ಉತ್ಪಾದನಾ ಬೆಲೆಯ ಶೇ. 30 ರಷ್ಟು ಗರಿಷ್ಠ ದರದಲ್ಲಿ ಎಲ್ಲ ಔಷಧಗಳನ್ನು ಮಾರಾಟ ಮಾಡಲು ಕೇಂದ್ರ ಸರಕಾರ ಕಾನೂನನ್ನು ಜಾರಿಗೆ ತರಬೇಕು ಎಂದು ಜನತೆ ಆಗ್ರಹಿಸಬೇಕು ! – ಶ್ರೀ. ಪುರುಷೋತ್ತಮ ಸೋಮಾನಿ

ಆರೋಗ್ಯ ಸಹಾಯ ಸಮಿತಿ ವತಿಯಿಂದ ‘ಒಂದು ಯಶಸ್ವಿ ಅಭಿಯಾನ : ಔಷಧ ಬೆಲೆ ಇಳಿಕೆ !’ ಕುರಿತು ವೆಬಿನಾರ್ ಸಂಪನ್ನ !

ಶ್ರೀ. ಪುರುಷೋತ್ತಮ ಸೋಮಾನಿ

ಔಷಧಗಳ ಮಾರಾಟ ದರದ ಮೇಲೆ ಕೇಂದ್ರ ಸರಕಾರದ ಯಾವುದೇ ನಿಯಂತ್ರಣವಿಲ್ಲದ ಕಾರಣ ದೇಶಾದ್ಯಂತ ಔಷಧ ತಯಾರಿಕಾ ಮತ್ತು ಮಾರಾಟ ಕಂಪನಿಗಳ ಲಕ್ಷಾಂತರ ಕೋಟಿ ರೂಪಾಯಿಗಳ ಮಹಾಹಗರಣ ನಡೆಯುತ್ತಿದೆ. ಔಷಧ ತಯಾರಿಕೆ ಮತ್ತು ಔಷಧ ಮಾರಾಟ ಕಂಪನಿಗಳು 100 ರೂಪಾಯಿಯ ಮೌಲ್ಯದ ಔಷಧಗಳನ್ನು ಮನಬಂದಂತೆ 6 ಸಾವಿರದಿಂದ 3 ಸಾವಿರ ರೂಪಾಯಿವರೆಗೆ ಗರಿಷ್ಠ ಬೆಲೆಯನ್ನು (ಎಂಆರ್‌ಪಿ) ಹಾಕಿ ಮಾರಾಟ ಮಾಡುತ್ತಿವೆ. ಈ ಲೂಟಿಯಲ್ಲಿ ಔಷಧ ತಯಾರಿಕಾ ಕಂಪನಿಗಳ ಸಹಿತ (ಫಾರ್ಮಾ ಕಂಪನಿಗಳು ಸೇರಿದಂತೆ), ಸಗಟು ವ್ಯಾಪಾರಿಗಳು (ಹೋಲ್.ಸೇಲರಗಳು), ಚಿಲ್ಲರೆ ವ್ಯಾಪಾರಿಗಳು (ಮೆಡಿಕಲ್ ಸ್ಟೋರ್), ಆಸ್ಪತ್ರೆಗಳು, ವೈದ್ಯರು ಇತ್ಯಾದಿಗಳ ದೊಡ್ಡ ಸರಪಳಿ ಸೇರಿದೆ. ಇದರ ವಿರುದ್ಧ ಕಳೆದ ನಾಲ್ಕು ವರ್ಷಗಳಿಂದ ಹೋರಾಟ ನಡೆಸುತ್ತಿದೆ. ಈ ಹೋರಾಟವನ್ನು ಗಮನಿಸಿದ ಪ್ರಧಾನಮಂತ್ರಿ ಮಾನ್ಯ ನರೇಂದ್ರ ಮೋದಿ ಅವರು ಮೊದಲ ಹಂತದಲ್ಲಿ ಅರ್ಬುದ (ಕ್ಯಾನ್ಸರ್) ರೋಗಕ್ಕೆ ಸಂಬಂಧಿಸಿದ 526 ಔಷಧಿಗಳ ಮೇಲೆ ಶೇ. 30 ‘ಟ್ರೇಡ್ ಮಾರ್ಜಿನ್ ಕ್ಯಾಪ್’ಅನ್ನು ವಿಧಿಸಿದ್ದಾರೆ. (ಅಂದರೆ, 100 ರೂಪಾಯಿಗಳ ಔಷಧವನ್ನು ಗರಿಷ್ಠ 130 ರೂಪಾಯಿಗಳಿಗೆ ಮಾರಾಟ ಮಾಡಬಹುದು.) ಇದರಿಂದ 26 ಲಕ್ಷ ಕ್ಯಾನ್ಸರ್ ರೋಗಿಗಳಿಗೆ ದೊಡ್ಡ ಸಮಾಧಾನ ತಂದಿದೆ. ಇದರ ಜೊತೆಗೆ ಜೀವರಕ್ಷಕ ಔಷಧಗಳು (ಲೈಫ್ ಸೇವಿಂಗ್ ಡ್ರಗ್ಸ್) ಸೇರಿದಂತೆ ಎಲ್ಲಾ ಔಷಧಿಗಳ ಮೇಲೆ ಉತ್ಪಾದನಾ ವೆಚ್ಚಕ್ಕಿಂತ ಹೆಚ್ಚೆಂದರೆ ಶೇ.30 ರಷ್ಟು ಮಿತಿಯನ್ನು ವಿಧಿಸಲು ಎಲ್ಲಾ ಜನರು ಈಗ ಕೇಂದ್ರ ಸರಕಾರವನ್ನು ಒತ್ತಾಯಿಸಬೇಕು ಎಂದು ತೆಲಂಗಾಣದ ಉದ್ಯಮಿ ಮತ್ತು ‘ನಿಜಾಮಾಬಾದ್ ಚೇಂಬರ‍್ಸ್ ಆಫ್ ಕಾಮರ್ಸ್’ನ ಅಧ್ಯಕ್ಷ ಶ್ರೀ. ಪುರುಷೋತ್ತಮ ಸೋಮಾನಿ ಇವರು ಪ್ರತಿಪಾದಿಸಿದರು. ಅವರು ‘ಆರೋಗ್ಯ ಸಹಾಯ ಸಮಿತಿ’ ಹಾಗೂ ‘ಸುರಾಜ್ಯ ಅಭಿಯಾನ’ದ ವತಿಯಿಂದ ಆಯೋಜಿಸಿದ್ದ ‘ಒಂದು ಯಶಸ್ವಿ ಅಭಿಯಾನ : ಔಷಧ ಬೆಲೆ ಇಳಿಕೆ !’ ಕುರಿತ ‘ವೆಬ್‌ನಾರ್’ನಲ್ಲಿ ಮಾತನಾಡುತ್ತಿದ್ದರು.

ಈ ವೇಳೆ ‘ಆರೋಗ್ಯ ಸಹಾಯ ಸಮಿತಿ’ಯ ಡಾ. ಮಾನಸಿಂಗ್ ಶಿಂದೆಯವರು ಕಾರ್ಯಕ್ರಮದ ನಿರೂಪಣೆ ಮಾಡುತ್ತಾ ಶ್ರೀ. ಸೋಮಾನಿ ಅವರೊಂದಿಗೆ ಸಂವಾದ ನಡೆಸಿದರು. ಈ ವೇಳೆ ಕರ್ನಾಟಕ, ಮಹಾರಾಷ್ಟ್ರ, ಗೋವಾ ಮತ್ತು ರಾಜಸ್ಥಾನ ರಾಜ್ಯಗಳ ವೈದ್ಯರು ಹಾಗೂ ಜಿಜ್ಞಾಸುಗಳು ಕೇಳಿದ ಪ್ರಶ್ನೆಗಳಿಗೆ ಶ್ರೀ. ಸೋಮಾನಿಯವರು ಉತ್ತರಿಸಿದರು. ಶ್ರೀ. ಸೋಮಾನಿಯವರು ತಮ್ಮ ಮಾತನ್ನು ಮುಂದುವರೆಸುತ್ತಾ, ಹೆಚ್ಚಿನ ಜನರಿಗೆ ಮಾರುಕಟ್ಟೆಯಲ್ಲಿರುವ ಶೇ. ೯೭ ರಷ್ಟು ಔಷಧಗಳು ಜೆನರಿಕ್ ಎಂದು ತಿಳಿದಿಲ್ಲ. ಅದನ್ನು ಯಾರೂ ಉತ್ಪಾದಿಸಬಹುದು. ಆದ್ದರಿಂದ ಅದು ತುಂಬಾ ಕಡಿಮೆ ದರದಲ್ಲಿರಬೇಕು; ಆದರೆ ಅನೇಕ ಪ್ರಸಿದ್ಧ ಔಷಧಿ ಕಂಪನಿಗಳು ಈ ಔಷಧಿಗಳನ್ನು ತಮ್ಮ ಹೆಸರನ್ನು ಹಾಕಿ ೧೦ ರಿಂದ ೨೦ ಪಟ್ಟು ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತವೆ. ಆಸ್ಪತ್ರೆಗಳು ಮತ್ತು ವೈದ್ಯರು ಸಹ ತಮ್ಮ ಸ್ವಾರ್ಥಕ್ಕಾಗಿ ರೋಗಿಗಳಿಗೆ ಔಷಧಿಗಳ ಘಟಕಗಳನ್ನು (ಸಾಲ್ಟ್) ಬರೆದುಕೊಡುವುದಕ್ಕಿಂತ ಅನೇಕಬಾರಿ ಬ್ರಾಂಡೆಡ್ (ದೊಡ್ಡ ಕಂಪನಿಗಳ) ಔಷಧಿಗಳನ್ನು ಬರೆದುಕೊಡುತ್ತಾರೆ. ಇದರಲ್ಲಿ ೧೦ ರಿಂದ ೨೦ ಪಟ್ಟು ಹೆಚ್ಚು ಹಣ ಲೂಟಿ ಮಾಡಲಾಗುತ್ತದೆ. ಮೂಲತಃ ಔಷಧಿ ಘಟಕಗಳನ್ನು ಬರೆದು ಕೊಟ್ಟಿದ್ದರಿಂದ ಕಡಿಮೆ ಬೆಲೆಗೆ ಸಿಗುವ ಜೆನರಿಕ ಔಷಧಗಳು ಲಭ್ಯವಾಗುತ್ತದೆ. ನನ್ನ ಹೃದಯ ಕಾಯಿಲೆಗೆ ನಾನು ವೈಯಕ್ತಿಕವಾಗಿ ತಿಂಗಳಿಗೆ 3500 ರೂಪಾಯಿಗಳ ಔಷಧಗಳು ಬೇಕಾಗುತ್ತಿತ್ತು. ಈಗ 150 ರೂಪಾಯಿಗಳಿಗೆ ಲಭ್ಯವಿವೆ. ಅಲ್ಲದೆ, ಜೆನೆರಿಕ್ ಔಷಧಗಳು ಬ್ರಾಂಡೆಡ್ ಔಷಧಿಗಳಷ್ಟೇ ಪರಿಣಾಮಕಾರಿಯಾಗಿರುತ್ತದೆ; ಆದರೆ ಅನೇಕ ರೋಗಿಗಳಿಗೆ ಬ್ರಾಂಡೆಡ್ ಔಷಧಗಳು ಒಳ್ಳೆಯದು ಎಂಬ ಭ್ರಮೆ ಇರುತ್ತದೆ, ಎಂದರು.

ಜನರಿಗೆ ಕಡಿಮೆ ಬೆಲೆ ಮತ್ತು ಉತ್ತಮ ಔಷಧಗಳು ಸಿಗುವಂತಾಗಲು ಏನು ಮಾಡಬೇಕು, ಎಂಬುದನ್ನು ವಿವರಿಸಿದ ಶ್ರೀ. ಸೋಮಾನಿಯವರು, ಇಂದು ಭಾರತದಲ್ಲಿ 800 ಕ್ಕೂ ಹೆಚ್ಚು ಜೆನೆರಿಕ್ ಅಥವಾ ಪ್ರಧಾನಮಂತ್ರಿ ಜನೌಷಧ ಮಳಿಗೆಗಳಿವೆ, ಅಲ್ಲಿ ಕಡಿಮೆ ದರದಲ್ಲಿ ಔಷಧಿಗಳು ದೊರೆಯುತ್ತವೆ ಮತ್ತು 10 ಲಕ್ಷಗಿಂತಲೂ ಹೆಚ್ಚು ಔಷಧ ಮಳಿಗೆಗಳಿವೆ. ಅಲ್ಲಿ ಔಷಧಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತದೆ. ಇದರ ಮೇಲೆ ಕೇಂದ್ರ ಸರಕಾರವು ಎಲ್ಲಾ ಔಷಧಿಗಳ ಮೇಲೆ ಉತ್ಪಾದನಾ ವೆಚ್ಚಕ್ಕಿಂತ ಕೇವಲ ಶೇ. 30 ರಷ್ಟು ಹೆಚ್ಚು ದರದಲ್ಲಿ ಮಾರಾಟ ಮಾಡುವ ಟ್ರೆಡ್ ಮಾರ್ಜಿನ್ ಕ್ಯಾಪ್‌ಅನ್ನು ವಿಧಿಸಬೇಕು. ಇದರಿಂದ ಯಾರೂ ಹೆಚ್ಚಿನ ದರಕ್ಕೆ ಔಷಧ ಮಾರಾಟ ಮಾಡಲು ಆಗುವುದಿಲ್ಲ. ಅಲ್ಲದೆ, ಡಾಕ್ಟರರು ಮತ್ತು ಆಸ್ಪತ್ರೆಗಳು ಔಷಧಿಗಳನ್ನು ಬರೆಯುವಾಗ ಬ್ರಾಂಡೆಡ್ ಔಷಧಿಗಳನ್ನು ಬರೆಯುವುದಕ್ಕಿಂತ ಔಷಧಗಳ ಘಟಕಗಳನ್ನು (ಸಾಲ್ಟ್) ಬರೆದುಕೊಡಲು ಕಡ್ಡಾಯಗೊಳಿಸಬೇಕು. ಇದರಿಂದ ಜನರಿಕ್ ಔಷಧಗಳು ಜನರಿಗೆ ಸುಲಭವಾಗಿ ದೊರೆಯುತ್ತವೆ. ‘ಇಂಡಿಯನ್ ಮೆಡಿಕಲ್ ಕೌನ್ಸಿಲ್’ ಈ ಬಗ್ಗೆ ಮುಂದಾಳತ್ವ ವಹಿಸಬೇಕು. ಈ ಬೇಡಿಕೆಯನ್ನು ಆದಷ್ಟು ಬೇಗ ಈಡೇರಿಸಲು ಜನರು ಜಿಲ್ಲಾಧಿಕಾರಿಗಳು, ತಹಶೀಲ್ದಾರರು ಹಾಗೂ ಜನಪ್ರತಿನಿಧಿಗಳಿಗೆ ಮನವಿ ನೀಡಿ ಸರಕಾರದ ಮೇಲೆ ಒತ್ತಡ ಹೇರಬೇಕಾಗಿದೆ ಎಂದು ಶ್ರೀ. ಸೋಮಾನಿ ಹೇಳಿದರು.