Jagannath Rath Yatra 2025 : ಜಗತ್ಪ್ರಸಿದ್ಧ  ಶ್ರೀ ಜಗನ್ನಾಥ ರಥಯಾತ್ರೆ ಜೂನ್ 27 ರಿಂದ ಆರಂಭ: 9 ದಿನಗಳ ಕಾಲ ಉತ್ಸವ !

ಪುರಿ (ಒಡಿಶಾ) – ಒಡಿಶಾದ ಪುರಿಯಲ್ಲಿ ಜಗತ್ಪ್ರಸಿದ್ಧ ಶ್ರೀ ಜಗನ್ನಾಥ ರಥಯಾತ್ರೆ ಜೂನ್ 27 ರಿಂದ ಪ್ರಾರಂಭವಾಗಲಿದೆ. ಈ ಉತ್ಸವವು 9 ದಿನಗಳ ಕಾಲ ನಡೆಯಲಿದ್ದು, ಜುಲೈ 5 ರಂದು ಮುಕ್ತಾಯಗೊಳ್ಳಲಿದೆ. ಶ್ರೀ ಜಗನ್ನಾಥ ರಥಯಾತ್ರೆಯು ದೇಶದ ಅತಿದೊಡ್ಡ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಹೊಂದಿರುವ ಉತ್ಸವವಾಗಿದೆ. ಪ್ರತಿ ವರ್ಷ ಈ ಉತ್ಸವವನ್ನು ಒಡಿಶಾದ ಪುರಿ ನಗರದಲ್ಲಿ ಬಹಳ ವೈಭವದಿಂದ ಆಚರಿಸಲಾಗುತ್ತದೆ. ಈ ಉತ್ಸವದಲ್ಲಿ, ಭಗವಾನ್ ಶ್ರೀ ಜಗನ್ನಾಥ, ಅವರ ಹಿರಿಯ ಸಹೋದರ ಬಲರಾಮ ಮತ್ತು ಸಹೋದರಿ ಸುಭದ್ರಾ ಅವರನ್ನು ಪೂಜಿಸಿ, ರಥದಲ್ಲಿ ಮೆರವಣಿಗೆ ಮಾಡಲಾಗುತ್ತದೆ. ಆಷಾಢ ಶುಕ್ಲ ಪಕ್ಷ ದ್ವಿತೀಯದಿಂದ ಈ ರಥಯಾತ್ರೆ ಪ್ರಾರಂಭವಾಗುತ್ತದೆ.

1. ಸಂಪೂರ್ಣ ರಥಯಾತ್ರೆಯಲ್ಲಿ ಒಟ್ಟು ಮೂರು ರಥಗಳಿರುತ್ತವೆ. ಭಗವಾನ್ ಶ್ರೀ ಜಗನ್ನಾಥರ ರಥದ ಹೆಸರು ನಂದಿಘೋಷ, ಬಲರಾಮರ ರಥದ ಹೆಸರು ತಲಧ್ವಜ ಮತ್ತು ಸುಭದ್ರಾ ದೇವಿಯ ರಥದ ಹೆಸರು ದರ್ಪದಲನ ಆಗಿದೆ. ಈ ರಥಗಳನ್ನು ಬೇವಿನ ಮರದಿಂದ ತಯಾರಿಸಲಾಗುತ್ತದೆ. ವಿಶೇಷವೆಂದರೆ, ರಥಗಳನ್ನು ತಯಾರಿಸಲು ಯಾವುದೇ ಮೊಳೆ, ಮುಳ್ಳು ಅಥವಾ ಲೋಹವನ್ನು ಬಳಸಲಾಗುವುದಿಲ್ಲ. ರಥದ ನಿರ್ಮಾಣವು ಪ್ರತಿ ವರ್ಷ ಅಕ್ಷಯ ತೃತೀಯದಿಂದ ಪ್ರಾರಂಭವಾಗುತ್ತದೆ. ಯಾತ್ರೆಯಲ್ಲಿ ಬಲರಾಮರ ರಥವು ಮುಂದೆ ಇರುತ್ತದೆ, ನಂತರ ಸಹೋದರಿ ಸುಭದ್ರಾ ಅವರ ರಥ ಮತ್ತು ಕೊನೆಯಲ್ಲಿ ಭಗವಾನ್ ಶ್ರೀ ಜಗನ್ನಾಥರ ರಥ ಇರುತ್ತದೆ.

2. ‘ಈ ರಥಯಾತ್ರೆಯಲ್ಲಿ ಭಾಗವಹಿಸುವುದರಿಂದ ಸಾವಿರ ಯಜ್ಞಗಳಿಗೆ ಸಮನಾದ ಪುಣ್ಯ ದೊರೆಯುತ್ತದೆ. ಪಾಪಗಳು ನಾಶವಾಗುತ್ತವೆ ಮತ್ತು ಭಗವಾನ್ ವಿಷ್ಣು ಹಾಗೂ ಶ್ರೀ ಲಕ್ಷ್ಮೀದೇವಿಯ ಆಶೀರ್ವಾದ ದೊರೆಯುತ್ತದೆ’ ಎಂಬುದು ಹಿಂದೂಗಳ ಶ್ರದ್ಧೆ ಇದೆ. ಪುರಿಯ ಜಗನ್ನಾಥ ದೇವಾಲಯವು ನಾಲ್ಕು ಧಾಮಗಳಲ್ಲಿ ಒಂದಾಗಿದೆ ಮತ್ತು ‘ಈ ಯಾತ್ರೆಯು ಭಕ್ತರಿಗೆ ಮೋಕ್ಷವನ್ನು ನೀಡುತ್ತದೆ’ ಎಂದು ನಂಬಲಾಗಿದೆ.