ಭಾರತವು ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವನ್ನು ರದ್ದುಗೊಳಿಸಿದ್ದರ ಪರಿಣಾಮ
ಇಸ್ಲಾಮಾಬಾದ್ (ಪಾಕಿಸ್ತಾನ) – ಭಾರತವು ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವನ್ನು ನಿಲ್ಲಿಸಿದ್ದರ ಪರಿಣಾಮವು ಈಗ ಗೋಚರಿಸಲು ಪ್ರಾರಂಭಿಸಿದೆ. ಭಾರತವು ಒಂದು ತಿಂಗಳ ಹಿಂದೆ ಬಗಲಿಹಾರ ಮತ್ತು ಸಲಾಲ ಅಣೆಕಟ್ಟುಗಳ ಗೇಟುಗಳನ್ನು ಮುಚ್ಚಿತ್ತು. ಇದು ಪಾಕಿಸ್ತಾನದಲ್ಲಿನ ಚಿನಾಬ್ ನದಿಯ ನೀರಿನ ಮಟ್ಟದ ಮೇಲೆ ಪರಿಣಾಮ ಬೀರುತ್ತಿದೆ. ಪಾಕಿಸ್ತಾನದಲ್ಲಿ ಚಿನಾಬ್ ನದಿಯ ಹರಿವು ಶೇ. 92 ರಷ್ಟು ಕಡಿಮೆಯಾಗಿದೆ. ಸುಮಾರು 20 ದಿನಗಳ ಹಿಂದೆ ಈ ನದಿಯಲ್ಲಿ ನೀರಿನ ಹರಿವು 98 ಸಾವಿರ 200 ಕ್ಯೂಸೆಕ್ ಇತ್ತು. ಈಗ ಅದು ಕೇವಲ 7ಸಾವಿರ 200 ಕ್ಯೂಸೆಕ್ ನಷ್ಟು ಕಡಿಮೆಯಾಗಿದೆ. ಈ ಮಟ್ಟವು 3 ಸಾವಿರ ಕ್ಯೂಸೆಕ್ ಗಿಂತಲೂ ಕಡಿಮೆಯಾಗಬಹುದು. ಪಾಕಿಸ್ತಾನದ ಪಂಜಾಬ ಮತ್ತು ಸಿಂಧ ಪ್ರಾಂತ್ಯಗಳ 6 ಕೋಟಿ 50 ಲಕ್ಷ ರೈತರು ನೀರಾವರಿಗಾಗಿ ಚಿನಾಬ್ ನದಿಯನ್ನು ಅವಲಂಬಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನೀರಿನ ಕೊರತೆಯಿಂದಾಗಿ ಅಲ್ಲಿನ ಶೇ. 40 ಕ್ಕಿಂತ ಹೆಚ್ಚು ಬೆಳೆಗಳು ನಾಶದ ಅಂಚಿನಲ್ಲಿವೆ.
ಖಾರಿಫ್ ಋತುವು ಇತಿಹಾಸದಲ್ಲಿಯೇ ಅತ್ಯಂತ ಕೆಟ್ಟದಾಗಿರುತ್ತದೆ! – ಪಾಕ್ ಕೃಷಿ ಸಚಿವಾಲಯ
ಪಾಕಿಸ್ತಾನವು ಸಿಂಧೂ ನದಿಗೆ ಅಡ್ಡಲಾಗಿ ನಿರ್ಮಿಸಿರುವ ತಾರಬೆಲಾ ಅಣೆಕಟ್ಟಿನಲ್ಲಿ ಮತ್ತು ಝೇಲಂ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಮಂಗಲಾ ಅಣೆಕಟ್ಟಿನಲ್ಲಿಯೂ ನೀರಿನ ತೀವ್ರ ಕೊರತೆಯಿದೆ. ವಿಶ್ವದ 7ನೇ ಅತಿ ದೊಡ್ಡ ಅಣೆಕಟ್ಟಾದ ಮಂಗಲಾ ಅಣೆಕಟ್ಟಿನಲ್ಲಿ ಈಗ 27 ಲಕ್ಷ ಎಕರೆ ಅಡಿ ನೀರು ಉಳಿದಿದೆ. ಈ ಆಣೆಕಟ್ಟಿನ ಒಟ್ಟು ಸಾಮರ್ಥ್ಯ 59 ಲಕ್ಷ ಎಕರೆ ಅಡಿ ಆಗಿದೆ. ಇನ್ನು, ತಾರಬೆಲಾದಲ್ಲಿ ಕೇವಲ 60 ಲಕ್ಷ ಎಕರೆ ಅಡಿ (ಒಟ್ಟು ಸಾಮರ್ಥ್ಯ 116 ಲಕ್ಷ ಎಕರೆ ಅಡಿ) ನೀರು ಉಳಿದಿದೆ. ನೀರಿನ ಪೂರೈಕೆ ಇದೇ ರೀತಿ ಕಡಿಮೆಯಾಗುತ್ತಾ ಹೋದರೆ, ಇಲ್ಲಿಯವರೆಗೆ ಸಂಗ್ರಹಿಸಲಾದ ನೀರಿನಲ್ಲಿ ಶೇ. 50 ರಷ್ಟು ನೀರೂ ಮುಗಿಯಲಿದೆ. ಇದರಿಂದಾಗಿಯೇ ಪಾಕ್ ಕೃಷಿ ಸಚಿವಾಲಯವು, ಈ ಬಾರಿಯ ಖಾರಿಫ್ ಋತುವು ಇತಿಹಾಸದಲ್ಲಿಯೇ ಅತ್ಯಂತ ಕೆಟ್ಟದಾಗಿರುತ್ತದೆ ಎಂದು ಹೇಳಿಕೊಂಡಿದೆ.
ರೈತರು ಇಸ್ಲಾಮಾಬಾದ್ ಗೆ ಪಾದಯಾತ್ರೆ ನಡೆಸಲಿದ್ದಾರೆ!
ನೀರಿನ ಕೊರತೆಯಿಂದಾಗಿ ಇಲ್ಲಿಯವರೆಗೆ 2,200 ಶತಕೋಟಿ ರೂಪಾಯಿಗಳ ನಷ್ಟವಾಗಿದೆ. ನೀರಿನ ಸಮಸ್ಯೆಯನ್ನು ಬಗೆಹರಿಸದಿದ್ದರೆ, ವರ್ಷಾಂತ್ಯದ ವೇಳೆಗೆ ಈ ನಷ್ಟವು 4,500 ಶತಕೋಟಿ ರೂಪಾಯಿಗಳಿಗೆ ತಲುಪಬಹುದು. ಇದರ ಪ್ರಮಾಣ ಒಟ್ಟು ಕೃಷಿ ಉತ್ಪಾದನೆಯ ಶೇ. 23.15 ರಷ್ಟಿದೆ. ಇದರಿಂದಾಗಿ ರೈತ ಸಂಘಟನೆಗಳಲ್ಲಿ ಪಾಕಿಸ್ತಾನ ಸರಕಾರ ಮತ್ತು ಸೇನೆಯ ವಿರುದ್ಧ ಆಕ್ರೋಶ ಹೆಚ್ಚಿದೆ. ಒಂದು ವೇಳೆ ಪರಿಸ್ಥಿತಿ ಸುಧಾರಿಸದಿದ್ದರೆ, ರೈತರು ಇಸ್ಲಾಮಾಬಾದ್ ಗೆ ಪಾದಯಾತ್ರೆ ನಡೆಸಲಿದ್ದಾರೆ ಎಂದು ‘ಪಾಕಿಸ್ತಾನ ಕಿಸಾನ್ ಇತ್ತೆಹಾದ್’ ರೈತ ಸಂಘಟನೆ ಎಚ್ಚರಿಕೆ ನೀಡಿದೆ.
ಈ ರೈತ ಸಂಘಟನೆಯ ಅಧ್ಯಕ್ಷ ಖಾಲಿದ್ ಮಹಮೂದ್ ಖೋಖರ್ ಅವರು, ಬೆಳೆ ಹಾನಿಯಿಂದಾಗಿ ರೈತರ ಸಾಲ ಹೆಚ್ಚುತ್ತಿದೆ. ಇದರಿಂದ ಲಕ್ಷಾಂತರ ರೈತರು ಹಸಿವಿನ ಅಂಚಿನಲ್ಲಿದ್ದಾರೆ ಎಂದು ಹೇಳಿದರು.
ಪಂಜಾಬ ಪ್ರಾಂತ್ಯದ ರೈತ ನಾಯಕ ಅಹ್ಮದ ಶರೀಫ್ ಅವರು, ಈಗ ನೀರಿನ ಸಮಸ್ಯೆಯು ರಾಷ್ಟ್ರೀಯ ತುರ್ತು ಪರಿಸ್ಥಿತಿಯಾಗಿ ಮಾರ್ಪಟ್ಟಿದೆ. ಇದರಿಂದ ಆಹಾರ ಧಾನ್ಯಗಳ ಬೆಲೆ ಗಗನಕ್ಕೇರಿದೆ ಎಂದು ಹೇಳಿದರು.
ನೀರಿಗಾಗಿ ಭಾರತಕ್ಕೆ 4 ಪತ್ರಗಳನ್ನು ಕಳುಹಿಸಿದ ಪಾಕಿಸ್ತಾನ !
ಪಾಕಿಸ್ತಾನವು ಇದುವರೆಗೆ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವನ್ನು ಮರುಸ್ಥಾಪಿಸುವ ಸಂಬಂಧ ಭಾರತಕ್ಕೆ 4 ಪತ್ರಗಳನ್ನು ಕಳುಹಿಸಿದೆ. ಈ ನಾಲ್ಕು ಪತ್ರಗಳನ್ನು ಪಾಕಿಸ್ತಾನದ ಜಲಸಂಪನ್ಮೂಲ ಸಚಿವಾಲಯದ ಕಾರ್ಯದರ್ಶಿ ಸೈಯದ್ ಅಲಿ ಮುರ್ತಜಾ ಅವರು ಭಾರತದ ಜಲಶಕ್ತಿ ಸಚಿವಾಲಯಕ್ಕೆ ಕಳುಹಿಸಿದ್ದರು. ನಂತರ ಸಚಿವಾಲಯವು ಅವುಗಳನ್ನು ವಿದೇಶಾಂಗ ಸಚಿವಾಲಯಕ್ಕೆ ರವಾನಿಸಿದೆ.
ಸಂಪಾದಕೀಯ ನಿಲುವು
|