Project Pelican : ಕೆನಡಾದಲ್ಲಿ ಮಾದಕ ವಸ್ತು ಕಳ್ಳಸಾಗಣೆ ಗ್ಯಾಂಗ್‌ನ ಬಂಧನ

  • 7 ಭಾರತೀಯರ ಸಮಾವೇಶ

  • ಆರೋಪಿಗಳಿಗೆ ಖಲಿಸ್ತಾನಿಗಳೊಂದಿಗೆ ಸಂಪರ್ಕ

ಬಂಧಿತ ಆರೋಪಿಗಳು

ಒಟಾವಾ (ಕೆನಡಾ) – ಕೆನಡಾದ ಮಾರ್ಕ್ ಕಾರ್ನಿ ಸರಕಾರವು ಖಲಿಸ್ತಾನಿಗಳ ವಿರುದ್ಧ ಕ್ರಮಗಳನ್ನು ಪ್ರಾರಂಭಿಸಿದೆ. ಭಾರತ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ ಖಲಿಸ್ತಾನಿಗಳನ್ನು ಹಿಡಿಯಲು ಸರಕಾರವು ‘ಪ್ರಾಜೆಕ್ಟ್ ಪೆಲಿಕನ್’ ಎಂಬ ಕಾರ್ಯಾಚರಣೆಯನ್ನು ಆರಂಭಿಸಿದೆ. ಇದರ ಅಡಿಯಲ್ಲಿ, ಪೊಲೀಸರು ಮಾದಕ ವಸ್ತು ಕಳ್ಳಸಾಗಣೆ ಮತ್ತು ಖಲಿಸ್ತಾನಿ ಭಯೋತ್ಪಾದನೆಗೆ ಸಂಬಂಧಿಸಿದ ಜಾಲವನ್ನು ಬಯಲಿಗೆಳೆದಿದ್ದಾರೆ. ಕೆನಡಾ ಪೊಲೀಸರು 479 ಕೆಜಿ ಕೊಕೇನ್ ವಶಪಡಿಸಿಕೊಂಡಿದ್ದಾರೆ. ಇದು ಕೆನಡಾದಲ್ಲಿ ಇಲ್ಲಿಯವರೆಗಿನ ಅತಿ ದೊಡ್ಡ ಕಾರ್ಯಾಚರಣೆಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆನಡಾದಲ್ಲಿ ವಾಸಿಸುತ್ತಿರುವ ಭಾರತೀಯ ಮೂಲದ 7 ಆರೋಪಿಗಳು ಸೇರಿದಂತೆ ಒಟ್ಟು 9 ಜನರನ್ನು ಬಂಧಿಸಲಾಗಿದೆ. ಇವರಲ್ಲಿ ಸಾಜಿತ್ ಯೋಗೇಂದ್ರರಾಜಾ, ಮನಪ್ರೀತ ಸಿಂಗ್, ಫಿಲಿಪ್ ಟೇಪ, ಅರವಿಂದರ್ ಪೊವಾರ್, ಕರಮಜಿತ್ ಸಿಂಗ್, ಗುರುತೇಜ್ ಸಿಂಗ್, ಸರ್ತಾಜ ಸಿಂಗ್, ಶಿವ ಓಂಕಾರ್ ಸಿಂಗ್ ಮತ್ತು ಹಾವೋ ಟಾಮಿ ಹುಯಿನ್ ಸೇರಿದ್ದಾರೆ.

ಭಾರತ ವಿರೋಧಿ ಚಟುವಟಿಕೆಗಳಿಗೆ ಹಣದ ಬಳಕೆ

ಪೊಲೀಸರ ಪ್ರಕಾರ, ಬಂಧಿತ ಗ್ಯಾಂಗ್ ಅಮೆರಿಕಾ ಮತ್ತು ಕೆನಡಾ ನಡುವಿನ ವಾಣಿಜ್ಯ ಮಾರ್ಗವನ್ನು ಬಳಸಿದೆ. ಇದು ಮೆಕ್ಸಿಕೋ ಮತ್ತು ಅಮೆರಿಕಾದ ಮಾದಕ ವಸ್ತು ಕಳ್ಳಸಾಗಣೆದಾರರೊಂದಿಗೆ ಸಂಬಂಧಗಳನ್ನು ಹೊಂದಿತ್ತು. ಈ ಕಳ್ಳಸಾಗಣೆಯಿಂದ ಗಳಿಸಿದ ಹಣವನ್ನು ಪ್ರತಿಭಟನೆಗಳು, ಜನಾಭಿಪ್ರಾಯ ಸಂಗ್ರಹಣೆ ಮತ್ತು ಶಸ್ತ್ರಾಸ್ತ್ರ ಖರೀದಿ ಮುಂತಾದ ಭಾರತ ವಿರೋಧಿ ಚಟುವಟಿಕೆಗಳಿಗೆ ಬಳಸಲಾಗುತ್ತಿತ್ತು. ಪಾಕಿಸ್ತಾನದ ಐಎಸ್‌ಐ (ಇಂಟರ್ ಸರ್ವೀಸ್ ಇಂಟೆಲಿಜೆನ್ಸ್ – ಆಂತರಿಕ ಸೇವಾ ಗುಪ್ತಚರ ಸಂಸ್ಥೆ) ಈ ತಂಡಕ್ಕೆ ಬೆಂಬಲ ನೀಡುತ್ತಿದೆ ಎಂದು ಗುಪ್ತಚರ ಸಂಸ್ಥೆಗಳು ಶಂಕಿಸಿವೆ.

ಪ್ರಧಾನಿ ಮೋದಿ ಅವರ ಕೆನಡಾ ಭೇಟಿಗೂ ಮುನ್ನ ಕಾರ್ಯಾಚರಣೆ!

ಕೆನಡಾ ಪ್ರಧಾನಿ ನರೇಂದ್ರ ಮೋದಿ ಮತ್ತು ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ

ವಿಶೇಷವೆಂದರೆ, ಪ್ರಧಾನಿ ನರೇಂದ್ರ ಮೋದಿ ಅವರು ಈ ತಿಂಗಳ ಕೊನೆಯಲ್ಲಿ ಕೆನಡಾದ ಕನಾನಾಸ್ಕಿಸ್‌ನಲ್ಲಿ ನಡೆಯಲಿರುವ ‘ಜಿ-7’ (ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಬ್ರಿಟನ್ ಮತ್ತು ಅಮೆರಿಕಾ ಈ 7 ಅಭಿವೃದ್ಧಿ ಹೊಂದಿದ ದೇಶಗಳ ಗುಂಪು) ಶೃಂಗಸಭೆಯಲ್ಲಿ ಭಾಗವಹಿಸಲಿರುವ ಸಮಯದಲ್ಲಿ ಈ ಕಾರ್ಯಾಚರಣೆ ಆರಂಭವಾಗಿದೆ. ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಅವರ ಆಹ್ವಾನದ ನಂತರ ಅವರ ಭೇಟಿ ನಡೆಯುತ್ತಿದೆ. ಶೃಂಗಸಭೆಯ ಜೊತೆಗೆ ಪ್ರಧಾನಿ ಮೋದಿ ಮತ್ತು ಕಾರ್ನಿ ನಡುವೆ ದ್ವಿಪಕ್ಷೀಯ ಮಾತುಕತೆಗಳೂ ನಡೆಯಲಿವೆ. ಇದರಲ್ಲಿ ಖಲಿಸ್ತಾನಿ ವಿಷಯವನ್ನು ಪ್ರಸ್ತಾಪಿಸುವ ಸಾಧ್ಯತೆಯಿದೆ.