Karnavati Plane Crash : ಕರ್ಣಾವತಿ ವಿಮಾನ ದುರಂತದಲ್ಲಿ 297 ಜನರ ಸಾವು

ಅಪಘಾತದಲ್ಲಿ ಬದುಕುಳಿದ ಏಕೈಕ ವ್ಯಕ್ತಿಯ ಯೋಗಕ್ಷೇಮ ವಿಚಾರಿಸಿದ ಪ್ರಧಾನಿ ಮೋದಿ

ಕರ್ಣಾವತಿ (ಗುಜರಾತ) – ಇಲ್ಲಿ ನಡೆದ ವಿಮಾನ ಅಪಘಾತದಲ್ಲಿ ವಿಮಾನದಲ್ಲಿದ್ದ 241 ಜನರು ಮತ್ತು ಇತರ 56 ಜನರು ಸೇರಿ ಒಟ್ಟು 297 ಜನರು ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಲಾಗಿದೆ. ಈ ವಿಮಾನದಲ್ಲಿದ್ದ 242 ಪ್ರಯಾಣಿಕರಲ್ಲಿ ಕೇವಲ ಒಬ್ಬರು ಮಾತ್ರ ಬದುಕುಳಿದಿದ್ದು, ಅವರು ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಹೆಸರು ವಿಶ್ವಾಸ ಕುಮಾರ ರಮೇಶ, ಇವರು ಭಾರತೀಯ ಮೂಲದ ಬ್ರಿಟಿಷ್ ಪ್ರಜೆಯಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಅಪಘಾತದಲ್ಲಿ ಗಾಯಗೊಂಡವರ ಯೋಗಕ್ಷೇಮ ವಿಚಾರಿಸುವಾಗ, ರಮೇಶ ಅವರನ್ನೂ ಭೇಟಿಯಾದರು.

“ನಾನು ಹೇಗೆ ಜೀವಂತವಾಗಿ ಹೊರಬಂದೆ ಎಂದು ನನಗೇ ನಂಬಲು ಸಾಧ್ಯವಾಗುತ್ತಿಲ್ಲ”

೨೪೨ ಜನರಲ್ಲಿ ವಿಶ್ವಾಸ್ ಕುಮಾರ್ ರಮೇಶ್ ಮಾತ್ರ ಬದುಕುಳಿದರು.

ರಮೇಶ ಅವರು ಮಾಧ್ಯಮಗಳಿಗೆ ತಿಳಿಸುವಾಗ, ಅವರು ವಿಮಾನದ ಸೀಟ್ ಸಂಖ್ಯೆ ’11 ಎ’ ನಲ್ಲಿ ಕುಳಿತಿದ್ದರು. ವಿಮಾನವು ಕಟ್ಟಡಕ್ಕೆ ಅಪ್ಪಳಿಸಿದ ನಂತರ, ಅವರ ಸೀಟಿನ ಬಳಿ ಇದ್ದ ತುರ್ತು ನಿರ್ಗಮನ ದ್ವಾರವು ಮುರಿಯಿತು ಮತ್ತು ಅಲ್ಲಿಂದ ಹೊರಹೋಗಲು ದಾರಿ ಕಾಣಿಸಿತು. “ನಾನು ಸೀಟ್ ಬೆಲ್ಟ್ ತೆಗೆದು ಅಲ್ಲಿಂದ ಹೊರಬಂದು ಓಡಿದೆ. ನನ್ನ ಕಾಲು ಮತ್ತು ಕೈಗಳಿಗೆ ಪೆಟ್ಟಾಗಿತ್ತು. ವಿಮಾನ ಹಾರಿದ ಕೆಲವೇ ಕ್ಷಣಗಳಲ್ಲಿ ಅದು ಮೇಲೆ ಹೋಗದೆ ಕೆಳಗೆ ಬರುತ್ತಿರುವುದನ್ನು ಗಮನಿಸಿದೆ ಮತ್ತು ನಂತರ ಅದು ಅಪ್ಪಳಿಸಿತು. ಈ ಘಟನೆ ಕೆಲವೇ ಸೆಕೆಂಡುಗಳಲ್ಲಿ ನಡೆಯಿತು. ನಾನು ಹೇಗೆ ಜೀವಂತವಾಗಿ ಹೊರಬಂದೆ ಎಂದು ನನಗೆ ನಂಬಲು ಸಾಧ್ಯವಾಗುತ್ತಿಲ್ಲ. ಕೆಲ ಕ್ಷಣ ನಾನು ಸಾಯಲಿದ್ದೇನೆ ಎಂದು ಭಾವಿಸಿದ್ದೆ. ನಾನು ಕಣ್ಣು ತೆರೆದಾಗ, ನಾನು ಜೀವಂತವಾಗಿದ್ದೇನೆ ಎಂದು ಅನಿಸಿತು. ಇಲ್ಲಿಂದ ನಾನು ಹೊರಬರಬಹುದು ಎಂದು ಅನಿಸಿತು ಮತ್ತು ನಾನು ಹೊರಬಂದೆ. ನನ್ನ ಆಸನವಿದ್ದ ವಿಮಾನದ ಭಾಗವು ಕಟ್ಟಡದ ಕೆಳಗಿನ ಭಾಗಕ್ಕೆ ಡಿಕ್ಕಿ ಹೊಡೆದಿರಬೇಕು. ಮೇಲಿನ ಭಾಗದಲ್ಲಿ ಬೆಂಕಿ ಹೊತ್ತಿಕೊಂಡಿತ್ತು, ಅನೇಕ ಜನರು ಅಲ್ಲಿಯೇ ಸಿಕ್ಕಿಹಾಕಿಕೊಂಡಿದ್ದರು. ನನ್ನ ಇನ್ನೊಂದು ಕಡೆ ಒಂದು ಗೋಡೆಯಿತ್ತು, ಬಹುಶಃ ಅಲ್ಲಿಂದ ಯಾರೂ ಹೊರಬರಲು ಸಾಧ್ಯವಾಗಲಿಲ್ಲ. 2 ವಿಮಾನ ಪರಿಚಾರಿಕೆಯರು, ಒಬ್ಬ ವಯಸ್ಸಾದ ದಂಪತಿ ಸೇರಿದಂತೆ ಎಲ್ಲರೂ ನನ್ನ ಕಣ್ಣೆದುರಿಗೆ ಸುಟ್ಟು ಹೋಗುತ್ತಿದ್ದರು”, ಎಂದು ಹೇಳಿದರು.