
ಭಾರತವನ್ನು ಸ್ವಾವಲಂಬಿ ಮಾಡುವ ಹೋರಾಟದ ಓರ್ವ ಪ್ರಮುಖ ಸೇನಾಪತಿಯಾಗಿದ್ದ ಡಾ. ಚಿದಂಬರಮ್ ಇವರನ್ನು ಭಾರತ ಇತ್ತೀಚೆಗಷ್ಟೇ ಕಳೆದುಕೊಂಡಿತು. ೪ ಜನವರಿ ೨೦೨೫ ರಂದು ಜೀವನದ ೮೮ ನೇ ವಯಸ್ಸಿನಲ್ಲಿ ಅವರ ನಿಧನವಾಯಿತು. ಅವರು ದೇಶಕ್ಕಾಗಿ ನೀಡಿದ ಕೊಡುಗೆ ಅದ್ವಿತೀಯವಾಗಿದೆ. ನಾವು ಭಾರತದ ಇಂತಹ ಮಹಾನ ವಿಜ್ಞಾನಿಯ ಬಗ್ಗೆ ತಿಳಿದುಕೊಳ್ಳೋಣ.
೧. ಭಾರತದ ಅಣುಶಸ್ತ್ರಾಸ್ತ್ರ ಕಾರ್ಯಕ್ರಮದಲ್ಲಿ ಡಾ. ಚಿದಂಬರಮ್‌ರ ಅಮೂಲ್ಯ ಕೊಡುಗೆ
‘೧೯೭೦ ರ ಸಮಯದಲ್ಲಿ ದೇಶದಲ್ಲಿ ಬೆರಳೆಣಿಕೆಯಷ್ಟು ಅಣುಶಸ್ತ್ರಾಸ್ತ್ರಗಳಿದ್ದವು. ಆ ಕಾಲದಲ್ಲಿ ಭಾರತದ ಅಣುಶಕ್ತಿ ಕ್ಷೇತ್ರದ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಡಾ. ಚಿದಂಬರಮ್ ಇವರ ಮಹತ್ವಪೂರ್ಣ ಪಾತ್ರವಿತ್ತು. ೧೯೭೪ ರಲ್ಲಿ ಅಣುಪರೀಕ್ಷೆ ನಡೆಸಿ ಭಾರತವು ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿತು. ೧೯೭೪ ಮತ್ತು ೧೯೯೮ ರಲ್ಲಿ ಅನುಕ್ರಮವಾಗಿ ‘ಪೊಖರನ್ ೧’ ಮತ್ತು ‘ಪೊಖರನ್ ೨’ ಈ ಅಣುಪರೀಕ್ಷೆಗಳಿಗಾಗಿ ಡಾ. ಚಿದಂಬರ ಇವರು ಅಣುಶಕ್ತಿ ವಿಭಾಗದ ನೇತೃತ್ವವನ್ನು ವಹಿಸಿದ್ದರು. ಅವರ ಕೊಡುಗೆಯಿಂದಾಗಿ ಭಾರತಕ್ಕೆ ಅಣುಶಕ್ತಿ ಕ್ಷೇತ್ರದಲ್ಲಿ ಜಾಗತಿಕ ಸ್ತರದಲ್ಲಿ ಮಾನ್ಯತೆ ದೊರಕಿತು. ಡಾ. ಚಿದಂಬರಮ್ ಇವರು ಕೇಂದ್ರ ಸರಕಾರದ ಮಾಜಿ ಮುಖ್ಯ ವೈಜ್ಞಾನಿಕ ಸಲಹೆಗಾರ ಮತ್ತು ಹಿರಿಯ ಭೌತವಿಜ್ಞಾನಿ ಹೀಗೆ ವಿವಿಧ ಪಾತ್ರಗಳನ್ನು ನಿರ್ವಹಿಸಿ ದೇಶದ ಸೇವೆಯನ್ನು ಮಾಡಿದರು. ಭಾರತದ ವೈಜ್ಞಾನಿಕ ಸಾಮರ್ಥ್ಯ ಹೆಚ್ಚಾಗಬೇಕೆಂದು ಕಾರ್ಯನೀತಿ ಸಾಮರ್ಥ್ಯ ಕ್ಷೇತ್ರದಲ್ಲಿ ಡಾ. ಚಿದಂಬರಮ್ ಇವರ ದೊಡ್ಡ ಕೊಡುಗೆ ಇದೆ. ಮೂಲಭೂತ ವಿಜ್ಞಾನ ಮತ್ತು ಅಣು ತಂತ್ರಜ್ಞಾನ ಈ ಪ್ರಮುಖ ಕ್ಷೇತ್ರಗಳಲ್ಲಿ ಅವರು ೬ ದಶಕಗಳಿಗಿಂತ ಹೆಚ್ಚು ಕಾರ್ಯವನ್ನು ಮಾಡಿದರು, ಹಾಗೆಯೇ ಅನೇಕ ಪ್ರಮುಖ ಹುದ್ದೆಗಳನ್ನೂ ಅಲಂಕರಿಸಿದರು.

೨. ಪೊಖರನ್‌ದಲ್ಲಿ ನಡೆದ ಅಣುಪರೀಕ್ಷೆಯ ಯಶಸ್ಸಿನಲ್ಲಿ ಡಾ. ಚಿದಂಬರಮ್ ಇವರ ಮಹತ್ವದ ಕೊಡುಗೆ !
ಡಾ. ಚಿದಂಬರಮ್ ಇವರು ೧೯೬೭ ರಿಂದಲೇ ಅಣುಶಸ್ತ್ರಾಸ್ತ್ರಗಳ ನಿರ್ಮಿತಿ ಕ್ಷೇತ್ರದಲ್ಲಿ ತಮ್ಮ ಕೊಡುಗೆಯನ್ನು ನೀಡಿದರು. ಅತ್ಯಂತ ಗುಪ್ತವಾಗಿಟ್ಟ ‘ಪೊಖರನ್ ೧’ ಈ ಅಣುಪರೀಕ್ಷೆಯ ಯಶಸ್ಸಿಗೆ ಡಾ. ಚಿದಂಬರಮ್ ಇವರ ಪ್ರಮುಖ ಸಹಭಾಗವಿತ್ತು. ಅವರು ಮುಂಬಯಿಯಿಂದ ರಾಜಸ್ಥಾನದ ಪೊಖರನ್‌ವರೆಗೆ ಸ್ವತಃ ಪ್ಲುಟೊನಿಯಮ್ ತೆಗೆದುಕೊಂಡು ಹೋಗಿದ್ದರು. ಆಗಿನ ‘ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ’ಯ ಅಧ್ಯಕ್ಷ ಡಾ. ಎ.ಪಿ.ಜೆ. ಅಬ್ದುಲ್ ಕಲಾಮ್ ಇವರ ಜೊತೆಗೆ ಅವರು ಅಣು ಪರೀಕ್ಷೆ ಮಾಡಲು ಬಹಳ ಶ್ರಮ ಪಟ್ಟಿದ್ದರು.
೩. ಅಮೇರಿಕದ ನಿರ್ಬಂಧಗಳನ್ನು ಧಿಕ್ಕರಿಸಿ ಭಾರತ ಅಣುಪರೀಕ್ಷೆ ನಡೆಸಿತು
ಭಾರತ ಅಣುಶಕ್ತಿಯ ಬಳಕೆಯನ್ನು ಶಾಂತಿ ಮತ್ತು ವೈಜ್ಞಾನಿಕ ಪ್ರಗತಿಗಾಗಿ ಮಾಡಲಿದೆ, ಈ ನಿಲುವು ಯಾವಾಗಲೂ ಸ್ಪಷ್ಟವಿತ್ತು. ಹೀಗಿದ್ದರೂ ಅಮೇರಿಕಾ ಮತ್ತು ಅದರ ಮಿತ್ರ ರಾಷ್ಟ್ರಗಳು ಭಾರತದ ಮೇಲೆ ಅನೇಕ ನಿರ್ಬಂಧಗಳನ್ನು ಹೇರಿದ್ದವು. ಈ ನಿರ್ಬಂಧಗಳ ಹೊರತಾಗಿಯೂ ಭಾರತ ತನ್ನ ಅಣುಶಕ್ತಿಯ ಕಾರ್ಯಕ್ರಮವನ್ನು ಮುಂದುವರೆಸಿತು. ಭಾರತ ತಾನಾಗಿಯೇ ಯಾರ ಮೇಲೆಯೂ ದಾಳಿ ಮಾಡುವುದಿಲ್ಲವಾದರೂ, ಅದು ಅಣುಶಸ್ತ್ರಾಸ್ತ್ರಸಜ್ಜಿತ ದೇಶವಾಗಿರು ವುದರಿಂದ ಭಾರತದ ಮೇಲೆ ದಾಳಿ ಮಾಡಿದರೆ ಅಣುಶಕ್ತಿಯ ಬಳಕೆ ಯಾಗುವುದು ಎಂದು ಎಲ್ಲರಿಗೂ ಗೊತ್ತಿದೆ. ಅಮೇರಿಕ ವಿಧಿಸಿದ ನಿರ್ಬಂಧಗಳನ್ನು ದುರ್ಲಕ್ಷಿಸಿ ಭಾರತ ೧೯೯೮ ರಲ್ಲಿ ‘ಪೊಖರನ್ ೨’ ಈ ಅಣುಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿತು. ಒಟ್ಟು ೫ ಅಣುಪರೀಕ್ಷೆಗಳನ್ನು ನಡೆಸಿದ ನಂತರ ಆಗಿನ ಪ್ರಧಾನಿ ಅಟಲಬಿಹಾರಿ ವಾಜಪೇಯಿ ಇವರು ಈ ಭಾಗಕ್ಕೆ ಭೇಟಿ ನೀಡಿದ್ದರು.
೪. ಅನೇಕ ಪ್ರಶಸ್ತಿಗಳನ್ನು ನೀಡಿ ಡಾ. ಚಿದಂಬರಮ್ ಇವರನ್ನು ಸನ್ಮಾನಿಸಲಾಯಿತು
ಡಾ. ಚಿದಂಬರಮ್ ಇವರು ಭಾಭಾ ಅಣು ಸಂಶೋಧನ ಕೇಂದ್ರದ ಸಂಚಾಲಕರು, ಅಣುಶಕ್ತಿ ಆಯೋಗದ ಅಧ್ಯಕ್ಷ ಮತ್ತು ಭಾರತದ ಅಣುಶಕ್ತಿ ವಿಭಾಗದ ಸಚಿವ ಹೀಗೆ ವಿವಿಧ ಪಾತ್ರಗಳನ್ನು ನಿರ್ವಹಿಸುವ ಮೂಲಕ ವೈಜ್ಞಾನಿಕ ಸಮೂದಾಯಕ್ಕೆ ಅಮೂಲ್ಯ ಸಹಾಯ ಮಾಡಿದ್ದಾರೆ. ಡಾ. ಚಿದಂಬರಮ್ ಇವರಿಗೆ ಪದ್ಮವಿಭೂಷಣ, ಸಿ.ವಿ. ರಾಮನ್ ಪ್ರಶಸ್ತಿ, ಲೋಕಮಾನ್ಯ ತಿಲಕ ಪ್ರಶಸ್ತಿ, ಹೋಮಿ ಭಾಭಾ ಜೀವನಗೌರವ ಪ್ರಶಸ್ತಿ, ಮೇಘನಾಥ ಸಾಹ ಪ್ರಶಸ್ತಿ, ಅಭಿಯಾಂತ್ರಿಕ ಕ್ಷೇತ್ರದಲ್ಲಿ ಜೀವನಗೌರವ ಪ್ರಶಸ್ತಿ ಇಂತಹ ಅನೇಕ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿತ್ತು.’ (೭.೧.೨೦೨೫)
– (ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ, ಮುಂಬಯಿ ಉಚ್ಚ ನ್ಯಾಯಾಲಯ