ಕೇರಳದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ 61 ವರ್ಷದ ವ್ಯಕ್ತಿಗೆ 145 ವರ್ಷಗಳ ಕಠಿಣ ಜೈಲು ಶಿಕ್ಷೆ!

ಮಲಪ್ಪುರಂ (ಕೇರಳ) – ಇಲ್ಲಿ 12 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ 61 ವರ್ಷದ ದೋಷಿ ಕೃಷ್ಣನ್ ಗೆ ನ್ಯಾಯಾಲಯ 145 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ. ನ್ಯಾಯಾಲಯವು ಅವನಿಗೆ 8 ಲಕ್ಷ 77 ಸಾವಿರ ರೂಪಾಯಿ ದಂಡ ವಿಧಿಸಿದೆ, ಮತ್ತು ಸಂತ್ರಸ್ತ ಬಾಲಕಿಗೆ ಪರಿಹಾರ ನೀಡುವಂತೆ ಆದೇಶಿಸಿದೆ. ಆರೋಪಿ ಕೃಷ್ಣನ್ ಅರಿಕೋಡ್‌ನ ಕವನೂರು ನಿವಾಸಿಯಾಗಿದ್ದಾನೆ.

2022ರಲ್ಲಿ ಆರೋಪಿಯು ಸಂತ್ರಸ್ತ ಬಾಲಕಿಗೆ ಸಿಹಿ ನೀಡುವ ಆಮಿಷವೊಡ್ಡಿ ತನ್ನ ಮನೆಗೆ ಕರೆದೊಯ್ದಿದ್ದಾನೆ. ಆಕೆಯನ್ನು ಕೋಣೆಯಲ್ಲಿ ಕೂಡಿ ಹಾಕಿ 2022ರಿಂದ 2023ರವರೆಗೆ ಅನೇಕ ಬಾರಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಇಷ್ಟೇ ಅಲ್ಲದೆ, ಆರೋಪಿಯು ಸಂತ್ರಸ್ತ ಬಾಲಕಿಗೆ ಅಶ್ಲೀಲ ವೀಡಿಯೊಗಳನ್ನು ನೋಡುವಂತೆ ಬಲವಂತಪಡಿಸಿದ್ದಾನೆ. ಆಕೆ ನಿರಾಕರಿಸಿದಾಗ ಆಕೆಗೆ ಥಳಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಪ್ರಕರಣದ ವಿಚಾರಣೆ ನಡೆಸಿದ ಮಂಜೇರಿಯ ವಿಶೇಷ ‘ಪೋಕ್ಸೋ’ ನ್ಯಾಯಾಲಯವು ಆರೋಪಿಗೆ ‘ಪೋಕ್ಸೋ’ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ 145 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ.