ಏರ್ ಇಂಡಿಯಾದಿಂದ ಶೇ. 15 ರಷ್ಟು ಅಂತರರಾಷ್ಟ್ರೀಯ ವಿಮಾನಯಾನ ರದ್ದು!

ಕರ್ಣಾವತಿ ವಿಮಾನ ಅಪಘಾತ, ಹಾಗೆಯೇ ಮಧ್ಯಪೂರ್ವದ ಯುದ್ಧದ ಪರಿಸ್ಥಿತಿಯಿಂದ ನಿರ್ಧಾರ!

ನವದೆಹಲಿ – ‘ಏರ್ ಇಂಡಿಯಾ’ ತನ್ನ ಅಂತರರಾಷ್ಟ್ರೀಯ ವಿಮಾನಗಳ ಹಾರಾಟಗಳಲ್ಲಿ 15 ಪ್ರತಿಶತ ಕಡಿತಗೊಳಿಸಿದೆ. ಈ ನಿರ್ಧಾರ ಜುಲೈ ಮಧ್ಯದವರೆಗೆ ಜಾರಿಯಲ್ಲಿರುತ್ತದೆ ಎಂದು ಕಂಪನಿ ತಿಳಿಸಿದೆ. ಕರ್ಣಾವತಿಯಲ್ಲಿ ಏರ್ ಇಂಡಿಯಾ ವಿಮಾನ ಅಪಘಾತ, ಇರಾನ್-ಇಸ್ರೇಲ್ ನಡುವೆ ನಡೆಯುತ್ತಿರುವ ಸಂಘರ್ಷ ಮತ್ತು ‘ಬೋಯಿಂಗ್ 787 ಡ್ರೀಮ್‌ಲೈನರ್’ನ ನಡೆಯುತ್ತಿರುವ ಸುರಕ್ಷತಾ ಪರಿಶೀಲನೆಯಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವಿಮಾನ ಕಂಪನಿ ಸ್ಪಷ್ಟಪಡಿಸಿದೆ.

ಏರ್ ಇಂಡಿಯಾ ಪ್ರತಿದಿನ ‘ಬೋಯಿಂಗ್ 787 ಡ್ರೀಮ್‌ಲೈನರ್’, ‘ಬೋಯಿಂಗ್ 777’ ಮತ್ತು ‘ಏರ್‌ಬಸ್ ಎ350’ ವಿಮಾನಗಳ ಮೂಲಕ 70 ಅಂತರರಾಷ್ಟ್ರೀಯ ವಿಮಾನಗಳನ್ನು ನಿರ್ವಹಿಸುತ್ತದೆ. ಮೇಲಿನ ಕಾರಣಗಳಿಂದಾಗಿ ಕಳೆದ 15 ದಿನಗಳಲ್ಲಿ ಏರ್ ಇಂಡಿಯಾಗೆ ಒಟ್ಟು 83 ಹಾರಾಟವನ್ನು ರದ್ದುಗೊಳಿಸಬೇಕಾಯಿತು. ಜೂನ್ 12ರಂದು ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾದ ಬೋಯಿಂಗ್ 787-8 ಡ್ರೀಮ್‌ಲೈನರ್ ವಿಮಾನ ಕರ್ಣಾವತಿಯಲ್ಲಿ ಪತನಗೊಂಡ ನಂತರ ನಾಗರಿಕ ವಿಮಾನಯಾನ ನಿರ್ದೇಶನಾಲಯವು ‘ಬೋಯಿಂಗ್ 787-8’ ಮತ್ತು ‘787-9’ ವಿಮಾನಗಳ ಸಂಪೂರ್ಣ ಪರಿಶೀಲನೆಗೆ ಆದೇಶ ನೀಡಿತು. ಏರ್ ಇಂಡಿಯಾ ಹೊಂದಿರುವ 33 ‘ಬೋಯಿಂಗ್ 787’ ವಿಮಾನಗಳಲ್ಲಿ 26 ವಿಮಾನಗಳ ಪರಿಶೀಲನೆ ಪೂರ್ಣಗೊಂಡಿದ್ದು, ಅವುಗಳನ್ನು ಸೇವೆಗೆ ಅನುಮೋದಿಸಲಾಗಿದೆ.