ಹೆಸರನ್ನು ಉಲ್ಲೇಖಿಸದೆ ಚೀನಾವನ್ನು ಟೀಕಿಸಿದ ಪ್ರಧಾನಿ ಮೋದಿ

ಭಾರತವು ವಿಸ್ತರಣಾವಾದಿ ಸಿದ್ಧಾಂತದ ವಿರುದ್ಧ ಬಲವಾದ ಧ್ವನಿ ಎತ್ತಲಿದೆ !

ಜೈಸಲ್ಮೇರ್ (ರಾಜಸ್ಥಾನ) – ಇಡೀ ಜಗತ್ತು ಇಂದು ವಿಸ್ತರಣಾವಾದಿ ಶಕ್ತಿಗಳಿಂದ ಬಳಲುತ್ತಿದೆ. ಈ ವಿಸ್ತರಣಾವಾದಿ ವೃತ್ತಿಯು ಒಂದು ರೀತಿಯಲ್ಲಿ ಮಾನಸಿಕ ವಿಕೃತಿಯಾಗಿದ್ದು ಅದು ೧೮ ನೇ ಶತಮಾನದ ಚಿಂತನೆಯನ್ನು ಪ್ರತಿಬಿಂಬಿಸುತ್ತದೆ. ಈ ವಿಚಾರದ ವಿರುದ್ದ ಭಾರತ ಬಲವಾಗಿ ಧ್ವನಿ ಎತ್ತಲಿದೆ, ಎಂದು ನರೇಂದ್ರ ಮೋದಿಯವರು ಚೀನಾದ ಹೆಸರನ್ನು ಉಚ್ಚರಿಸದೇ ಅದರ ವಿಸ್ತರಣಾವಾದಿ ನಿಲುವನ್ನು ದೂಷಿಸಿದರು. ನವೆಂಬರ ೧೪ ರಂದು ಪ್ರಧಾನಿ ಮೋದಿ ಅವರು ಜೈಸಲ್ಮೇರ್‌ನ ಗಡಿಯಲ್ಲಿರುವ ಲೊಂಗೆವಾಲಾ ನೆಲೆಯ ಸೈನಿಕರೊಂದಿಗೆ ದೀಪಾವಳಿ ಆಚರಿಸುವಾಗ ಅವರು ಮಾತನಾಡುತ್ತಿದ್ದರು. ಅವರೊಂದಿಗೆ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಬಿಪಿನ್ ರಾವತ್, ಸೇನಾ ಮುಖ್ಯಸ್ಥ ಮುಕುಂದ್ ಮನೋಜ್ ನರವಣೆ ಮತ್ತು ವಾಯುಪಡೆಯ ಮುಖ್ಯಸ್ಥ ಆರ್.ಕೆ.ಎಸ್. ಭದೌರಿಯಾ ಮತ್ತು ಗಡಿ ಭದ್ರತಾ ಪಡೆ ಮಹಾನಿರ್ದೇಶಕ ರಾಕೇಶ್ ಅಸ್ತಾನಾ ಉಪಸ್ಥಿತರಿದ್ದರು. ‘ಸೈನಿಕರಿದ್ದರಿಂದ ನಾವು ಇಂದು ದೇಶದಲ್ಲಿ ಹಬ್ಬಗಳನ್ನು ಆಚರಿಸಬಹುದು’ ಎಂದು ಮೋದಿ ಹೇಳಿದರು.

ಅವರು ತಮ್ಮ ಮಾತನ್ನು ಮುಂದುವರೆಸುತ್ತಾ, ಭಾರತವು ತನ್ನ ಸ್ವಂತ ಹಿತಾಸಕ್ತಿಗಳ ವಿರುದ್ಧವಾಗಿ ಯಾವುದೇ ಕಾರಣಕ್ಕೆ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಇಂದು ಜಗತ್ತಿಗೆ ತಿಳಿದಿದೆ. ಭಾರತದ ಖ್ಯಾತಿ ಅದರ ಶಕ್ತಿ ಮತ್ತು ಪರಾಕ್ರಮದಿಂದ ಉಳಿದುಕೊಂಡಿದೆ. ನಾವು ದೇಶವನ್ನು ಸುರಕ್ಷಿತವಾಗಿರಿಸಿದ್ದೇವೆ, ಆದ್ದರಿಂದ ಭಾರತ ಈಗ ವಿಶ್ವ ವೇದಿಕೆಯಲ್ಲಿ ತನ್ನನ್ನು ತಾನು ಪ್ರತಿಪಾದಿಸುತ್ತಿದೆ. ಭಾರತವು ಅರ್ಥಮಾಡಿಕೊಳ್ಳುವ ಮತ್ತು ವಿವರಿಸುವಲ್ಲಿ ನಂಬಿಕೆ ಇಟ್ಟಿದೆ. ಭಾರತದ ತಂತ್ರ ಬಹಳ ಸ್ಪಷ್ಟವಾಗಿದೆ; ಆದರೆ ನಮ್ಮನ್ನು ಪರೀಕ್ಷಿಸಿದರೆ, ಅವರಿಗೆ ಬಲವಾದ ಉತ್ತರ ಸಿಗುತ್ತದೆ ಎಂದು ಹೇಳಿದರು.