ಶತ್ರುವಿನ ಕಪಿಮುಷ್ಠಿಯಿಂದ ಸುರಕ್ಷಿತವಾಗಿ ಹೊರಬರಲು ಸಾಧ್ಯವಾಗಲು ಛತ್ರಪತಿ ಶಿವಾಜಿ ಮಹಾರಾಜರು ಶ್ರೀ ಬಗಲಾಮುಖಿ ದೇವಿಯ ಯಜ್ಞ ಮಾಡುವುದು

ತುಳಜಾಪುರದ ಶ್ರೀ ಭವಾನಿದೇವಿಯು ಹಿಂದವಿ ಸ್ವರಾಜ್ಯದ ಸಂಸ್ಥಾಪಕರಾದ ಛತ್ರಪತಿ ಶಿವಾಜಿ ಮಹಾರಾಜರ ಕುಲದೇವತೆಯಾಗಿದ್ದಳು. ‘ಜಯ ಭವಾನಿ’ ಮತ್ತು ‘ಹರಹರ ಮಹಾದೇವ’ ಹೀಗೆ ಘೋಷಣೆಯನ್ನು ಕೂಗುತ್ತ ಛತ್ರಪತಿ ಶಿವಾಜಿ ಮಹಾರಾಜರು ಮತ್ತು ಅವರ ಸೈನಿಕರು ಶತ್ರುಗಳೊಂದಿಗೆ ಯುದ್ಧ ಮಾಡುತ್ತಿದ್ದರು. ಶ್ರೀ ಭವಾನಿ ಮಾತೆಯು ಪ್ರಸನ್ನಳಾಗಿ ಶತ್ರುಗಳೊಂದಿಗೆ ಹೋರಾಡುವುದಕ್ಕಾಗಿಯೇ ಶಿವಾಜಿ ಮಹಾರಾಜರಿಗೆ ಖಡ್ಗವನ್ನು ನೀಡಿದಳು. ಇದೇ ಖಡ್ಗದ ಬಲದಿಂದಲೇ ಅವರು ಶಾಹಿಸ್ತೆಖಾನನ ಬೆರಳುಗಳನ್ನು ತುಂಡರಿಸಿದರು ಮತ್ತು ಅನೇಕ ಶತ್ರುಗಳನ್ನು ನಾಶ ಮಾಡಿದರು. ಛತ್ರಪತಿ ಶಿವಾಜಿ ಮಹಾರಾಜರು ಜೀರ್ಣಗೊಂಡ ದೇವಸ್ಥಾನಗಳನ್ನು ಜೀರ್ಣೋದ್ಧಾರ ಮಾಡುತ್ತ ದೇವಸ್ಥಾನಗಳ ಸುವ್ಯವಸ್ಥೆಯನ್ನು ಕಾಪಾಡಲು ನಿಧಿಯನ್ನು ಅರ್ಪಿಸುತ್ತಿದ್ದರು. ದೇವತೆಗಳ ಉಪಾಸನೆಯ ಜೊತೆಗೆ ಅವರು ವಿವಿಧ ಸಮಯದಲ್ಲಿ ವಿವಿಧ ಪ್ರಕಾರದ ಯಜ್ಞ ಯಾಗಗಳನ್ನೂ ಮಾಡಿದ್ದರು. ಮಿರ್ಝಾ ರಾಜ ಜಯಸಿಂಗರು ಶಿವಾಜಿ ಮಹಾರಾಜರನ್ನು ಬೆನ್ನಟ್ಟಿ ಅವರನ್ನು ಬಂಧಿಸಲು ಸಹಸ್ರ ಚಂಡಿಯಾಗವನ್ನು ಮಾಡಿದರು. ಶಿವಾಜಿಯನ್ನು ಬಂಧಿಸಲು ಇಷ್ಟಾದರೂ ಪುಣ್ಯ ತಮ್ಮ ಪಾಲಿಗೆ ಬರಲಿ ಎನ್ನುವುದೇ ಈ ಯಜ್ಞದ ಉದ್ದೇಶವಾಗಿತ್ತು. ಬಹಿರ್ಜಿ ನಾಯಿಕ ಎಂಬ ಪ್ರಮುಖ ಗೂಢಚಾರನ ಮುಖಾಂತರ ಈ ಮಾಹಿತಿ ದೊರೆತ ಬಳಿಕ ಅದರ ಮೇಲೆ ಉಪಾಯ ಕಂಡುಹಿಡಿಯಲು ಛತ್ರಪತಿಯು ಶ್ರೀ ಬಗಲಾಮುಖಿ ದೇವಿಯ ಯಜ್ಞವನ್ನು ಕೂಡಲೇ ಮಾಡಿದರು. ಇದರ ಬಳಿಕ ಮಿರ್ಜಾರಾಜೆಯವರ ಮತ್ತು ಶಿವಾಜಿ ಮಹಾರಾಜರ ಪ್ರತ್ಯಕ್ಷ ಭೇಟಿಯಾಗಿ ಒಪ್ಪಂದ ಏರ್ಪಟ್ಟಿತು.

ಅದರ ನಂತರ ಔರಂಗಜೇಬನ ಭೇಟಿಗೆ ಹೋದಾಗ ಔರಂಗಜೇಬನು ಶಿವಾಜಿ ಮಹಾರಾಜರನ್ನು ಮೋಸದಿಂದ ಆಗ್ರಾದಲ್ಲಿ ಬಂಧಿಸಿದನು. ಬಳಿಕ ಹಣ್ಣು ಮತ್ತು ಮಿಠಾಯಿ ಬುಟ್ಟಿಯಲ್ಲಿ ಶಿವಾಜಿ ಮಹಾರಾಜರು ಮತ್ತು ಸಂಭಾಜಿ ಮಹಾರಾಜರು ಅಡಗಿ ಕೂತು ಕೋಟೆಯ ಹೊರಗೆ ಬಂದರು ಮತ್ತು ಶತ್ರುವಿನ ಕಪಿಮುಷ್ಠಿಯಿಂದ ಜಾರಿದರು. ಶ್ರೀ ಬಗಲಾಮುಖಿದೇವಿಯ ಕೃಪೆಯಿಂದ ಛತ್ರಪತಿಯವರ ಸೆರೆವಾಸದಿಂದ ಸುಖವಾಗಿ ಬಿಡುಗಡೆ ಸಾಧ್ಯವಾಯಿತು.