ಕನ್ಯಾದಾನ ಮತ್ತು ಸಪ್ತಪದಿ ವಿಧಿಗಳಿಲ್ಲದೆ ಮಾಡಲಾದ ನೋಂದಾಯಿತ ವಿವಾಹವು ಅಸಿಂಧುವೇ! – ಮುಂಬಯಿ ಹೈಕೋರ್ಟ್

ನಾಗಪುರ – ಕನ್ಯಾದಾನ ಮತ್ತು ಸಪ್ತಪದಿ ಹಿಂದೂ ವಿವಾಹ ಪದ್ಧತಿಯಲ್ಲಿನ ಅತ್ಯಂತ ಪ್ರಮುಖ ವಿಧಿಗಳಾಗಿವೆ. ಈ ವಿಧಿಗಳನ್ನು ಮಾಡದಿದ್ದರೆ ವಿವಾಹವು ಪೂರ್ಣಗೊಳ್ಳುವುದಿಲ್ಲ. ಈ ವಿಧಿಗಳಿಲ್ಲದ ಸಂಬಂಧ ಮತ್ತು ಸಮುದಾಯ ಭವನಗಳಿಂದ ಪಡೆದ ವಿವಾಹ ನೋಂದಣಿ ಪ್ರಮಾಣಪತ್ರವು ಅಸಿಂಧುವಾಗುತ್ತದೆ ಎಂದು ಮುಂಬಯಿ ಹೈಕೋರ್ಟ್‌ನ ನಾಗಪುರ ಪೀಠವು ಮಹತ್ವದ ಅಭಿಪ್ರಾಯವನ್ನು ದಾಖಲಿಸಿದೆ. ಭಂಡಾರ ಕೌಟುಂಬಿಕ ನ್ಯಾಯಾಲಯವು ನೀಡಿದ್ದ ವಿಚ್ಛೇದನದ ತೀರ್ಪನ್ನು ಉಚ್ಚ ನ್ಯಾಯಾಲಯವು ರದ್ದುಗೊಳಿಸಿದೆ. ಪತ್ನಿಯು ಈ ಹಿಂದೆ ಮತ್ತೊಂದು ವಿವಾಹವಾಗಿದ್ದಾಳೆ ಎಂಬ ಆರೋಪ ಮಾಡಿದ್ದ ಪತಿಗೆ ಕೌಟುಂಬಿಕ ನ್ಯಾಯಾಲಯವು ಸಮಾಧಾನ ನೀಡಿ ವಿಚ್ಛೇದನವನ್ನು ಮಂಜೂರು ಮಾಡಿತ್ತು. ಈ ತೀರ್ಪನ್ನು ಪ್ರಶ್ನಿಸಿ ಪತ್ನಿಯ ವಕೀಲೆ ಶಿಲ್ಪಾ ಗಿರ್ಟ್ಕರ್ ಅವರ ಮೂಲಕ ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದಳು. ಈ ಪ್ರಕರಣದ ವಿಚಾರಣೆಯು ನ್ಯಾಯಾಧೀಶರಾದ ಅನಿಲ್ ಕಿಲೋರ್ ಮತ್ತು ನ್ಯಾಯಾಧೀಶ ಪ್ರವೀಣ ಪಾಟೀಲ್ ಅವರ ಮುಂದೆ ನಡೆಯಿತು ಮತ್ತು ಅದರಲ್ಲಿ ಮೇಲಿನ ತೀರ್ಪು ಹೊರಬಿದ್ದಿತು.

೧. ಭಂಡಾರದ ವಿವಾಹಿತ ಮಹಿಳೆಯೊಬ್ಬಳ ‘ಕಥಿತ’ ಮೊದಲ ವಿವಾಹವು ಧರ್ಮಶಾಲೆಯಲ್ಲಿ ನಡೆದಿರುವುದು ಆಕೆಯ ಗಂಡನ ಮನೆಯವರಿಗೆ ತಿಳಿದುಬಂದಿತು. ಅವರು ಧರ್ಮಶಾಲೆಯಿಂದ ಈ ವಿವಾಹಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪಡೆದುಕೊಂಡರು. ಈ ಆಧಾರದ ಮೇಲೆ ಪತಿಯು, ‘ಪತ್ನಿಯು ಮೊದಲ ವಿವಾಹದ ಮಾಹಿತಿಯನ್ನು ಮುಚ್ಚಿಟ್ಟು ನನ್ನೊಂದಿಗೆ ಎರಡನೇ ವಿವಾಹ ಮಾಡಿಕೊಂಡಿದ್ದಾಳೆ’ ಎಂದು ಆರೋಪಿಸಿ ಭಂಡಾರ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದನು. ಭಂಡಾರ ಕೌಟುಂಬಿಕ ನ್ಯಾಯಾಲಯವು ವಿಚ್ಛೇದನವನ್ನು ಮಂಜೂರು ಮಾಡಿತು ಮತ್ತು ಧರ್ಮಶಾಲೆಯಲ್ಲಿ ಮೊದಲ ವಿವಾಹವಾಗಿರುವುದು ಹಾಗೂ ಪಡೆದ ಪ್ರಮಾಣಪತ್ರವು ಮಾನ್ಯವೆಂಬ ವಾದವನ್ನು ಪುರಸ್ಕರಿಸಿತು.

೨. ಕೌಟುಂಬಿಕ ನ್ಯಾಯಾಲಯವು ಧರ್ಮಶಾಲೆಯ ಪ್ರಮಾಣಪತ್ರಕ್ಕೆ ಅತಿಯಾದ ಮಹತ್ವ ನೀಡಿದೆ ಎಂದು ಉಚ್ಚ ನ್ಯಾಯಾಲಯವು ಅಭಿಪ್ರಾಯಪಟ್ಟಿತು ಮತ್ತು ಈ ತೀರ್ಪನ್ನು ರದ್ದುಗೊಳಿಸಿ ಪ್ರಕರಣವನ್ನು ಮರು ಪರಿಶೀಲನೆಗಾಗಿ ಭಂಡಾರ ಕೌಟುಂಬಿಕ ನ್ಯಾಯಾಲಯಕ್ಕೆ ವರ್ಗಾಯಿಸಿತು.

೩. ಮಹಿಳೆಯ ಮೊದಲ ವಿವಾಹವು ‘ಹಿಂದೂ ವಿವಾಹ ಕಾಯ್ದೆ’ಯ ಪ್ರಕಾರ ಮಾನ್ಯವಾಗಿರಲಿಲ್ಲ; ಏಕೆಂದರೆ ಅದರಲ್ಲಿ ಕನ್ಯಾದಾನ ಮತ್ತು ಸಪ್ತಪದಿಯಂತಹ ಅಗತ್ಯ ವಿಧಿಗಳು ನೆರವೇರಿರಲಿಲ್ಲ. ಧರ್ಮಶಾಲೆಯಿಂದ ಪಡೆದ ಪ್ರಮಾಣಪತ್ರವು ಮಾನ್ಯ ವಿವಾಹದ ಪುರಾವೆಯಾಗಲು ಸಾಧ್ಯವಿಲ್ಲ. ಇದೇ ಆಧಾರದ ಮೇಲೆ ಉಚ್ಚ ನ್ಯಾಯಾಲಯವು ಈ ತೀರ್ಪನ್ನು ರದ್ದುಗೊಳಿಸಿತು.