ಅಯೋಧ್ಯೆಯ ಶ್ರೀ ರಾಮಮಂದಿರವನ್ನು ಭಕ್ತರ ನಿಧಿಯಿಂದ ನಿರ್ಮಿಸಲಾಗುವುದು ! – ಚಂಪತ ರಾಯ, ಪ್ರಧಾನ ಕಾರ್ಯದರ್ಶಿ, ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್

ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಶ್ರೀ. ಚಂಪತ ರಾಯ್‌

ಮುಂಬಯಿ – ಭಕ್ತರ ಆರ್ಥಿಕ ನೆರವಿನೊಂದಿಗೆ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರವನ್ನು ನಿರ್ಮಿಸಲಾಗುವುದು. ಇದಕ್ಕಾಗಿ ಸಂಕ್ರಾಂತಿಯಿಂದ ನಿಧಿಸಂಗ್ರಹವನ್ನು ಪ್ರಾರಂಭಿಸಲಾಗುವುದು ಎಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಮತ್ತು ವಿಶ್ವ ಹಿಂದೂ ಪರಿಷತ್ತಿನ ಉಪಾಧ್ಯಕ್ಷ ಶ್ರೀ. ಚಂಪತ ರಾಯ್‌ ಅವರು ಡಿಸೆಂಬರ್ ೧೨ ರಂದು ಮುಂಬಯಿ ಮರಾಠಿ ಪತ್ರಕಾರ ಸಂಘದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ ಶ್ರೀ. ಚಂಪತ ರಾಯ ಅವರು,

೧. ದೇವಾಲಯದ ವಿನ್ಯಾಸವನ್ನು ಸ್ವಲ್ಪ ಬದಲಾಯಿಸಲಾಗಿದ್ದು ಅದಕ್ಕೆ ತಕ್ಕಂತೆ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ. ದೇವಾಲಯದ ನಿರ್ಮಾಣಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಮಣ್ಣಿನ ಪರೀಕ್ಷೆಯನ್ನೂ ಮಾಡಲಾಯಿತು. ಗರ್ಭಗೃಹದ ಪಶ್ಚಿಮಕ್ಕೆ ಶರಯೂ ನದಿ ಹರಿಯುತ್ತದೆ, ಮತ್ತು ಭೂಮಿ ಮರಳಿನಿಂದ ಕೂಡಿದೆ.

೨. ದೇವಾಲಯದ ನಿರ್ಮಾಣ ಕಾರ್ಯವನ್ನು ‘ಲಾರ್ಸೆನ್ ಅಂಡ್ ಟುಬ್ರೊ’ ಸಂಸ್ಥೆ ನಿರ್ವಹಿಸಲಿದೆ.

೩. ಸಂಸ್ಥೆಗೆ ಸಲಹೆ ನೀಡಲು ‘ಟಾಟಾ ಕನ್ಸಲ್ಟೆಂಟ್ಸ್’ ಸಂಸ್ಥೆಯ ಇಂಜಿನಿಯರ್‌ಗಳನ್ನು ಆಯ್ಕೆ ಮಾಡಲಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡಲಾಗಿದೆ ಮತ್ತು ದೇವಾಲಯದ ವಾಸ್ತುವಿನ ಜವಾಬ್ದಾರಿಯನ್ನು ಕರ್ಣಾವತಿಯ ಶ್ರೀ. ಚಂದ್ರಕಾಂತ ಸೋಮಪುರಾ ಅವರಿಗೆ ವಹಿಸಲಾಗಿದೆ.

೪. ಸೋಮನಾಥ ದೇವಾಲಯವನ್ನು ಸೊಮಪುರಾ ಇವರ ಅಜ್ಜ ನಿರ್ಮಿಸಿದ್ದಾರೆ. ಅವರು ಸ್ವಾಮಿನಾರಾಯಣ ಸಂಪ್ರದಾಯದ ಅನೇಕ ದೇವಾಲಯಗಳನ್ನು ನಿರ್ಮಿಸಿದ್ದಾರೆ. ಕಲ್ಲಿನಿಂದ ದೇವಾಲಯಗಳನ್ನು ಕಟ್ಟುವುದರಲ್ಲಿ ಅವರು ಎತ್ತಿದ ಕೈ.

೫. ಪ್ರಸ್ತುತ ಅಯೋಧ್ಯೆಯ ಮರಳು ಭೂಮಿಯಲ್ಲಿ ಬಲವಾದ ಕಲ್ಲಿನ ದೇವಾಲಯವನ್ನು ಹೇಗೆ ನಿರ್ಮಿಸುವುದು ? ಈ ಬಗ್ಗೆ ವಿಚಾರ ನಡೆಯುತ್ತಿದೆ. ಮುಂದಿನ ೩ ವರ್ಷಗಳಲ್ಲಿ ಈ ದೇವಾಲಯವನ್ನು ನಿರ್ಮಿಸಲಾಗುವುದು ಎಂದು ಆಶಿಸಲಾಗಿದೆ.