ಕುಂಭಮೇಳದಲ್ಲಿ ಭಕ್ತರ ದಟ್ಟಣೆಯಿಂದ ರಿಸರ್ವೇಷನ್ ಬೋಗಿಗಳಲ್ಲಿಯೂ ಪ್ರಯಾಣಿಕರ ದಟ್ಟಣೆ

ಪ್ರಯಾಗರಾಜ ಕುಂಭಮೇಳ 2025

ರೈಲಿನಲ್ಲಿ ಭಕ್ತರ ಬಹಳಷ್ಟು ಗದ್ದಲ

ಪ್ರಯಾಗರಾಜ (ಉತ್ತರಪ್ರದೇಶ), ಫೆಬ್ರುವರಿ ೧೧.(ಸುದ್ಧಿ) – ಕುಂಭಮೇಳದ ಅಸಂಖ್ಯ ಜನಸಾಗರದಿಂದ ರೈಲುಗಳ ವೇಳಾಪಟ್ಟಿ ಸಂಪೂರ್ಣವಾಗಿ ವ್ಯತ್ಯಯಗೊಂಡಿದೆ. ಭಕ್ತರ ಸಂಖ್ಯೆ ಎಷ್ಟರಮಟ್ಟಿಗೆ ಹೆಚ್ಚಾಗಿದೆ ಎಂದರೆ, ಫೆಬ್ರವರಿ ತಿಂಗಳ ಕೊನೆಯವರೆಗೂ ಎಲ್ಲಾ ರೈಲುಗಳ ಟಿಕೆಟ್ ರಿಸರ್ವೇಶನ್ ಪೂರ್ಣವಾಗಿದೆ. ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿರುವ ಭಕ್ತರಿಗೆ ರೈಲುಗಳು ಸಾಕಾಗುತ್ತಿಲ್ಲ. ಭಕ್ತರ ಅನುಕೂಲಕ್ಕಾಗಿ ರೈಲ್ವೆ ಇಲಾಖೆಯು ವಿಶೇಷ ರೈಲುಗಳನ್ನು ಓಡಿಸುತ್ತಿದ್ದರೂ, ಪ್ರಯಾಣಿಕರ ದಟ್ಟಣೆ ಮಾತ್ರ ನಿಯಂತ್ರಣಕ್ಕೆ ಬರುತ್ತಿಲ್ಲ.

ಕುಂಭಕ್ಷೇತ್ರದಿಂದ ನಿರ್ಗಮಿಸುವ ಪ್ರಯಾಣಿಕರ ಸಂಖ್ಯೆ ವಿಪರೀತವಾಗಿ ಹೆಚ್ಚಾಗಿದ್ದು, ಸಾಮಾನ್ಯ ದರ್ಜೆಯ ಬೋಗಿಗಳ ಟಿಕೆಟ್ ಹೊಂದಿದ್ದರೂ ಸಹ ರೈಲಿನಲ್ಲಿ ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಪ್ರಯಾಣಿಕರು ಎಸಿ ಹಾಗೂ ಶಯನ ಬೋಗಿಗಳಲ್ಲಿ ಪ್ರಯಾಣಿಸುವಂತಾಗಿದೆ. ಈ ಪರಿಸ್ಥಿತಿಯ ಬಗ್ಗೆ ಅರಿವಿಲ್ಲದ ಅನೇಕ ಭಕ್ತರು ನಿಲ್ದಾಣಕ್ಕೆ ಸಮಯಕ್ಕೆ ಬರದ ಕಾರಣ ರೈಲುಗಳು ತಪ್ಪಿ ಹೋಗುತ್ತಿವೆ.

ಕೊನೆಯ ಕ್ಷಣದಲ್ಲಿ ಬೋಗಿಗಳ ನಿಲುಗಡೆ ಸ್ಥಳವನ್ನು ಪ್ರಕಟಿಸುವುದರಿಂದ ಪ್ರಯಾಣಿಕರಲ್ಲಿ ಗೊಂದಲ !

ರೈಲು ಬರುವ ಕೆಲವೇ ನಿಮಿಷಗಳ ಮೊದಲು ಬೋಗಿಗಳು ಎಲ್ಲಿ ನಿಲ್ಲುತ್ತವೆ ಎಂದು ಫಲಕದಲ್ಲಿ ತೋರಿಸಲಾಗುತ್ತದೆ. ಹೀಗಾಗಿ, ಫಲಕದಲ್ಲಿ ಮಾಹಿತಿ ನೋಡಲು ಮೊದಲೇ ಬಂದರೂ, ರಿಸರ್ವೇಷನ್ ಬೋಗಿ ನಿಖರವಾಗಿ ಎಲ್ಲಿ ನಿಲ್ಲುತ್ತದೆ ಎಂದು ಪ್ರಯಾಣಿಕರಿಗೆ ತಿಳಿಯುವುದಿಲ್ಲ. ಅಂತಹ ಸಮಯದಲ್ಲಿ, ಸಾಮಾನುಗಳನ್ನು ಹೊತ್ತುಕೊಂಡು ರಿಸರ್ವೇಷನ್ ಬೋಗಿಗಳವರೆಗೆ ಹೋಗುವುದು ಕಷ್ಟಕರವಾಗುತ್ತದೆ. ಅದರಲ್ಲೂ ವೃದ್ಧರು, ಮಕ್ಕಳು ಮತ್ತು ಮಹಿಳೆಯರು ಇದ್ದರೆ, ಕಡಿಮೆ ಸಮಯದಲ್ಲಿ ಸಾಮಾನುಗಳನ್ನು ತೆಗೆದುಕೊಂಡು ಹೋಗುವುದು ಸವಾಲಿನ ವಿಷಯವಾಗಿದೆ.

ಹಮಾಲರಿಂದ ಸುಲಿಗೆ

ಉತ್ತರಪ್ರದೇಶದ ವಿವಿಧ ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಸಾಮಾನುಗಳನ್ನು ರೈಲು ಭೋಗಿಯವರೆಗೆ ಕೊಂಡುಯ್ಯಲು ಹಮಾಲರು ಪ್ರಯಾಣಿಕರಿಂದ ದುಬಾರಿ ಹಣವನ್ನು ವಸೂಲಿ ಮಾಡುತ್ತಿದ್ದಾರೆ. ಕೆಲವರು 7-8 ಚೀಲಗಳನ್ನು ಒಯ್ಯಲು ಮೂರು ಸಾವಿರ ರೂಪಾಯಿಗಳಿಗಿಂತಲೂ ಹೆಚ್ಚು ಹಣವನ್ನು ಕೇಳುತ್ತಿದ್ದಾರೆ.