ಜಾಮಿಯಾ ಉರ್ದು ಅಲಿಗಢದಿಂದ ನಕಲಿ ಪದವಿ ಪಡೆದು ಸಹಾಯಕ ಶಿಕ್ಷಕರಾದ 18 ಜನರ ನೇಮಕಾತಿ ರದ್ದು!

ಉಚ್ಚ ನ್ಯಾಯಾಲಯದಿಂದ ಅರ್ಜಿ ತಿರಸ್ಕೃತ

ಪ್ರಯಾಗರಾಜ (ಉತ್ತರ ಪ್ರದೇಶ) – ‘ಜಾಮಿಯಾ ಉರ್ದು ಅಲಿಗಢ’ ಎಂಬ ಶೈಕ್ಷಣಿಕ ಸಂಸ್ಥೆಯಿಂದ ಒಂದು ವರ್ಷದಲ್ಲಿ ‘ಅದೀಬ್-ಎ-ಕಾಮಿಲ್’ (ಉರ್ದು ಕಲಿಯುವವರಿಗೆ ನೀಡಲಾಗುವ) ಪದವಿ ಪಡೆದು ಸಹಾಯಕ ಶಿಕ್ಷಕರಾದ 18 ಜನರ ನೇಮಕಾತಿಯನ್ನು ರದ್ದುಗೊಳಿಸುವ ಮಂಡಳಿಯ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ಅಲಹಾಬಾದ ಉಚ್ಚ ನ್ಯಾಯಾಲಯವು ನಿರಾಕರಿಸಿದೆ. ಈ ಪದವಿ ಮಾನ್ಯವಾಗಿಲ್ಲ ಎಂದು ನ್ಯಾಯಾಲಯ ಹೇಳಿದೆ. ‘ಜಾಮಿಯಾ ಉರ್ದು ಅಲಿಗಢ’ಗೆ ವಿಶ್ವವಿದ್ಯಾಲಯ ಅನುದಾನ ಆಯೋಗದ (ಯು.ಜಿ.ಸಿ) ಮಾನ್ಯತೆ ಇಲ್ಲ. ಹೀಗಿದ್ದರೂ, ಆ ಸಂಸ್ಥೆ 6 ತಿಂಗಳು ಅಥವಾ 1 ವರ್ಷ ಶಿಕ್ಷಕರು ಮತ್ತು ತರಗತಿಗಳಿಲ್ಲದೆ ಬೋಧಿಸಿ ‘ಅದೀಬ್-ಎ-ಕಾಮಿಲ್’ ಪದವಿಗಳನ್ನು ನೀಡಿದೆ. ಆದ್ದರಿಂದ, ಅರ್ಜಿದಾರರು ಸಹಾಯಕ ಶಿಕ್ಷಕರಾಗಿ ನೇಮಕಾತಿಗೆ ಅರ್ಹರಲ್ಲ. ಅವರು ವಂಚನೆ ಮಾಡಿ ನೇಮಕಾತಿ ಪಡೆದಿದ್ದಾರೆ, ಆದ್ದರಿಂದ ನೇಮಕಾತಿ ರದ್ದುಗೊಳಿಸುವುದು ಸರಿಯಾದ ನಿರ್ಣಯವಾಗಿದೆ ಎಂದು ನ್ಯಾಯಮೂರ್ತಿ ಸೌರಭ ಶ್ಯಾಮ ಶಮಶೇರಿ ಅವರು ತೀರ್ಪು ನೀಡಿದರು. ಮಂಡಳಿಯ ಆದೇಶವನ್ನು ಪ್ರಶ್ನಿಸಿ ಅಜಹರ ಅಲಿ ಸೇರಿದಂತೆ 18 ಜನರು ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಾಲಯ ತಿರಸ್ಕರಿಸಿತು. (ದಾಖಲೆಗಳ ಸಿಂಧುತ್ವವನ್ನು ಪರಿಶೀಲಿಸದೆ ನೇಮಕಾತಿ ಪತ್ರಗಳನ್ನು ನೀಡಿದ ಅಧಿಕಾರಿಗಳ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಬೇಕು! – ಸಂಪಾದಕರು)

1. ಅರ್ಜಿದಾರರು, ತಾವು 12ನೇ ತರಗತಿಯ ನಂತರ ಜಾಮಿಯಾ ಉರ್ದುಗೆ ಪ್ರವೇಶ ಪಡೆದು ಒಂದು ವರ್ಷದಲ್ಲಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಪದವಿ ಪಡೆದಿರುವುದಾಗಿ ತಿಳಿಸಿದರು. 2013ರಲ್ಲಿ ‘ಟಿಇಟಿ’ (ಶಿಕ್ಷಕರ ಅರ್ಹತಾ ಪರೀಕ್ಷೆ) ಬರೆದು ಅವರು ಉತ್ತೀರ್ಣರಾಗಿದ್ದಾರೆ. ಅವರು ಸಹಾಯಕ ಶಿಕ್ಷಕರ ನೇಮಕಾತಿ ಪರೀಕ್ಷೆಯನ್ನು ಬರೆದು ಯಶಸ್ಸು ಗಳಿಸಿದ್ದಾರೆ. ಅನೇಕರ ನೇಮಕಾತಿಯಾಗಿದೆ, ಕೆಲವರು ಸೇರಿಕೊಂಡಿದ್ದಾರೆ, ಕೆಲವರಿಗೆ ಇನ್ನೂ ಶಾಲೆಗಳನ್ನು ಹಂಚಿಕೆ ಮಾಡಲಾಗಿಲ್ಲ ಮತ್ತು ಕೆಲವರು ನೇಮಕಾತಿಗಾಗಿ ಕಾಯುತ್ತಿದ್ದಾರೆ.

2. ದೂರಿನ ತನಿಖಾ ವರದಿ ಬಂದ ನಂತರ ನೇಮಕಾತಿ ರದ್ದುಪಡಿಸುವ ಆದೇಶ ನೀಡಲಾಗಿದೆ ಎಂದು ಮೂಲಭೂತ ಶಿಕ್ಷಣ ಅಧಿಕಾರಿಗಳ ಪರ ವಕೀಲ ಬಿ.ಪಿ.ಸಿಂಗ್ ಕಚವಾಹ ತಿಳಿಸಿದರು.

3. ಜಾಮಿಯಾ ಉರ್ದುದಲ್ಲಿ ಶಿಕ್ಷಕರು ಮತ್ತು ತರಗತಿ ಕೊಠಡಿಗಳೇ ಇಲ್ಲ ಎಂಬ ವರದಿಯು ಕೂಡ ಈ ಮೂಲಕ ಬಯಲಾಗಿದೆ.