ಸುಪ್ರಸಿದ್ಧ ಮುರುಡೇಶ್ವರ ದೇವಾಲಯದಲ್ಲಿ ವಸ್ತ್ರ ಸಂಹಿತೆ ಜಾರಿ; ಹಿಂದೂ ಸಂಘಟನೆಗಳ ಸಂಘಟಿತ ಪ್ರಯತ್ನದ ಫಲ !

ರಾಜ್ಯದ ಎಲ್ಲ ದೇವಾಲಯಗಳಲ್ಲಿ ವಸ್ತ್ರ ಸಂಹಿತೆ ಜಾರಿಗೊಳ್ಳಲಿ ! – ಹಿಂದೂ ಜನಜಾಗೃತಿ ಸಮಿತಿ

ಮ್ಹಾತೋಬಾರ ಶ್ರೀ ಮುರುಡೇಶ್ವರ ದೇವಸ್ಥಾನದಲ್ಲಿ ವಸ್ತ್ರಸಂಹಿತೆ ಫಲಕ ಅಳವಡಿಕೆ.

ಮುರುಡೇಶ್ವರ : ವಿಶ್ವ ಪ್ರಸಿದ್ಧ ಮ್ಹಾತೋಬಾರ ಶ್ರೀ ಮುರುಡೇಶ್ವರ ದೇವಸ್ಥಾನದಲ್ಲಿ 22 ಜೂನ್ ರಿಂದ ವಸ್ತ್ರ ಸಂಹಿತೆ ಜಾರಿಗೊಳಿಸಲಾಗಿದೆ. ಹಿಂದೂ ಜನಜಾಗೃತಿ ಸಮಿತಿ, ಕರ್ನಾಟಕ ಮಂದಿರ ಮಹಾಸಂಘ ಮತ್ತು ಅನೇಕ ಹಿಂದೂ ಸಂಘಟನೆಗಳು ಸೇರಿ ಡಿಸೆಂಬರ್ 2022 ರಲ್ಲಿ ದೇವಸ್ಥಾನ ಆಡಳಿತ ಮಂಡಳಿಗೆ ವಸ್ತ್ರ ಸಂಹಿತೆ ಜಾರಿಗೊಳಿಸುವಂತೆ ಮನವಿ ನೀಡಲಾಗಿತ್ತು, ಇದಕ್ಕೆ ಸ್ಪಂದಿಸಿ ಆಡಳಿತ ಮಂಡಳಿಯು ಇದೀಗ ವಸ್ತ್ರಸಂಹಿತೆ ಜಾರಿಗೆ ತಂದಿರುವುದು ಅತ್ಯಂತ ಸ್ವಾಗತಾರ್ಹವಾಗಿದೆ. ಇದರಿಂದ ಪ್ರೇರಣೆ ಪಡೆದು ರಾಜ್ಯದ ಎಲ್ಲ ದೇವಾಲಯಗಲ್ಲಿಯೂ ವಸ್ತ್ರ ಸಂಹಿತೆ ಜಾರಿಗೊಳಿಸಬೇಕಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಮೋಹನ್ ಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದೇವಸ್ಥಾನದ ಆಡಳಿತ ಮಂಡಳಿಗೆ ಮನವಿ ನೀಡುತ್ತಿರುವ ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಶರತ್ ಕುಮಾರ್ (ಡಿಸೆಂಬರ್ 2022)

ಹಿಂದೂ ಜನಜಾಗೃತಿ ಸಮಿತಿಯು ಆಡಳಿತ ಮಂಡಳಿಗೆ ನೀಡಿದ ಮನವಿಯಲ್ಲಿ ಐತಿಹಾಸಿಕವಾಗಿ ಪ್ರಸಿದ್ಧಿ ಪಡೆದ ಮುರುಡೇಶ್ವರ ದೇವಸ್ಥಾನದ ಪಾವಿತ್ರತೆಯನ್ನು ಕಾಪಾಡುವ ದೃಷ್ಟಿಯಿಂದ ಸಾಂಪ್ರದಾಯಿಕ ಉಡುಪು ಕಡ್ಡಾಯ ಮಾಡಬೇಕು. ದೇವಸ್ಥಾನದಲ್ಲಿ ಭಕ್ತರು ದೇವರ ದರ್ಶನ ಪಡೆಯಲು ಬರುವಾಗ ದೇವಾಲಯದ ವಾತಾವರಣವೂ ಅಷ್ಟೇ ಪವಿತ್ರ ಮತ್ತು ಸೂಕ್ತವಾಗಿರಬೇಕು. ಪಾಶ್ಚಾತ್ಯ ಉಡುಪು ಅಥವಾ ತುಂಡು ಉಡುಪು ಧರಿಸಿ ದೇವಸ್ಥಾನಕ್ಕೆ ಬರುವವರಿಗೆ ಪ್ರವೇಶ ನೀಡಬಾರದು. ಭಾರತೀಯ ಸಂಪ್ರದಾಯಿಕ ಉಡುಪು ಧರಿಸಿ ಬರುವವರಿಗೆ ಮಾತ್ರ ದೇವಸ್ಥಾನ ಪ್ರವೇಶಕ್ಕೆ ಅವಕಾಶ ಕೊಡಬೇಕು, ವಸ್ತ್ರ ಸಹಿತೆಗೆ ಜಾರಿಗೆ ಬಂದ ನಂತರ ದೇವಾಲಯದ ಅಂಗಳದಲ್ಲಿ ಇದರ ಬಗ್ಗೆ ಮಾಹಿತಿ ನೀಡುವ ಫಲಕವನ್ನೂ ಅಳವಡಿಸಬೇಕು ಎಂದು ಆಗ್ರಹಿಸಲಾಗಿತ್ತು. ಎಲ್ಲ ಸಂಘಟನೆಗಳು ಒಟ್ಟಾಗಿ ಪ್ರಯತ್ನಿಸಿದರ ಫಲವಾಗಿ ಇಂದು ಈ ವಿಜಯ ಸಿಕ್ಕಿದೆ.

ಈ ಹಿಂದೆ ಸಮಿತಿಯು ಮಾಡಿದ ಮನವಿಯ ನಂತರ ವಿಶ್ವ ಪ್ರಸಿದ್ಧ ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನ, ಶೃಂಗೇರಿ ಶಾರದಾಂಬೆ ದೇವಸ್ಥಾನ ಸೇರಿದಂತೆ ರಾಜ್ಯದ 250ಕ್ಕೂ ಹೆಚ್ಚು ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಜಾರಿಗೊಳಿಸಲಾಗಿದೆ.