ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದ ಸಿದ್ಧತೆ ಪೂರ್ಣ: ಕುತೂಹಲ ಗರಿಗೆದರಿದೆ!
“ದೇಶದ ಪ್ರತಿನಿಧಿಗಳು” “ಕೋಟಿ ರಾಮನಾಮದ ಸಂಕಲ್ಪ” “ದೇಶ ಮತ್ತು ಧರ್ಮ ಜಾಗೃತಿಯ ಸಂದೇಶ!”

ಫೊಂಡಾ (ಗೋವಾ), ಮೇ ೧೪ (ವಾರ್ತೆ) – ಕುಂಭಮೇಳಕ್ಕೆ ಕೋಟ್ಯಂತರ ಭಕ್ತರು ಮತ್ತು ಸಂತ-ಮಹಂತರು ಸೇರುವಂತೆಯೇ, ಗೋವಾದ ಪವಿತ್ರ ಭೂಮಿಯಲ್ಲಿ ಮೊದಲ ಬಾರಿಗೆ ಮೇ ೧೭ ರಿಂದ ೧೯ ರವರೆಗೆ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ ಎಂಬ ದಿವ್ಯ ಆಧ್ಯಾತ್ಮಿಕ ಕುಂಭಮೇಳ ನಡೆಯಲಿದೆ. ಈ ಮಹೋತ್ಸವದಲ್ಲಿ ೨೩ ದೇಶಗಳ ನಾಗರಿಕರು, ಸಂತ-ಮಹಂತರು, ಧರ್ಮಪ್ರೇಮಿ ಹಿಂದೂಗಳು ಹಾಗೂ ಭಕ್ತರು ಹೀಗೆ ೨೫ ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ ಎಂದು ಸನಾತನ ಸಂಸ್ಥೆಯ ವಕ್ತಾರ ಶ್ರೀ. ಅಭಯ ವರ್ತಕ್ ತಿಳಿಸಿದರು.
ಫರ್ಮಾಗುಡಿಯ ಇಂಜಿನಿಯರಿಂಗ್ ಕಾಲೇಜಿನ ಮೈದಾನದಲ್ಲಿ ಈ ಮಹೋತ್ಸವ ನಡೆಯಲಿದ್ದು, ಇದರ ಮಾಹಿತಿಗಾಗಿ ಮೇ ೧೪ ರಂದು ಮೈದಾನದಲ್ಲಿ ಪತ್ರಿಕಾಗೋಷ್ಠಿಯನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಗೋವಾ ರಾಜ್ಯ ಸಂಘಟಕ ಶ್ರೀ. ಸತ್ಯವಿಜಯ ನಾಯಕ್, ಹಿಂದುತ್ವನಿಷ್ಠ ಸುಚೇಂದ್ರ ಅಗ್ನಿ, ಉದ್ಯಮಿ ಶ್ರೀ. ಜಯಂತ್ ಮಿರಿಂಗಕರ್ ಹಾಗೂ ಮಂದಿರ ಮಹಾಸಂಘದ ಗೋವಾ ರಾಜ್ಯ ಕಾರ್ಯದರ್ಶಿ ಶ್ರೀ. ಜಯೇಶ್ ಥಳಿ ಉಪಸ್ಥಿತರಿದ್ದರು.

ಶ್ರೀ. ಸತ್ಯವಿಜಯ ನಾಯಕ್ ಅವರು ಪತ್ರಿಕಾಗೋಷ್ಠಿಯ ಪ್ರಸ್ತಾವನೆ ಮಾಡಿದರು. ಮಹೋತ್ಸವದ ಕುರಿತು ಮಾಹಿತಿ ನೀಡುತ್ತಾ ಶ್ರೀ. ವರ್ತಕ್ ಅವರು, ‘ಈ ಮಹೋತ್ಸವವು ರಾಮರಾಜ್ಯದ ಕಡೆಗಿನ ಒಂದು ಸಾಮೂಹಿಕ ಹೆಜ್ಜೆಯಾಗಿದೆ. ಈ ಮಹೋತ್ಸವದಿಂದ ಸಾಧಕರು ಮತ್ತು ಧರ್ಮಪ್ರೇಮಿ ಹಿಂದೂಗಳು ದೇವರು, ದೇಶ ಮತ್ತು ಧರ್ಮದ ರಕ್ಷಣೆಗಾಗಿ ಹೊಸ ಸಂಕಲ್ಪವನ್ನು ತೊಟ್ಟು ಕೃತಿಶೀಲರಾಗುತ್ತಾರೆ. ಮಹೋತ್ಸವದ ಎಲ್ಲ ಸಿದ್ಧತೆಗಳು ಪೂರ್ಣಗೊಳ್ಳುತ್ತಾ ಬಂದಿವೆ. ಶೀಘ್ರದಲ್ಲೇ ಎಲ್ಲರಿಗೂ ಗೋವಾದಲ್ಲಿ ಭಕ್ತಿ ಮತ್ತು ಶಕ್ತಿಯ ಸುಂದರ ಸಂಗಮವು ನೋಡಲು ಸಿಗಲಿದೆ’ ಎಂದರು.
ಉದ್ಯಮಿ ಶ್ರೀ. ಜಯಂತ ಮಿರಿಂಗಕರ್ ಅವರು ಮಾತನಾಡಿ, ‘ಈ ಮಹೋತ್ಸವದ ಆಮಂತ್ರಣದ ಫಲಕಗಳನ್ನು ಇಡೀ ಗೋವಾದಾದ್ಯಂತ ಅಲ್ಲಲ್ಲಿ ಹಾಕಲಾಗಿದೆ. ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣ, ಬಸ್ ನಿಲ್ದಾಣದಿಂದ ಕಾರ್ಯಕ್ರಮಕ್ಕೆ ಬರುವವರಿಗಾಗಿ ಉಚಿತ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಈ ಎಲ್ಲ ಸ್ಥಳಗಳಲ್ಲಿ ಸಹಾಯ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಮಹೋತ್ಸವದ ಸ್ಥಳದಲ್ಲಿ ವೈದ್ಯಕೀಯ ಸೇವೆಗಾಗಿ ೧೬ ವೈದ್ಯರ ವ್ಯವಸ್ಥೆ ಮಾಡಲಾಗಿದೆ’ ಎಂದರು.

ಶ್ರೀ. ಜಯೇಶ್ ಥಳಿ ಅವರು, ‘ಆಪರೇಷನ್ ಸಿಂದೂರ್’ ಹಿನ್ನೆಲೆಯಲ್ಲಿ ನಿರ್ಮಾಣವಾದ ಯುದ್ಧ ಸದೃಶ ಪರಿಸ್ಥಿತಿಯಲ್ಲಿ ಭಾರತದ ವಿಜಯಕ್ಕಾಗಿ ಮಹೋತ್ಸವದಲ್ಲಿ ಮೇ ೨೦, ೨೧ ಮತ್ತು ೨೨ ರಂದು ‘ಶತಚಂಡಿ ಯಾಗ’ವನ್ನು ಆಯೋಜಿಸಲಾಗಿದೆ. ರಾಷ್ಟ್ರಪ್ರೇಮಿಗಳು ಈ ಯಾಗದಲ್ಲಿ ಉಪಸ್ಥಿತರಿದ್ದು ರಾಷ್ಟ್ರ ಕಾರ್ಯಕ್ಕೆ ಕೊಡುಗೆ ನೀಡಬೇಕು’ ಎಂದು ಹೇಳಿದರು.
ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದ ವೈಶಿಷ್ಟ್ಯಗಳು!
೧. ಭವ್ಯ ಧಾರ್ಮಿಕ ಗ್ರಂಥ ಮಾರಾಟ ಕೇಂದ್ರ, ಗೋ-ಕಕ್ಷೆ, ಶ್ರೀಅನ್ನಪೂರ್ಣ ಕಕ್ಷೆ, ಗುರುಮಂದಿರ, ೬ ಸಾವಿರ ಚದರ ಅಡಿಗಳ ಶಿವಕಾಲೀನ ಐತಿಹಾಸಿಕ ಶಸ್ತ್ರ ಪ್ರದರ್ಶನ, ೧೫ ಸಂತರುಗಳ ಪವಿತ್ರ ಪಾದುಕೆಗಳ ಕಕ್ಷೆ, ೧ ಸಾವಿರ ವರ್ಷಗಳ ಹಿಂದಿನ ಸೋರಟಿ ಸೋಮನಾಥ ಜ್ಯೋತಿರ್ಲಿಂಗದ ಕಕ್ಷೆಯು ಮಹೋತ್ಸವದ ಸ್ಥಳದಲ್ಲಿ ಇರಲಿದೆ.
೨. ಈ ಮಹೋತ್ಸವಕ್ಕೆ ಬರುವ ಭಕ್ತರು ಹಾಗೂ ಹಿಂದುತ್ವನಿಷ್ಠರ ನೋಂದಣಿ ಮಾಡಲಾಗಿದೆ. ಮಹೋತ್ಸವಕ್ಕೆ ಗೋವಾದಿಂದ ಪ್ರತಿದಿನ ೬-೭ ಸಾವಿರ ಭಕ್ತರು ಆಗಮಿಸಲಿದ್ದಾರೆ.
೩. ಈ ಮಹೋತ್ಸವದಲ್ಲಿ ಸುರಕ್ಷತೆಯ ಕಾರಣದಿಂದ ಎಲ್ಲರೂ ಪ್ರವೇಶಕ್ಕಾಗಿ ಸರಕಾರದಿಂದ ಮಾನ್ಯತೆ ಪಡೆದ ಗುರುತಿನ ಚೀಟಿಯನ್ನು ತರುವುದು ಕಡ್ಡಾಯವಾಗಿದೆ. ಪ್ರತಿಯೊಬ್ಬರಿಗೂ ಹೆಸರು ನೋಂದಾಯಿಸಿದ ನಂತರವೇ ಮಹೋತ್ಸವದ ಸ್ಥಳಕ್ಕೆ ಪ್ರವೇಶ ನೀಡಲಾಗುವುದು. ಸುರಕ್ಷತೆಯ ಕಾರಣದಿಂದ ಮಹೋತ್ಸವದ ಸ್ಥಳಕ್ಕೆ ಬ್ಯಾಗ್, ಚೀಲಗಳು, ಕುಡಿಯುವ ನೀರಿನ ಬಾಟಲಿ ಮುಂತಾದ ವಸ್ತುಗಳನ್ನು ತರುವುದನ್ನು ನಿಷೇಧಿಸಲಾಗಿದೆ.
೪. ಮಹೋತ್ಸವದ ಅವಧಿಯಲ್ಲಿ ಒಂದೇ ಸಮಯದಲ್ಲಿ ೧ ಕೋಟಿ ಶ್ರೀರಾಮ ನಾಮ ಜಪವನ್ನು ಮಾಡಲಾಗುವುದು.
ಹೀಗಿರಲಿದೆ ವ್ಯವಸ್ಥೆ! ೧. ಮಹೋತ್ಸವದ ವಿಸ್ತೀರ್ಣ ೧ ಲಕ್ಷ ೨೬ ಸಾವಿರ ಚದರ ಮೀಟರ್ ಪ್ರದೇಶದಲ್ಲಿ ಹರಡಿಕೊಂಡಿದೆ. ಅದರಲ್ಲಿ ೨೫ ಸಾವಿರ ಜನರಿಗೆ ಕುಳಿತುಕೊಳ್ಳಲು ಹವಾನಿಯಂತ್ರಿತ ಮಂಟಪದ ವ್ಯವಸ್ಥೆ ಮಾಡಲಾಗಿದೆ. ಭಕ್ತರಿಗಾಗಿ ೩೫೦ ಶೌಚಾಲಯಗಳು ಮುಂತಾದ ವ್ಯವಸ್ಥೆಗಳನ್ನು ಮಾಡಲಾಗಿದೆ. ೨. ಮಹೋತ್ಸವದಲ್ಲಿ ಪೊಲೀಸರಿಗೆ ಸುರಕ್ಷತೆಯ ದೃಷ್ಟಿಯಿಂದ ನಿಗಾ ಇಡಲು ಗೋಪುರಗಳು, ಸಿಸಿಟಿವಿ, ಭದ್ರತಾ ಸಿಬ್ಬಂದಿ, ಆಂಬ್ಯುಲೆನ್ಸ್, ದ್ವಿಚಕ್ರ ವಾಹನ ಆಂಬ್ಯುಲೆನ್ಸ್ (ಬೈಕ್ ಆಂಬ್ಯುಲೆನ್ಸ್), ಅಗ್ನಿಶಾಮಕ ದಳದ ವಾಹನಗಳು, ಸುಸೂತ್ರ ನಿರ್ವಹಣೆಗಾಗಿ ಆಡಳಿತದ ೨೫ ಇಲಾಖೆಗಳಿಗೆ ಕಕ್ಷೆಗಳು, ಮಾಧ್ಯಮ ಪ್ರತಿನಿಧಿಗಳಿಗೆ ಪ್ರತ್ಯೇಕ ಕಕ್ಷೆ ಹಾಗೂ ಇತರ ಅಗತ್ಯ ಸೌಲಭ್ಯಗಳು ಇರಲಿವೆ. ೩. ಕಾರ್ಯಕ್ರಮದ ಸ್ಥಳದಲ್ಲಿ ೭೦ ಕಡೆ ಕುಡಿಯುವ ನೀರಿನ ವ್ಯವಸ್ಥೆ ಇದೆ. ೪. ವಯಸ್ಸಾದ ವ್ಯಕ್ತಿಗಳಿಗಾಗಿ ಮಹೋತ್ಸವದ ಸ್ಥಳದಲ್ಲಿ ಇ-ರಿಕ್ಷಾಗಳ ವ್ಯವಸ್ಥೆ ಮಾಡಲಾಗಿದೆ. ಅತಿ ಗಣ್ಯ ಮತ್ತು ಗಣ್ಯ ವ್ಯಕ್ತಿಗಳಿಗೆ ಪ್ರತ್ಯೇಕ ಪ್ರವೇಶ ದ್ವಾರ ಇರಲಿದೆ. ೫. ಮಹೋತ್ಸವದ ಸ್ಥಳದಲ್ಲಿ ಜನಸಂದಣಿಯ ನಿರ್ವಹಣೆಗಾಗಿ ೨೦೦ ಸಂಚಾರ ಪೊಲೀಸರು ಮತ್ತು ೭೦ ಸ್ವಯಂಸೇವಕರು ಇರಲಿದ್ದಾರೆ. ಕಾರ್ಯಕ್ರಮದ ಸ್ಥಳದಲ್ಲಿ ಉನ್ನತ ಮಟ್ಟದ ಭದ್ರತಾ ವ್ಯವಸ್ಥೆ ಇರಲಿದೆ. ೬. ೧೧ ಸಾವಿರ ಸಾಮರ್ಥ್ಯದ ೧ ಮತ್ತು ೭ ಸಾವಿರ ಆಸನ ಸಾಮರ್ಥ್ಯದ ೨, ಹೀಗೆ ಒಟ್ಟು ೩ ಸಭಾ ಮಂಟಪಗಳು ಇರಲಿವೆ. ಈ ಮೂರೂ ಸಭಾ ಮಂಟಪಗಳು ಹವಾನಿಯಂತ್ರಿತವಾಗಿರಲಿವೆ. ಮಹೋತ್ಸವದ ನೇರ ಪ್ರಸಾರ ವೀಕ್ಷಿಸಬಹುದಾಗಿದೆ!ಈ ಮಹೋತ್ಸವದ ನೇರ ಪ್ರಸಾರವನ್ನು ‘SanatanRashtraShankhnad.in’ ಈ ಜಾಲತಾಣದಲ್ಲಿ ವೀಕ್ಷಿಸಬಹುದಾಗಿದೆ. |