ವಿದೇಶಿ ಚಿತ್ರಗಳಿಗೆ ಅಮೇರಿಕಾದಲ್ಲಿ 100% ತೆರಿಗೆ ವಿಧಿಸಲು ಟ್ರಂಪ್ ಘೋಷಣೆ

ವಾಷಿಂಗ್ಟನ್ – ವಿದೇಶಿ ಚಿತ್ರಗಳು ಅಮೇರಿಕಾದಲ್ಲಿ ಬಿಡುಗಡೆಯಾದಾಗ ಅವುಗಳಿಗೆ 100% ತೆರಿಗೆ ವಿಧಿಸಲಾಗುವುದು ಎಂದು ಅಲ್ಲಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಘೋಷಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ‘ಪೋಸ್ಟ್’ ಮಾಡುವ ಮೂಲಕ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ, ಹಾಗೆಯೇ ವಾಣಿಜ್ಯ ಇಲಾಖೆಗೆ ಈ ಬಗ್ಗೆ ಆದೇಶ ನೀಡಿದ್ದಾರೆ. ವಿದೇಶದಲ್ಲಿ ತಯಾರಾದ ಚಿತ್ರಗಳು ಅಮೇರಿಕಾ ವಿರೋಧಿ ಪ್ರಚಾರವನ್ನು ಮಾಡಬಹುದು, ಹಾಗಾಗಿ ಅವು ಅಮೇರಿಕಾದ ರಾಷ್ಟ್ರೀಯ ಭದ್ರತೆಗೆ ಅಪಾಯಕಾರಿ ಎಂದು ಟ್ರಂಪ್ ಆರೋಪಿಸಿದ್ದಾರೆ. ಈ ತೆರಿಗೆಯನ್ನು ಹೇಗೆ ವಿಧಿಸಲಾಗುವುದು? ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ.

ಅಮೇರಿಕಾದಲ್ಲಿ ಚಲನಚಿತ್ರ ನಿರ್ಮಾಣ 26% ರಷ್ಟು ಕುಸಿತ!

ಅಮೇರಿಕಾದಲ್ಲಿ ಚಲನಚಿತ್ರ ನಿರ್ಮಾಣದ ಪ್ರಮಾಣ ನಿರಂತರವಾಗಿ ಕಡಿಮೆಯಾಗುತ್ತಿದೆ. ವರದಿಯೊಂದರ ಪ್ರಕಾರ, 2021ಕ್ಕೆ ಹೋಲಿಸಿದರೆ 2023ರಲ್ಲಿ ಅಮೇರಿಕಾದಲ್ಲಿ ಚಲನಚಿತ್ರ ನಿರ್ಮಾಣವು 26% ರಷ್ಟು ಕುಸಿದಿದೆ. ಇದರಿಂದಾಗಿ ಚಲನಚಿತ್ರ ನಿರ್ಮಾಣಕ್ಕೆ ಹೆಸರುವಾಸಿಯಾದ ಲಾಸ್ ಏಂಜಲೀಸ್ ನಗರದ ಪರಿಸ್ಥಿತಿ ಹದಗೆಟ್ಟಿದೆ. ಚಲನಚಿತ್ರ ಉದ್ಯಮಕ್ಕೆ ಸಂಬಂಧಿಸಿದ ಸಂಸ್ಥೆ ‘ಮೋಷನ್ ಪಿಕ್ಚರ್ ಅಸೋಸಿಯೇಷನ್’ ಪ್ರಕಾರ, 2023ರಲ್ಲಿ ಅಮೇರಿಕನ್ ಚಿತ್ರಗಳು ಜಗತ್ತಿನಾದ್ಯಂತ ಕೇವಲ 22.6 ಬಿಲಿಯನ್ ಡಾಲರ್ ಗಳಿಸಿವೆ. ಅಮೇರಿಕಾದ ಹೊರಗೆ ಚಿತ್ರಗಳನ್ನು ತಯಾರಿಸಲಾಗುತ್ತಿದೆ ಎಂದು ಟ್ರಂಪ್ ಈ ಹಿಂದೆ ಆತಂಕ ವ್ಯಕ್ತಪಡಿಸಿದ್ದರು. ಅಮೇರಿಕಾದಲ್ಲಿ ಚಿತ್ರ ತಯಾರಿಸಲು ಬಯಸದವರಿಗೆ ತೆರಿಗೆ ವಿಧಿಸಬೇಕೆಂದು ಟ್ರಂಪ್ ಹೇಳಿದ್ದರು.