ಚೀನಾದ ಮೇಲೆ ಭಾರತೀಯ ಸಂಸ್ಕೃತಿಯ ಪ್ರಭಾವ 

ಭಾಗವತಾಚಾರ್ಯ ವಾ.ನಾ. ಉತ್ಪಾತ

೧. ಚೀನಾ, ತಿಬೇಟ್ ಮತ್ತು ಭಾರತದ ಸಾಂಸ್ಕೃತಿಕ ಸಂಬಂಧ

‘ತುಂಬಾ ಪ್ರಾಚೀನ ಕಾಲದಿಂದ ಚೀನಾ, ತಿಬೇಟ್ ಹಾಗೂ ಭಾರತ ಇವುಗಳಲ್ಲಿ ಸಾಂಸ್ಕೃತಿಕ ಸಂಬಂಧವಿತ್ತು. ಟಿಬೇಟ್‌ಗೆ ತ್ರಿವಿಷ್ಟಪ ಅಂದರೆ ‘ಸ್ವರ್ಗ ಎಂದು ಹೇಳಲಾಗಿದೆ. ಮನುವು ಚೀನಾವನ್ನು ಉಲ್ಲೇಖಿಸಿದ್ದಾನೆ. (ಕ್ರಿ.ಪೂ. ೮೦೦೦ ವರ್ಷ) ಪಾಣಿನೀಯೂ (ಕ್ರಿ.ಪೂ. ೨೧೦೦ ವರ್ಷಗಳ ಹಿಂದೆ) ರೇಶ್ಮೆ ಚೀನಾದಿಂದ ಬರುತ್ತದೆ ಎಂದು ಅದನ್ನು ‘ಚೀನಾಂಶುಕ ಎಂದು ಹೇಳಿದ್ದಾನೆ.

೨. ಭಾರತ ಚೀನಾದ ಗುರು !

ಆರೆಲ್ ಸ್ಟೀನ್ ತನ್ನ ‘ಸರ್ ಇಂಡಿಯಾ ಎಂಬ ಗ್ರಂಥದಲ್ಲಿ, ‘ತುರ್ಕಸ್ಥಾನ್ ಖೋತಾನ್ (ಗೋಸ್ಥಾನ)ದಲ್ಲಿ ಭಾರತೀಯ ರಾಜ್ಯಗಳು ವಿಪುಲವಾಗಿದ್ದವು. ಅಲ್ಲಿನ ರಾಜ್ಯಾಡಳಿತದಲ್ಲಿ ಭಾರತೀಯ ಭಾಷೆಗಳನ್ನು ಬಳಸಲಾಗುತ್ತಿತ್ತು, ಇದು ಅಲ್ಲಿನ ನಾಣ್ಯಗಳು ಹಾಗೂ ಕೆತ್ತನೆಯ ಲೇಖನಗಳಿಂದ ಸಿದ್ಧವಾಗುತ್ತದೆ. ಅಲ್ಲಿ ಶ್ರೀವಿಷ್ಣುವಿನ ಪೂಜೆಯಾಗುತ್ತಿತ್ತು. ನಂತರ ಬುದ್ಧನ ಪೂಜೆಯಾಗತೊಡಗಿತು. ಅದೇ ರೀತಿ ಅಲ್ಲಿ ಸಂಸ್ಕೃತ ಭಾಷೆ ಹಾಗೂ ದೇವನಾಗರಿ ಲಿಪಿಯ ಪರಿಚಯವಿತ್ತು ಎಂದು ಹೇಳುತ್ತಾನೆ.

ಚೀನಾದ ಇತಿಹಾಸಕಾರರು, ಪಂಡಿತರು, ವಿದ್ವಾಂಸರು ಮತ್ತು ಕೆಲವು ರಾಜಕಾರಣಿಗಳು ಕೂಡ ‘ಹಿಂದುಸ್ಥಾನವು ಚೀನಾದ ಗುರು ಆಗಿದೆ ಎಂಬುದನ್ನು ಒಪ್ಪಿಕೊಳ್ಳುತ್ತಾರೆ. ೧೯೬೨ ರವರೆಗೆ ಚೀನಾ ಮತ್ತು ಭಾರತ ಇವುಗಳಲ್ಲಿ ಅಖಂಡ ಸ್ನೇಹವಿತ್ತು. ಕಳೆದ ಸಾವಿರಾರು ವರ್ಷಗಳವರೆಗೂ ಎರಡೂ ದೇಶಗಳ ನಡುವೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಸ್ನೇಹವಿತ್ತು. ‘ವಿಸ್ಡಮ್ ಆಫ್ ಇಂಡಿಯಾ ಎಂಬ ಗ್ರಂಥದಲ್ಲಿ ಲಿನ್ ಯುಟಾಂಗ್, “ಹಿಂದುಸ್ಥಾನವು ಧರ್ಮ ಹಾಗೂ ಕಲ್ಪಕ ವಾಂಙ್ಮಯದ ವಿಷಯದಲ್ಲಿ ಚೀನಾದ ಗುರು ಮತ್ತು ತ್ರಿಕೋನಮಿತಿ, ವರ್ಗಸಮೀಕರಣ, ವ್ಯಾಕರಣ, ಧ್ವನಿಶಾಸ್ತ್ರ, ಅರೇಬಿಯನ್ ನೈಟ್ಸ್, ಪ್ರಾಣಿಗಳ ಆಟ, ಚದುರಂಗ, ತತ್ತ್ವಜ್ಞಾನ ಈ ವಿಷಯಗಳಲ್ಲಿ ಇಡೀ ಜಗತ್ತಿದೇ ಗುರುವಾಗಿತ್ತು ಎಂದು ಹೇಳುತ್ತಾನೆ. ಬೊಕಾಶಿಓ, ಗಟೇ, ಶಪೇನಹ್ಯಾಮರ್, ಇಮರ್ಸನ್‌ರವರು ಭಾರತದಿಂದ ಪ್ರೇರಣೆಯನ್ನು ಪಡೆದರು.

ಚೀನಾದ ಪಂಡಿತರು ಸಾವಿರಾರು ಮೈಲು ದೂರದ ಮತ್ತು ಕಷ್ಟದಾಯಕ ಪ್ರಯಾಣವನ್ನು ಮಾಡಿ ಭಾರತಕ್ಕೆ ಕಲಿಯಲು ಬರುತ್ತಿದ್ದರು. ಚೀನಾದಲ್ಲಿ ಹಿಂದೂ ಪಂಡಿತರಿಗೆ, ಯೋಗಿಗಳಿಗೆ ದೊಡ್ಡ ಬೇಡಿಕೆಯಿತ್ತು. ಆ ಸಮಯದಲ್ಲಿ ಅವರ ಲೋಯಾಂಗ್ ಎಂಬ ರಾಜಧಾನಿಯಲ್ಲಿ ೫೦ ಸಾವಿರ ಹಿಂದೂಗಳು ಹಾಗೂ ೩ ಸಾವಿರ ಭಾರತೀಯ ಪುರೋಹಿತ ರಿದ್ದರು. ಬೌದ್ಧ ಧರ್ಮವು ಚೀನಾಗೆ ಹೋಗುವ ಮೊದಲೂ ಭಾರತ-ಚೀನಾದ ನಡುವೆ ಉತ್ತಮ ಬಾಂಧವ್ಯವಿತ್ತು. ಕ್ರಿ.ಪೂ. ೧೨೧೨ ಅಂದರೆ ೩ ಸಾವಿರ ೨೦೦ ವರ್ಷಗಳ ಹಿಂದಿನ ತನಕ ಭಾರತ-ಚೀನಾದ ನಡುವೆ ಉತ್ತಮ ಬಾಂಧವ್ಯವಿತ್ತು.

೩. ಮನುಸ್ಮೃತಿಯ ದ್ವೇಷಿಗಳಿಗೆ ಇದರ ಬಗ್ಗೆ ಏನು ಹೇಳುವುದಿದೆ ?

ಓರ್ವ ಸಂಶೋಧಕ ಪಂಡಿತರಾದ ಮೊಟವಾನಿಯವರು ಹೇಳುತ್ತಾರೆ, ‘ಚೀನಾಗೆ ಮನುಸ್ಮೃತಿಯ ಪರಿಚಯವಿತ್ತು. ೧೯೩೨ ಇಸವಿಯಲ್ಲಿ ಜಪಾನ್ ಚೀನಾದ ಮೇಲೆ ಆಕ್ರಮಣ ಮಾಡಿತು. ಅದರಲ್ಲಿ ಚೀನಾದ ರಕ್ಷಣಾಗೋಡೆಯ ಕೆಲವು ಭಾಗವು ನಾಶವಾಯಿತು. ಅಲ್ಲಿಯ ಭೂಮಿಯ ಆಳದಲ್ಲಿ ಒಂದು ಪೆಟ್ಟಿಗೆಯಲ್ಲಿ ಒಂದು ಹಸ್ತಲಿಖಿತವು ಸಿಕ್ಕಿತು. ಆ ಹಸ್ತಲಿಖಿತವನ್ನು ಸರ್ ಆಗಸ್ಟ್ಸ್ ಫ್ರಿಟಝ್ ಜಾರ್ಜರವರು ಖರೀದಿಸಿ ಅದನ್ನು ಲಂಡನ್‌ಗೆ ತಂದರು. ಪ್ರಾ. ಎಂಥನೀ ಗ್ರೇಮೀರವರ ನೇತೃತ್ವದಲ್ಲಿ ಚೀನೀ ತಜ್ಞರ ಒಂದು ಗುಂಪಿನವರಿಗೆ ಅದನ್ನು ಹಸ್ತಾಂತರಿಸಿದರು. ಅದರಲ್ಲಿ ೧೦ ಸಾವಿರ ವರ್ಷಗಳ ಹಿಂದೆ ಬರೆದಿರುವ ಮನುಸ್ಮೃತಿಯ ಉಲ್ಲೇಖ ಸಿಕ್ಕಿತು. ಆ ಹಸ್ತಲಿಖಿತವು ವೈದಿಕ ಭಾಷೆಯಲ್ಲಿತ್ತು.

೪. ಚೀನಾದ ತತ್ತ್ವಜ್ಞಾನಿಯಾದ ತಾವೋರವರ ಆತ್ಮದ ವಿಷಯದಲ್ಲಿನ ತತ್ತ್ವಜ್ಞಾನವು ವೈದಿಕ ತತ್ತ್ವಜ್ಞಾನವೇ ಆಗಿದೆ.

೫. ಹಿಂದೂ ಧರ್ಮವನ್ನು ತಿರಸ್ಕರಿಸುವ ಬೌದ್ಧರು ಈ ವಾಸ್ತವಿಕತೆಯನ್ನು ತಿಳಿದುಕೊಳ್ಳುವರೇ ?

ತತ್ತ್ವಜ್ಞಾನಿ ಲಿಂಗ್ ಇವರು, ಪುರಾತನ ಕಾಲದಿಂದಲೂ ಚೀನಾದ ಉತ್ತರದಲ್ಲಿ ಸುಸಂಸ್ಕೃತ ಪ್ರದೇಶವಿರಲಿಲ್ಲ. ಪೂರ್ವಕ್ಕೆ ಫೆಸಿಫಿಕ್ ಮಹಾಸಾಗರದಿಂದ ಸಭ್ಯತೆಯ ಒಂದು ಶಬ್ದವೂ ಬರಲು ಸಾಧ್ಯವಿರಲಿಲ್ಲ. ಪಶ್ಚಿಮದಲ್ಲಿನ ಎಲ್ಲ ರಾಷ್ಟ್ರಗಳೂ ಸಂಸ್ಕೃತಿಹೀನವಾಗಿದ್ದವು. ಕೇವಲ ಏಕಮೇವ ನೈಋತ್ಯದಿಂದ (ಭಾರತದಿಂದ) ಸಂಸ್ಕೃತಿಯು ಬರುವ ಸಾಧ್ಯತೆ ಇತ್ತು. ಅವರೊಂದಿಗೆ ನಮ್ಮ ಮೈತ್ರಿಯಾಯಿತು ಎಂದು ಹೇಳುತ್ತಾರೆ.

ಕ್ರೈಸ್ತ ಯುಗದ ಮೊದಲ ೮೦೦ ವರ್ಷ ೧ ರಿಂದ ೮೦೦ ಇಸವಿಯವರೆಗೆ ಭಾರತದಿಂದ ಅನೇಕ ವಿಚಾರವಂತರು, ಸಂತರು, ಬೌದ್ಧ ಭಿಕ್ಷುಗಳು ಚೀನಾಗೆ ಬರುತ್ತಿದ್ದರು. ಅವರಲ್ಲಿನ ೨೪ ಜನರ ಹೆಸರುಗಳು ಪ್ರಸಿದ್ಧವಾಗಿವೆ. ಕಾಶ್ಮೀರದಿಂದ ನಮ್ಮಲ್ಲಿಗೆ ೧೩ ಜನ ದೂತರು ಬಂದರು. ಚೀನಾದಿಂದ ೧೮೭ ಮಹಾನ್ ಪಂಡಿತರು ಆದರಭಾವ ಹಾಗೂ ಸಂದೇಶವನ್ನು ತೆಗೆದುಕೊಂಡು ಹಿಂದುಸ್ಥಾನಕ್ಕೆ ಹೋದರು. ಅವರಲ್ಲಿನ ೧೦೫ ಜನರ ಹೆಸರು ಲಭ್ಯವಿವೆ. ಭಾರತೀಯ ಇತಿಹಾಸದಲ್ಲಿ ಕೂಡ ಫಾರ್‌ಹೀನ್, ಹ್ಯುಯೆನ್‌ತ್ಸಂಗ್, ಇತ್ಸಿಂಗ್ ಇವರ ಹೆಸರುಗಳಿವೆ. ಓರ್ವ ಚೀನೀ ಪಂಡಿತರು, “ಭಾರತಕ್ಕೆ ಚೀನಾದಿಂದ ಯಾವುದೇ ರೀತಿಯ ಲೋಭವಿರಲಿಲ್ಲ, ಅದು ನಮಗೆ ಮೋಕ್ಷ, ಮೈತ್ರಿಯ ಸಾಧನೆಯನ್ನು ಕಲಿಸಿತು. ಅವರ ವಾಙ್ಮಯ, ಕಲೆ, ಶಿಕ್ಷಣ, ಸಂಗೀತ, ಚಿತ್ರಕಲೆ, ವಾಸ್ತು ಶಾಸ್ತ್ರ, ಶಿಲ್ಪಕಲೆ, ನಾಟ್ಯಗಳಿಂದ ನಮಗೆ ಪ್ರೇರಣೆ ಸಿಕ್ಕಿತು. ಭಾರತೀಯರು ಬರುವಾಗ ತಮ್ಮೊಂದಿಗೆ ಖಗೋಲಶಾಸ್ತ್ರ, ಔಷಧಿಶಾಸ್ತ್ರ, ಸಾಮಾಜಿಕ ಶಿಕ್ಷಣ ಸಂಸ್ಥೆಗಳ ಉಡುಗೊರೆಯನ್ನು ತಂದರು ಎಂದು ಹೇಳುತ್ತಾರೆ

ಚೀನಾದಲ್ಲಿ ಒಂದು ದೇವಾಲಯದಲ್ಲಿರುವ ಹಿಂದೂ ದೇವತೆಗಳ ಮೂರ್ತಿಗಳು. (ಆಧಾರ : ಜಾಲತಾಣ)

೬. ಚೀನಾದೊಂದಿಗೆ ಬೇರೆ ಬೇರೆ ದೇಶಗಳಲ್ಲಿ ಹಿಂದೂ ಧರ್ಮ

೧೨೫೮ ನೇ ಇಸವಿಯಲ್ಲಿ ಕುಬ್ಲಾಯೀಖಾನನು ಬೌದ್ಧ ಧರ್ಮದ ಪರವಾಗಿ ನಿರ್ಣಯ ನೀಡಿದನು. ಅಂದಿನಿಂದ ಬೌದ್ಧ ಧರ್ಮವು ಹೆಚ್ಚು ಕಡಿಮೆ ಚೀನಾದ ರಾಷ್ಟ್ರಧರ್ಮವಾಯಿತು. ಆ ಪ್ರಸಂಗದಲ್ಲಿ ೩೦೦ ಜನ ಬೌದ್ಧ ಭಿಕ್ಷುಗಳು, ೨೦೦ ಜನ ತಾವೋಪಂಥದವರು ಮತ್ತು ೨೦೦ ಜನ ಕಾನ್ಫೂಶಿಯನ್ ಪಂಡಿತರು ಹಾಜರಿದ್ದರು. ೧೯ ವರ್ಷದ ಫಾಗರಪಾ ಎಂಬ ಟಿಬೇಟಿನ ಬೌದ್ಧ ಭಿಕ್ಷುನು ವಾಕ್‌ಚಾತುರ್ಯದಿಂಂದ ಬೌದ್ಧ ಧರ್ಮ ಶ್ರೇಷ್ಠವೆಂದು ನಿರ್ಧರಿಸಿದನು. ಆ ಕಾಲದಲ್ಲಿ ಕಾಬೂಲ್, ಗಾಂಧಾರ, ಕುಭಾ, ಸೇತುಮಂತ ಹಾಗೂ ಚಾಕ್ಷುಷ ಈ ಪ್ರದೇಶಗಳಲ್ಲಿ, ಅಂದರೆ ಕಾಬೂಲ್, ಕಂದಾಹಾರ್ (ಅಫಘಾನಿಸ್ತಾನ), ಹೆಲಮುಂಡ್, ಆಕ್ಸ್‌ಸ್ ಈ ಪ್ರದೇಶಗಳಲ್ಲಿ ಹಿಂದೂ ಹಾಗೂ ಬೌದ್ಧ ಧರ್ಮಗಳಿದ್ದವು. ಇರಾನ್‌ನಲ್ಲಿಯೂ ಹಿಂದೂ ಧರ್ಮವೇ ಇತ್ತು. ಆ ಪ್ರದೇಶಗಳಲ್ಲಿ ನೂರಾರು ದೇವಾಲಯಗಳು, ಸ್ತೂಪ, ಬುದ್ಧನ ಮೂರ್ತಿಗಳಿದ್ದವು. ೧೭ ನೇಯ ಶತಮಾನದಲ್ಲಿ ಅಕ್ಬರನ ಓರ್ವ ಮಂತ್ರಿಯು ಅವುಗಳ ಸಂಖ್ಯೆ ೧೨ ಸಾವಿರವೆಂದು ಬರೆದಿದ್ದಾನೆ. ಅವುಗಳ ಪೈಕಿ ಬಾಮಿಯಾನ್‌ನಲ್ಲಿನ ಬಹುದೊಡ್ಡ ಬುದ್ಧನ ಮೂರ್ತಿಯನ್ನು ಅಫಘಾನಿಸ್ತಾನದ ಮತಾಂಧರು ಧ್ವಂಸಗೊಳಿಸಿದರು. ಬೇರೆ ದೇವಾಲಯಗಳು, ಸ್ತೂಪ, ವಿಹಾರಗಳನ್ನು ಕೂಡ ಮತಾಂಧರು ಧ್ವಂಸಗೊಳಿಸಿದ್ದಾರೆ. ಅಫಘಾನಿಸ್ತಾನದ ಹಿಂದಿನ ಹೆಸರು ‘ಅರಿಯಾನಾ (ಆರ್ಯಭೂಮಿ), ಜಲಾಲ್‌ಬಾದ್‌ನ ಹಿಂದಿನ ಹೆಸರು ‘ನಗರಪ್ರಹಾರ ಹಾಗೂ ವೆಗ್ರಾಮದ ಹಿಂದಿನ ಹೆಸರು ‘ಕಪಿಶಾ ಆಗಿತ್ತು.

೭. ಚೀನಾದಲ್ಲಿ ಬೌದ್ಧ ಸಂಸ್ಕೃತಿಯಲ್ಲಿನ ಹಿಂದುತ್ವ

ಅ. ೧೮೯೧ ರಲ್ಲಿ ಚೀನಾದ ಒಳಗಿನ ಭಾಗದಲ್ಲಿ ಕರ್ನಲ್ ಬಾಬ್‌ರನಿಗೆ ಬರ್ಚ ಮರದ ಸಿಪ್ಪೆಯ ಮೇಲೆ ಬರೆದಿರುವ ಒಟ್ಟು ೭ ಲೇಖನಗಳು ಸಿಕ್ಕಿದವು. ಅವುಗಳಲ್ಲಿನ ೩ ರಲ್ಲಿ ಕೇವಲ ಔಷಧಗಳ ವಿಷಯವಿತ್ತು. ಅವುಗಳಲ್ಲಿನ ‘ನವನೀತಕ’ ಇದು ಎಲ್ಲಕ್ಕಿಂತ ದೊಡ್ಡ ಲೇಖನವಾಗಿತ್ತು ಹಾಗೂ ಅದರಲ್ಲಿ ೧೬ ಭಾಗಗಳಿದ್ದವು. ಅವುಗಳಲ್ಲಿ ಚೂರ್ಣ, ಕಷಾಯ, ಅರ್ಕ, ತೈಲವನ್ನು ತಯಾರಿಸುವುದು, ಔಷಧಗಳನ್ನು ಮೈಯಲ್ಲಿ ಇಂಗಿಸುವುದು, ಮಕ್ಕಳ ಪೋಷಣೆ, ಔಷಧಿಗಳ ಕೃತಿ ಇತ್ಯಾದಿ ವಿಷಯಗಳ ಬಗ್ಗೆ ಚರ್ಚೆಯಿತ್ತು. ಎಲ್ಲ ಲೇಖನಗಳು ಪದ್ಯದಲ್ಲಿವೆ. ಭಾಷೆಯು ಪ್ರಾಕೃತಮಿಶ್ರಿತ ಸಂಸ್ಕೃತವಾಗಿದೆ. ಅದರ ಕೊನೆಯ ಭಾಗವು ಕಳೆದು ಹೋಗಿದ್ದರಿಂದ ಲೇಖಕರ ಹೆಸರು ತಿಳಿದಿಲ್ಲ. ಅದರಲ್ಲಿ ಅಗ್ನಿವೇಶ, ಭೇದ, ಹರಿತ, ಜಾತುಕರ್ಣ, ಕ್ಷಾರ ಪಾಣೀ ಹಾಗೂ ಪರಾಶರ ಇವರ ಹೆಸರುಗಳಿವೆ. ಇದಕ್ಕಿಂತಲೂ ಹಳೆಯ ಹಸ್ತಲೇಖನಗಳು ಚೀನಾದಲ್ಲಿ ಸಿಕ್ಕಿವೆ. ಅಶ್ವಘೋಷನ ನಾಟ್ಯದ ಲೇಖನವು ಜರ್ಮನ್ ಮಿಶನ್‌ಗೆ ಸಿಕ್ಕಿತು ಹಾಗೂ ಪ್ರಾ. ಲೂಡರ್ಸನು ಅದನ್ನು ಪ್ರಕಾಶಿಸಿದನು.  ಫ್ರೆಂಚ್ ಮಿಶನ್‌ಗೆ ಧಮ್ಮಪದನ ಸಂಸ್ಕೃತ ಅನುವಾದದ ಹಸ್ತಲೇಖನವು ಸಿಕ್ಕಿತು.

ಆ. ಎಮ್‌ಪೇಲಿಎಟ್ ಇವರ  ನೇತೃತ್ವದಲ್ಲಿ ಒಂದು ಫ್ರೆಂಚ್ ತಂಡವು ಸಂಸ್ಕೃತ ಹಾಗೂ ಕುಚಿಯನ್ ಭಾಷೆಯಲ್ಲಿನ ೧೫ ಸಾವಿರ ಉಚ್ಚಾರಾಂಶಗಳನ್ನು ಅಧ್ಯಯನ ಮಾಡಿತು. ಅದರಲ್ಲಿರುವ ಅನೇಕ ಲೇಖನಗಳು ಬೌದ್ಧ ಮತದ ಮೇಲೆಯೇ ಇದ್ದವು. ಅವು ೧೧ ನೇಯ ಶತಮಾನದ ಹಿಂದಿನ ದವುಗಳಾಗಿವೆ. ಅವುಗಳನ್ನು ಆಕ್ರಮಣಕಾರರಿಂದ ಅಡಗಿಸಿಡಲು ಗೋಡೆಯೊಳಗೆ ಅಡಗಿಸಿಡಲಾಗಿತ್ತು. ೧೯೦೦ ರಲ್ಲಿ ಅವು ಅಕಸ್ಮಾತಾಗಿ ಸಿಕ್ಕವು. ಭಾರತೀಯ ಸಂಸ್ಕೃತಿಯ ಉಲ್ಲೇಖವಿರುವ ಸಾವಿರಾರು ಲೇಖನಗಳಿವೆ. ಆ ಲೇಖನಗಳು ಸಂಸ್ಕೃತ, ಪ್ರಾಕೃತ, ಸೊಗ್ಡಿಯನ್, ತುರ್ಕಿ, ಟಿಬೇಟ್, ಚೀನಾ ಹಾಗೆಯೇ ಅವು ಕಣ್ಮರೆಯಾದ ಕೆಲವು ಭಾಷೆಗಳಲ್ಲಿವೆ. ಅದರಲ್ಲಿ ಚೀನಾದಲ್ಲಿ ಭಾರತೀಯ ಸಂಸ್ಕೃತಿಯ ಅಸ್ತಿತ್ವದ ಸಾವಿರಾರು ಪುರಾವೆಗಳಿವೆ.

೮. ಚೀನಾದ ಮೇಲೆ ಭಾರತೀಯ ಸಂಸ್ಕೃತಿಯ ಪ್ರಭಾವ

ಅ. ಚೀನಾದಲ್ಲಿ ಬೌದ್ಧ ಧರ್ಮದ ಪ್ರಸಾರವಾಗಲು ಕಾಶ್ಮೀರದ ದೊಡ್ಡ ಪಾತ್ರವಿದೆ. ಕಾಶ್ಮೀರದಿಂದ ಬಹಳಷ್ಟು ಜನ ಪಂಡಿತರು ಚೀನಾಗೆ ಹೋದರು. ಅವರಲ್ಲಿ ಖ್ಯಾತಿಪಡೆದ ‘ಪರಮಾರ್ಥ ಎಂಬ ಹೆಸರಿನ ಪಂಡಿತರೊಬ್ಬರಿದ್ದರು. ೫೪೬ ಇಸವಿಯಲ್ಲಿ ಅವರು ೭೦ ಬೌದ್ಧ ಗ್ರಂಥಗಳನ್ನು ಚೀನಾ ಭಾಷೆಗೆ ಅನುವಾದ ಮಾಡಿದರು. ಬ್ರಾಹ್ಮಣ ಪಂಡಿತರು ಕೂಡ ಚೀನಾಗೆ ಹೋಗಿದ್ದರು. ೫೬೨ ಇಸವಿಯಲ್ಲಿ ‘ವಿನೀತರುಚಿ ಎಂಬ ಹೆಸರಿನ ದಕ್ಷಿಣ ಭಾರತದ ಬ್ರಾಹ್ಮಣನು ಚೀನಾದ ರಾಜಧಾನಿಗೆ ಹೋದನು. ಅವನು ಎರಡು ಗ್ರಂಥಗಳನ್ನು ಚೀನಾ ಭಾಷೆಗೆ ಅನುವಾದ ಮಾಡಿದನು. ಅಲ್ಲಿಂದ ಅವನು ತೊನಕಿನಗೆ ಹೋದನು ಹಾಗೂ ಅಲ್ಲಿ ಅವನು ಒಂದು ಧ್ಯಾನಕೇಂದ್ರವನ್ನು ನಿರ್ಮಿಸಿದನು.

ಆ. ದಕ್ಷಿಣ ಚೀನಾದ ಕ್ವಾಬಾಝಾನ್ ಬಂದರದಲ್ಲಿನ ಉತ್ಖನನದಲ್ಲಿ ಶಿವ, ಶ್ರೀವಿಷ್ಣು, ಹನುಮಾನ, ಲಕ್ಷ್ಮಿ, ಗರುಡ ಇವರ ಮೂರ್ತಿಗಳು ಸಿಕ್ಕಿವೆ. ೧೮ ಫೆಬ್ರವರಿ ೧೯೮೭ ರ ‘ಇಂಡಿಯನ್ ಎಕ್ಸ್‌ಪ್ರೆಸ್ನ  ಪತ್ರಿಕೆಯಲ್ಲಿ ಈ  ವಿಷಯದ ಮಾಹಿತಿಯನ್ನು ನೀಡಲಾಗಿದೆ. ಅದಕ್ಕನುಸಾರವಾಗಿ ಕಲ್ಲಿನಲ್ಲಿ ಕೆತ್ತಿದ ನೃಸಿಂಹನ ೭೩ ಮೂರ್ತಿಗಳು ಸಿಕ್ಕಿವೆ. ಪಾರ್ವತಿಯೊಂದಿಗೆ ಶಿವನಿರುವ ಕೆತ್ತನೆಯ ಅಸಂಖ್ಯಾತ ಚಿತ್ರಗಳು ಸಿಕ್ಕಿವೆ. ಅದರಲ್ಲಿ ಎತ್ತು, ಆನೆ ಹಾಗೂ ಬೇರೆ ಪ್ರಾಣಿಗಳು ಅವರಿಗೆ ವಂದಿಸುತ್ತಿವೆ. ಇವೆಲ್ಲವೂ ಯುಆನ್ ವಂಶದ ಕಾಲದಲ್ಲಿ (೧೨೬೦ ಇಸವಿಯಿಂದ ೧೩೬೮ ನೇ ಇಸವಿಯವರೆಗೆ) ನ ದೇವಾಲಯಗಳಲ್ಲಿ ಸಿಕ್ಕಿವೆ.

ಇ. ತಾಂಗ್ ವಂಶದ ಕಾಲದಲ್ಲಿ (೬೧೮ ರಿಂದ ೯೬೦ ಇಸವಿ) ಕ್ವಾಂಗಝಾನ್ ನಲ್ಲಿ ಬ್ರಾಹ್ಮಣರು ಆಶ್ರಮವನ್ನು ಕಟ್ಟಿದರು ಹಾಗೂ ಅಲ್ಲಿ ದೊಡ್ಡ ಸಂಖ್ಯೆಯಲ್ಲಿ ಬ್ರಹ್ಮಚಾರಿಗಳಿರುತ್ತಿದ್ದರು.

ಈ. ಚೆಯೀ ರಾಜವಂಶದ ರಾಜನು ೪೭ ಮಠಗಳನ್ನು ಕಟ್ಟಿಸಿದನು. ನಾಗರಿಕರು ತಾವಾಗಿಯೇ ೩೦ ಸಾವಿರ ದೇವಾಲಯಗಳನ್ನು ಕಟ್ಟಿಸಿದರು. ಅದರಲ್ಲಿರುವ ಭಿಕ್ಷು-ಭಿಕ್ಷುಣಿಯರ ಸಂಖ್ಯೆಯು ೨೦ ಲಕ್ಷಕ್ಕಿಂತ ಹೆಚ್ಚಾಗಿತ್ತು.

ಉ. ಚೀನಾದಲ್ಲಿ ಬೌದ್ಧ ಧರ್ಮ ಹೋದ ಬಳಿಕ ಭಾರತೀಯ ಕಲೆಗಳೂ ಕೂಡ ಅಲ್ಲಿ ಹೋದವು. ಯುನವಾನ್‌ನಲ್ಲಿ ಪರ್ವತಗಳನ್ನು ಒಡೆದು ಅವುಗಳಲ್ಲಿ ಗುಹೆಗಳನ್ನು ಕೊರೆಯಲಾಯಿತು. ಅದರಲ್ಲಿ ೭೦ ಅಡಿ ಎತ್ತರದ ಬುದ್ಧನ ಮೂರ್ತಿಯನ್ನು ನಿಲ್ಲಿಸಲಾಗಿದೆ. ಅಜಂತಾ ಗುಹೆಯಲ್ಲಿರುವಂತೆ ಗೋಡೆಗಳ ಮೇಲೆ ಬಣ್ಣದ ಚಿತ್ರಗಳನ್ನು ಬಿಡಿಸಲಾಯಿತು. ಶಾಕ್ಯಬುದ್ಧ, ಬುದ್ಧಕೀರ್ತಿ, ಕುಮಾರ ಬೋಧಿ ಈ ೩ ಜನ ಚಿತ್ರಕಾರರು ಚೀನಾಗೆ ಹೋದರು. ಅವರು ಈ ಕಲಾಕೃತಿಗಳನ್ನು ನಿರ್ಮಿಸಿದರು. ಗಾಂಧಾರ, ಗುಪ್ತ, ಮಥುರಾ ಶೈಲಿಯ ಎಲ್ಲಾ ನಮೂನೆಗಳು ಅದರಲ್ಲಿವೆ.

ಊ.  ಭಾರತೀಯ ಸಂಗೀತವು ಕೂಡಾ ಚೀನಾ ಸಂಗೀತದ ಮೇಲೆ ತನ್ನ ಪ್ರಭಾವವನ್ನು ಬೀರಿದೆ. ‘ಕುಚೀ ಎಂಬ ಹೆಸರಿನ ಬ್ರಾಹ್ಮಣನು ಈ ಕಾರ್ಯವನ್ನು ಮಾಡಿದನು. ೫೮೧ ಇಸವಿಯಲ್ಲಿ ಹಿಂದೀ ಸಂಗೀತಕಾರರ ಒಂದು ತಂಡವು ಚೀನಾಗೆ ಹೋಗಿತ್ತು. ತಾಂಗ್ ಕಾಲದಲ್ಲಿ ‘ಬೋಧಿ ಎಂಬ ಹೆಸರಿನ ಓರ್ವ ಬ್ರಾಹ್ಮಣನು ಅಲ್ಲಿ ‘ಬೋಧೀಸತ್ವ ಹಾಗೂ ‘ಭೈರೋ ಎಂಬ ಹೆಸರಿನ ಎರಡು ಸಂಗೀತ ಪ್ರಕಾರಗಳನ್ನು ಕೂರಿಸಿದನು. ಈಗ ಅದು ಜಪಾನಿನಲ್ಲಿಯೂ ನಡೆಯುತ್ತಿದೆ.

ಎ. ಖಗೋಲಶಾಸ್ತ್ರ, ಗಣಿತ, ಔಷಧಿ ಈ ಶಾಸ್ತ್ರಗಳನ್ನು ಭಾರತೀಯರೇ ಚೀನಾಗೆ ಕೊಂಡೊಯ್ದರು. ‘ನವಗ್ರಹ ಸಿದ್ಧಾಂತ ಎಂಬ ಖಗೋಲ ಶಾಸ್ತ್ರದ ಗ್ರಂಥವನ್ನು ತಾಂಗ್‌ನ ಕಾಲದಲ್ಲಿ ಚೀನಾ ಭಾಷೆಗೆ ಭಾಷಾಂತರಗೊಳಿಸಲಾಯಿತು. ಭಾರತೀಯ ಔಷಧಶಾಸ್ತ್ರವು ಚೀನಾದಲ್ಲಿ ಜನಪ್ರಿಯವಾಯಿತು. ‘ರಾವಣಕುಮಾರಚರಿತ ಎಂಬ ಬಾಲರೋಗಗಳ ಮೇಲಿನ ಸಂಸ್ಕೃತ ಗ್ರಂಥವನ್ನು ಚೀನಾ ಭಾಷೆಯಲ್ಲಿ ೧೧ ನೇಯ ಶತಮಾನದಲ್ಲಿ ಭಾಷಾಂತರಗೊಳಿಸಲಾಯಿತು.

ಏ. ಇದಲ್ಲದೇ ಬೌದ್ಧ ಧರ್ಮದ ತತ್ತ್ವಜ್ಞಾನ ಕರ್ಮಸಿದ್ಧಾಂತ, ಪುನರ್ಜನ್ಮ, ಸತ್ಕರ್ಮ ಇವುಗಳಿಗೆ ಸಂಬಂಧಪಟ್ಟ ಹಾಗೂ ಭಾರತೀಯ ವಿಚಾರಗಳು ಚೀನಾದಲ್ಲಿ ರೂಢಿಯಾದವು. ಚೀನಾದ ಪ್ರಸಿದ್ಧ ತತ್ವಜ್ಞಾನಿಯಾದ ತಾಓ ಹಾಗೂ ಲಾಓತ್ಸೆ ಇವರ ವಿಚಾರಗಳ ಮೇಲೆ ಬೌದ್ಧ ಧರ್ಮದ ಪ್ರಭಾವವಿದೆ.  ಬೋಧಿ ಧರ್ಮ ಎಂಬ ಹೆಸರಿನ ಬೌದ್ಧ ಗುರುವು ಕಾಂಚೀಪುರಮ್ ನಗರದಿಂದ ಚೀನಾಗೆ ಹೋದನು. ಅವನು ಅಲ್ಲಿನ ಜನರಿಗೆ ಹಾಗೂ ರಾಜನಿಗೆ ಧ್ಯಾನವನ್ನು ಕಲಿಸಿದನು. ಅವನನ್ನೇ ‘ಝೆನ್ ಎಂದು ಕರೆಯುತ್ತಾರೆ.  ಜಪಾನಿನಲ್ಲಿ ಇದಕ್ಕೆ ‘ಚಾನ್ ಎಂದು ಹೇಳುತ್ತಾರೆ.

ಚೀನಾದಲ್ಲಿ ಸಿಕ್ಕಿರುವ ಆನೆಯು ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಿರುವ ಶಿಲ್ಪ, ಹಾಗೆಯೇ ಅದರ ಪಕ್ಕದಲ್ಲಿರುವ ಭಗವಾನ್ ಶ್ರೀಕೃಷ್ಣ, ನೃಸಿಂಹನೊಂದಿಗೆ ಬೇರೆ ದೇವತೆಗಳ ಕೆತ್ತನೆಯ ಶಿಲ್ಪ (ಆಧಾರ : ಜಾಲತಾಣ)

೯. ಹಿಂದೂ ಧರ್ಮದ ಕಲಿಕೆಯು ಸಹಿಷ್ಣುವಾಗಿರುವುದರ ಸಾಕ್ಷಿ !

ಅ. ಹ್ಯುಯೆನ್‌ತ್ಸಂಗ್ – ಇವನು ಬೌದ್ಧಧರ್ಮದ ಮಹಾನ್ ಭಿಕ್ಷುವಾಗಿದ್ದನು. ಅವನು ೬೦೦ನೇ ಇಸವಿಯಲ್ಲಿ ಸನಾತನೀ ಕನ್ಫೂಶಿಯನ್ ಪರಿವಾರದಲ್ಲಿ ಜನಿಸಿದನು. ಅವನು ೨೦ ವರ್ಷದ ವಯಸ್ಸಿನಲ್ಲಿ ಭಿಕ್ಷುಯಾದನು.  ಅವನು ಚೀನಾ ಭಾಷೆಯಲ್ಲಿ ಬೌದ್ಧ ವಾಙ್ಮಯವನ್ನು ಅಭ್ಯಾಸ ಮಾಡಿದನು; ಆದರೆ ಅದರಿಂದ ಅವನಿಗೆ ಸಮಾಧಾನವಾಗಲಿಲ್ಲ; ಆದ್ದರಿಂದ ಅವನು ಹಿಂದುಸ್ಥಾನಕ್ಕೆ ಹೋಗಿ ಮೂಲ ಗ್ರಂಥಗಳನ್ನು ಅಭ್ಯಾಸ ಮಾಡಬೇಕೆಂದು ತೀರ್ಮಾನಿಸಿದನು. ೬೨೯ ಇಸವಿಯಲ್ಲಿ ಅವನು ಚೀನಾದಿಂದ ಹೊರಟು ಮಧ್ಯ ಏಷಿಯಾ ಮಾರ್ಗವಾಗಿ ಕಾಫಿರೀಸ್ತಾನ್ (ಕಪಿಶಾ)ಗೆ ತಲುಪಿದನು ಹಾಗೂ ಅಲ್ಲಿಂದ ಕಾಶ್ಮೀರಕ್ಕೆ ಬಂದನು. ಅಲ್ಲಿ ಸಂಸ್ಕೃತ ಗ್ರಂಥಗಳ ಅಧ್ಯಯನವನ್ನು ಮಾಡಿದನು. ಅನಂತರ ಅವನು ನಾಲಂದಾ ವಿದ್ಯಾಲಯಕ್ಕೆ ಹೋದನು. ವಿದ್ಯಾಲಯ ದಲ್ಲಿ ಆಚಾರ್ಯ ಶೀಲಭದ್ರರ ಮಾರ್ಗದರ್ಶನದಲ್ಲಿ ಬೌದ್ಧ ಗ್ರಂಥಗಳ ಯೋಗಾಚಾರ ಪದ್ಧತಿಯ ಅಧ್ಯಯನವನ್ನು ಮಾಡಿದನು.  ಅನಂತರ ಅವನು ಸಾಮ್ರಾಟ ಹರ್ಷವರ್ಧನನನ್ನು ಭೇಟಿಯಾದನು. ರಾಜನು ಅವನಿಗೆ ರಾಜ್ಯಸನ್ಮಾನ ಮಾಡಿ ಅವನನ್ನು ಗೌರವಿಸಿದನು. ಬೌದ್ಧ ಧರ್ಮದ ಅಧ್ಯಯನಕ್ಕಾಗಿ ಎಲ್ಲ ಸೌಕರ್ಯಗಳನ್ನು ಒದಗಿಸಿದನು. ಕಾಮರೂಪದ ರಾಜನು ಕೂಡ ಅವನನ್ನು ಗೌರವಿಸಿದನು. ೬೪೪ ಇಸವಿಯಲ್ಲಿ ಅವನು ಭಾರತದಿಂದ ಹೊರಟನು. ಅವನು ಹೋಗುವಾಗ ತನ್ನೊಂದಿಗೆ ಸಂಸ್ಕೃತ ಭಾಷೆಯಲ್ಲಿರುವ ಬೌದ್ಧ ಧರ್ಮದ ವಿಷಯದ ಒಂದು ಗಾಡಿ (ವಾಹನ) ತುಂಬುವಷ್ಟು ಪುಸ್ತಕಗಳನ್ನು ಒಯ್ದನು. ಅವನು ಮರಳಿ ಹೋಗುವ ವ್ಯವಸ್ಥೆಯನ್ನು ಸಾಮ್ರಾಟ ಹರ್ಷನು ಮಾಡಿದನು. ಅವನಿಗೆ ಸೈನ್ಯ ರಕ್ಷಣೆ, ಆನೆ ಹಾಗೂ ಅಗತ್ಯವಾದ ಇತರ ಸಾಮಗ್ರಿಗಳನ್ನು ನೀಡಿದನು.

ಭಾರತದ ಪವಿತ್ರಭೂಮಿಯ ದರ್ಶನದಿಂದ ಹ್ಯುಯೇನತ್ಸಂಗ್‌ನಿಗೆ ತುಂಬಾ ಸಂತೋಷವಾಯಿತು. ಅವನು ‘ನಾನು ಗೃಧಕುಟ ಪರ್ವತದ ಅವಲೋಕನ ಮಾಡಿದೆನು. ಬೋಧಿವೃಕ್ಷವನ್ನು ಪೂಜಿಸಿದೆನು. ಹಿಂದೆ ಎಂದಿಗೂ ನೋಡದಿರುವ ಅವಶೇಷಗಳನ್ನು ನೋಡಿದೆನು. ಹಿಂದೆ ಎಂದೂ ಕೇಳದ ಪವಿತ್ರ ಶಬ್ದಗಳನ್ನು ಶ್ರವಣ ಮಾಡಿದೆನು. ಎಲ್ಲಾ ನಿಸರ್ಗ ಪೂಜಕರನ್ನು ಹಿಂದೆ ಹಾಕುವ ಅಧ್ಯಾತ್ಮಕ್ಷೇತ್ರದಲ್ಲಿನ ಅಸಾಮಾನ್ಯ ವ್ಯಕ್ತಿಗಳನ್ನು ಕಣ್ಣಾರೆ ಕಂಡೆನು, ಎಂದನು. ತನ್ನ ಆಯುಷ್ಯದ ಉಳಿದ ಕಾಲದಲ್ಲಿ ಅವನು ಸಂಸ್ಕೃತ ಗ್ರಂಥಗಳನ್ನು ಚೀನಾ ಭಾಷೆಗೆ ಅನುವಾದ ಮಾಡಿದನು. ಶಿಷ್ಯರಿಗೆ ಅವುಗಳ ಶಿಕ್ಷಣ ನೀಡಿದನು. ೬೬೦ ಇಸವಿಯಲ್ಲಿ ಅವನು ಮರಣ ಹೊಂದಿದನು.

ಆ. ಇತ್ಸಿಂಗ್ – ಹ್ಯುಯೇನ್‌ತ್ಸಂಗ್‌ನಿಂದ ಚೀನಾದಲ್ಲಿನ ಜಿಜ್ಞಾಸುಗಳಿಗೆ ಪ್ರೇರಣೆ ಸಿಕ್ಕಿತು ಹಾಗೂ ಅನೇಕ ಚೀನಾ ಭಿಕ್ಷುಗಳು ಭಾರತಕ್ಕೆ ಬಂದರು. ಅವರಲ್ಲಿನ ಇತ್ಸಿಂಗ್‌ನು ೬೭೧ ನೇ ಇಸವಿಯಲ್ಲಿ ಚೀನಾದಿಂದ ಹೊರಟು ಸಾಗರ ಮಾರ್ಗವಾಗಿ ಭಾರತಕ್ಕೆ ಬಂದನು ಹಾಗೂ ನಾಲಂದಾದಲ್ಲಿ ಉಳಿದನು.  ೬೭೫ ರಿಂದ ೬೮೫ ಹೀಗೆ ೧೦ ವರ್ಷಗಳ ಕಾಲ ಅವನು ಭಾರತದಲ್ಲಿದ್ದನು. ಅವನು ಹೋಗುವಾಗ ತನ್ನೊಂದಿಗೆ ೪೦೦ ಸಂಸ್ಕೃತ ಗ್ರಂಥಗಳನ್ನು ಒಯ್ದನು. ಅವನು ಅವುಗಳನ್ನು ಚೀನಾ ಭಾಷೆಗೆ ಭಾಷಾಂತರಗೊಳಿಸಿದನು. ಅವನು ಚೀನಾ-ಸಂಸ್ಕೃತ ಶಬ್ದಕೋಶವನ್ನು ರಚಿಸಿದನು. ಅವನು ವಿವಿಧ ದೇಶಗಳ ೬೦ ಜನ ಬೌದ್ಧ ಭಿಕ್ಷುಗಳ ಚರಿತ್ರೆ ಬರೆದನು.

ಇ. ಯುವಾನಚ್ವಾಂಗ್ – ಯುವಾನಚ್ವಾಂಗ್ ಎಂಬ ಹೆಸರಿನ ಭಿಕ್ಷುವು ಚೀನಾದಿಂದ ಭಾರತಕ್ಕೆ ಅಧ್ಯಯನಕ್ಕಾಗಿ ಬಂದಿದ್ದನು. ಅವನ ವರ್ಣನೆಯಂತೆ ನಾಲಂದಾದಲ್ಲಿ ೧೦ ಸಾವಿರ ಭಿಕ್ಷುಗಳು ಇರುತ್ತಿದ್ದರು. ಅವರಿಗೆ ವಾಸಿಸಲು ೪ ಸಾವಿರ ಕೋಣೆಗಳಿದ್ದವು, ಹಾಗೆಯೇ ೧ ಸಾವಿರ ೫೦೦ ಜನ ಅಧ್ಯಾಪಕರಿದ್ದರು. ಅವನು ನಾಲಂದಾದಲ್ಲಿ ೭ ವರ್ಷಗಳ ಕಾಲ  ಇದ್ದನು.

೧೦. ಚೀನಾದಲ್ಲಿ ಸಂಸ್ಕೃತ ಭಾಷೆಯಿತ್ತು, ಎಂಬುದಕ್ಕೆ ಪುರಾವೆಗಳನ್ನು ನೀಡುವ ಕೆಲವು ಉದಾಹರಣೆಗಳು

ಅ. ಚೀನಾದಲ್ಲಿ ಸಂಸ್ಕೃತ ಭಾಷೆಯಿತ್ತು, ಎಂಬುದಕ್ಕೆ ಪುರಾವೆಗಳಿವೆ. ಪೆಕಿಂಗ್‌ನಿಂದ ೪೦ ಮೈಲು ದೂರದಲ್ಲಿ ಉತ್ತರಕ್ಕೆ ಕನಯುಂಗ್ ಕ್ವಾನ್ನಲ್ಲಿ ಒಂದು ಕಮಾನಿನ ಮೇಲೆ ಕೆತ್ತಿರುವ ಲೇಖನದಲ್ಲಿ ೬ ವಿವಿಧ ಭಾಷೆಗಳಿವೆ. ಅವುಗಳಲ್ಲಿನ ಒಂದು ಲೇಖನವು ಸಂಸ್ಕೃತ ಭಾಷೆಯಲ್ಲಿದೆ.

ಆ. ಚೀನಾದಲ್ಲಿರುವ ಕೆಲವು ದೇವಾಲಯಗಳಲ್ಲಿ ಉತ್ಖನನದ ಸಮಯದಲ್ಲಿ ಸಿಕ್ಕಿರುವ ವಸ್ತುಗಳ ಮೇಲೆ ರಾಮಾಯಣದಲ್ಲಿನ ದೃಶ್ಯಗಳನ್ನು ಕೆತ್ತಲಾಗಿದೆ. ಕೋಂಗ್ ಸಾಂಗ್ ಎಂಬ ಚೀನಾ ಲೇಖಕನು ೨೫೧ ಇಸವಿಯಲ್ಲಿ ರಾಮಾಯಣವನ್ನು ಚೀನಾ ಭಾಷೆಗೆ ಅನುವಾದಿಸಿದನು. ದಕ್ಷಿಣ ಚೀನಾದಲ್ಲಿನ ಕ್ವಾಝೋನ್‌ನಲ್ಲಿನ ಉತ್ಖನನದಲ್ಲಿ ಹನುಮಂತನ ಮೂರ್ತಿಯು ದೊರಕಿತು. ಅದು ಯುಆನ್ ಮನೆತನದ ಕಾಲಕ್ಕೆ ಸೇರಿದೆ. ದಕ್ಷಿಣ ಚೀನಾದಲ್ಲಿ ಕ್ವಾಂಓ ಪ್ರಾಂತದಲ್ಲಿ ಯುಆನ್ ಮನೆತನಕ್ಕೆ ಸೇರಿದ ಶಿವಮೂರ್ತಿ ದೊರಕಿದೆ.

೧೧. ಸಂಪೂರ್ಣ ಜಗತ್ತನ್ನು ಆರ್ಯರನ್ನಾಗಿ (ಸುಸಂಸ್ಕೃತರನ್ನಾಗಿ) ಮಾಡಿಸುವ ಭಾರತ !

ಅರಿಯನ್ ಎಂಬುವನು ‘ಇಂಡಿಕಾ ಗ್ರಂಥದಲ್ಲಿ ಹೀಗೆ ಹೇಳುತ್ತಾನೆ, “ಭಾರತವು ಇಲ್ಲಿಯವರೆಗೂ ಇತಿಹಾಸದಲ್ಲಿನ ಒಂದು ಆಶ್ಚರ್ಯದ, ಸೋಜಿಗದ ಸಂಗತಿಯಾಗಿದೆ. ಅದು ಪಾರಮಾರ್ಥಿಕ ವಿಜಯವನ್ನು ಸಾಧಿಸಿದೆ. ಅಂತರರಾಷ್ಟ್ರೀಯವಾದವನ್ನು ಬೆಂಬೆತ್ತಿದೆ. ಭಾರತವು ಇಲ್ಲಿಯವರೆಗೆ ಯಾರ ಮೇಲೆಯೂ ಆಕ್ರಮಣ ಮಾಡಿಲ್ಲ. ಸಂಪೂರ್ಣ ಜಗತ್ತಿನಲ್ಲಿ ತನ್ನ ಸಂಸ್ಕೃತಿಯನ್ನು ತೆಗೆದುಕೊಂಡು ಹೋಯಿತು. ‘ಕೃಣ್ವನ್ತೋ ವಿಶ್ವಮಾರ್ಯಮ್ |  (ಸಂಪೂರ್ಣ ಜಗತ್ತನ್ನು ಆರ್ಯರನ್ನಾಗಿ (ಸುಸಂಸ್ಕೃತರನ್ನಾಗಿ) ಮಾಡುವೆವು) ಎಂಬ ಸಂದೇಶವನ್ನು ಭಾರತ ಜಗತ್ತಿಗೆ ನೀಡಿತು. ಆದ್ದರಿಂದ ಜಗತ್ತಿನಲ್ಲಿನ ಪ್ರತಿಯೊಂದು ದೇಶದಲ್ಲಿ ಕೂಡ ಭಾರತೀಯ ಸಂಸ್ಕೃತಿಯ ಸಾವಿರಾರು ಕುರುಹುಗಳಿವೆ.

ಚೀನಾ ಹಾಗೂ ಭಾರತ ಇವುಗಳ ಸಾಂಸ್ಕೃತಿಕ ಕೊಡು-ಕೊಳ್ಳುವಿಕೆ ಪ್ರಾಚೀನ ಕಾಲದಿಂದಲೂ ಇತ್ತು. ‘ಚಾಯನಾ ಶಬ್ದವು ಸಂಸ್ಕೃತದ ಚೀನಾದಿಂದ ಬಂದಿದೆ. ಚೀನಾದಲ್ಲಿ ಸಾಮ್ಯವಾದಿಗಳ ಆಕ್ರಮಣವಾಗುವ ತನಕ (೧೯೬೨ ರಲ್ಲಿ) ಈ ಎರಡೂ ದೇಶಗಳ ನಡುವೆ ಎಂದಿಗೂ ಸಂಘರ್ಷವಾಗಿರಲಿಲ್ಲ. ಇಬ್ಬರೂ ಉತ್ತಮ ನೆರೆಹೊರೆಯವರಾಗಿದ್ದರು. ಅವರಲ್ಲಿ ಸಾಮರಸ್ಯ ಹಾಗೂ ಸದ್ಭಾವನೆ ಇತ್ತು. ಕೇವಲ ಸತ್ಯ, ಸ್ವಾರ್ಥ, ತ್ಯಾಗ, ಕಲೆ, ಸಾಹಿತ್ಯ ಈ ಅಡಿಪಾಯಗಳ ಮೇಲೆ ಚೀನಾ ಹಾಗೂ ಭಾರತದ ನಡುವೆ ಸಾಂಸ್ಕೃತಿಕ ಬಂಧನಗಳು ನಿರ್ಮಾಣವಾದವು. ಬೌದ್ಧ ಧರ್ಮದ ಚೀನಾದ ಸಾಹಿತ್ಯವನ್ನು ಭಾರತೀಯ ಭಿಕ್ಷುಗಳು ಕೇವಲ ತಮ್ಮ ಗುಣಗಾನವನ್ನು ಮಾಡದೆ ತಯಾರಿಸಿದರು. – ಭಾಗವತಾಚಾರ್ಯ ವಾ.ನಾ.ಉತ್ಪಾತ (ಆಧಾರ : ಮಾಸಿಕ ‘ಧರ್ಮಭಾಸ್ಕರ, ಏಪ್ರಿಲ್ ೨೦೧೭)