‘ವಾಹನವು ಕೆಟ್ಟಿಲ್ಲದಿದ್ದರೂ ಕೆಲವೊಂದು ವಿಶಿಷ್ಟ ಸ್ಥಳದಲ್ಲಿ ಪದೇ ಪದೇ ಅಪಘಾತಗಳಾಗುತ್ತವೆ. ಹಾಗೆಯೇ ವಿಶಿಷ್ಟ ತಿಥಿಗಳಿಗೆ ಉದಾ. ಅಮಾವಾಸ್ಯೆ ಅಥವಾ ಹುಣ್ಣಿಮೆಯಂದು ಅಪಘಾತಗಳಾಗುವ ಪ್ರಮಾಣಹೆಚ್ಚಿರುತ್ತದೆ. ಅಪಘಾತ ಸಂಭವಿಸುವ ವಿವಿಧ ಕಾರಣಗಳು ಮತ್ತು ಅದರ ಉಪಾಯಗಳು ಮುಂದಿನಂತಿವೆ.

೧. ಅಪಘಾತಗಳಾಗುವ ಹಿಂದಿನ ವಿವಿಧ ಕಾರಣಗಳು

೧ ಅ. ವಾಹನವು ಹಾಳಾಗುವುದು : ವಾಹನ ಒಂದು ರೀತಿಯ ಯಂತ್ರವಾಗಿದೆ. ಆದುದರಿಂದ ಅದು ಕೆಟ್ಟು ಹೋಗಬಹುದು ಮತ್ತು ವಾಹನದ ಯಾವುದೋ ಒಂದುಭಾಗ ನಿಷ್ಕ್ರಿಯವಾಗಬಹುದು, ಉದಾ. ವಾಹನದ ಬ್ರೇಕ್ ಹಿಡಿಯದಿರುವುದು, ವಾಹನದ ಟೈಯರ್ ಆಕಸ್ಮಿಕ ಪಂಕ್ಚರ್ ಆಗುವುದು ಇತ್ಯಾದಿ. ವಾಹನದ ಸರ್ವಿಸಿಂಗ್ ಮಾಡಿ ಅದರ ದುರಸ್ತಿಯನ್ನು ಆಯಾ ಸಮಯದಲ್ಲಿ ಮಾಡಿದರೂ ಯಂತ್ರದಲ್ಲಿ ಆಕಸ್ಮಿಕವಾಗಿ ಯಾವುದೇ ಸಮಯದಲ್ಲಿಯೂ ಹಾಳಾಗಬಹುದು. ಇದರಿಂದಾಗಿ ವಾಹನದ ಅಪಘಾತವಾಗಬಹುದು.

೧ ಆ. ವಾಹನ ಚಾಲಕನು ಸಾರಿಗೆಯ ನಿಯಮ ಪಾಲಿಸದಿರುವುದರಿಂದ ಅಪಘಾತವಾಗುವುದು : ಅನೇಕಬಾರಿ ವಾಹನದ ಚಾಲಕನು ಸಾರಿಗೆಯ ನಿಯಮಗಳನ್ನು ಪಾಲಿಸದೆ ವಾಹನ ನಡೆಸುತ್ತಿರುತ್ತಾನೆ. ಉದಾ. ಎದುರುಗಡೆಯಿಂದ ವಾಹನ ಬರುತ್ತಿದ್ದರೂ ಸ್ಥಳಾವಕಾಶ ಇಲ್ಲದಿರುವಾಗಲೂ ಇನ್ನೊಂದು ವಾಹನವನ್ನು ಹಿಂದಿಕ್ಕುವುದು (ಓವರ್‌ಟೇಕ್ ಮಾಡುವುದು), ತಿರುವು ಇರುವಲ್ಲಿ ವಾಹನದ ವೇಗ ಕಡಿಮೆ ಮಾಡದೇ ಓಡಿಸಿದ್ದರಿಂದ ವಾಹನ ಸರಿಯಾಗಿ ಹೊರಳಿಸಲು ಬರದಿರುವುದು ಮತ್ತು ವಾಹನವು ಗಿಡಕ್ಕೆ ಅಥವಾ ಗೋಡೆಗೆ ಡಿಕ್ಕಿ ಹೊಡೆಯುವುದು.

೧ ಇ. ನಿರ್ದಿಷ್ಟ ಸ್ಥಳದಲ್ಲಿ ವಿವಿಧ ವಾಹನಗಳ ಅಪಘಾತವಾಗುವ ಕಾರಣಗಳು : ನಿರ್ದಿಷ್ಟ ಸ್ಥಳವು ಕೆಟ್ಟ ಶಕ್ತಿಯಿಂದ ಬಾಧೆಗೊಳಗಾಗಿದ್ದರೆ, ಆ ಸ್ಥಳದಲ್ಲಿ ಸ್ಥಾನದೋಷ ನಿರ್ಮಾಣವಾಗುತ್ತದೆ. ಆ ಸ್ಥಾನದಲ್ಲಿ ನಿರ್ದಿಷ್ಟ ಪ್ರಕಾರದ ಅತೃಪ್ತ ಕೆಟ್ಟ ಶಕ್ತಿಗಳ ವಾಸವಿದ್ದು ಅದರ ಶಕ್ತಿ ನಿರ್ದಿಷ್ಟ ಸ್ಥಾನಕ್ಕೆ ಸೀಮಿತವಾಗಿ ಕಾರ್ಯನಿರತವಾಗಿರುತ್ತದೆ. ಕೆಟ್ಟ ಶಕ್ತಿಗಳು ವಿಘ್ನಸಂತೋಷಿ, ಅಂದರೆ ಇತರರು ಸಂಕಟದಲ್ಲಿರುವುದನ್ನು ಕಂಡಾಗ ಸುಖ ಪಡುತ್ತವೆ. ಆದುದರಿಂದ ಆ ವಾಹನದ ಅಪಘಾತ ಮಾಡಿಸಲು ಕಾರ್ಯನಿರತವಾಗಿರುತ್ತವೆ. ಕೆಟ್ಟ ಶಕ್ತಿಯಿಂದ ಭರಿತವಾಗಿರುವ ಸ್ಥಳದಲ್ಲಿ ಯಾವುದಾದರೂ ವಾಹನ ಪ್ರವೇಶಿಸಿದಾಗ ಕೆಟ್ಟ ಶಕ್ತಿಯು ವಾಹನದ ಮೇಲೆ ಸಂಪೂರ್ಣ ನಿಯಂತ್ರಣ ಪಡೆದು ಯಂತ್ರವನ್ನು ಹಾಳು ಮಾಡಿ ವಾಹನಗಳನ್ನು ನಿಲ್ಲಿಸುತ್ತವೆ ಅಥವಾ ವಾಹನದ ಮೇಲಿನ ಚಾಲಕನ ನಿಯಂತ್ರಣ ತಪ್ಪಿಸಿ ಅದುವೇ ವಾಹನದ ನಿಯಂತ್ರಣ ಪಡೆದು ಅದು ಗಿಡ ಅಥವಾ ವ್ಯಕ್ತಿಗಳಿಗೆ ಅಥವಾ ಇತರ ವಾಹನಗಳಿಗೆ ಡಿಕ್ಕಿ ಹೊಡೆದು ವಾಹನದ ಅಪಘಾತ ಮಾಡಿಸುತ್ತವೆ.

೧ ಈ. ನಿರ್ದಿಷ್ಟ ತಿಥಿಗೆ ವಾಹನಗಳ ಅಪಘಾತವಾಗುವ ಕಾರಣಗಳು : ನಿರ್ದಿಷ್ಟ ತಿಥಿಗೆ, ಉದಾ. ಅಮಾವಾಸ್ಯೆ ಅಥವಾ ಹುಣ್ಣಿಮೆಗೆ ವಾತಾವರಣದಲ್ಲಿ ಕೆಟ್ಟ ಶಕ್ತಿಗಳ ಪ್ರಭಾವ ಹೆಚ್ಚಿರುತ್ತದೆ. ಆದುದರಿಂದ ಈ ದಿನಗಳಿಗೆ ‘ದೂಷಿತ ಕಾಲ ಎಂದು ಹೇಳಲಾಗುತ್ತದೆ. ಈ ದಿನಗಳಲ್ಲಿ ವಾತಾವರಣದಲ್ಲಿ ಮುಕ್ತವಾಗಿ ಸಂಚರಿಸುವ ಕೆಟ್ಟ ಶಕ್ತಿಗಳ ಪ್ರಮಾಣ ಇತರ ದಿನಗಳ ತುಲನೆಯಲ್ಲಿ ಹೆಚ್ಚಿರುತ್ತದೆ. ಈ ಕೆಟ್ಟ ಶಕ್ತಿಗಳು ವಾಹನ ಅಥವಾ ಚಾಲಕ ಇವುಗಳ ನಿಯಂತ್ರಣ ಪಡೆದು ಅಪಘಾತವನ್ನು ಮಾಡಿಸುತ್ತವೆ.

೨. ವಾಹನದ ಅಪಘಾತವಾಗುವ ಕಾರಣಗಳು, ಅಪಘಾತಕ್ಕೆ ಸಂಬಂಧಪಟ್ಟ ಘಟಕಗಳು, ಅಪಘಾತವಾಗುವ ಪ್ರಮಾಣ ಮತ್ತು ಉಪಾಯ

೩. ವಾಹನದ ಅಪಘಾತವನ್ನು ತಪ್ಪಿಸಲು ಮಾಡಬೇಕಾದ ವಿವಿಧ ಉಪಾಯಗಳು

೩ ಅ. ವಾಹನ ಚಾಲಕನು ಸಾರಿಗೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು : ಚಾಲಕನು ಸಾರಿಗೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ, ಅವನ ಕ್ರಿಯಮಾಣ ಕರ್ಮದ ಯೋಗ್ಯ ಬಳಕೆಯಾಗಿ ಅವನು ವಾಹನ ಓಡಿಸುವಾಗ ತಪ್ಪುಗಳು ಆಗುವುದಿಲ್ಲ ಮತ್ತು ಮುಂದೆ ನಡೆಯುವ ಅಪಘಾತಗಳು ತಡೆಯಲ್ಪಡುತ್ತವೆ. ಇದಕ್ಕಾಗಿ ವಾಹನ ಚಾಲಕನು ಸ್ವಭಾವದೋಷ ನಿರ್ಮೂಲನೆ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆ ನಡೆಸುವುದರಿಂದ ‘ಸ್ವಂತ ಮನಸ್ಸಿನಂತೆ ಮಾಡುವುದು, ಉದ್ವೇಗದಿಂದ ಕೃತಿ ಮಾಡುವುದು, ಅವಸರ ಮಾಡುವುದು, ಇತರರ ಮಾತು ಕೇಳದಿರುವುದು ಇತ್ಯಾದಿ’ ಘಾತಕ ಸ್ವಭಾವದೋಷ ಮತ್ತು ಅಹಂನ ಅಂಶಗಳು ಇವುಗಳ ಮೇಲೆ ನಿಯಂತ್ರಣವಿಡಲು ಸಾಧ್ಯವಾಗುತ್ತದೆ ಮತ್ತು ಸಂಭಾವ್ಯ ಅಪಘಾತ ತಡೆಯಬಹುದು.

೩ ಆ. ವಾಹನಕ್ಕೆ ಸಂಬಂಧಪಟ್ಟ ಆಧ್ಯಾತ್ಮಿಕ ಉಪಾಯ ಮಾಡುವುದು : ವಾಹನವನ್ನು ಉಪ್ಪುನೀರಿನಿಂದ ತೊಳೆಯಬೇಕು ಮತ್ತು ಅದರ ಸುತ್ತಲು ಊದುಬತ್ತಿಯನ್ನು ತಿರುಗಿಸಬೇಕು. ಇದರಿಂದಾಗಿ ವಾಹನದಲ್ಲಿನ ಕಪ್ಪು ಶಕ್ತಿ ನಾಶವಾಗುವುದು ಮತ್ತು ವಾಹನದ ಸುತ್ತಲು ಚೈತನ್ಯದ ಸಂರಕ್ಷಣಾ ಕವಚ ನಿರ್ಮಾಣವಾಗುವುದು. ವಾಹನ ಚಾಲಕನು ತನ್ನ ಸುತ್ತಲೂ ಮತ್ತು ವಾಹನದ ಸುತ್ತಲು ಸಂರಕ್ಷಣಾ ಕವಚ ನಿರ್ಮಾಣವಾಗಲು ಪ್ರಾರ್ಥನೆ ಮಾಡುವುದರಿಂದ ಚಾಲಕ ಮತ್ತು ವಾಹನ ಇವರ ಸುತ್ತಲು ಸಂರಕ್ಷಣೆಯ ಕವಚ ನಿರ್ಮಾಣವಾಗುತ್ತದೆ. ವಾಹನದ ಮೇಲೆ ದೇವತೆಯ ಚಿತ್ರ, ನಾಮಪಟ್ಟಿ ಮತ್ತು ಸುರಕ್ಷೆಯ ಯಂತ್ರ ಹಚ್ಚಿ ಪ್ರತಿದಿನ ಪೂಜೆ ಮಾಡಬೇಕು. ಇದರಿಂದ ವಾಹನದಲ್ಲಿ ಮತ್ತು ಅದರ ಸುತ್ತಲು ಉತ್ತಮ ಶಕ್ತಿ ಕಾರ್ಯನಿರತವಾಗುತ್ತದೆ. ವಾಹನಕ್ಕೆ ತೆಂಗಿನಕಾಯಿ ಅಥವಾ ಲಿಂಬೆಹಣ್ಣಿನಿಂದ ದೃಷ್ಟಿ ತೆಗೆದುದರಿಂದ ವಾಹನದಲ್ಲಿನ ಕೆಟ್ಟ ಶಕ್ತಿ ಕಡಿಮೆಯಾಗಿ ವಾಹನದತ್ತ ತೊಂದರೆದಾಯಕ ಶಕ್ತಿ ಆಕರ್ಷಿತವಾಗುವುದಿಲ್ಲ.

೩ ಇ. ಸ್ಥಾನದೋಷವನ್ನು ದೂರಗೊಳಿಸಲು ಸ್ಥಾನದೇವತೆಯ ಸ್ಥಾಪನೆ ಮಾಡುವುದು : ಯಾವ ಒಂದು ನಿರ್ಧಿಷ್ಟ ಸ್ಥಳದಲ್ಲಿ ಪುನಃ ಪುನಃ ಅಪಘಾತಗಳು ಸಂಭವಿಸುತ್ತವೆ, ಆ ಸ್ಥಳದಲ್ಲಿ ಓರ್ವ ಸಂತರ ಶುಭಹಸ್ತದಿಂದ ಹನುಮಂತ ಅಥವಾ ಇತರ ದೇವತೆಗಳ ಮೂರ್ತಿಯನ್ನು ಸ್ಥಾನದೇವತೆಯ ರೂಪದಲ್ಲಿ ಸ್ಥಾಪಿಸಬೇಕು. ಇದರಿಂದಾಗಿ ಆ ಸ್ಥಾನದಲ್ಲಿ ತುಂಬಿರುವ ತೊಂದರೆಯುಕ್ತ ಕಪ್ಪು ಶಕ್ತಿ ನಾಶವಾಗಿ ಅಲ್ಲಿ ದೈವೀ ಊರ್ಜೆ ಕಾರ್ಯನಿರತವಾಗುತ್ತದೆ. ಆದುದರಿಂದ ನಿರ್ಧಿಷ್ಟ ಸ್ಥಳದಲ್ಲಿ ಸಂಚಾರ ಮಾಡುವಕೆಟ್ಟ ಶಕ್ತಿಗಳಿಗೆ ವಾಹನದ ಅಪಘಾತ ಮಾಡಿಸಲು ಆಗುವುದಿಲ್ಲ. ಕೆಲವು ಸ್ಥಳಗಳಲ್ಲಿ ಮಾರ್ಗದಲ್ಲಿ ಸ್ಥಾನದೇವತೆಯ ಸಣ್ಣ ಮಂದಿರ ಅಥವಾ ಗುಡಿ ಇರುತ್ತದೆ, ಪ್ರಯಾಣ ಮಾಡುವ ವ್ಯಕ್ತಿಯು ಯಾವಾಗ ಇಂತಹ ಸ್ಥಾನದೇವತೆಗೆ ನಮಸ್ಕಾರ ಮಾಡಿ ಅವರ ಆಶೀರ್ವಾದ ಪಡೆದು ನಂತರ ಮುಂದಿನ ಪ್ರಯಾಣ ಮಾಡುತ್ತಾರೆ, ಆಗ ಆ ಸ್ಥಾನದೇವತೆಯ ಕೃಪಾಶೀರ್ವಾದದಿಂದ ಅವರಿಗೆ ಅಪಘಾತ ಸಂಭವಿಸುವುದಿಲ್ಲ.

೩ ಈ. ದೂಷಿತ ಸಮಯದಲ್ಲಿ ಪ್ರಯಾಣ ಮಾಡುವ ಮೊದಲು ಆಧ್ಯಾತ್ಮಿಕ ಉಪಾಯಗಳನ್ನು ಹೆಚ್ಚಿಸಬೇಕು : ಸಾಧ್ಯವಿದ್ದರೆ ಅಮಾವಾಸ್ಯೆ ಅಥವಾ ಹುಣ್ಣಿಮೆ ಇವುಗಳಂತಹ ತಿಥಿಗೆ ಪ್ರಯಾಣ ಮಾಡಬಾರದು. ಒಂದುವೇಳೆ ಅಮಾವಾಸ್ಯೆ ಅಥವಾ ಹುಣ್ಣಿಮೆಗಳಂತಹ ತಿಥಿಗಳಿಗೆ, ಅಂದರೆ ದೂಷಿತ ಸಮಯದಲ್ಲಿ ಪ್ರಯಾಣ ಮಾಡುವುದಾದರೆ, ವಾಹನ ಚಾಲಕನು ವಾಹನಕ್ಕೆ ಮೇಲೆ ಹೇಳಿದಂತೆ ಮತ್ತು ತನ್ನ ಆಧ್ಯಾತ್ಮಿಕ ಉಪಾಯ ಪೂರ್ಣಗೊಳಿಸಬೇಕು. ವಾಹನ ಓಡಿಸುವಾಗ ಸಂತರ ಧ್ವನಿಯಲ್ಲಿನ ಭಜನೆ ಹಚ್ಚಿಡಬೇಕು ಮತ್ತು ಸತತ ಪ್ರಾರ್ಥನೆ ಹಾಗೂ ನಾಮಜಪ ಮಾಡಿಕೊಂಡು ವಾಹನ ಸಾವಕಾಶವಾಗಿ ಓಡಿಸಬೇಕು.

೪. ವಾಹನದ ಬಗ್ಗೆ ಸೂಕ್ಷ್ಮ-ಪರೀಕ್ಷೆ ಮಾಡುವಾಗ ಕಂಡುಬಂದ ವೈಶಿಷ್ಟ್ಯಪೂರ್ಣ ಅಂಶಗಳು

೪ ಅ. ಅಪಘಾತವಾಗುವ ಮುನ್ನ ವಾಹನದ ಮೇಲೆ ಕೆಟ್ಟ ಶಕ್ತಿಯು ನಿಯಂತ್ರಣ ಪಡೆದಿರುವುದು : ಅಪಘಾತವಾಗುವ ಮೊದಲು ಒಂದು ವಾಹನದ ಕಡೆಗೆ ನೋಡುವಾಗ ಕೆಟ್ಟ ಶಕ್ತಿಗಳು ವಾಹನದ ನಿಯಂತ್ರಣ ಪಡೆದಿರುವುದರ ಅರಿವಾಗುತ್ತದೆ. ಆಗ ವಾಹನದ ಕಡೆಗೆ ಸೂಕ್ಷ್ಮದಲ್ಲಿ ಕಪ್ಪು ಬಣ್ಣದ, ಕೋಡು ಮತ್ತು ಹಲ್ಲುಗಳಿರುವ ಚಿತ್ರ-ವಿಚಿತ್ರ ಹಾಗೂ ರಾಕ್ಷಸನಂತೆ ಭಯಂಕರವಾಗಿ ಕಾಣಿಸುವ ಕೆಟ್ಟ ಶಕ್ತಿಗಳ ರೂಪ ಕಾಣಿಸುತ್ತದೆ.

೪ ಆ. ವಾಹನದ ಅಪಘಾತ ಸಂಭವಿಸಿದ ನಂತರ ಕಾಣಿಸುವ ದೃಶ್ಯ : ವಾಹನದ ಸುತ್ತಲು ಆವರಣ ಬಂದಿರುವಾಗ ವಾಹನದ ಕಡೆಗೆ ನೋಡಿದಾಗ ಒಳ್ಳೆಯದೆನಿಸುವುದಿಲ್ಲ ಮತ್ತು ವಾಹನದ ಸುತ್ತಲು ಕಪ್ಪು ಹೊಗೆ ಅಥವಾ ಜಿಗುಟಾದ ಕಪ್ಪು ದ್ರವ ಹರಡಿರುವುದು ಕಾಣಿಸುತ್ತದೆ.

೪ ಇ. ವಾಹನಕ್ಕೆ ತೆಂಗಿನಕಾಯಿಯಿಂದ ದೃಷ್ಟಿ ತೆಗೆಯುವುದು : ತೆಂಗಿನಕಾಯಿ ಅಥವಾ ಲಿಂಬೇಹಣ್ಣಿನಿಂದ ದೃಷ್ಟಿ ತೆಗೆದಾಗ ವಾಹನದ ಸುತ್ತಲು ಅಥವಾ ವಾಹನದ ಒಳಭಾಗದಲ್ಲಿ ಸಂಗ್ರಹಿಸಲ್ಪಟ್ಟ ಹೊಗೆಯಂತಹ ಕಪ್ಪು ಶಕ್ತಿ ತೆಂಗಿನಕಾಯಿ ಅಥವಾ ಲಿಂಬೆಹಣ್ಣಿನಕಡೆಗೆ ಆಕರ್ಶಿತವಾಗುತ್ತಿರುವುದು ಕಾಣಿಸುತ್ತದೆ.

೪ ಈ. ವಾಹನದ ಮೇಲೆ ದೇವತೆಯ ಚಿತ್ರ, ನಾಮಪಟ್ಟಿ ಅಥವಾ ರಕ್ಷಾಯಂತ್ರ ಹಚ್ಚುವುದು : ವಾಹನದ ಮೇಲೆ ದೇವತೆಗಳ ಚಿತ್ರ ಅಥವಾ ನಾಮಪಟ್ಟಿ ಅಥವಾ ಯಂತ್ರ ಹಚ್ಚಿದಾಗ ವಾಹನದಲ್ಲಿ ಹಳದಿ ಬಣ್ಣದ ಪ್ರಕಾಶ ಹಬ್ಬಿರುವುದು ಕಾಣಿಸುತ್ತದೆ.

೪ ಉ. ವಾಹನದ ಸುತ್ತಲೂ ಉರಿಸಿದ ಊದುಬತ್ತಿಯಿಂದ ಬೆಳಗಬೇಕು : ವಾಹನದ ಸುತ್ತಲು ಉರಿಸಿದ ಊದುಬತ್ತಿಯಿಂದ ಬೆಳಗಿ ವಾಹನದ ಸುತ್ತಲೂ ಕೆಂಪು ಬಣ್ಣದ ಪ್ರಕಾಶದ ವಲಯ ಕಾರ್ಯನಿರತವಾಗಿರುವುದು ತೋರುತ್ತದೆ.

ಕೃತಜ್ಞತೆ : ‘ದೇವರೇ, ನೀನೇ ನಮಗೆ ವಾಹನದ ಅಪಘಾತ ಸಂಭವಿಸುವ ಹಿಂದಿನ ಕಾರಣಗಳು ಮತ್ತು ಅದರ ಮೇಲಿನ ಉಪಾಯ ಹೇಳಿರುವೆ. ಇದಕ್ಕಾಗಿ ನಾವು ನಿನ್ನ ಚರಣಗಳಲ್ಲಿ ಕೃತಜ್ಞತೆ ಸಲ್ಲಿಸುತ್ತೇವೆ. – ಕು. ಮಧುರಾ ಭೊಸಲೆ (ಸೂಕ್ಷ್ಮದಿಂದ ಪ್ರಾಪ್ತಿಯಾದ ಜ್ಞಾನ), ಸನಾತನ ಆಶ್ರಮ, ರಾಮನಾಥಿ, ಗೋವಾ. (೪.೨.೨೦೧೯, ರಾತ್ರಿ ೧೧.೩೦)