ಮೈದಾನದಲ್ಲಿ ಪೂರ್ವಸಿದ್ಧತೆಗಳು ಹಾಗೂ ಗೋವಾ ರಾಜ್ಯದಲ್ಲಿ ಪ್ರಚಾರ ಚುರುಕು!

ಸನಾತನ ರಾಷ್ಟ್ರದ ಶಂಖನಾದ ಕಾರ್ಯಕ್ರಮಕ್ಕೆ ಕೇವಲ ೫ ದಿನಗಳು ಬಾಕಿ !

ಭಗವಾನ್ ಶ್ರೀಕೃಷ್ಣ ಶಂಖನಾದ ಮಾಡುತ್ತಿರುವ ಆಕರ್ಷಕ ‘ಕಟೌಟ್’

ಫೊಂಡಾ (ಗೋವಾ), ಮೇ ೧೨ (ವಾರ್ತೆ) – ಸನಾತನ ಸಂಸ್ಥೆಯ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ೮೩ನೇ ಜನ್ಮೋತ್ಸವ ಮತ್ತು ಸಂಸ್ಥೆಯ ರಜತ ಮಹೋತ್ಸವದ ಅಂಗವಾಗಿ ಇಲ್ಲಿನ ಫರ್ಮಾಗುಡಿಯ ಇನ್ಫಿನಿಟಿ ಮೈದಾನದಲ್ಲಿ ಮೇ ೧೭ ರಿಂದ ೧೯ ರವರೆಗೆ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ವನ್ನು ಆಯೋಜಿಸಲಾಗಿದೆ. ಈ ಮಹೋತ್ಸವಕ್ಕೆ ಈಗ ಕೇವಲ ೫ ದಿನಗಳು ಬಾಕಿ ಇರುವುದರಿಂದ, ಸಮಾರಂಭದ ಮೈದಾನದಲ್ಲಿ ಪೂರ್ವಸಿದ್ಧತೆಗಳು ಭರದಿಂದ ಸಾಗಿವೆ. ಹಾಗೆಯೇ, ಇಡೀ ಗೋವಾ ರಾಜ್ಯದಾದ್ಯಂತ ಈ ಮಹೋತ್ಸವದ ಜಾಗೃತಿಯಿಂದ ಪ್ರತಿಧನಿಸುತ್ತಿದೆ.

ಮೈದಾನದ ಮಾರ್ಗದಲ್ಲಿ ನಿರ್ಮಿಸಲಾದ ಭವ್ಯವಾದ ಕಮಾನು

ಮೈದಾನದಲ್ಲಿ ಶಾಮಿಯಾನ ಹಾಕುವಿಕೆ, ಮೈದಾನದ ಪ್ರವೇಶದ್ವಾರದಲ್ಲಿ ಸ್ವಾಗತ ಕಮಾನುಗಳನ್ನು ನಿರ್ಮಿಸುವುದು, ಮೈದಾನಕ್ಕೆ ವಾಹನಗಳು ಬರಲು ಅನುಕೂಲವಾಗುವಂತೆ ವಿಶಾಲವಾದ ರಸ್ತೆಗಳನ್ನು ನಿರ್ಮಿಸುವುದು ಮುಂತಾದ ಸಿದ್ಧತೆಗಳು ವೇಗವಾಗಿ ನಡೆಯುತ್ತಿವೆ. ವೇದಿಕೆ, ಆಸನಗಳ ವ್ಯವಸ್ಥೆ, ಮಾಧ್ಯಮ ಪ್ರತಿನಿಧಿಗಳಿಗಾಗಿ ವ್ಯವಸ್ಥೆ, ವಾಹನ ನಿಲುಗಡೆ ಸ್ಥಳ ಮುಂತಾದ ವಿವಿಧ ಭಾಗಗಳ ವಿನ್ಯಾಸ ಪೂರ್ಣಗೊಂಡಿದ್ದು, ಅವುಗಳ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಮೈದಾನದಲ್ಲಿ ಧರ್ಮಧ್ವಜವನ್ನು ಹಾರಿಸಲು ಪೀಠದ ನಿರ್ಮಾಣ ಮಾಡಲಾಗಿದೆ. ಮೈದಾನದಲ್ಲಿ ವೇದಿಕೆ ನಿರ್ಮಾಣದ ಕೆಲಸವೂ ಅಂತಿಮ ಹಂತದಲ್ಲಿದೆ.

ಮೈದಾನದಲ್ಲಿ ನಿರ್ಮಿಸಲಾಗುತ್ತಿರುವ ಭವ್ಯ ಸ್ವಾಗತ ಕಮಾನು

ರಾಜ್ಯದಲ್ಲಿ ನೂರಾರು ಹೋರ್ಡಿಂಗ್‌ಗಳು (ದೊಡ್ಡ ಫಲಕಗಳು) ಆಕರ್ಷಣೆಯ ಕೇಂದ್ರ !

ಫೊಂಡಾದ ಪ್ರಮುಖ ಸ್ಥಳದಲ್ಲಿ ಅಳವಡಿಸಲಾದ ದೊಡ್ಡ ಗಾತ್ರದ ಬ್ಯಾನರ್

ಗೋವಾ ರಾಜ್ಯದಲ್ಲಿ ಮುಖ್ಯವಾಗಿ ನಗರಗಳಲ್ಲಿ ಅಲ್ಲಲ್ಲಿ ಈ ಮಹೋತ್ಸವದ ವಿವಿಧ ಗಾತ್ರದ ಹೋರ್ಡಿಂಗ್‌ಗಳನ್ನು ಹಾಕಲಾಗಿದೆ. ಇಡೀ ಗೋವಾ ರಾಜ್ಯದಲ್ಲಿ ೬೦೦ ಕ್ಕೂ ಹೆಚ್ಚು ಫಲಕಗಳು ಹಾಗೂ ೧೦೦ ಕ್ಕೂ ಹೆಚ್ಚು ಹೋರ್ಡಿಂಗ್‌ಗಳನ್ನು ಅಳವಡಿಸಲಾಗಿದೆ. ವಿಮಾನ ನಿಲ್ದಾಣ, ಬಸ್ ನಿಲ್ದಾಣ, ರೈಲು ನಿಲ್ದಾಣದ ಮಾರ್ಗಗಳಲ್ಲಿ ಗಮನ ಸೆಳೆಯುವ ಸ್ಥಳಗಳಲ್ಲಿ ಹಾಕಲಾಗಿರುವ ಈ ಹೋರ್ಡಿಂಗ್‌ಗಳು ಎಲ್ಲರ ಗಮನ ಸೆಳೆಯುತ್ತಿವೆ. ಫೊಂಡಾ ನಗರದ ಮುಖ್ಯ ಸ್ಥಳದಲ್ಲಿ (ಬೋರಿಯ ಪೆಟ್ರೋಲ್ ಪಂಪ್‌ನ ಹಿಂದಿನ ವೃತ್ತ) ಭಗವಾನ್ ಶ್ರೀಕೃಷ್ಣ ಶಂಖನಾದ ಮಾಡುತ್ತಿರುವ ಕಟೌಟ್ ಎಲ್ಲರ ಗಮನ ಸೆಳೆಯುತ್ತಿದೆ. ಇದೇ ಈ ಮಹೋತ್ಸವದ ಲಾಂಛನವೂ ಆಗಿದೆ. ಅನೇಕ ಧರ್ಮಪ್ರೇಮಿಗಳು ಮತ್ತು ಪ್ರವಾಸಿಗರು ಇದರೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ ಹಾಗೂ ಛಾಯಾಚಿತ್ರಗಳನ್ನು ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ. ‘ಗೋವಾವನ್ನು ಆಧ್ಯಾತ್ಮಿಕ ಪ್ರವಾಸೋದ್ಯಮದಲ್ಲಿ ಮುಂಚೂಣಿಯಲ್ಲಿರಿಸುವ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ ಎಂಬ ಹೋರ್ಡಿಂಗ್ ಮೇಲಿನ ಬರಹವು ಗೋವಾದ ಆಧ್ಯಾತ್ಮಿಕ ಗುರುತನ್ನು ಸೃಷ್ಟಿಸುತ್ತಿದೆ. ಈ ಸಮಾರಂಭಕ್ಕೆ ದೇಶ-ವಿದೇಶಗಳ ಗಣ್ಯರು ಉಪಸ್ಥಿತರಿರಲಿದ್ದಾರೆ ಎಂದು ಸನಾತನ ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ಶ್ರೀ ವೀರೇಂದ್ರ ಮರಾಠೆಯವರು ತಿಳಿಸಿದ್ದಾರೆ.