ನಿಕೋಸಿಯಾ (ಸೈಪ್ರಸ್) – ಯುರೋಪಿನ ಸೈಪ್ರಸ್‌ಗೆ ಭೇಟಿ ನೀಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಸೈಪ್ರಸ್ ನ ರಾಷ್ಟ್ರಪತಿಗಳಾದ ನಿಕೋಸ ಕ್ರಿಸ್ಟೋಡೌಲಿಡ್ಸರವರು ಸೈಪ್ರಸ್‌ನ ಅತ್ಯುನ್ನತ ಗೌರವ ‘ಗ್ರ್ಯಾಂಡ್ ಕ್ರಾಸ್ ಆಫ್ ದಿ ಆರ್ಡರ್ ಆಫ್ ಮಕಾರಿಯೋಸ III’ ನೀಡಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಮಾತನಾಡುತ್ತ, `ಸೈಪ್ರಸ್ ಸರಕಾರ ಮತ್ತು ಸೈಪ್ರಸ್ ಜನರಿಗೆ ನಾನು ಹೃತ್ಪೂರ್ವಕವಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಇದು ಕೇವಲ ನರೇಂದ್ರ ಮೋದಿಯವರದ್ದಲ್ಲ ಬದಲಾಗಿ 140 ಕೋಟಿ ಭಾರತೀಯರ ಗೌರವವಾಗಿದೆ. ಇದು ಅವರ ಸಾಮರ್ಥ್ಯ ಮತ್ತು ಆಕಾಂಕ್ಷೆಗಲಿಗೆ ದೊರೆತ ಗೌರವವಾಗಿದೆ. ಇದು ನಮ್ಮ ಸಂಸ್ಕೃತಿ, ಭ್ರಾತೃತ್ವ ಮತ್ತು ‘ವಸುಧೈವ ಕುಟುಂಬಕಂ’ ವಿಚಾರಧಾರೆಯ ಸನ್ಮಾನವಾಗಿದೆ, ಎಂದು ಹೇಳಿದರು.
ಇದಕ್ಕೂ ಮುನ್ನ, ಪ್ರಧಾನಿ ಮೋದಿಯವರನ್ನು ರಾಷ್ಟ್ರಪತಿ ಭವನದಲ್ಲಿ ಸ್ವಾಗತಿಸಲಾಯಿತು. ನಂತರ ಎರಡೂ ದೇಶಗಳ ರಾಷ್ಟ್ರಪ್ರಮುಖರ ನಡುವೆ ಸಭೆ ನಡೆಯಿತು. ಈ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಮಾತನಾಡುತ್ತ, `ಸೈಪ್ರಸ್‌ನಲ್ಲಿ ಅನೇಕ ಭಾರತೀಯ ಸಂಸ್ಥೆಗಳಿವೆ. ಇದನ್ನು ಯುರೋಪಿನ ಪ್ರವೇಶದ್ವಾರವೆಂದು ಪರಿಗಣಿಸಲಾಗಿದೆ. ಇವರು ನಮ್ಮ ವಿಶ್ವಾಸಾರ್ಹ ಪಾಲುದಾರರು’ ಎಂದು ಹೇಳಿದರು. ಸೈಪ್ರಸ್‌ಗೆ ಭೇಟಿ ನೀಡಿದ ಭಾರತೀಯ ಪ್ರಧಾನಿಗಳಲ್ಲಿ ಮೋದಿಯವರು ಮೂರನೇಯವರು. ಈ ಹಿಂದೆ ಇಂದಿರಾ ಗಾಂಧಿ ಅವರು 1983ರಲ್ಲಿ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರು 2002ರಲ್ಲಿ ಸೈಪ್ರಸ್‌ಗೆ ಭೇಟಿ ನೀಡಿದ್ದರು.