ಪೊಲೀಸ್ ಕಸ್ಟಡಿ ಮತ್ತು ನ್ಯಾಯಾಂಗ ಕಸ್ಟಡಿಯಲ್ಲಿರುವ ವ್ಯತ್ಯಾಸ !

ಮಾಜಿ ಹಣಕಾಸು ಸಚಿವರಾದ ಪಿ. ಚಿದಂಬರಮ್ ಇವರನ್ನು ‘ಐ.ಎನ್.ಎಕ್ಸ್. ಮೀಡಿಯಾ ಹಗರಣದ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿಡಲಾಗಿತ್ತು, ಆದರೆ ‘ಅವರನ್ನು ಪೊಲೀಸ್ ಬಂಧನದಲ್ಲಿಯೇ ಇರಿಸಲಾಗಿತ್ತು, ನ್ಯಾಯಾಂಗ ಬಂಧನದಲ್ಲಿ ಅಲ್ಲ ಎಂದು ಅವರು ಆರೋಪಿಸಿದ್ದಾರೆ. ಇಂತಹ ಸಮಯದಲ್ಲಿ ಪೊಲೀಸ್ ಕಸ್ಟಡಿ ಮತ್ತು ನ್ಯಾಯಾಲಯ ಕಸ್ಟಡಿಗಳಲ್ಲಿರುವ ವ್ಯತ್ಯಾಸವೇನು ? ಮತ್ತು ಈ ಕುರಿತು ಕಾನೂನು ಏನು ಹೇಳುತ್ತದೆ ? ಎನ್ನುವುದನ್ನು ಅರಿತುಕೊಳ್ಳುವುದು ಸೂಕ್ತವೆನಿಸುತ್ತದೆ.

ಕಸ್ಟಡಿ ಮತ್ತು ಬಂಧನ !

೧. ಕಸ್ಟಡಿಯೆಂದರೆ ಯಾವುದೇ ವ್ಯಕ್ತಿಯನ್ನು ವಶಕ್ಕೆ ಪಡೆಯುವುದು ಮತ್ತೊಂದು ಬಂಧಿಸುವುದಾಗಿದೆ. ಕೇಳಲು ಎರಡೂ ಒಂದೇ ರೀತಿಯೆನಿಸುತ್ತದೆ; ಆದರೆ ಎರಡೂ ಪ್ರತ್ಯೇಕವಾಗಿದೆ. ವಶಕ್ಕೆ ಪಡೆದ ಪ್ರತಿಯೊಬ್ಬನ ಬಂಧನವಾಗುತ್ತದೆ ಎಂದೇನಿಲ್ಲ. ವಶಕ್ಕೆ ಪಡೆಯುವುದೆಂದರೆ ಆ ವ್ಯಕ್ತಿಯ ಮೇಲೆ ಗಮನವಿರಿಸುವುದು, ಅವನ ವಿಚಾರಣೆ ನಡೆಸುವುದು ಅಥವಾ ಆ ವ್ಯಕ್ತಿಯ ಚಲನವಲನಗಳ ಮೇಲೆ ನಿಗಾ ಇಡುವುದಾಗಿದೆ.

೨. ಅಪರಾಧವನ್ನು ನಿರೂಪಿಸುವುದು, ಅಪರಾಧ ವಾಗುವುದರಿಂದ ತಡೆಯುವುದು ಮತ್ತು ಇತರ ವ್ಯಕ್ತಿಗಳಿಗೆ ಹಾನಿಯಾಗುವುದರಿಂದ ರಕ್ಷಿಸುವುದಕ್ಕಾಗಿ ಪೊಲೀಸರು ಯಾವ ವ್ಯಕ್ತಿಯನ್ನು ಬಂಧಿಸು ತ್ತಾರೆಯೋ, ಈ ಬಂಧನದಿಂದ ಆ ವ್ಯಕ್ತಿಯ ವೈಯಕ್ತಿಕ ಸ್ವಾತಂತ್ರ್ಯಹರಣವಾಗುತ್ತದೆ.

೩. ಪೊಲೀಸ್ ಕಸ್ಟಡಿಯಲ್ಲಿ ಆರೋಪಿಯನ್ನು ಪೊಲೀಸ್ ಲಾಕ್‌ಅಪ್‌ನಲ್ಲಿ ಇರಿಸಲಾಗುತ್ತದೆ. ಆದರೆ ನ್ಯಾಯಾಲಯ ಕಸ್ಟಡಿಯಲ್ಲಿ (ಜ್ಯುಡಿಶಿಯಲ್ ಕಸ್ಟಡಿ) ಆರೋಪಿಯನ್ನು ಕಾರಾಗೃಹದಲ್ಲಿಡಲಾಗುತ್ತದೆ. ಯಾವುದೇ ಅಪರಾಧದ ಪ್ರಕರಣದಡಿಯಲ್ಲಿ ‘ಎಫ್.ಐ.ಆರ್. ದಾಖಲಿಸಿದ ಬಳಿಕವೇ ಪೊಲೀಸರು ಆರೋಪಿಯನ್ನು ಬಂಧಿಸಬಹುದಾಗಿದೆ.

೪ ಬಂಧನದ ಮೂಲ ಉದ್ದೇಶವು ಸಾಕ್ಷಿಯಲ್ಲಿ ಯಾವುದೇ ಹಸ್ತಕ್ಷೇಪವಾಗಬಾರದು ಅಥವಾ ಸಾಕ್ಷಿದಾರರಿಗೆ ಬೆದರಿಕೆ ಹಾಕಬಾರದು ಎಂದು ಆಗಿರುತ್ತದೆ.

ಪೊಲೀಸ್ ಕಸ್ಟಡಿಯ ಕಾಲಾವಧಿ !

೧. ಪೊಲೀಸ್ ಅಧಿಕಾರಿ ಶಂಕಿತನೊಬ್ಬನನ್ನು ಬಂಧಿಸಿದ ದಿನದಿಂದ ಪೊಲೀಸ್ ಕಸ್ಟಡಿ ಪ್ರಾರಂಭವಾಗುತ್ತದೆ. ಯಾವಾಗ ನ್ಯಾಯಾಧೀಶರು ಆರೋಪಿಯನ್ನು ಪೊಲೀಸ್ ಕಸ್ಟಡಿಯಿಂದ ಕಾರಾಗೃಹಕ್ಕೆ ಕಳುಹಿಸುತ್ತಾರೆಯೋ, ಆಗಿನಿಂದ ನ್ಯಾಯಾಂಗ ಕಸ್ಟಡಿ ಪ್ರಾರಂಭವಾಗುತ್ತದೆ. ಪೊಲೀಸ್ ಕಸ್ಟಡಿಯ ಕಾಲಾವಧಿ ೨೪ ಗಂಟೆಗಳದ್ದಾಗಿರುತ್ತದೆ. ೨೪ ಗಂಟೆಗಳೊಳಗೆ ಪೊಲೀಸರಿಗೆ ಆರೋಪಿಯನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸಬೇಕಾಗುತ್ತದೆ; ಆದರೆ ನ್ಯಾಯಾಂಗ ಕಸ್ಟಡಿಗೆ ಯಾವುದೇ ಸಮಯಮಿತಿಯಿರುವುದಿಲ್ಲ. ಎಲ್ಲಿಯ ವರೆಗೆ ಪ್ರಕರಣ ಮುಂದುವರಿಯುತ್ತದೆಯೋ ಅಥವಾ ಶಂಕಿತ ಆರೋಪಿಗೆ ಜಾಮೀನು ಸಿಗುವುದಿಲ್ಲವೋ, ಅಲ್ಲಿಯವರೆಗೆ ಅವನು ನ್ಯಾಯಾಂಗ ಕಸ್ಟಡಿಯಲ್ಲಿರುತ್ತಾನೆ.

೨. ಪೊಲೀಸರು ಯಾವುದೇ ವ್ಯಕ್ತಿಯ ವಿರುದ್ಧ ಆರೋಪಪತ್ರವನ್ನು ದಾಖಲಿಸಿದ ಬಳಿಕ, ಆ ವ್ಯಕ್ತಿಯನ್ನು ಪೊಲೀಸ್ ಕಸ್ಟಡಿಯಲ್ಲಿರಿಸಲು ಸಾಧ್ಯವಿಲ್ಲ. ಒಂದು ವೇಳೆ ವ್ಯಕ್ತಿಯ ಜಾಮೀನು ರದ್ದಾಗಿದ್ದರೂ, ಆ ವ್ಯಕ್ತಿಯನ್ನು ಪೊಲೀಸರ ವಶಕ್ಕೆ ನೀಡಲಾಗುವುದಿಲ್ಲ.

೩. ಹತ್ಯೆ, ಲೂಟಿ, ಅಪಹರಣ, ಕಳ್ಳತನ, ಬೆದರಿಕೆ ಇತ್ಯಾದಿ ಪ್ರಕರಣಗಳಲ್ಲಿ ಪೊಲೀಸ್ ಕಸ್ಟಡಿಯಾದರೆ ನ್ಯಾಯಾಲಯದ ಅಪಮಾನ ಮತ್ತು ಇತರ ಪ್ರಕರಣಗಳಲ್ಲಿ ನೇರ ನ್ಯಾಯಾಂಗ ಕಸ್ಟಡಿಯಾಗುತ್ತದೆ.

ರಿಮಾಂಡ್

೧. ಕಾನೂನುತಜ್ಞರು ಹೇಳುವಂತೆ, ಯಾವುದೇ ಪ್ರಕರಣದಲ್ಲಿ ಬಂಧಿಸಿದ ಬಳಿಕ ತನಿಖಾ ದಳವು ವಿಚಾರಣೆಗಾಗಿ ರಿಮಾಂಡ್ ಕೋರಬಹುದು.

೨. ಆರೋಪಿಯನ್ನು ಬಂಧಿಸಿ ನ್ಯಾಯಾಲಯದಲ್ಲಿ ಹಾಜರು ಪಡಿಸಿದ ಬಳಿಕ ೧೪ ದಿನಗಳ ವರೆಗೆ ಪೊಲೀಸ್ ವಿಚಾರಣೆಗಾಗಿ ರಿಮಾಂಡ್ ಕೇಳಬಹುದು; ಆದರೆ ತನಿಖಾ ದಳವು ನ್ಯಾಯಾಲಯದಲ್ಲಿ ವಶಕ್ಕೆ ಪಡೆಯಲು ಕಾರಣವನ್ನು ನೀಡಬೇಕಾಗುತ್ತದೆ. ತನಿಖಾ ದಳ ನೀಡಿದ ಕಾರಣ ಸೂಕ್ತವೆನಿಸಿದರೆ, ನ್ಯಾಯಾಲಯವು ಆರೋಪಿಯನ್ನು ರಿಮಾಂಡ್‌ಗೆ ಕಳುಹಿಸಬಹುದು.

ಎರಡನೇ ಸಲ ರಿಮಾಂಡ್

ಒಂದು ವೇಳೆ ಆರೋಪಿಯನ್ನು ಪೊಲೀಸರ ರಿಮಾಂಡ್‌ದಿಂದ ನ್ಯಾಯಾಂಗಕಸ್ಟಡಿಗೆ ಕಳುಹಿಸಿದ್ದರೆ ಮತ್ತು ತನಿಖಾ ದಳವು ವಿಚಾರಣೆಯಲ್ಲಿ ಹೊಸ ವಿಷಯ ಕಂಡು ಬಂದರೆ, ಆರೋಪಿಯನ್ನು ಎರಡನೇ ಸಲ ಪೊಲೀಸ್ ರಿಮಾಂಡ್‌ಗೆ ಕಳುಹಿಸಬಹುದು; ಆದರೆ ಇದೆಲ್ಲ ೧೪ ದಿನಗಳೊಳಗೆ ಆಗ ಬಹುದು. ೧೪ ದಿನಗಳ ಬಳಿಕ ತನಿಖಾ ದಳಕ್ಕೆ ಯಾವುದೇ ವಿಚಾರಣೆ ಮಾಡುವುದಿದ್ದರೆ, ಅದು ನ್ಯಾಯಾಲಯದ ಅನುಮತಿ ದೊರೆತ ಬಳಿಕ ಆರೋಪಿಯನ್ನು ಕಾರಾಗೃಹದಲ್ಲಿ ವಿಚಾರಣೆ ನಡೆಸಬಹುದು.

ಜಾಮೀನು ಯಾವಾಗ ದೊರಕುತ್ತದೆ ?

೧. ಪೊಲೀಸರ ರಿಮಾಂಡ್ ಮುಗಿದ ಬಳಿಕ ಆರೋಪಿಗೆ ಎಲ್ಲಿಯ ವರೆಗೆ ಜಾಮೀನು ದೊರೆಯುವುದಿಲ್ಲವೋ, ಅಲ್ಲಿಯ ವರೆಗೆ ಅವನಿಗೆ ನ್ಯಾಯಾಲಯದ ಕಸ್ಟಡಿಯಲ್ಲಿರಿಸಲಾಗುತ್ತದೆ. ಆರೋಪಪತ್ರವನ್ನು ದಾಖಲಿಸುವ ವರೆಗೆ ಆರೋಪಿಯ ನ್ಯಾಯಾಲಯದ ಕಸ್ಟಡಿಯನ್ನು ೧೪-೧೪ ದಿನಗಳಿಗೆ ಹೆಚ್ಚಿಸಲಾಗುತ್ತದೆ. ಆರೋಪಪತ್ರ ದಾಖಲಿಸಿದ ಬಳಿಕ ನ್ಯಾಯಾಲಯ ಕಸ್ಟಡಿಯ ಕಾಲಾವಧಿಯು ಪ್ರಕರಣದ ದಿನಾಂಕಕ್ಕನುಸಾರ ಹೆಚ್ಚಿಸಲಾಗುತ್ತದೆ. ಕಾನೂನು ತಜ್ಞರು ‘ ಸಿ.ಆರ್.ಪಿ.ಸಿ ಕಲಂ ೧೬೭ (೨) ಅನುಸಾರ ಸೀಮಿತ ಅವಧಿಯೊಳಗೆ ಆರೋಪಪತ್ರವನ್ನು ದಾಖಲಿಸದಿದ್ದರೆ, ತಾಂತ್ರಿಕ ಅಂಶಗಳ ಆಧಾರದಲ್ಲಿ ಜಾಮೀನು ಮಂಜೂರು ಮಾಡಲು ಅವಕಾಶವಿದೆ.

೨. ಯಾವುದೇ ಆರೋಪಿಯ ವಿರುದ್ಧ ದಾಖಲಾಗಿರುವ ಪ್ರಕರಣದಲ್ಲಿ ೧೦ ವರ್ಷಗಳಿಗಿಂತ ಕಡಿಮೆ ಅವಧಿಯ ಕಾರಾಗೃಹ ಶಿಕ್ಷೆಯ ಅವಕಾಶವಿದ್ದರೆ ಮತ್ತು ತನಿಖಾ ದಳವು ಆರೋಪಿಯ ಬಂಧನದ ಬಳಿಕ ೬೦ ದಿನಗಳ ಒಳಗೆ ಆರೋಪಪತ್ರವನ್ನು ದಾಖಲಿಸದಿದ್ದರೆ, ತಾಂತ್ರಿಕ ಅಂಶಗಳ ಆಧಾರದಲ್ಲಿ ಆರೋಪಿಗೆ ಜಾಮೀನು ನೀಡಲು ಕಾನೂನಿನಲ್ಲಿ ಅವಕಾಶವಿದೆ.

೩. ಯಾವುದೇ ಆರೋಪಿಯ ವಿರುದ್ಧ ದಾಖಲಾಗಿರುವ ಪ್ರಕರಣದಲ್ಲಿ ೧೦ ವರ್ಷಗಳಿಗಿಂತ ಹೆಚ್ಚು ಅವಧಿಯ ಕಾರಾಗೃಹ ಶಿಕ್ಷೆಯ ಅವಕಾಶವಿದ್ದರೆ ಮತ್ತು ತನಿಖಾದಳವು ಆರೋಪಿಯ ಬಂಧನದ ಬಳಿಕ ೯೦ ದಿನಗಳೊಳಗೆ ಆರೋಪಪತ್ರವನ್ನು ದಾಖಲಿಸದಿದ್ದರೆ, ತಾಂತ್ರಿಕ ಅಂಶಗಳ ಆಧಾರದಲ್ಲಿ ಆರೋಪಿಗೆ ಜಾಮೀನು ನೀಡಲು ಕಾನೂನಿನಲ್ಲಿ ಅವಕಾಶವಿದೆ.

೪. ಕೋಕಾ ಖಟ್ಲೆಯಲ್ಲಿ ಆರೋಪಿಯ ಬಂಧನದ ಬಳಿಕ ೩೦ ದಿನಗಳೊಳಗೆ ಪೊಲೀಸ್ ರಿಮಾಂಡ್ ದಲ್ಲಿರಿಸಲು ಅವಕಾಶವಿದೆ. ಇಂತಹ ಪ್ರಕರಣದಲ್ಲಿ ಆರೋಪಿಯ ವಿರುದ್ಧ ದಾಖಲಾಗಿರುವ ಪ್ರಕರಣದಲ್ಲಿ ೧೦ ವರ್ಷಕ್ಕಿಂತ ಕಡಿಮೆ ಕಾರಾಗೃಹದ ಶಿಕ್ಷೆಯ ಅವಕಾಶವಿದ್ದರೆ, ಆರೋಪಪತ್ರ ದಾಖಲಿಸಲು ೯೦ ದಿನಗಳ ಅವಕಾಶವಿರುತ್ತದೆ. ಈ ಕಾಲಾವಧಿಯಲ್ಲಿ ಆರೋಪಪತ್ರವು ದಾಖಲಾಗದಿದ್ದರೆ ಆರೋಪಿಗೆ ಜಾಮೀನು ನೀಡುವ ಅವಕಾಶವಿದೆ. ಹಾಗೆಯೇ ಆರೋಪಿಯ ವಿರುದ್ಧ ದಾಖಲಾಗಿರುವ ಪ್ರಕರಣದಲ್ಲಿ

೧೦ ವರ್ಷಕ್ಕಿಂತ ಅಧಿಕ ಕಾರಾಗೃಹದ ಶಿಕ್ಷೆಯ ಅವಕಾಶವಿದ್ದರೆ, ಆರೋಪಪತ್ರವನ್ನು ದಾಖಲಿಸಲು ೧೮೦ ದಿನಗಳ ಅವಕಾಶವಿರುತ್ತದೆ. ಈ ಕಾಲಾವಧಿಯಲ್ಲಿ ಆರೋಪಪತ್ರವನ್ನು ದಾಖಲಿಸದಿದ್ದರೆ ಆರೋಪಿಗೆ ಜಾಮೀನು ನೀಡುವ ಅವಕಾಶವಿದೆ. ಆಧಾರ : ಜಾಲತಾಣ