ಚೈತ್ರ ಹುಣ್ಣಿಮೆ (ಏಪ್ರಿಲ್ ೧೯) ರಂದು ಇರುವ ಹನುಮಾನ ಜಯಂತಿ ನಿಮಿತ್ತ…

ಹನುಮಾನ ಜಯಂತಿ

ಕೆಲವೊಂದು ಪಂಚಾಂಗಗಳಿಗನುಸಾರ ಹನುಮಂತನ ಜನ್ಮತಿಥಿಯು ಆಶ್ವಯುಜ ಕೃಷ್ಣ ಚತುರ್ದಶಿ ಆಗಿದೆ ಮತ್ತು ಇನ್ನು ಕೆಲವೊಂದು ಪಂಚಾಂಗಗಳಿಗನುಸಾರ ಚೈತ್ರ ಪೌರ್ಣಿಮೆಯಾಗಿದೆ. ಕರ್ನಾಟಕದಲ್ಲಿ ಹನುಮಂತ ಜಯಂತಿಯನ್ನು ಚೈತ್ರ ಪೌರ್ಣಿಮೆಯಂದು ಆಚರಿಸುತ್ತಾರೆ. ಈ ದಿನದಂದು ಹನುಮಂತನ ದೇವಸ್ಥಾನಗಳಲ್ಲಿ ಸೂರ್ಯೋದಯಕ್ಕಿಂತ ಮೊದಲು ಕೀರ್ತನೆಯನ್ನು (ಹರಿಕಥೆ) ಪ್ರಾರಂಭಿಸುತ್ತಾರೆ. ಸೂರ್ಯೋದಯಕ್ಕೆ ಹನುಮಂತನ ಜನ್ಮವಾಗುತ್ತದೆ. ಆ ಸಮಯದಲ್ಲಿ ಕೀರ್ತನೆಯು ಮುಗಿಯುತ್ತದೆ ಮತ್ತು ಎಲ್ಲರಿಗೂ ಪ್ರಸಾದವನ್ನು ಹಂಚಲಾಗುತ್ತದೆ.

೧. ಪ್ರಚಲಿತ ಪೂಜೆಯಲ್ಲಿನ ರೂಢಿ ಮತ್ತು ರೂಢಿಯ ಹಿಂದಿನ ಕಾರಣಗಳು

ಮಹಾರಾಷ್ಟ್ರದಲ್ಲಿ ಶನಿವಾರ ಮತ್ತು ಭಾರತದ ಉಳಿದ ಭಾಗಗಳಲ್ಲಿ ಶನಿವಾರ ಮತ್ತು ಮಂಗಳವಾರವನ್ನು ಮಾರುತಿಯ ವಾರವೆಂದು ತಿಳಿಯುತ್ತಾರೆ. ಈ ದಿನ ಮಾರುತಿಗೆ ಸಿಂಧೂರ ಮತ್ತು ಎಣ್ಣೆಯನ್ನು ಅರ್ಪಿಸುವ ವಾಡಿಕೆ ಇದೆ. ಮಾರುತಿಗೆ ತೆಂಗಿನಕಾಯಿಯನ್ನು ಒಡೆಯುವ ರೂಢಿಯು ಮೊದಲಿನಿಂದ ನಡೆದು ಬಂದಿರುವುದು ಕಂಡುಬರುತ್ತದೆ. ಆಧ್ಯಾತ್ಮಿಕ ಉನ್ನತಿಗಾಗಿ ವಾಮಮುಖಿ(ಎಡಬದಿಗೆ ಮುಖವಿರುವ) ಮಾರುತಿ ಅಥವಾ ದಾಸಮಾರುತಿಯನ್ನು ಪೂಜಿಸುತ್ತಾರೆ.

೨. ಮಾರುತಿಯ ಉಪಾಸನೆಯ ಅಂತರ್ಗತ ಕೆಲವು ನಿತ್ಯದ ಕೃತಿಗಳು

ಪ್ರತಿಯೊಂದು ದೇವತೆಯ ವಿಶಿಷ್ಟ ಉಪಾಸನಾ ಶಾಸ್ತ್ರವಿದೆ. ಇದರ ಅರ್ಥವೇನೆಂದರೆ, ಪ್ರತಿಯೊಂದು ದೇವತೆಯ ಉಪಾಸನೆಯ ಪ್ರತಿಯೊಂದು ಕೃತಿಯನ್ನು ವಿಶಿಷ್ಟ ರೀತಿಯಲ್ಲಿ ಮಾಡುವುದರ ಹಿಂದೆ ಶಾಸ್ತ್ರವಿದೆ. ಇಂತಹ ಕೃತಿಗಳಿಂದಲೇ ಆ ದೇವತೆಯ ತತ್ತ್ವದ ಹೆಚ್ಚೆಚ್ಚು ಲಾಭವಾಗಲು ಸಹಾಯವಾಗುತ್ತದೆ.

೩. ಮಾರುತಿಯ ಪೂಜೆಯ ಮೊದಲು ಮಾರುತಿ ತತ್ತ್ವಕ್ಕೆ ಸಂಬಂಧಿಸಿದ ಸಾತ್ತ್ವಿಕ ರಂಗೋಲಿಗಳನ್ನು ಬಿಡಿಸಬೇಕು

ಮಾರುತಿಯ ಪೂಜೆಯ ಮೊದಲು, ಹಾಗೆಯೇ ಹನುಮಾನ ಜಯಂತಿಯಂದು ಮನೆಯಲ್ಲಿ ಅಥವಾ ದೇವಸ್ಥಾನಗಳಲ್ಲಿ ಮಾರುತಿತತ್ತ್ವವನ್ನು ಆಕರ್ಷಿಸುವ ಮತ್ತು ಪ್ರಕ್ಷೇಪಿಸುವ ಸಾತ್ತ್ವಿಕ ರಂಗೋಲಿಗಳನ್ನು ಬಿಡಿಸಬೇಕು. ಇಂತಹ ಕೆಲವು ರಂಗೋಲಿಗಳನ್ನು ಮುಂದೆ ಕೊಡಲಾಗಿದೆ. ಇಂತಹ ರಂಗೋಲಿಗಳನ್ನು ಬಿಡಿಸುವುದರಿಂದ ಅಲ್ಲಿನ ವಾತಾವರಣವು ಮಾರುತಿ ತತ್ತ್ವದಿಂದ ಭರಿತವಾಗಿ ಎಲ್ಲರಿಗೂ ಅದರ ಲಾಭವಾಗುತ್ತದೆ. ಈ ರಂಗೋಲಿಗಳಲ್ಲಿ ಹಳದಿ, ತಿಳಿ ನೀಲಿ, ಗುಲಾಬಿ ಮುಂತಾದ ಸಾತ್ತ್ವಿಕ ಬಣ್ಣಗಳನ್ನು ತುಂಬಿಸಬೇಕು.

೪. ಶನಿಕಾಟ (ಸಾಡೇಸಾತಿ) ಮತ್ತು ಮಾರುತಿಯ ಪೂಜೆ : ಶನಿಕಾಟ (ಸಾಡೇಸಾತಿ) ಕಡಿಮೆಯಾಗಲು ಮಾರುತಿಯನ್ನು ಪೂಜಿಸುತ್ತಾರೆ.

೫. ನಾಮಜಪ

ಕಲಿಯುಗದಲ್ಲಿ ದೇವತೆಯ ವಿವಿಧ ಉಪಾಸನೆಗಳಲ್ಲಿ ಸರ್ವಶ್ರೇಷ್ಠ, ಸರಳ, ಸುಲಭ ಮತ್ತು ದೇವತೆಯೊಂದಿಗೆ ಸತತವಾಗಿ ಅನುಸಂಧಾನವನ್ನು ಸಾಧಿಸುವ ಉಪಾಸನೆಯೆಂದರೆ ನಾಮಜಪ. ದೇವತೆಯ ನಾಮಜಪದಿಂದ ದೇವತೆಯ ತತ್ತ್ವವನ್ನು ಹೆಚ್ಚು ಪ್ರಮಾಣದಲ್ಲಿ ಗ್ರಹಿಸಬೇಕಾದರೆ, ನಾಮಜಪದ ಉಚ್ಚಾರವನ್ನು ಅಧ್ಯಾತ್ಮಶಾಸ್ತ್ರದ ದೃಷ್ಟಿಯಿಂದ ಯೋಗ್ಯರೀತಿಯಲ್ಲಿ ಮಾಡುವುದು ಆವಶ್ಯಕವಾಗಿದೆ. ಆದುದರಿಂದ ‘ಶ್ರೀ ಹನುಮತೇ ನಮಃ| ಈ ಮಾರುತಿಯ ನಾಮಜಪವನ್ನು ಮಾಡಬೇಕು.

೬. ಮಾರುತಿ ಗಾಯತ್ರಿ

ಆಂಜನೇಯಾಯ ವಿದ್ಮಹೇ| ವಾಯುಪುತ್ರಾಯ ಧೀಮಹಿ| ತನ್ನೋ ವೀರಃ ಪ್ರಚೋದಯಾತ್||

ಅರ್ಥ : ನಾವು ಅಂಜನೀಪುತ್ರ ಮಾರುತಿಯನ್ನು ಅರಿತಿದ್ದೇವೆ. ವಾಯುಪುತ್ರ ಮಾರುತಿಯ ಧ್ಯಾನವನ್ನು ಮಾಡುತ್ತೇವೆ. ಆ ವೀರ ಮಾರುತಿಯು ನಮ್ಮ ಬುದ್ಧಿಗೆ ಸತ್ಪ್ರೇರಣೆ ಕೊಡಲಿ.

೭. ಮಾರುತಿಗೆ ಮಾಡುವ ಕೆಲವು ಪ್ರಾರ್ಥನೆಗಳು

ಅ. ಹೇ ಮಾರುತಿ, ನೀನು ಹೇಗೆ ಶ್ರೀರಾಮಚಂದ್ರನ ದಾಸ್ಯ ಭಕ್ತಿಯನ್ನು ಮಾಡಿದೆಯೋ, ಹಾಗೆಯೇ ನನಗೂ ಭಕ್ತಿಯನ್ನು ಮಾಡಲು ಕಲಿಸು, ಇದೇ ನಿನ್ನ ಚರಣಗಳಲ್ಲಿ ಪ್ರಾರ್ಥನೆ !

ಆ. ಹೇ ಮಾರುತಿ, ಧರ್ಮರಕ್ಷಣೆಗಾಗಿ ನೀನು ನನಗೆ ಭಕ್ತಿ ಮತ್ತು ಶಕ್ತಿಯನ್ನು ಕೊಡು, ಇದೇ ನಿನ್ನ ಚರಣಗಳಲ್ಲಿ ಪ್ರಾರ್ಥನೆ ! (ಆಧಾರ : ಸನಾತನದ ಕಿರುಗ್ರಂಥ ಮಾರುತಿ)