
ದಮಾಸ್ಕಸ್ (ಸಿರಿಯಾ) – ಗ್ರೀಕ್ ಆರ್ಥೊಡಾಕ್ಸ್ ಸೇಂಟ್ ಇಲಿಯಾಸ್ ಚರ್ಚ್‌ನಲ್ಲಿ ಜೂನ್ 22ರ ರಾತ್ರಿ ನಡೆದ ಆತ್ಮಾಹುತಿ ದಾಳಿಯಲ್ಲಿ ಕನಿಷ್ಠ 22 ಮಂದಿ ಸಾವನ್ನಪ್ಪಿದ್ದಾರೆ ಹಾಗೂ 63 ಮಂದಿ ಗಾಯಗೊಂಡಿದ್ದಾರೆ. ಈ ಚರ್ಚ್ ನಲ್ಲಿ 150 ರಿಂದ 350 ಜನರು ಪ್ರಾರ್ಥನೆಗಾಗಿ ಸೇರಿದ್ದ ಸಮಯದಲ್ಲಿ ಈ ದಾಳಿ ನಡೆದಿದೆ. ಇಸ್ಲಾಮಿಕ್ ಸ್ಟೇಟ್‌ಗೆ ಸಂಬಂಧಿಸಿದ ಭಯೋತ್ಪಾದಕನೊಬ್ಬ ಚರ್ಚ್‌ಗೆ ನುಗ್ಗಿ, ಮೊದಲು ಮನಬಂದಂತೆ ಗುಂಡು ಹಾರಿಸಿದನು ನಂತರ ಬಾಂಬ್ ಸ್ಫೋಟದ ಮೂಲಕ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದಾನೆ.
ಸಿರಿಯಾದ ಮಾಹಿತಿ ಸಚಿವ ಹಮ್ಜಾ ಅಲ್-ಮುಸ್ತಫಾ ಅವರು ಈ ದಾಳಿಯನ್ನು ‘ರಾಷ್ಟ್ರೀಯ ಏಕತೆಯ ಮೇಲಿನ ದಾಳಿ’ ಎಂದು ಬಣ್ಣಿಸಿ ಎಲ್ಲಾ ಸಮುದಾಯಗಳಿಗೆ ಶಾಂತಿ ಕಾಪಾಡುವಂತೆ ವಿನಂತಿಸಿದ್ದಾರೆ. ವಿಶ್ವಸಂಸ್ಥೆಯ ವಿಶೇಷ ರಾಯಭಾರಿ ಗೀರ್ ಪೆಡರ್ಸನ್ ಕೂಡ ಈ ಘಟನೆಯನ್ನು ತೀವ್ರವಾಗಿ ಖಂಡಿಸಿ, ತನಿಖೆಗೆ ಒತ್ತಾಯಿಸಿದ್ದಾರೆ.