Sambhal Riots : ಸಂಭಲ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಜಾಮಾ ಮಸೀದಿಯ ಹೊರಗೆ 74 ಸಂಶಯಿತರ ಭಿತ್ತಿ ಪತ್ರಗಳನ್ನು ಅಂಟಿಸಿದರು !

ಸಂಶಯಿತರನ್ನು ಗುರುತಿಸುವವರಿಗೆ ಬಹುಮಾನ

ಸಂಭಲ್ (ಉತ್ತರ ಪ್ರದೇಶ) – ಅಜ್ಞಾತ ವ್ಯಕ್ತಿಗಳು ಸಂಭಲ್ ಹಿಂಸಾಚಾರ ಪ್ರಕರಣದ ಒಬ್ಬ ಆರೋಪಿಯ ಭಿತ್ತಿ ಪತ್ರವನ್ನು ತೆಗೆದುಹಾಕಿದ ಕೆಲವೇ ಗಂಟೆಗಳ ನಂತರ, ಪೊಲೀಸರು ಈಗ ಹಿಂಸಾಚಾರದ ಎಲ್ಲಾ 74 ಶಂಕಿತರ ಭಿತ್ತಿ ಪತ್ರಗಳನ್ನು ಹಾಕಿದ್ದಾರೆ. ನವೆಂಬರ್‌ನಲ್ಲಿ ಮುಸ್ಲಿಮರಿಂದ ನಡೆದ ಹಿಂಸಾಚಾರದಲ್ಲಿ 20 ಪೊಲೀಸರು ಗಾಯಗೊಂಡಿದ್ದರು. ಆರೋಪಿಗಳನ್ನು ಗುರುತಿಸಲು ಸಹಾಯ ಮಾಡುವವರಿಗೆ ಪೊಲೀಸರು ಬಹುಮಾನ ಘೋಷಿಸಿದ್ದಾರೆ.

ಈ ನಿಟ್ಟಿನಲ್ಲಿ ಸಂಭಲ್ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶ್ರೀಶ ಚಂದ್ರ ಅವರು ಮಾತನಾಡಿ,

1. ಭಿತ್ತಿ ಪತ್ರಗಳಲ್ಲಿ ಹಿಂಸಾಚಾರದ ದಿನದಂದು ಕಲ್ಲುಗಳನ್ನು ಹೊತ್ತೊಯ್ಯುತ್ತಿರುವ ಶಂಕಿತರ ಛಾಯಾಚಿತ್ರಗಳಿವೆ. ಡ್ರೋನ್ ಕ್ಯಾಮೆರಾಗಳು, ಸಿಸಿಟಿವಿಗಳು ಮತ್ತು ಸೆಲ್‌ಫೋನ್ ವೀಡಿಯೊಗಳು ಹಿಂಸಾಚಾರದ ದುಷ್ಕರ್ಮಿಗಳ ಮುಖಗಳನ್ನು ಬಹಿರಂಗಪಡಿಸಿವೆ. ಅವರ ಗುರುತು ಇನ್ನೂ ದೃಢೀಕರಿಸಲ್ಪಟ್ಟಿಲ್ಲ. ಆದ್ದರಿಂದ, ಸಾರ್ವಜನಿಕರಿಂದ ಸಹಾಯ ಕೇಳಲು ಭಿತ್ತಿ ಪತ್ರಗಳನ್ನು ಹಾಕಲಾಗಿದೆ.

2. ಸಂಭಲ್ ಜಾಮಾ ಮಸೀದಿ ಸೇರಿದಂತೆ ಹಲವೆಡೆ ಭಿತ್ತಿ ಪತ್ರಗಳನ್ನು ಹಾಕಲಾಗಿದೆ.

3. ಮಸೀದಿಯ ಮುಖ್ಯ ದ್ವಾರದ ಬಳಿ ಇತ್ತೀಚೆಗೆ ನಿರ್ಮಿಸಲಾದ ಪೊಲೀಸ್ ಚೌಕಿಯಲ್ಲಿ ನಿಯೋಜಿಸಲಾದ ಪೊಲೀಸರಿಗೆ, ಭಿತ್ತಿ ಪತ್ರಗಳನ್ನು ಮತ್ತೆ ಹರಿದು ಹಾಕದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ವಹಿಸಲಾಗಿದೆ.

ಏನಿದು ಪ್ರಕರಣ ?

ನವೆಂಬರ್ 19 ಮತ್ತು 24, 2024 ರಂದು ನ್ಯಾಯಾಲಯದ ಆದೇಶದಂತೆ, ಸಂಭಲ್‌ನಲ್ಲಿರುವ ಜಾಮಾ ಮಸೀದಿಯ ಸಮೀಕ್ಷೆ ಕಾರ್ಯ ನಡೆದಿತ್ತು. ಇದನ್ನು ತಡೆಯಲು ಮುಸ್ಲಿಮರು ನವೆಂಬರ್ 24 ರಂದು ಹಿಂಸಾಚಾರಕ್ಕೆ ಇಳಿದರು. ಆ ಸಮಯದಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ ಮಾಡಲಾಯಿತು. ಸಮೀಕ್ಷೆ ಶಾಂತಿಯುತವಾಗಿ ನಡೆಯುವಂತೆ ನೋಡಿಕೊಳ್ಳಲು ಆ ಪ್ರದೇಶದಲ್ಲಿ ದೊಡ್ಡ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿತ್ತು. ಹಿಂದೂ ಪಕ್ಷವು ಸಲ್ಲಿಸಿರುವ ಅರ್ಜಿಯಲ್ಲಿ ಮಸೀದಿಯಲ್ಲಿ ಕಲ್ಕಿ ಭಗವಾನ್ ದೇವಸ್ಥಾನವಿದೆ. ಈ ಸ್ಥಳವು 1904 ರ ಪ್ರಾಚೀನ ಸ್ಮಾರಕಗಳ ಸಂರಕ್ಷಣಾ ಕಾಯ್ದೆಯಡಿಯಲ್ಲಿ ರಕ್ಷಿಸಲ್ಪಟ್ಟಿದೆ ಎಂದು ಹೇಳಿದೆ.