
ಮುಂಬಯಿ – ಹಿಂದೂಪರ ಮತ್ತು ಹಿರಿಯ ಪತ್ರಕರ್ತ ಅರವಿಂದ ವಿಠ್ಠಲ ಕುಲಕರ್ಣಿ ಅವರು ಜೂನ್ 15 ರಂದು ಪವಯಿನಲ್ಲಿರುವ ತಮ್ಮ ನಿವಾಸದಲ್ಲಿ ವೃದ್ಧಾಪ್ಯದಿಂದ ನಿಧನರಾದರು. 84 ವರ್ಷದ ಕುಲಕರ್ಣಿ ಅವರಿಗೆ ಪತ್ನಿ ಮತ್ತು ಇಬ್ಬರು ಮಕ್ಕಳು ಇದ್ದಾರೆ. ಅವರು ಪವಯಿನಲ್ಲಿರುವ ಐಐಟಿ ಕ್ಯಾಂಪಸ್ ನಲ್ಲಿ ವಾಸಿಸುತ್ತಿದ್ದರು. ಜೂನ್ 16 ರಂದು ಪವಯಿನಲ್ಲಿರುವ ಮೋಕ್ಷಧಾಮ ಸ್ಮಶಾನದಲ್ಲಿ ಅವರ ಪಾರ್ಥಿವ ಶರೀರದ ಅಂತ್ಯಸಂಸ್ಕಾರ ನಡೆಯಿತು.

ಅರವಿಂದ ಕುಲಕರ್ಣಿ ಅವರು ಪ್ರಖರ ರಾಷ್ಟ್ರವಾದಿ ವಿಚಾರಗಳನ್ನು ಹೊಂದಿದ್ದರು. ಅವರ ಮೇಲೆ ಸ್ವಾತಂತ್ರ್ಯವೀರ ಸಾವರ್ಕರ್ ಅವರ ವಿಚಾರಗಳು ಆಳವಾದ ಪ್ರಭಾವ ಬೀರಿದ್ದವು. ಸ್ವಾತಂತ್ರ್ಯವೀರ ಸಾವರ್ಕರ್ ಅವರ ಸಾಹಿತ್ಯವನ್ನು ಅವರು ಆಳವಾಗಿ ಅಧ್ಯಯನ ಮಾಡಿದ್ದರು. ಅವರು ವಿವಿಧ ವೃತ್ತಪತ್ರಿಕೆಗಳು ಮತ್ತು ಸುದ್ದಿ ಸಂಸ್ಥೆಗಳಲ್ಲಿ ಪತ್ರಕರ್ತರಾಗಿ ಕೆಲಸ ಸಲ್ಲಿಸಿದ್ದರು. ಕೆಲಕಾಲ ‘ಹಿಂದುಸ್ಥಾನ ಸಮಾಚಾರ’ ಪತ್ರಿಕೆಯ ಕಚೇರಿ ಮುಖ್ಯಸ್ಥರಾಗಿ (ಬ್ಯೂರೋ ಚೀಫ್) ಕೆಲಸ ಮಾಡಿದ್ದರು. ಇದರೊಂದಿಗೆ ‘ಮಿಡ್ ಡೇ’ ಇಂಗ್ಲಿಷ್ ಪತ್ರಿಕೆ ಮತ್ತು ‘ಮರಾಠಾ’ ಎಂಬ ಮರಾಠಿ ಪತ್ರಿಕೆಗಳಲ್ಲಿಯೂ ಕೆಲಸ ಮಾಡಿದ್ದರು. ಸಾಪ್ತಾಹಿಕ ‘ವಿವೇಕ’ದ ಸಂಪಾದಕರಾಗಿಯೂ ಅವರು ಕಾರ್ಯನಿರ್ವಹಿಸಿದ್ದರು. ವೃದ್ಧಾಪ್ಯದಲ್ಲಿಯೂ ಅವರು ‘ಅಧೋರೇಖಿತ’ ಎಂಬ ತಮ್ಮದೇ ಆದ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದರು. ಈ ಚಾನೆಲ್ ನಲ್ಲಿ ಅವರು ರಾಷ್ಟ್ರ, ಧರ್ಮ ಮತ್ತು ಸಮಾಜದ ಬಗ್ಗೆ ವಿಶ್ಲೇಷಣಾತ್ಮಕ ವೀಡಿಯೊಗಳನ್ನು ಪ್ರಸಾರ ಮಾಡುತ್ತಿದ್ದರು. ಕುಲಕರ್ಣಿ ಅವರು 2013 ರ ‘ಧುಳೆ ಗಲಭೆಯ ಸತ್ಯಶೋಧನಾ ಸಮಿತಿ’ಯ ಸದಸ್ಯರಾಗಿದ್ದರು.