ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತನ ಬರ್ಬರ ಕೊಲೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂದ್ ಗೆ ಕರೆ

ಮಂಗಳೂರು – ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಮೇ 1 ರಂದು ಸಂಜೆ ಸುಹಾಸ ಶೆಟ್ಟಿ ಎಂಬ ಹಿಂದುತ್ವನಿಷ್ಠ ಕಾರ್ಯಕರ್ತನ ಕೊಲೆ ಮಾಡಲಾಗಿದೆ. ಸುಹಾಸ ಶೆಟ್ಟಿ ಅವರು ಭಾಜಪ ಯುವ ಮೋರ್ಚಾ ನಾಯಕ ಪ್ರವೀಣ ನೆಟ್ಟಾರು ಹತ್ಯೆಯ ಆರೋಪಿ ಫಾಜಿಲ್ ನ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಮತ್ತು ಅವನ ವಿರುದ್ಧ ಇತರ ಅಪರಾಧ ಪ್ರಕರಣಗಳೂ ದಾಖಲಾಗಿದ್ದವು.

1. ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಮೇ 1 ರ ರಾತ್ರಿ 8 ಗಂಟೆ 27 ನಿಮಿಷಕ್ಕೆ ಕಿನಿಪಾಡವು ಕ್ರಾಸ್ ಬಳಿ ಸುಹಾಸ ಶೆಟ್ಟಿಯನ್ನು ಕೊಲೆ ಮಾಡಲಾಗಿದೆ. ಸುಹಾಸ ಶೆಟ್ಟಿ ಅವರು ಸಂಜಯ, ಪ್ರಜ್ವಲ, ಅನ್ವಿತ, ಲತೀಶ ಮತ್ತು ಶಶಾಂಕ ಅವರೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಆ ಸಮಯದಲ್ಲಿ ಮತ್ತೊಂದು ಕಾರಿನಲ್ಲಿ ಬಂದ ದುಷ್ಕರ್ಮಿಗಳು ಅವರ ವಾಹನವನ್ನು ಅಡ್ಡಗಟ್ಟಿ ಸುಹಾಸ ಶೆಟ್ಟಿ ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದರು. ಇದರಿಂದ ಅವರು ಗಂಭೀರವಾಗಿ ಗಾಯಗೊಂಡರು. ಅವರನ್ನು ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಅವರು ಮೃತಪಟ್ಟಿದ್ದಾರೆಂದು ಹೇಳಿದರು.

2. ಈ ಹತ್ಯೆಯ ಆರೋಪಿಗಳನ್ನು ಪೊಲೀಸರು ಗುರುತಿಸಿದ್ದು, ಅವರನ್ನು ಬಂಧಿಸಲು ಹಲವು ತಂಡಗಳನ್ನು ರಚಿಸಲಾಗಿದೆ. ಅವರನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

3. ಸುಹಾಸ ಶೆಟ್ಟಿಯ ಹತ್ಯೆಯ ನಂತರ ಪೊಲೀಸರು ಮಂಗಳೂರಿನಲ್ಲಿ ಮೇ 6 ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ಸುಹಾಸ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಮೇ 2 ರಂದು ನಡೆಯಿತು. ಆ ಸಮಯದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

4. ಈ ಹತ್ಯೆಯನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್ತು ಮೇ 2 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂದ್ ಗೆ ಕರೆ ನೀಡಿತು. ಮಂಗಳೂರು ಮತ್ತು ಮುಲ್ಕಿಯಲ್ಲಿ ಹಲವು ಖಾಸಗಿ ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದ್ದು, ಕೆಲವು ಕಡೆ ರಸ್ತೆ ತಡೆ ನಡೆಸಲಾಯಿತು. ಜಿಲ್ಲೆಯಲ್ಲಿ ಬಸ್ ಸಂಚಾರ ಅಸ್ತವ್ಯಸ್ತಗೊಂಡಿತು. ಬಂದ್ ಕರೆಗೆ ಬೆಂಬಲ ಸೂಚಿಸಿ ಎಲ್ಲಾ ಅಂಗಡಿ ಮುಂಗಟ್ಟುಗಳು ಮತ್ತು ವಾಣಿಜ್ಯ ಸಂಸ್ಥೆಗಳನ್ನು ಮುಚ್ಚಲಾಗಿತ್ತು.

5. ರಾಜ್ಯದ ಭಾಜಪದ ಹಿರಿಯ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ‘ಎಕ್ಸ್’ ನಲ್ಲಿನ ಪೋಸ್ಟ್‌ನಲ್ಲಿ, “ಈ ಕ್ರೂರ ಕೃತ್ಯವು ಸಮುದಾಯಕ್ಕೆ ದೊಡ್ಡ ಆಘಾತವನ್ನುಂಟು ಮಾಡಿದೆ. ಅಪರಾಧಿಗಳಿಗೆ ಕಾನೂನಿನ ಭಯವಿಲ್ಲದಂತಾಗಿದೆ ಮತ್ತು ಇಂತಹ ಹೇಯ ಕೃತ್ಯಗಳು ರಾಜ್ಯದ ಹದಗೆಟ್ಟ ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಯನ್ನು ತೋರಿಸುತ್ತವೆ. ರಾಜ್ಯ ಸರಕಾರವು ಆರೋಪಿಗಳನ್ನು ತಕ್ಷಣ ಬಂಧಿಸಬೇಕೆಂದು ನಾನು ಒತ್ತಾಯಿಸುತ್ತೇನೆ” ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ರಾಜ್ಯದಲ್ಲಿ ಕಳೆದ ಹಲವು ವರ್ಷಗಳಿಂದ ಹಿಂದೂ ಕಾರ್ಯಕರ್ತರನ್ನು ಹೆಕ್ಕಿ ಹೆಕ್ಕಿ ಕೊಲ್ಲಲಾಗುತ್ತಿದ್ದರೂ, ಅವರ ರಕ್ಷಣೆಗಾಗಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಈ ಬಗ್ಗೆ ಹಿಂದೂ ಸಂಘಟನೆಗಳು ಸರಕಾರದ ಮೇಲೆ ಒತ್ತಡ ಹೇರುವುದು ಅವಶ್ಯಕವಾಗಿದೆ !