Phalgam : ಪಹಲ್ಗಾಮ ದಾಳಿಯಲ್ಲಿ ಭಯೋತ್ಪಾದಕರಿಗೆ ಸಹಾಯ ಮಾಡಿದ ಇಬ್ಬರ ಬಂಧನ

ಪಹಲ್ಗಾಮ (ಜಮ್ಮು-ಕಾಶ್ಮೀರ) – ಏಪ್ರಿಲ್ 22 ರಂದು ಪಹಲ್ಗಾಮನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ, ದಾಳಿಕೋರರಿಗೆ ಆಶ್ರಯ ನೀಡಿದ ಆರೋಪದ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಇಬ್ಬರನ್ನು ಬಂಧಿಸಿದೆ. ಬಂಧಿತರು ಪಹಲ್ಗಾಮ ನಿವಾಸಿಗಳಾದ ಪರ್ವೇಜ್ ಅಹ್ಮದ್ ಜೋಥರ್ ಮತ್ತು ಬಶೀರ್ ಅಹ್ಮದ್ ಜೋಥರ್ ಎಂದು ಗುರುತಿಸಲಾಗಿದೆ. ಈ ದಾಳಿಯನ್ನು ನಡೆಸಿದ ಭಯೋತ್ಪಾದಕರನ್ನು ಇನ್ನೂ ಬಂಧಿಸಲಾಗಿಲ್ಲ. ಅವರ ರೇಖಾಚಿತ್ರಗಳನ್ನು ಬಿಡುಗಡೆ ಮಾಡಲಾಗಿದ್ದು, ಮಾಹಿತಿ ನೀಡಿದವರಿಗೆ ಬಹುಮಾನ ಘೋಷಿಸಲಾಗಿದೆ.

ಪರ್ವೇಜ್ ಮತ್ತು ಬಶೀರ್ ಅವರು ದಾಳಿಗೆ ಮುನ್ನ ಭಯೋತ್ಪಾದಕರಿಗೆ ಹಿಲ್ ಪಾರ್ಕ್‌ನಲ್ಲಿರುವ ತಾತ್ಕಾಲಿಕ ಗುಡಿಸಲಿನಲ್ಲಿ ಆಶ್ರಯ ನೀಡಿದ್ದರು ಮತ್ತು ಅವರಿಗೆ ಆಹಾರ ಹಾಗೂ ಇತರ ಸೌಲಭ್ಯಗಳನ್ನು ಒದಗಿಸಿದ್ದರು. ಭಯೋತ್ಪಾದಕರು ಇದೇ ಸ್ಥಳದಲ್ಲಿ ತಂಗಿದ್ದುಕೊಂಡು ಪ್ರವಾಸಿ ತಾಣದ ಮಾಹಿತಿ ಸಂಗ್ರಹಿಸಿದ್ದರು.

ದಾಳಿಕೋರರು ಪಾಕಿಸ್ತಾನಿ ಪ್ರಜೆಗಳು!

ತನಿಖಾ ದಳದ ವಿಚಾರಣೆಯಲ್ಲಿ, ದಾಳಿಯಲ್ಲಿ ಭಾಗಿಯಾಗಿದ್ದ ಮೂವರು ಭಯೋತ್ಪಾದಕರನ್ನು ಗುರುತಿಸಲಾಗಿದೆ. ಈ ಮೂವರು ಲಷ್ಕರ್-ಎ-ತೊಯ್ಬಾ ಸಂಘಟನೆಗೆ ಸೇರಿದವರಾಗಿದ್ದು, ಪಾಕಿಸ್ತಾನಿ ಪ್ರಜೆಗಳು ಎಂದು ತಿಳಿದುಬಂದಿದೆ.