ದೇಶದ ಮೊದಲ ಬೌದ್ಧ, ಹಾಗೂ ಎರಡನೇ ದಲಿತ ಮುಖ್ಯ ನ್ಯಾಯಮೂರ್ತಿ
ನವದೆಹಲಿ – ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಸಂಜೀವ ಖನ್ನಾ ಅವರ ನಿವೃತ್ತಿಯ ನಂತರ ಮಹಾರಾಷ್ಟ್ರ ಮೂಲದವರಾದ ನ್ಯಾಯಮೂರ್ತಿ ಭೂಷಣ ರಾಮಕೃಷ್ಣ ಗವಾಯಿ ಅವರು ಮೇ ೧೪ ರಂದು ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದಾರೆ. ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ಅವರ ನಂತರ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿಯಾದ ದೇಶದ ಎರಡನೇ ದಲಿತ ವ್ಯಕ್ತಿ ಅವರಾಗಿದ್ದಾರೆ, ಹಾಗೆಯೇ ಈ ಹುದ್ದೆಯನ್ನು ಅಲಂಕರಿಸಿದ ಮೊದಲ ಬೌದ್ಧ ಧರ್ಮೀಯ ವ್ಯಕ್ತಿಯಾಗಿದ್ದಾರೆ. ಬಾಲಕೃಷ್ಣನ್ ಅವರು ೨೦೦೭ ರಲ್ಲಿ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ನ್ಯಾಯಮೂರ್ತಿ ಗವಾಯಿ ಅವರು ಭಾರತದ ೫೨ನೇ ಮುಖ್ಯ ನ್ಯಾಯಮೂರ್ತಿಯಾಗಿದ್ದು, ಅವರು ನವೆಂಬರ್ ೨೩, ೨೦೨೫ ರವರೆಗೆ, ಅಂದರೆ ೬ ತಿಂಗಳು ಮತ್ತು ೯ ದಿನಗಳ ಕಾಲ ಈ ಹುದ್ದೆಯನ್ನು ಅಲಂಕರಿಸಲಿದ್ದಾರೆ.
೧. ನ್ಯಾಯಮೂರ್ತಿ ಗವಾಯಿ ಅವರು ನವೆಂಬರ್ ೨೪, ೧೯೬೦ ರಂದು ಅಮರಾವತಿಯಲ್ಲಿ ಜನಿಸಿದರು. ಅವರ ತಂದೆ ರಾಮಕೃಷ್ಣ ಸೂರ್ಯಭಾನ ಗವಾಯಿ ಅವರು ಅಂಬೇಡ್ಕರ್ ಚಳವಳಿಯ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದರು.
೨. ಮುಖ್ಯ ನ್ಯಾಯಮೂರ್ತಿ ಭೂಷಣ ಗವಾಯಿ ಅವರು ೧೯೮೫ ರಲ್ಲಿ ವಕೀಲ ವೃತ್ತಿಯನ್ನು ಪ್ರಾರಂಭಿಸಿದರು. ಸ್ವಲ್ಪ ಕಾಲ ಮುಂಬಯಿಯಲ್ಲಿ ಕೆಲಸ ಮಾಡಿದ ನಂತರ ಅವರು ನಾಗಪುರಕ್ಕೆ ಬಂದರು. ಹೈಕೋರ್ಟ್‌ನ ನಾಗಪುರ ಪೀಠದಲ್ಲಿ ಆರಂಭದಲ್ಲಿ ಹೆಚ್ಚುವರಿ ಸಹಾಯಕ ವಕೀಲರಾಗಿ ಕಾರ್ಯನಿರ್ವಹಿಸಿದ ನಂತರ ಮುಖ್ಯ ಸರಕಾರಿ ವಕೀಲರಾಗಿಯೂ ಅವರು ಸೇವೆ ಸಲ್ಲಿಸಿದರು.
೩. ೨೦೦೩ ರಲ್ಲಿ ಅವರು ಮುಂಬಯಿ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರಾಗಿ ಕಾರ್ಯಾರಂಭ ಮಾಡಿದರು, ಹಾಗೆಯೇ ೨೦೦೫ ರಲ್ಲಿ ಖಾಯಂ ನ್ಯಾಯಾಧೀಶರಾದರು.
೪. ಮುಂದೆ ಮೇ ೨೪, ೨೦೧೯ ರಂದು ಅವರನ್ನು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಿಸಲಾಯಿತು.