ಶ್ರೀನಗರ ನ್ಯಾಯಾಲಯವು ಜಿತೇಂದ್ರ ನಾರಾಯಣ ತ್ಯಾಗಿ ಅವರನ್ನು ಬಂಧಿಸಿ ಹಾಜರುಪಡಿಸಲು ಆದೇಶಿಸಿದೆ

ಇಸ್ಲಾಂ ಮತ್ತು ಪ್ರವಾದಿ ಮುಹಮ್ಮದ್ ಅವರನ್ನು ಅವಮಾನಿಸಿದ ಪ್ರಕರಣ

ಶ್ರೀನಗರ(ಜಮ್ಮು ಕಾಶ್ಮೀರ) – ಶ್ರೀನಗರದ ನ್ಯಾಯಾಲಯವು ಜಿತೇಂದ್ರ ನಾರಾಯಣ ತ್ಯಾಗಿ (ಹಿಂದೆ ವಸೀಂ ರಿಜ್ವಿ) ಅವರನ್ನು ಬಂಧಿಸಿ ಹಾಜರ ಪಡಿಸಲು ಆದೇಶಿಸಿದೆ. ಪ್ರವಾದಿ ಮುಹಮ್ಮದ್ ಮತ್ತು ಇಸ್ಲಾಂ ಧರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಆರೋಪದ ಮೇಲೆ ನ್ಯಾಯಾಲಯ ಈ ಆದೇಶ ನೀಡಿದೆ. ತ್ಯಾಗಿ ಅವರನ್ನು ಬಂಧಿಸಿ ಹಾಜರುಪಡಿಸುವಂತೆ ನ್ಯಾಯಾಲಯವು ಪೊಲೀಸರಿಗೆ ಸೂಚಿಸಿದೆ. ಪದೇ ಪದೇ ಸಮನ್ಸ್ ನೀಡಿದರೂ ತ್ಯಾಗಿ ನ್ಯಾಯಾಲಯಕ್ಕೆ ಹಾಜರಾಗದ ಕಾರಣ ಈ ಆದೇಶ ಹೊರಡಿಸಲಾಗಿದೆ. 2025 ರ ಏಪ್ರಿಲ್ 25 ರೊಳಗೆ ಬಂಧನ ಪ್ರಕ್ರಿಯೆ ಪೂರ್ಣಗೊಳಿಸುವಂತೆ ನ್ಯಾಯಾಲಯವು ಪೊಲೀಸರಿಗೆ ಆದೇಶಿಸಿದೆ.

1. 2021 ರಲ್ಲಿ ಒಬ್ಬ ವ್ಯಕ್ತಿ ಜಿತೇಂದ್ರ ತ್ಯಾಗಿ ವಿರುದ್ಧ ದೂರು ದಾಖಲಿಸಿದ ನಂತರ ಈ ಪ್ರಕರಣ ದಾಖಲಿಸಲಾಯಿತು. 2022 ರಲ್ಲಿ ಪ್ರಾರಂಭವಾದ ಈ ಪ್ರಕರಣದಲ್ಲಿ 10 ಕ್ಕೂ ಹೆಚ್ಚು ಬಾರಿ ವಿಚಾರಣೆ ನಡೆದಿದೆ. ಆದರೆ ಈ ಅವಧಿಯಲ್ಲಿ ಜಿತೇಂದ್ರ ನಾರಾಯಣ ತ್ಯಾಗಿ ನ್ಯಾಯಾಲಯಕ್ಕೆ ಹಾಜರಾಗಿಲ್ಲ.

2. ಜಿತೇಂದ್ರ ನಾರಾಯಣ ತ್ಯಾಗಿ ಅವರ ಹಿಂದಿನ ಹೆಸರು ವಸೀಂ ರಿಜ್ವಿ ಇತ್ತು. ಅವರು ಇಸ್ಲಾಂ ಧರ್ಮವನ್ನು ತೊರೆದು ಹಿಂದೂ ಧರ್ಮವನ್ನು ಸ್ವೀಕರಿಸಿದರು. ಈ ಹಿಂದೆ ಅವರು ಉತ್ತರಪ್ರದೇಶ ಶಿಯಾ ಸೆಂಟ್ರಲ್ ವಕ್ಫ್ ಬೋರ್ಡ್‌ನ ಅಧ್ಯಕ್ಷರಾಗಿದ್ದರು. ಇಸ್ಲಾಂ ಧರ್ಮದ ಕುರಿತು ಟೀಕೆ ಮಾಡಿದ್ದರಿಂದ ಜಿತೇಂದ್ರ ತ್ಯಾಗಿ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ಅವರ ವಿರುದ್ಧ ಹಲವು ಪ್ರಕರಣಗಳಲ್ಲಿ ಅಪರಾಧ ದಾಖಲಾಗಿದೆ.