ನವಿ ಮುಂಬಯಿನಲ್ಲಿ ‘ಅಂತರಾಷ್ಟ್ರೀಯ ಶಿಕ್ಷಣ ನಗರ’ ಸ್ಥಾಪನೆ; 5 ದೇಶಗಳ ವಿಶ್ವವಿದ್ಯಾಲಯಗಳ ಸ್ಥಾಪನೆ !

ಮುಂಬಯಿ – ಮಹಾರಾಷ್ಟ್ರ ಸರಕಾರದ ಮಹತ್ವಾಕಾಂಕ್ಷೆಯ ‘ಮುಂಬಯಿ ರೈಸಿಂಗ್ – ಕ್ರಿಯೇಟಿಂಗ್ ಆನ್ ಇಂಟರ್ನ್ಯಾಷನಲ್ ಎಜುಕೇಶನ್ ಸಿಟಿ’ ಯೋಜನೆಯಡಿಯಲ್ಲಿ, ನವಿ ಮುಂಬಯಿನಲ್ಲಿ ‘ಅಂತರಾಷ್ಟ್ರೀಯ ಶಿಕ್ಷಣ ನಗರ’ (International Education City) ನಿರ್ಮಿಸಲಾಗುವುದು. ಅಬರ್ಡೀನ್ ವಿಶ್ವವಿದ್ಯಾಲಯ, ಯಾರ್ಕ್ ವಿಶ್ವವಿದ್ಯಾಲಯ, ವೆಸ್ಟರ್ನ್ ಆಸ್ಟ್ರೇಲಿಯಾ ವಿಶ್ವವಿದ್ಯಾಲಯ, ಇಲಿನಾಯ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಇಸ್ಟಿಟುಟೊ ಯುರೋಪಿಯೊ ಡಿ ಡಿಸೈನ್, ಈ 5 ವಿದೇಶಿ ವಿಶ್ವವಿದ್ಯಾಲಯಗಳಿಗೆ ಮುಂಬಯಿ ಮತ್ತು ನವಿ ಮುಂಬಯಿನಲ್ಲಿ ಶಾಖೆಗಳನ್ನು ಸ್ಥಾಪಿಸಲು ಮಹಾರಾಷ್ಟ್ರ ಸರಕಾರದಿಂದ ಅಧಿಕೃತವಾಗಿ ‘ಲೆಟರ್ಸ್ ಆಫ್ ಇಂಟೆಂಟ್’ (Letters of Intent) ನೀಡಲಾಗಿದೆ. ಜೂನ್ 14 ರಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಈ ವಿಶ್ವವಿದ್ಯಾಲಯಗಳ ಪ್ರತಿನಿಧಿಗಳಿಗೆ ಈ ಪತ್ರಗಳನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಉಪಮುಖ್ಯಮಂತ್ರಿ ಏಕನಾಥ್ ಶಿಂದೆ, ಉಪಮುಖ್ಯಮಂತ್ರಿ ಅಜಿತ ಪವಾರ್ ಮತ್ತು ಉನ್ನತ ಹಾಗೂ ತಾಂತ್ರಿಕ ಶಿಕ್ಷಣ ಸಚಿವ ಚಂದ್ರಕಾಂತ ಪಾಟೀಲ ಉಪಸ್ಥಿತರಿದ್ದರು.

ಭಾರತದಲ್ಲಿಯೇ ಅಂತರಾಷ್ಟ್ರೀಯ ಗುಣಮಟ್ಟದ ಶಿಕ್ಷಣವನ್ನು ಲಭ್ಯವಾಗಿಸುವುದು ಮತ್ತು ವಿದೇಶಿ ವಿಶ್ವವಿದ್ಯಾಲಯಗಳಿಗೆ ಮಹಾರಾಷ್ಟ್ರದಲ್ಲಿ ಶಾಖೆಗಳನ್ನು ಸ್ಥಾಪಿಸುವ ಅವಕಾಶ ನೀಡುವುದು ಈ ಉಪಕ್ರಮದ ಮುಖ್ಯ ಉದ್ದೇಶಗಳಾಗಿವೆ. ಈ ಯೋಜನೆಯಡಿ, ನವಿ ಮುಂಬಯಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ 5 ಕಿಲೋಮೀಟರ್ ವ್ಯಾಪ್ತಿಯಲ್ಲಿ 10 ಪ್ರಸಿದ್ಧ ವಿದೇಶಿ ವಿಶ್ವವಿದ್ಯಾಲಯಗಳ ಕ್ಯಾಂಪಸ್‌ಗಳನ್ನು ಸ್ಥಾಪಿಸಲು ಯೋಜಿಸಲಾಗಿದೆ. ಇದು ದೇಶದಲ್ಲಿ ಇಂತಹ ಮೊದಲ ಅಂತರಾಷ್ಟ್ರೀಯ ‘ಶಿಕ್ಷಣ ನಗರ’ ಆಗಲಿದೆ. ಮಹಾರಾಷ್ಟ್ರ ಸರಕಾರದ ಮಾರ್ಗದರ್ಶನದಲ್ಲಿ ಸಿಡ್ಕೋ (CIDCO) ಸಂಸ್ಥೆಯು ‘ಮುಂಬಯಿ ರೈಸಿಂಗ್ – ಕ್ರಿಯೇಟಿಂಗ್ ಆನ್ ಇಂಟರ್ನ್ಯಾಷನಲ್ ಎಜುಕೇಶನ್ ಸಿಟಿ’ ಅನ್ನು ನಿರ್ಮಿಸಲಿದೆ. ಈ ವಿಶ್ವವಿದ್ಯಾಲಯಗಳಲ್ಲಿ ಭಾರತೀಯ ವಿದ್ಯಾರ್ಥಿಗಳಿಗೆ ವಿಶ್ವ ಮಟ್ಟದ ಶಿಕ್ಷಣ ಪಡೆಯುವ ಅವಕಾಶ ಸಿಗಲಿದೆ.