Hindu Rastra for Bharat : ಹಿಂದೂಗಳ ಮೇಲಿನ ದೌರ್ಜನ್ಯ ನಿಲ್ಲಿಸಲು ಹಿಂದೂ ರಾಷ್ಟ್ರವಿಲ್ಲದೆ ಈ ದೇಶಕ್ಕೆ ಬೇರೆ ದಾರಿಯಿಲ್ಲ! – ತಥಾಗತ ರಾಯ್, ಮಾಜಿ ರಾಜ್ಯಪಾಲರು, ತ್ರಿಪುರಾ ಮತ್ತು ಮೇಘಾಲಯ

ಫೊಂಡಾ (ಗೋವಾ) – ಸನಾತನ ಸಂಸ್ಥೆಯು ಹಿಂದೂಗಳ ಹಿತಕ್ಕಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದಕ್ಕೆ ನನಗೆ ಅತೀವ ಆನಂದವಾಗುತ್ತಿದೆ. ಬಂಗಾಳ ಮತ್ತು ನೆರೆಯ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳಿಗೆ ಲೆಕ್ಕವೇ ಇಲ್ಲ. ದುರದೃಷ್ಟವಶಾತ್ ಇತರ ಕಡೆಗಳ ಹಿಂದೂಗಳು ಬಂಗಾಳದಲ್ಲಿ ಹಿಂದೂಗಳ ವಿರುದ್ಧ ಸ್ವಲ್ಪ ಮಟ್ಟಿಗೆ, ಎಂದೋ ಒಮ್ಮೆ ಏನೋ ನಡೆಯುತ್ತದೆ ಮತ್ತು ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸ್ವಲ್ಪ ಮಟ್ಟಿಗೆ ಪಕ್ಷಪಾತ ಮಾಡುತ್ತಾರೆ ಎಂದು ಭಾವಿಸುತ್ತಾರೆ. ಆದರೆ ವಾಸ್ತವ ಸ್ಥಿತಿ ಬಹಳ ಗಂಭೀರವಾಗಿದೆ. ಕೊಲೆ ಮತ್ತು ಅತ್ಯಾಚಾರಗಳು ಬಾಂಗ್ಲಾದೇಶದ ಹಿಂದೂಗಳ ಹಣೆ ಬರಹವೇ ಆಗಿವೆ. ಈ ಎಲ್ಲ ದೃಷ್ಟಿಕೋನಗಳಿಂದ ಶಂಖನಾದ ಮಹೋತ್ಸವದ ಮೂಲಕ ಸನಾತನ ರಾಷ್ಟ್ರ ಮತ್ತು ಹಿಂದೂ ರಾಷ್ಟ್ರದ ಧ್ವನಿ ಎತ್ತಿರುವುದು ಸರಿಯಾದ ದಿಕ್ಕಿನಲ್ಲಿ ಇಟ್ಟ ಒಂದು ಮಹತ್ವದ ಹೆಜ್ಜೆಯಾಗಿದೆ. ಈ ನಿಟ್ಟಿನಲ್ಲಿ ನಾವು ಮುಂದುವರಿಯಬೇಕಾಗಿದೆ. ಏಕೆಂದರೆ ಹಿಂದೂ ರಾಷ್ಟ್ರವಿಲ್ಲದೆ ಈ ದೇಶಕ್ಕೆ ಬೇರೆ ಪರ್ಯಾಯವಿಲ್ಲ ಎಂದು ತ್ರಿಪುರಾ ಮತ್ತು ಮೇಘಾಲಯ ರಾಜ್ಯಗಳ ಮಾಜಿ ರಾಜ್ಯಪಾಲ ತಥಾಗತ ರಾಯ್ ಅವರು ನೇರವಾಗಿ ಹೇಳಿದರು. ಇಲ್ಲಿ ಆಯೋಜಿಸಲಾಗಿದ್ದ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದಲ್ಲಿ ಅವರು ‘ಸನಾತನ ಪ್ರಭಾತ’ನ ಪ್ರತಿನಿಧಿಯೊಂದಿಗೆ ಮಾತನಾಡುತ್ತಾ ಮೇಲಿನ ಹೇಳಿಕೆ ನೀಡಿದರು.

‘ಸನಾತನ ಪ್ರಭಾತ’ನ ಪ್ರತಿನಿಧಿಯು ತಥಾಗತ ರಾಯ್ ಅವರಿಗೆ ‘ಹಿಂದೂ ಇಕೋಸಿಸ್ಟಮ್ ಸಿದ್ಧಪಡಿಸಲು ನಾವು ಒಟ್ಟಾಗಿ ಪ್ರಯತ್ನಿಸಬೇಕು’ ಎಂದು ಹೇಳಿದಾಗ, ಅವರು ತಕ್ಷಣವೇ ‘ನಮಗೆ ಕೇವಲ ಹಿಂದೂಗಳ ಇಕೋಸಿಸ್ಟಮ್ ಅಲ್ಲ, ಈಗ ಹಿಂದೂ ರಾಷ್ಟ್ರವೇ ಬೇಕು. ಅದಕ್ಕಿಂತ ಕಡಿಮೆ ಏನೂ ಬೇಡ’ ಎಂದರು. ಅವರ ಈ ಮಾತಿನಿಂದ ಅವರ ಹಿಂದೂ ರಾಷ್ಟ್ರ ಸ್ಥಾಪನೆಯ ಬಗೆಗಿನ ಏಕನಿಷ್ಠೆ ಮತ್ತು ಶ್ರದ್ಧೆ ಕಂಡು ಬಂದಿತು.

ಬಾಂಗ್ಲಾದೇಶದೊಂದಿಗೆ ಒಪ್ಪಂದ ಮಾಡಿಕೊಂಡು ‘ಚಿಕನ್ ನೆಕ್’ ಅನ್ನು ವಿಸ್ತರಿಸಿದರೆ ಈಶಾನ್ಯ ರಾಜ್ಯಗಳ ಸುರಕ್ಷತೆಗೆ ಭರವಸೆಯಾಗಬಹುದು!

(ಚಿಕನ್ ನೆಕ್ ಎಂದರೆ ಈಶಾನ್ಯ ಭಾರತದ 7 ರಾಜ್ಯಗಳನ್ನು ಉಳಿದ ಭಾರತಕ್ಕೆ ಸಂಪರ್ಕಿಸುವ ಕಿರಿದಾದ ಪ್ರದೇಶ)

ರಾಯ್ ಅವರು ಮಾತು ಮುಂದುವರೆಸಿ, ‘ಚಿಕನ್ ನೆಕ್’ನ ಎರಡೂ ಬದಿಗಳಲ್ಲಿರುವ ಬಾಂಗ್ಲಾದೇಶ ಮತ್ತು ನೇಪಾಳ ಬಹಳ ದುರ್ಬಲ ರಾಷ್ಟ್ರಗಳಾಗಿವೆ. ಆದರೂ ನಾವು ಎಚ್ಚರಿಕೆಯಿಂದ ಇರಬೇಕಾಗಿದೆ. ಹೀಗಿದ್ದರೂ ಬಾಂಗ್ಲಾದೇಶದಿಂದ ದೊಡ್ಡ ಪ್ರಮಾಣದಲ್ಲಿ ಅಕ್ರಮ ನುಸುಳುವಿಕೆ ನಡೆಯುತ್ತಿದೆ ಮತ್ತು ಬಂಗಾಳ ರಾಜ್ಯದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇದನ್ನು ಕಡೆಗಣಿಸುತ್ತಿದ್ದಾರೆ. ಗಡಿ ಭದ್ರತಾ ಪಡೆ ಇದನ್ನು ತಡೆಯಲು ಸಾಕಷ್ಟು ಪ್ರಯತ್ನಿಸುತ್ತಿದ್ದರೂ, ಬಂಗಾಳ ಸರಕಾರವು ನುಸುಳುಕೋರರಿಗೆ ಸಹಾಯ ಮಾಡುತ್ತಿದೆ. ಅದಕ್ಕಾಗಿಯೇ ‘ಚಿಕನ್ ನೆಕ್’ ಅನ್ನು ಹೆಚ್ಚು ವಿಸ್ತರಿಸಬೇಕು. ಇದಕ್ಕಾಗಿ ಬಾಂಗ್ಲಾದೇಶದೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕು. ಪ್ರಧಾನಿ ಮೋದಿ ಅವರು ಕೆಲವು ವರ್ಷಗಳ ಹಿಂದೆಯೇ ಈ ಸಂಬಂಧಿತ ಒಂದು ಸಮಸ್ಯೆಯನ್ನು ಪರಿಹರಿಸಿದ್ದಾರೆ, ಅದರ ಅಡಿಯಲ್ಲಿ ಬಾಂಗ್ಲಾದೇಶದ ಕೆಲವು ಪ್ರದೇಶಗಳು ಭಾರತದಲ್ಲಿ ಮತ್ತು ಕೆಲವು ಭಾರತೀಯ ಪ್ರದೇಶಗಳು ಬಾಂಗ್ಲಾದೇಶದಲ್ಲಿದ್ದವು. ಒಪ್ಪಂದ ಮಾಡಿಕೊಂಡು ಈ ಸಮಸ್ಯೆಯನ್ನು ಬಗೆಹರಿಸಲಾಯಿತು. ಅದೇ ರೀತಿ ‘ಚಿಕನ್ ನೆಕ್’ ಅನ್ನು ಬಲಪಡಿಸಬಹುದು ಎಂದು ರಾಯ್ ಅವರು ಈ ಸಮಸ್ಯೆಯ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಎಂದು ರಾಯ್ ಈ ಸಮಸ್ಯೆಯ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.