Batala Terrorist Encounter : ಬಟಾಲಾ (ಪಂಜಾಬ್): ಪೋಲಿಸರೊಂದಿಗಿನ ಗುಂಡಿನ ಚಕಮಕಿಯಲ್ಲಿ 1 ಭಯೋತ್ಪಾದಕ ಹತ !

ಪಂಜಾಬ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪಾಕಿಸ್ತಾನ ಪ್ರೇರಿತ ‘ಬಬ್ಬರ್ ಖಾಲ್ಸಾ’ ಭಯೋತ್ಪಾದಕ ಗುಂಪಿನ ಗುಟ್ಟು ರಟ್ಟು !


ಚಂಡೀಗಢ – ಪಂಜಾಬ್ ಪೊಲೀಸರು ಗುರುದಾಸಪುರ ಜಿಲ್ಲೆಯ ಬಟಾಲಾದಲ್ಲಿ ದೊಡ್ಡ ಕಾರ್ಯಾಚರಣೆ ನಡೆಸಿ ಜೈಂತಿಪುರ ಮತ್ತು ರಾಯಮಲ್ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಮೋಹಿತ್‌ನನ್ನು ಹತ್ಯೆ ಮಾಡಿದ್ದಾರೆ. ಫೆಬ್ರವರಿ 27 ರಂದು ತಡರಾತ್ರಿ ನಡೆದ ಈ ಎನ್‌ಕೌಂಟರ್‌ನಲ್ಲಿ ಪೊಲೀಸರು ಮತ್ತು ಮೋಹಿತ್ ನಡುವೆ ಗುಂಡಿನ ಚಕಮಕಿ ನಡೆಯಿತು. ಇದರಲ್ಲಿ ಓರ್ವ ಪೊಲೀಸ್ ಅಧಿಕಾರಿಯೂ ಗಾಯಗೊಂಡಿದ್ದಾರೆ. ಬಟಾಲಾದ ಜಂತಿಪುರ ಮತ್ತು ರಾಯಮಲ್‌ನಲ್ಲಿ ಜನವರಿ 15 ಮತ್ತು ಫೆಬ್ರವರಿ 17 ರಂದು ನಡೆದ ಬಾಂಬ್ ಸ್ಫೋಟಗಳ ತನಿಖೆ ನಡೆಸುತ್ತಿರುವಾಗ, ಪೊಲೀಸರು ಪಾಕಿಸ್ತಾನದ ಗುಪ್ತಚರ ಸಂಸ್ಥೆ ‘ಐಎಸ್‌ಐ’ ಬೆಂಬಲಿತ ‘ಬಬ್ಬರ್ ಖಾಲ್ಸಾ ಇಂಟರ್‌ನ್ಯಾಷನಲ್’ (ಬಿಕೆಐ) ಭಯೋತ್ಪಾದಕ ಸಂಘಟನೆಯ ಗ್ಯಾಂಗ್‌ಅನ್ನು ಪತ್ತೆಹಚ್ಚಿದ್ದಾರೆ. ಈ ಗುಂಪನ್ನು ಪಾಕಿಸ್ತಾನದ ಭಯೋತ್ಪಾದಕ ಹರ್ವಿಂದರ್ ರಿಂಡಾ ಮತ್ತು ಅಮೆರಿಕದ ಭಯೋತ್ಪಾದಕ ಹ್ಯಾಪಿ ಪಸಿಯಾ ಅವರು ನಡೆಸುತ್ತಿದ್ದರು. ಈ ಗುಂಪಿನ ಭಯೋತ್ಪಾದಕರಾದ ಬಟಾಲಾದ ಮೋಹಿತ್ ಮತ್ತು ಬಸರಪುರದ ವಿಶಾಲ್ ಅವರನ್ನು ಬಂಧಿಸಲಾಗಿತ್ತು.

1. ಬಟಾಲಾ ಪೊಲೀಸರು ಬಂಧಿತ ಆರೋಪಿಗಳನ್ನು ವಿಚಾರಣೆ ನಡೆಸಿದಾಗ ಮೋಹಿತ್ ನಿರ್ಜನ ಪ್ರದೇಶದಲ್ಲಿ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಬಚ್ಚಿಟ್ಟಿರುವುದು ಬೆಳಕಿಗೆ ಬಂದಿದೆ. ಪೊಲೀಸರು ಆತನನ್ನು ಅಲ್ಲಿಗೆ ಕರೆದೊಯ್ಯುತ್ತಿದ್ದಾಗ ಮೋಹಿತ್ ಪರಾರಿಯಾಗಲು ಯತ್ನಿಸಿ ಪೊಲೀಸರ ಮೇಲೆ ಗುಂಡು ಹಾರಿಸಿದ್ದಾನೆ. ಪೊಲೀಸರು ಪ್ರತೀಕಾರವಾಗಿ ಗುಂಡು ಹಾರಿಸಿದ್ದರಿಂದ ಮೋಹಿತ್ ಗಾಯಗೊಂಡಿದ್ದಾನೆ. ಆತನನ್ನು ಆಸ್ಪತ್ರೆಗೆ ಕರೆದೊಯ್ದ ನಂತರ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

2. ಈ ಬಾಂಬ್ ಸ್ಫೋಟ ಪ್ರಕರಣಗಳಲ್ಲಿ ಭಾಗಿಯಾಗಿರುವ ಇಬ್ಬರು ಆರೋಪಿಗಳನ್ನು ಗುರುತಿಸಲಾಗಿದೆ. ಅವರನ್ನು ಬಂಧಿಸಲು ಕಾರ್ಯಾಚರಣೆ ನಡೆಯುತ್ತಿದೆ ಎಂದು ಬಟಾಲಾ ಪೊಲೀಸರು ತಿಳಿಸಿದ್ದಾರೆ.