|
ಗಾಜಿಯಾಬಾದ್ (ಉತ್ತರ ಪ್ರದೇಶ) – ರಾಜ್ಯದಲ್ಲಿ ಪ್ರಸ್ತುತ ಹೆಸರುಗಳನ್ನು ಬದಲಾಯಿಸುವ ಪ್ರಕ್ರಿಯೆ ವೇಗವಾಗಿ ನಡೆಯುತ್ತಿದೆ. ಈ ಸಂಬಂಧ ಗಾಜಿಯಾಬಾದ್ ಮಹಾನಗರ ಪಾಲಿಕೆ ಇತ್ತೀಚೆಗೆ ನಡೆದ ಮಂಡಳಿ ಸಭೆಯಲ್ಲಿ ‘ತುರಬನಗರ ಮಾರುಕಟ್ಟೆ’ ಹೆಸರನ್ನು ಬದಲಾಯಿಸಿ ‘ಸೀತಾರಾಮ್ ಬಜಾರ್’ ಎಂದು ಮರುನಾಮಕರಣ ಮಾಡಿದೆ. ಮಾರ್ಚ್ ೯ ರಂದು ಮಾರುಕಟ್ಟೆಯಲ್ಲಿ ಹೊಸ ಹೆಸರಿನ ಫಲಕವನ್ನು ಸಹ ಹಾಕಲಾಯಿತು. ‘ತುರಾಬ್’ ಎಂಬ ಅರೇಬಿಕ್ ಪದವನ್ನು ಆಧರಿಸಿದ ಈ ಹೆಸರನ್ನು ಬದಲಾಯಿಸುವ ಬಗ್ಗೆ ನಿರಂತರವಾಗಿ ಚರ್ಚೆಗಳು ನಡೆಯುತ್ತಿದ್ದವು. ಈಗ ಇದರ ಬಗ್ಗೆ ಕ್ರಮ ಕೈಗೊಂಡಿದ್ದರಿಂದ ವ್ಯಾಪಾರಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
೧. ಹಿಂದಿಯಲ್ಲಿ ‘ತುರಾಬ್’ ಎಂಬ ಪದವಿಲ್ಲ. ಹುಡುಕಿದಾಗ ತುರಾಬ್ ಒಂದು ಅರೇಬಿಕ್ ಪದ ಎಂದು ತಿಳಿದುಬಂದಿದೆ. ಅರೇಬಿಕ್ ಭಾಷೆಯಲ್ಲಿ ತುರಾಬ್ ಎಂದರೆ ಮಣ್ಣು, ಕೆಸರು. ಈ ಮಾರುಕಟ್ಟೆಯಲ್ಲಿ ಮಹಿಳೆಯರು ಮತ್ತು ಹುಡುಗಿಯರಿಗೆ ಸೌಂದರ್ಯ ವರ್ಧಕಗಳು, ಮದುವೆಯ ಬಟ್ಟೆಗಳು ಮತ್ತು ಇತರ ವಸ್ತುಗಳು ಲಭ್ಯವಿವೆ, ಆದ್ದರಿಂದ ಆ ಮಾರುಕಟ್ಟೆಗೆ ‘ಸೀತಾರಾಮ್ ಬಜಾರ್’ ಎಂದು ಹೆಸರಿಸಲಾಗಿದೆ. ಈ ಮಾರುಕಟ್ಟೆಯ ಸಮೀಪದ ವೃತ್ತದ ಹೆಸರು ಹಿಂದೆ ‘ಪಕೋಡಾ ಚೌಕ್’ ಆಗಿತ್ತು, ಅದನ್ನು ಈಗ ‘ಅಯೋಧ್ಯೆ ಚೌಕ್’ ಎಂದು ಬದಲಾಯಿಸಲಾಗಿದೆ.
೨. ಇದರ ಹೊರತಾಗಿ, ಮಹಾನಗರ ಪಾಲಿಕೆ ರಾಜನಗರದ ವೃತ್ತಕ್ಕೆ ‘ಭಗವಾನ್ ಪರಶುರಾಮ್ ಚೌಕ್’ ಎಂದು ಹೆಸರಿಸಿದೆ.
೩. ಗಾಜಿಯಾಬಾದ್ ಜಿಲ್ಲೆಯ ಹೆಸರನ್ನು ಬದಲಾಯಿಸಲು ಬಹಳ ಸಮಯದಿಂದ ಪ್ರಯತ್ನಗಳು ನಡೆಯುತ್ತಿವೆ. ೨೦೧೮ ರಲ್ಲಿ ‘ಅಲಹಾಬಾದ್’ ಹೆಸರನ್ನು ‘ಪ್ರಯಾಗರಾಜ್’ ಎಂದು ಬದಲಾಯಿಸಿದಾಗ, ಈ ಚರ್ಚೆ ಪ್ರಾರಂಭವಾಯಿತು. ಗಾಜಿಯಾಬಾದ್ ಮಹಾನಗರ ಪಾಲಿಕೆ ಈ ಪ್ರಸ್ತಾವನೆಯನ್ನು ಅಂಗೀಕರಿಸಿ ಸರಕಾರಕ್ಕೆ ಕಳುಹಿಸಿತ್ತು. ಜಿಲ್ಲೆಯ ಹೆಸರನ್ನು ‘ಗಜನಗರ’ ಅಥವಾ ‘ಹರನಂದಿನಗರ’ ಎಂದು ಬದಲಾಯಿಸುವ ಆಯ್ಕೆಗಳ ಬಗ್ಗೆ ಪರಿಗಣಿಸಲಾಗುತ್ತಿದೆ.
೪. ದುಧೇಶ್ವರನಾಥ ದೇವಾಲಯದ ಮುಖ್ಯ ಮಹಂತ ನಾರಾಯಣ ಗಿರಿ ಅವರು ಗಾಜಿಯಾಬಾದ್‌ನ ಹೆಸರನ್ನು ಬದಲಾಯಿಸಲು ಮುಖ್ಯಮಂತ್ರಿಗಳನ್ನು ಭೇಟಿಯಾಗಿದ್ದಾರೆ. ಅವರು ಮೂರು ಹೆಸರುಗಳನ್ನು ಸೂಚಿಸಿದ್ದಾರೆ. ಇದರಲ್ಲಿ ‘ಗಜಪ್ರಸ್ಥ’, ‘ದುಧೇಶ್ವರನಗರ’ ಮತ್ತು ‘ಹರನಂದೀಪುರಂ’ ಸೇರಿವೆ.