Kedarnath Helicopter Crash : ಕೇದಾರನಾಥಗೆ ಹೋಗುತ್ತಿದ್ದ ಹೆಲಿಕಾಪ್ಟರ್ ಪತನ; 7 ಸಾವು

ಡೆಹ್ರಾಡೂನ್ (ಉತ್ತರಾಖಂಡ) – ಯಾತ್ರಾರ್ಥಿಗಳನ್ನು ಕೇದಾರನಾಥಕ್ಕೆ ಕರೆದೊಯ್ಯುತ್ತಿದ್ದ ‘ಆರ್ಯನ್ ಏವಿಯೇಷನ್’ ಸಂಸ್ಥೆಗೆ ಸೇರಿದ ಹೆಲಿಕಾಪ್ಟರ್ ಗೌರಿಕುಂಡ್ ಮತ್ತು ತ್ರಿಜುಗಿನಾರಾಯಣ ನಡುವೆ ಪತನಗೊಂಡಿದೆ. ಈ ಘಟನೆಯಲ್ಲಿ ಪೈಲಟ್ ಸೇರಿ 7 ಜನರು ಸಾವನ್ನಪ್ಪಿದ್ದಾರೆ. ಮೃತಪಟ್ಟವರಲ್ಲಿ 2 ವರ್ಷದ ಬಾಲಕಿಯೂ ಸೇರಿದ್ದಾಳೆ. ದಟ್ಟವಾದ ಮಂಜು ಮತ್ತು ಕಡಿಮೆ ಗೋಚರತೆಯಿಂದಾಗಿ ಪೈಲಟ್ ಹೆಲಿಕಾಪ್ಟರ್ ನಿಯಂತ್ರಣ ಕಳೆದುಕೊಂಡಿರುವ ಸಾಧ್ಯತೆಯಿದೆ.

1. ಈ ಅಪಘಾತದಲ್ಲಿ ಪೈಲಟ್ ಕ್ಯಾಪ್ಟನ್ ರಾಜಬೀರ್ ಸಿಂಗ್ ಚೌಹಾಣ್, ವಿಕ್ರಮ್ ರಾವತ್, ವಿನೋದ್ ದೇವಿ, ತ್ರಿಶತಿ ಸಿಂಗ್, ರಾಜಕುಮಾರ್ ಸುರೇಶ್ ಜೈಸ್ವಾಲ್, ಶ್ರದ್ಧಾ ರಾಜಕುಮಾರ್ ಜೈಸ್ವಾಲ್ ಮತ್ತು 2 ವರ್ಷದ ಕಾಶಿ ಮೃತಪಟ್ಟಿದ್ದಾರೆ. ಮೃತಪಟ್ಟವರೆಲ್ಲರೂ ಜೈಪುರ, ಉತ್ತರಪ್ರದೇಶ, ಗುಜರಾತ ಮತ್ತು ಮಹಾರಾಷ್ಟ್ರ ರಾಜ್ಯಗಳಿಗೆ ಸೇರಿದವರಾಗಿದ್ದಾರೆ.

2. ಕಳೆದ ಕೆಲವು ದಿನಗಳಲ್ಲಿ ಕೇದಾರನಾಥದಲ್ಲಿ ಸಂಭವಿಸಿದ ಮೂರನೇ ಹೆಲಿಕಾಪ್ಟರ್ ಅಪಘಾತ ಇದಾಗಿದೆ. ಈ ಹಿಂದೆ ಮೇ 17 ಮತ್ತು ಜೂನ್ 7 ರಂದು ಹೆಲಿಕಾಪ್ಟರ್ ಅಪಘಾತಗಳು ಸಂಭವಿಸಿದ್ದವು. ಮೇ ತಿಂಗಳಲ್ಲಿ ಡೆಹ್ರಾಡೂನ್‌ನಿಂದ ಗಂಗೋತ್ರಿ ಧಾಮಕ್ಕೆ ಹೋಗುತ್ತಿದ್ದ ಹೆಲಿಕಾಪ್ಟರ್ ಉತ್ತರಕಾಶಿಯ ಗಂಗಾಣಿ ಬಳಿ ಪತನಗೊಂಡಿತ್ತು. ಈ ಅಪಘಾತದಲ್ಲಿ 6 ಜನರು ಸಾವನ್ನಪ್ಪಿದ್ದರು.