ಭಾಗ್ಯನಗರ (ತೆಲಂಗಾಣ) – ಇಲ್ಲಿನ ಶಂಶಾಬಾದ ಪ್ರದೇಶದಲ್ಲಿರುವ ‘ಕರಾಚಿ ಬೇಕರಿ’ಯ ಶಾಖೆಯನ್ನು ಧ್ವಂಸಗೊಳಿಸಲಾಗಿದೆ. ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಧ್ವಂಸಗೊಳಿಸಿದವರು ಭಾಜಪ ಕಾರ್ಯಕರ್ತರು ಎಂದು ಆರೋಪಿಸಲಾಗುತ್ತಿದೆ. ಅಂಗಡಿಯ ಹೆಸರನ್ನು ಬದಲಾಯಿಸಬೇಕು ಎಂದು ಬೇಕರಿ ಮಾಲೀಕರಿಗೆ ಒತ್ತಾಯಿಸಲಾಗುತ್ತಿದೆ. ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಪ್ರತಿಭಟನೆಯ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಕಳೆದ ವಾರ ಪ್ರತಿಭಟನಾಕಾರರು ಕರಾಚಿ ಬೇಕರಿಯ ಬಂಜಾರಾ ಹಿಲ್ಸ್ ನಲ್ಲಿರುವ ಶಾಖೆಯಲ್ಲಿ ಭಾರತೀಯ ರಾಷ್ಟ್ರಧ್ವಜವನ್ನು ಹಚ್ಚಿದ್ದರು.
1. ಕರಾಚಿ ಬೇಕರಿಗೆ ಪಾಕಿಸ್ತಾನದ ಕರಾಚಿ ನಗರದ ಹೆಸರನ್ನು ಇಡಲಾಗಿದ್ದರೂ, ಅದನ್ನು ಭಾರತೀಯ ಕುಟುಂಬವೊಂದು ನಡೆಸುತ್ತಿದೆ. ಕರಾಚಿ ಬೇಕರಿಯ ಮಾಲೀಕರು ವಿಭಜನೆಯ ಸಮಯದಲ್ಲಿ ಭಾಗ್ಯನಗರಕ್ಕೆ ವಲಸೆ ಬಂದವರ ವಂಶಸ್ಥರಾಗಿದ್ದಾರೆ.
2. ಈ ಬೇಕರಿಯನ್ನು 1953 ರಲ್ಲಿ ಹೈದರಾಬಾದಿನ ಮೊಜಮಜಾಹಿ ಮಾರುಕಟ್ಟೆಯಲ್ಲಿ ಸ್ಥಾಪಿಸಲಾಯಿತು. ಕರಾಚಿ ಬೇಕರಿಯು ದೆಹಲಿ, ಬೆಂಗಳೂರು ಮತ್ತು ಚೆನ್ನೈ ಸೇರಿದಂತೆ ಅನೇಕ ನಗರಗಳಲ್ಲಿ ಶಾಖೆಗಳನ್ನು ಹೊಂದಿದೆ. ಕೇವಲ ಭಾಗ್ಯನಗರದಲ್ಲಿಯೇ ಬೇಕರಿಯ 24 ಶಾಖೆಗಳಿವೆ.
3. ಬೇಕರಿಯ ವ್ಯವಸ್ಥಾಪಕರು, ನಾವು ಭಾರತೀಯರಾಗಿದ್ದೇವೆ, ನಮ್ಮನ್ನು ಪಾಕಿಸ್ತಾನಿಗಳು ಎಂದು ಆರೋಪಿಸಬಾರದು, ಎಂದು ಹೇಳಿದ್ದಾರೆ.
4. ಈ ಹಿಂದೆ, ಬೇಕರಿ ಮಾಲೀಕರಾದ ರಾಜೇಶ ಮತ್ತು ಹರೀಶ ರಾಮನಾನಿ ಅವರು ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ ರೆಡ್ಡಿ ಅವರಿಗೆ ರಕ್ಷಣೆ ನೀಡುವಂತೆ ಕೋರಿ ಮನವಿ ಸಲ್ಲಿಸಿದ್ದರು. 2019 ರಲ್ಲಿ ಪುಲ್ವಾಮಾದಲ್ಲಿ ನಡೆದ ದಾಳಿಯ ನಂತರವೂ ಬೇಕರಿಯನ್ನು ಧ್ವಂಸಗೊಳಿಸಲಾಗಿತ್ತು.