವರ ನಿರ್ವಾಣದ ಬಳಿಕ ಪಾಲಘರನ ೨ ಮುಸಲ್ಮಾನ ಯುವತಿಯರು ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆಯನ್ನು ಮಾಡಿದ್ದರು. ಇದರಿಂದ ಅವರ ವಿರುದ್ಧ ದೂರು ದಾಖಲಿಸಲಾಗಿತ್ತು. ಪೊಲೀಸರು ಪೊಲೀಸ ಕಸ್ಟಡಿಯನ್ನು ಕೋರಿದಾಗ ಅದನ್ನು ಪಾಲಘರ ನ್ಯಾಯಾಧೀಶರು ನಿರಾಕರಿಸಿ, ಅವರನ್ನು ಸ್ವಲ್ಪ ಹೊತ್ತು ನ್ಯಾಯಾಂಗ ಕಸ್ಟಡಿಯಲ್ಲಿಟ್ಟು ಜಾಮೀನು ನೀಡಿದರು. ಇದರ ವಿರುದ್ಧ ಮಾನವಹಕ್ಕುಗಳ ಉಲ್ಲಂಘನೆಯಾಗಿದೆಯೆಂದು ಧ್ವನಿ ತೆಗೆಯುವವರು ಒಂದೇ ಸಮನೆ ಗಲಾಟೆ ಮಾಡಿದರು. ಅವರು ಪೊಲೀಸ್ ಕಸ್ಟಡಿಯನ್ನು ನಿರಾಕರಿಸಿದಾಗ ಆ ಯುವತಿಯರಿಗೆ ತಕ್ಷಣವೇ ಏಕೆ ಜಾಮೀನು ಮಂಜೂರು ಮಾಡಲಿಲ್ಲ ? ಎಂದು ನ್ಯಾಯಾಧೀಶರನ್ನು ಮುತ್ತಿಗೆ ಹಾಕಿದರು. ಇಂತಹ ಸಮಯದಲ್ಲಿ ಉಚ್ಚ ನ್ಯಾಯಾಲಯವು ಆ ನ್ಯಾಯಾಧೀಶರನ್ನು ಮಧ್ಯಂತರ ವರ್ಗಾವಣೆ ಮಾಡಿದರೆಂದು ತಿಳಿದು ಬಂದಿದೆ. ಹೀಗಿರುವಾಗ ಕೆಳಮಟ್ಟದ ನ್ಯಾಯಸಂಸ್ಥೆಯ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಉಚ್ಚ ನ್ಯಾಯಾಲಯವು ಅವರ ಸಹೋದ್ಯೋಗಿ ನ್ಯಾಯಮೂರ್ತಿಗಳು ತಪ್ಪು ಮಾಡಿದರೆ ಏಕೆ ಅವರನ್ನು ರಕ್ಷಿಸುತ್ತಾರೆ ? ಎನ್ನುವ ಪ್ರಶ್ನೆ ಏಳುತ್ತದೆ.

ಉಚ್ಚ ನ್ಯಾಯಾಲಯದಲ್ಲಿ ಇಲಾಖಾ ಕ್ರಮ ಜರುಗಿಸಲು ಯಾವುದಾದರೂ ಸಮಿತಿಯನ್ನು ನೇಮಿಸಲು ಉಚ್ಚ ನ್ಯಾಯಾಲಯ ನಿರ್ಧರಿಸುವುದೇ ? ಕೆಳಮಟ್ಟದ ನ್ಯಾಯಾಲಯಗಳಿಗಾಗಿ ಸೆಮಿನಾರ್ ಮತ್ತು ಕಾರ್ಯಾಗಾರಗಳನ್ನು ಜರುಗಿಸಲಾಗುತ್ತದೆ. ಹೀಗಿರುವಾಗ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಿಗಾಗಿ ಇದರ ಅವಶ್ಯಕತೆಯಿದೆಯೇ ? ಎನ್ನುವ ವಿಚಾರ ಮಾಡಬೇಕು.

೯. ಜನತೆಯ ನ್ಯಾಯವ್ಯವಸ್ಥೆಯ ಮೇಲಿನ ವಿಶ್ವಾಸ ಸ್ಥಿರವಾಗಿರಲು ನಿಷ್ಪಕ್ಷವಾಗಿ ನ್ಯಾಯದಾನವಾಗುವ ಅವಶ್ಯಕತೆ

ಕಾನೂನು ಆಯೋಗದ ಅಭಿಪ್ರಾಯಕ್ಕನುಸಾರ ಪ್ರತಿಯೊಂದು ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳನ್ನು ಪರರಾಜ್ಯಕ್ಕೆ ಸ್ಥಳಾಂತರ ಮಾಡುವ ಪರಿಪಾಠವನ್ನು ಸ್ವಲ್ಪ ಮಟ್ಟಿಗೆ ಮುಂದುವರಿಸಬೇಕು. ಅಲ್ಲದೇ ಅನೇಕ ವರ್ಷಗಳ ವರೆಗೆ ಮತ್ತು ತಿಂಗಳಾನುಗಟ್ಟಲೆ ನಿರ್ದಿಷ್ಟ ನ್ಯಾಯಮೂರ್ತಿಗಳ ಬಳಿಗೆ ಪೊಲೀಸ ಪ್ರಕರಣಗಳು ಅಥವಾ ದಿವಾಣಿ ಅಥವಾ ಕಂಪನಿ ಪ್ರಕರಣಗಳು ಹಾಗೂ ಹಸಿರು ಪೀಠದ ಪ್ರಕರಣಗಳನ್ನು ನೀಡಲಾಗಿರುತ್ತದೆ. ಈ ಪದ್ಧತಿಯನ್ನು ಬದಲಾಯಿಸುವುದು ಈ ಪರಿಸ್ಥಿತಿಯಲ್ಲಿ ಸೂಕ್ತವೆನಿಸುತ್ತದೆ. ದೇಶದಲ್ಲಿ ೧೩೬ ಕೋಟಿ ಜನತೆಗೆ ನ್ಯಾಯ ವ್ಯವಸ್ಥೆಯ ಮೇಲೆ ವಿಶ್ವಾಸವಿದೆ ಮತ್ತು ಇದೇ ಅವರ ಮೇಲಾಗಿರುವ ಅನ್ಯಾಯಕ್ಕೆ ನ್ಯಾಯ ನೀಡಬಹುದು ಎಂದು ಅವರ ಶ್ರದ್ಧೆಯಿದೆ. ಈ ಶ್ರದ್ಧೆಗೆ ಇಂತಹ ತೀರ್ಪುಗಳಿಂದ ಧಕ್ಕೆಯಾಗಬಹುದು ಎನ್ನುವುದನ್ನು ಮರೆಯಬಾರದು. ಅಲ್ಲದೇ ನಮ್ಮ ನ್ಯಾಯಮೂರ್ತಿಗಳು ರಾಮಶಾಸ್ತ್ರಿ ಪ್ರಭುಣೆಯವರಂತೆ ತೀರ್ಪು ನೀಡುತ್ತಾರೆ ಎಂದು ಜನತೆಯ ಭಾವನೆಯಾಗಿದೆ ಮತ್ತು ಹಾಗೆಯೇ ಇರಬೇಕು. ಇದಕ್ಕಾಗಿ ಈ ಲೇಖನ.

೧೦. ಸರ್ವೋಚ್ಚ ನ್ಯಾಯಾಲಯದ ಸ್ತುತ್ಯಾರ್ಹ ನಿರ್ಣಯ !

ವರ್ಷ ೨೦೦೭ ರಲ್ಲಿ ಗನೇಡಿವಾಲಾ ನೇರವಾಗಿ ಜಿಲ್ಲಾ ನ್ಯಾಯಾಧೀಶರೆಂದು ಆಯ್ಕೆಯಾಗಿದ್ದರು. ಮುಂದೆ ಅವರು ಮುಂಬಯಿಗೆ ವರ್ಗಾವಣೆಗೊಂಡು ಉಚ್ಚ ನ್ಯಾಯಾಲಯದಲ್ಲಿ ಪ್ರಬಂಧಕರಾಗಿದ್ದರು. ವರ್ಷ ೨೦೧೮ ರಲ್ಲಿ ಬಡ್ತಿಯ ಕೋಟಾದಡಿಯಲ್ಲಿ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳನ್ನಾಗಿ ಮಾಡಲು ಅವರ ಪ್ರಸ್ತಾವನೆ ಚರ್ಚೆಗೆ ಬಂದಿತ್ತು. ಆಗ ಅವರನ್ನು ಬದಿಗೆ ಸರಿಸಿ ಕೆಳಗಿನ ವ್ಯಕ್ತಿಯನ್ನು ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಹುದ್ದೆಗೆ ಮಾಡಲಾಯಿತು. ಮುಂಬಯಿ ಉಚ್ಚ ನ್ಯಾಯಾಲಯದ ಕೊಲೆಜಿಯಂ (ನ್ಯಾಯಾಧೀಶರನ್ನು ಆಯ್ಕೆ ಮಾಡುವ ಸಮಿತಿ) ನಿರ್ಣಯವನ್ನು ಸರ್ವೋಚ್ಚ ನ್ಯಾಯಾಲಯದ ಕೊಲೆಜಿಯಮ್ ಸ್ವೀಕರಿಸಿತು. ಇಲ್ಲಿ ಏಳುವ ಪ್ರಶ್ನೆಯೇನೆಂದರೆ ೨೦೧೯ ರಲ್ಲಿ ಅಂತಹ ಯಾವ ಬದಲಾವಣೆಯಾಯಿತು, ಆ ಮೂಲಕ ನ್ಯಾಯಮೂರ್ತಿ ಗನೇಡಿವಾಲಾ ಇವರನ್ನು ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಯೆಂದು ಬಡ್ತಿಗೆ ಆಯ್ಕೆ ಮಾಡಿ ಅವರನ್ನು ಹೆಚ್ಚುವರಿ ನ್ಯಾಯಮೂರ್ತಿಗಳೆಂದು ನೇಮಿಸಲಾಯಿತು ? ಅವರ ಕಾರ್ಯದ ಕಾಲಾವಧಿ ೨ ವರ್ಷಗಳಿರುತ್ತವೆ ಮತ್ತು ಬಳಿಕ ಪುನಃ ದೃಢಪಡಿಸಿಕೊಳ್ಳಲು ಪ್ರಸ್ತಾವನೆಯನ್ನು ಮುಂಬಯಿ ಉಚ್ಚ ನ್ಯಾಯಾಲಯದ ಕೊಲೆಜಿಯಮ್‌ನಿಂದ ಸರ್ವೋಚ್ಚ ನ್ಯಾಯಾಲಯದ ಕೊಲೆಜಿಯಮ್ ಬಳಿಗೆ ಹೋಗುತ್ತದೆ ತದನಂತರ ಅವರು ಸ್ಥಾಯಿ ನ್ಯಾಯಾಧೀಶರಾಗುತ್ತಾರೆ.

ಈ ಲೇಖನವನ್ನು ಬರೆಯುವವರೆಗೆ ಸರ್ವೋಚ್ಚ ನ್ಯಾಯಾಲಯದ ಕೊಲೆಜಿಯಮ್ ನ್ಯಾಯಮೂರ್ತಿ ಗನೇಡಿವಾಲಾ ಇವರ ಪ್ರಸ್ತಾವನೆಯನ್ನು ಹಿಂಪಡೆದುಕೊಂಡು ಅವರನ್ನು ಮುಂಬಯಿ ಉಚ್ಚ ನ್ಯಾಯಾಲಯದ ಸ್ಥಾಯಿ ನ್ಯಾಯಾಧೀಶರ ಹುದ್ದೆಗೆ ನಿಯುಕ್ತಿಗೊಳಿಸಬೇಕೋ ಬೇಡವೋ ? ಅಥವಾ ಹೆಚ್ಚುವರಿ ನ್ಯಾಯಮೂರ್ತಿಗಳೆಂದು ಒಂದು ವರ್ಷ ಮುಂದುವರಿಸುವುದೋ ಅಥವಾ ಜಿಲ್ಲಾ ನ್ಯಾಯಾಧೀಶರೆಂದು ಕಳುಹಿಸುವುದೋ ?ಎನ್ನುವ ನಿರ್ಣಯವು ಮುಂಬರುವ ಕೆಲವು ದಿನಗಳಲ್ಲಿ ಬರುವುದು.

– ಪೂ. (ನ್ಯಾಯವಾದಿ) ಸುರೇಶ ಕುಲಕರ್ಣಿ, ಮುಂಬೈ ಉಚ್ಚ ನ್ಯಾಯಾಲಯ  ಮತ್ತು ಸಂಸ್ಥಾಪಕ ಸದಸ್ಯರು, ಹಿಂದೂ ವಿಧಿಜ್ಞ ಪರಿಷತ್ತು.