India Advises UN Security Council : ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾರ್ಯನಿರ್ವಹಣೆಯಲ್ಲಿ ತುರ್ತಾಗಿ ಸುಧಾರಣೆ ತರುವ ಅವಶ್ಯಕತೆ!

ಭಾರತದಿಂದ ಮತ್ತೊಮ್ಮೆ ಬೇಡಿಕೆ

ಜಿನೀವಾ (ಸ್ವಿಟ್ಜರ್ಲೆಂಡ್) – ವಿಶ್ವಸಂಸ್ಥೆಯಲ್ಲಿ ಭಾರತದ ಸ್ಥಾಯಿ ಪ್ರತಿನಿಧಿ ಪಿ. ಹರೀಶ್ ಅವರು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾರ್ಯನಿರ್ವಹಣೆಯಲ್ಲಿ ಸುಧಾರಣೆ ತರುವ ತುರ್ತು ಆವಶ್ಯಕತೆ ಇದೆ ಎಂದು ವಿಶ್ವಸಂಸ್ಥೆಯಲ್ಲಿ ಅಂತರ್ ಸರಕಾರಿ ಪರಿಷತ್ತಿನಲ್ಲಿ ಮಾತನಾಡುವಾಗ ಹೇಳಿದರು.

ಪಿ. ಹರೀಶ್ ಅವರು ಹೇಳಿದ್ದು,

೧. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಬದಲಾವಣೆ ತರುವ ಬಗ್ಗೆ ನಮ್ಮ ಬೇಡಿಕೆ ಸ್ಪಷ್ಟವಾಗಿದೆ. ಮಾನವೀಯತೆಗೆ ಸಂಬಂಧಿಸಿದ ಪ್ರಮುಖ ವಿಷಯಗಳ ಮೇಲೆ ಯಾವುದೇ ದೃಢವಾದ ಕ್ರಮ ತೆಗೆದುಕೊಳ್ಳಲು ವಿಶ್ವಸಂಸ್ಥೆಯು ಸಮರ್ಥವಾಗಿಲ್ಲ ಎಂದು ಜಗತ್ತಿನಾದ್ಯಂತ ಪ್ರಶ್ನೆಗಳು ಎದ್ದಿರುವಾಗ ಇದು ಮತ್ತಷ್ಟು ಮುಖ್ಯವಾಗುತ್ತದೆ.

೨. ಭದ್ರತಾ ಮಂಡಳಿಗೆ ಸಂಬಂಧಿತ ಸಂಸ್ಥೆಗಳಲ್ಲಿ ಪಾರದರ್ಶಕತೆ ತರುವ ಅವಶ್ಯಕತೆ ಇದೆ. ಪಟ್ಟಿ ಮಾಡಲಾದ ನಿರ್ಧಾರಗಳನ್ನು ಸಾರ್ವಜನಿಕಗೊಳಿಸಲಾಗುತ್ತಿದೆಯಾದರೆ ಪಟ್ಟಿ ಮಾಡಲಾದ ವಿನಂತಿಗಳನ್ನು ತಿರಸ್ಕರಿಸುವ ಅಥವಾ ತಾಂತ್ರಿಕ ತಡೆ ನೀಡುವ ವಿವರಗಳನ್ನು ಗೌಪ್ಯವಾಗಿ ಇರಿಸಲಾಗುತ್ತದೆ. ಇದು ವಾಸ್ತವವಾಗಿ ಒಂದು ಗುಪ್ತ ‘ವೀಟೋ’ (ನಿರಾಕರಣಾಧಿಕಾರ) ಆಗಿದೆ.

೩. ಭಯೋತ್ಪಾದಕ ಸಂಘಟನೆಗಳನ್ನು ಕಪ್ಪುಪಟ್ಟಿಗೆ ಸೇರಿಸುವ ಬೇಡಿಕೆಯನ್ನು ತಿರಸ್ಕರಿಸುವ ಅಥವಾ ಬಾಕಿ ಇರಿಸುವ ಕಾರಣಗಳನ್ನು ನೀಡಬೇಕು.

೪. ಈ ಹಿಂದೆ ಹಲವು ಬಾರಿ ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕ ಗುಂಪುಗಳನ್ನು ನಿಷೇಧಿಸುವ ಭಾರತದ ಪ್ರಯತ್ನಗಳಿಗೆ ಚೀನಾ ಅಡ್ಡಿಪಡಿಸಿದೆ.

೫. ವಿಶ್ವಸಂಸ್ಥೆಯ ಬಹುತೇಕ ಸದಸ್ಯ ರಾಷ್ಟ್ರಗಳು ಭದ್ರತಾ ಮಂಡಳಿಯಲ್ಲಿ ಬದಲಾವಣೆ ತರುವ ಪರವಾಗಿವೆ; ಆದರೆ ಹಾಗಿದ್ದರೂ ಈ ದಿಕ್ಕಿನಲ್ಲಿ ಪ್ರಾಯೋಗಿಕವಾಗಿ ಯಾವುದೇ ಕೆಲಸವಾಗಿಲ್ಲ. ಈ ಬಗ್ಗೆ ನಮ್ಮ ಹಲವು ಚರ್ಚೆಗಳು ಮತ್ತು ಸಭೆಗಳು ನಡೆದಿವೆ; ಆದರೆ ಪರಿಸ್ಥಿತಿ ಹಾಗೆಯೇ ಇದೆ. ಸದಸ್ಯ ರಾಷ್ಟ್ರಗಳು ಈಗ ಮಾತುಕತೆಗಳಲ್ಲಿ ಹೆಚ್ಚು ಸಮಯ ವ್ಯರ್ಥ ಮಾಡಬಾರದು. ಮುಂದೆ ಸಾಗುವ ಮತ್ತು ಫಲಿತಾಂಶ ತೋರಿಸುವ ಸಮಯ ಬಂದಿದೆ.

ಸಂಪಾದಕೀಯ ನಿಲುವು

ಒಟ್ಟಾರೆಯಾಗಿ ವಿಶ್ವಸಂಸ್ಥೆಯು ಒಂದು ಬೆದರು ಬೊಂಬೆಯಂತಾಗಿದೆ. ಅದಕ್ಕೆ ತಗಲುವ ಖರ್ಚಿಗೆ ಹೋಲಿಸಿದರೆ ಅದರಿಂದ ಎಷ್ಟು ದೃಢವಾದ ಕ್ರಮಗಳು, ನಿರ್ಧಾರಗಳು ಇತ್ಯಾದಿಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂಬುದನ್ನು ಪರಿಶೀಲಿಸುವ ಆವಶ್ಯಕತೆಯಿದೆ. ಒಂದು ವೇಳೆ ಅದರ ಕಾರ್ಯಪದ್ಧತಿಯಲ್ಲಿ ಬದಲಾವಣೆ ಆಗದಿದ್ದರೆ, ಈ ಸಂಸ್ಥೆಯನ್ನು ವಿಸರ್ಜಿಸುವುದು ಸೂಕ್ತ!