ಕರ್ಣಾವತಿ (ಗುಜರಾತ) – ಒಂದು ಮಹತ್ವದ ತೀರ್ಪಿನಲ್ಲಿ, ಗುಜರಾತ ಉಚ್ಚ ನ್ಯಾಯಾಲಯ ರಾಜ್ಯ ಸರಕಾರಕ್ಕೆ ‘ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು ತಮ್ಮ ಸಾಂವಿಧಾನಿಕ ಜವಾಬ್ದಾರಿ’ ಎಂದು ನೆನಪಿಸಿದೆ. ವಡೋದರಾದ ಹಿಂದೂ ಪ್ರಾಬಲ್ಯದ ಪ್ರದೇಶದಲ್ಲಿ ಮುಸ್ಲಿಂ ವ್ಯಾಪಾರಿಯೊಬ್ಬರಿಗೆ ಅಂಗಡಿ ತೆರೆಯಲು ಬರುತ್ತಿರುವ ಅಡೆತಡೆಗಳನ್ನು ತಕ್ಷಣವೇ ನಿವಾರಿಸುವಂತೆ ನ್ಯಾಯಾಲಯವು ಆಡಳಿತಕ್ಕೆ ನಿರ್ದೇಶನ ನೀಡಿದೆ. ನ್ಯಾಯಾಧೀಶ ಎಚ್.ಡಿ. ಸುತಾರ ಅವರ ಏಕ ಸದಸ್ಯ ಪೀಠವು ಈ ನಿರ್ಧಾರವನ್ನು ನೀಡಿದೆ. ಅರ್ಜಿದಾರರಾದ ಓನಾಲಿ ಧೋಲಕಾವಾಲಾ ಅವರು ತಮ್ಮ ಅಂಗಡಿಯನ್ನು ತೆರೆಯದಂತೆ ನಿರಂತರವಾಗಿ ತಡೆಯಲಾಗುತ್ತಿದೆ ಎಂದು ಆರೋಪಿಸಿದ್ದರು, ಏಕೆಂದರೆ ಕೆಲವು ಸ್ಥಳೀಯರು ಮುಸ್ಲಿಂ ವ್ಯಾಪಾರಿಯನ್ನು ಆ ಪ್ರದೇಶದಲ್ಲಿ ವ್ಯಾಪಾರ ಮಾಡಲು ಬಿಡಲು ಬಯಸುವುದಿಲ್ಲ.
೧. ಧೋಲಕಾವಾಲಾ ಅವರು 2016 ರಲ್ಲಿ ಚಂಪಾನೇರ ದರ್ವಾಜಾ ಬಳಿಯ ಇಬ್ಬರು ಹಿಂದೂ ಸಹೋದರರಿಂದ ಕಾನೂನುಬದ್ಧವಾಗಿ ಅಂಗಡಿಯನ್ನು ಖರೀದಿಸಿದ್ದರು; ಆದರೆ ಈ ಪ್ರದೇಶವು ‘ಗುಜರಾತ ಅಶಾಂತ ಪ್ರದೇಶ ಕಾಯಿದೆ, 1991’ ಅಡಿಯಲ್ಲಿ ಬರುತ್ತದೆ, ಇದು ಆಸ್ತಿ ವ್ಯವಹಾರಗಳನ್ನು ನಿಯಂತ್ರಿಸುತ್ತದೆ ಮತ್ತು ಯಾವುದೇ ಆಸ್ತಿಯನ್ನು ಖರೀದಿಸಲು ಜಿಲ್ಲಾಧಿಕಾರಿಗಳ ಪೂರ್ವಾನುಮತಿ ಅಗತ್ಯವಿದೆ.
೨. ಈ ಹಿಂದೂ ಪ್ರಾಬಲ್ಯದ ಪ್ರದೇಶದ ಜನರು ಮುಸ್ಲಿಮರಿಗೆ ಆಸ್ತಿ ಮಾರಾಟ ಮಾಡುವುದನ್ನು ವಿರೋಧಿಸಿದ್ದರು ಮತ್ತು ಈ ವ್ಯವಹಾರವನ್ನು ರದ್ದುಗೊಳಿಸಲು ನ್ಯಾಯಾಲಯದ ಮೊರೆ ಹೋಗಿದ್ದರು.
೩. ಈ ಹಿಂದೂ ಪ್ರಾಬಲ್ಯದ ಪ್ರದೇಶದಲ್ಲಿ ಮುಸ್ಲಿಮರಿಗೆ ಆಸ್ತಿ ನೀಡುವುದರಿಂದ ಪ್ರದೇಶದ ಜನಸಂಖ್ಯಾ ಸಮತೋಲನವು ಹಾಳಾಗುತ್ತದೆ ಮತ್ತು ಕೋಮು ಧ್ರುವೀಕರಣ ಸಂಭವಿಸಬಹುದು ಎಂದು ಸ್ಥಳೀಯರು ವಾದಿಸಿದ್ದರು.
೪. ಆದಾಗ್ಯೂ, ಫೆಬ್ರವರಿ 2023 ರಲ್ಲಿ, ಹೈಕೋರ್ಟ್ ಈ ವಾದವನ್ನು ತಿರಸ್ಕರಿಸಿತು ಮತ್ತು ಇಬ್ಬರೂ ಹಿಂದೂ ಅರ್ಜಿದಾರರಿಗೆ ತಲಾ 25 ಸಾವಿರ ರೂಪಾಯಿ ದಂಡ ವಿಧಿಸಿತು. ಅಲ್ಲದೆ, ಆಸ್ತಿಯ ಕಾನೂನು ಮಾಲೀಕರನ್ನು ಅವರ ಹಕ್ಕಿನಿಂದ ವಂಚಿತಗೊಳಿಸಲು ಅವರು ಪ್ರಯತ್ನಿಸುತ್ತಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.
೫. ಇದರ ನಂತರವೂ ಸ್ಥಳೀಯರು ಧೋಲಕಾವಾಲಾ ಅವರಿಗೆ ಅಂಗಡಿ ತೆರೆಯಲು ಬಿಡಲಿಲ್ಲ ಮತ್ತು ಕಸವನ್ನು ಹಾಕಿ ಅಂಗಡಿಯ ಪ್ರವೇಶ ದ್ವಾರವನ್ನು ನಿರ್ಬಂಧಿಸಿದರು.
೬. ಈ ಬಗ್ಗೆ ಧೋಲಕಾವಾಲಾ ಅವರು ಮತ್ತೊಮ್ಮೆ ಉಚ್ಚ ನ್ಯಾಯಾಲಯದ ಮೊರೆ ಹೋದರು. ಇದಕ್ಕೆ ನ್ಯಾಯಾಲಯವು, ಪ್ರತಿಯೊಬ್ಬ ನಾಗರಿಕನಿಗೆ ಅವನ ಕಾನೂನು ಹಕ್ಕುಗಳನ್ನು ದೊರಕಿಸಿಕೊಡುವುದು ರಾಜ್ಯ ಸರಕಾರದ ಜವಾಬ್ದಾರಿಯಾಗಿದೆ, ಎಂದು ಸ್ಪಷ್ಟಪಡಿಸಿದೆ.