ಸಂಗಮ ತಟಕ್ಕೆ ಹೋಗಲು ಭಾವಿಕರಿಂದ ೫ ಸಾವಿರ ರೂಪಾಯಿಗಳ ವರೆಗೆ ಸುಲಿಗೆ ಮಾಡುತ್ತಿರುವ ದೋಣಿಯ ಚಾಲಕರು !

`ಹಣ ಇಲ್ಲದಿದ್ದರೆ, ನಡೆದುಕೊಂಡು ಹೋಗಿ’ ಎಂದು ಹೇಳುತ್ತಿರುವ ಪೊಲೀಸರು !

ಪ್ರಯಾಗರಾಜ (ಉತ್ತರಪ್ರದೇಶ), ಫೆಬ್ರುವರಿ ೧೧ (ವಾರ್ತೆ.) – ಭಾವಿಕರಿಗೆ ಮಹಾಕುಂಭಕ್ಷೇತ್ರದಲ್ಲಿರುವ ತ್ರಿವೇಣಿ ಸಂಗಮದಲ್ಲಿ ಸ್ನಾನಕ್ಕಾಗಿ ಕರೆದುಕೊಂಡು ಹೋಗಲು ಖಾಸಗಿ ಮತ್ತು ಸರಕಾರಿ ದೋಣಿ ಚಾಲಕರು ಪ್ರತಿ ಭಾವಿಕರಿಂದ ೧೫೦ ರೂಪಾಯಿ ಪಡೆಯಬೇಕೆಂಬ ಸರಕಾರಿ ನಿಯಮವಿದೆ. ಹೀಗಿದ್ದರೂ ನಿಯಮವನ್ನು ಗಾಳಿಗೆ ತೂರಿ ದೋಣಿಚಾಲಕರು ಪ್ರತಿ ವ್ಯಕ್ತಿಯಿಂದ ೨ ರಿಂದ ೫ ಸಾವಿರದವರೆಗೆ ಬಾಡಿಗೆ ತೆಗೆದುಕೊಂಡು ಅವರನ್ನು ದೋಚುತ್ತಿದ್ದಾರೆ. ಭಾವಿಕರು ಕಡಿಮೆ ಹಣ ಪಡೆಯಲು ಅನೇಕ ಬಾರಿ ವಿನಂತಿಸಿದರೂ ಕೂಡ ದೋಣಿ ಚಾಲಕರು ನಿರ್ಲಕ್ಷಿಸುತ್ತಿದ್ದಾರೆ. ಈ ಬಗ್ಗೆ ಸಂಗಮದಲ್ಲಿನ ಪೊಲೀಸರಿಗೆ ಹೇಳಿದರೆ, ಅವರು `ಭಕ್ತರಿಗೆ ದೋಣಿಯಲ್ಲಿ ಹೋಗಲು ಆಗದಿದ್ದರೆ ನಡೆದುಕೊಂಡು ಹೋಗಬೇಕು !’ ಎಂದು ಹೇಳುತ್ತಾರೆ.

ದೋಣಿ ಚಾಲಕರಿಂದ ೪ ಜನರ ಕುಟುಂಬಕ್ಕಾಗಿ ೧೦ ರಿಂದ ೧೨ ಸಾವಿರ ರೂಪಾಯಿಗಳ ಬೇಡಿಕೆ !

ಸಂಗಮಕ್ಕೆ ಹೋಗಲು ಜನರು ದೋಣಿಗಾಗಿ ಸಾಲು ನಿಂತಿರುತ್ತಾರೆ. ದೋಣಿಗಳ ದಾರಿ ಕಾಯಲು ಗಂಟೆಗಟ್ಟಲೆ ಸಮಯ ಬೇಕಾಗುತ್ತದೆ. ೪ ಜನರ ಕುಟುಂಬಕ್ಕಾಗಿ ೧೦ ರಿಂದ ೧೨ ಸಾವಿರ ರೂಪಾಯಿ ಬಾಡಿಗೆ ಪಡೆಯಲಾಗುತ್ತಿದೆ. ‘ಬೋಟ್ ಕ್ಲಬ್ ಘಾಟ್’ನ್ನು ತಲುಪುತ್ತಲೇ ಜಮ್ಮು ಕಾಶ್ಮೀರದಿಂದ ಬಂದಿರುವ ಸುಭಾಷಚಂದ್ರ ಶರ್ಮಾರವರು `ಸಂಗಮಸ್ನಾನಕ್ಕಾಗಿ ೪ ಜನರಿಂದ ೮ ಸಾವಿರ ರೂಪಾಯಿ ಪಡೆಯಲಾಯಿತು, ಎಂದು ಹೇಳಿದರು. ಇದು ಬೋಟ್ ಕ್ಲಬ್ ನಿಂದ ತ್ರಿವೇಣಿಘಾಟನ ವರೆಗಿನ ಕೇವಲ ದೋಣಿಯ ಬಾಡಿಗೆಯಾಗಿದೆ. ಅನೇಕ ದೋಣಿಚಾಲಕರು ೧೦ ರಿಂದ ೧೨ ಸಾವಿರ ರೂಪಾಯಿ ಕೇಳುತ್ತಿದ್ದಾರೆ. ಸಂಗಮದಲ್ಲಿ ದೋಣಿಚಾಲಕರಿಗೆ ಪತ್ರಕರ್ತರು ‘ಭಾವಿಕರಿಂದ ಎಷ್ಟು ಬಾಡಿಗೆ ಪಡೆಯುತ್ತಿದ್ದೀರಿ ?’ ಎಂದು ಕೇಳಿದರೆ ಅದನ್ನೂ ದೋಣಿ ಚಾಲಕರು ನಿರ್ಲಕ್ಷಿಸುತ್ತಿರುವ ಚಿತ್ರಣವಿದೆ. ದೋಣಿ ಬಂದ ನಂತರ ಅದರಲ್ಲಿ ಕುಳಿತುಕೊಳ್ಳಲು ನೂಕುನುಗ್ಗಲಿನ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಅನೇಕರಿಗೆ ಅಷ್ಟೊಂದು ಹಣ ನೀಡಿದ ನಂತರವೂ ದೋಣಿಯಲ್ಲಿ ಕುಳಿತುಕೊಳ್ಳಲು ಜಾಗವೂ ಸಿಗುತ್ತಿಲ್ಲ. ದೋಣಿಚಾಲಕರು ಅನೇಕ ಬಾರಿ ಸಿಕ್ಕಿಹಾಕಿಕೊಳ್ಳಬಾರದು ಎಂದು ನದಿಯ ಮಧ್ಯಭಾಗದಲ್ಲಿ ಹಣದ ಕೊಡುಕೊಳ್ಳುವಿಕೆ ನಡೆಸುತ್ತಿದ್ದಾರೆ ಎಂದು ಭಾವಿಕರು ಹೇಳುತ್ತಿದ್ದಾರೆ. ದೋಣಿಯಲ್ಲಿ ಹತ್ತುವ ಮೊದಲು ಭಕ್ತರಿಗೆ ಮೇಲು ಧ್ವನಿಯಲ್ಲಿ ಬಾಡಿಗೆ ಹೇಳಲಾಗುತ್ತದೆ. ಹಣದ ಬಗ್ಗೆ ಜೋರಾಗಿ ಮಾತನಾಡುವವರನ್ನು ದೋಣಿಯಲ್ಲಿ ಕುಳಿತುಕೊಳ್ಳಲು ಬಿಡುವುದಿಲ್ಲ.

ದೂರು ನೀಡಿದ ನಂತರ ಪೊಲೀಸರಿಗೆ ಭಾವಿಕರ ಮೇಲೆಯೇ ಅಸಮಾಧಾನ !

ಭಾವಿಕರಿಗೆ ಯಾವುದೇ ರೀತಿಯ ತೊಂದರೆಯಾಗಬಾರದೆಂದು ಸರಕಾರವು ಪೊಲೀಸರನ್ನು ನೇಮಿಸಿದೆ; ಆದರೆ ದೋಣಿಚಾಲಕರ ವರ್ತನೆಯ ಬಗ್ಗೆ ಭಾವಿಕರು ದೂರು ನೀಡಿದರೆ ಪೊಲೀಸ ಸಿಬ್ಬಂದಿಗಳು ಭಕ್ತರ ಮೇಲೆಯೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಬಂದೋಬಸ್ತಿನಲ್ಲಿರುವ ಪೊಲೀಸ ಅಧಿಕಾರಿಗಳಾದ ದಿನೇಶಕುಮಾರ ಮಿಶ್ರಾರವರ ಬಳಿ ದೂರು ನೀಡಿದಾಗ ಅವರು ಭಾವಿಕರ ಮೇಲೆಯೇ ಸಿಟ್ಟಾಗಿ, `ಹಣ ಇಲ್ಲದಿದ್ದರೆ ನಡೆದುಕೊಂಡು ಹೋಗಿರಿ, ಖಾಸಗಿ ದೋಣಿಗಳ ಮೇಲೆ ನಮ್ಮ ಹಿಡಿತವಿಲ್ಲ’ ಎಂದು ಹೇಳಿದರು.

ಭಾವಿಕರು ದೂರು ನೀಡಿದರೆ ಯೋಗ್ಯವಾದ ಕ್ರಮಕೈಗೊಳ್ಳಲಾಗುವುದು ! -ವಿವೇಕ ಚತುರ್ವೇದಿ, ಹೆಚ್ಚುವರಿ ನ್ಯಾಯಾಧಿಕಾರಿಗಳು

ದೋಣಿಚಾಲಕರು ಮನಸ್ಸಿಗೆ ಬಂದಂತೆ ಪಡೆಯುತ್ತಿರುವ ಬಾಡಿಗೆಯ ಬಗ್ಗೆ ಕೇಳಿದಾಗ ಹೆಚ್ಚುವರಿ ನ್ಯಾಯಾಧಿಕಾರಿಗಳಾದ ವಿವೇಕ ಚತುರ್ವೇದಿಯವರು, ಹೆಚ್ಚಿನ ಬಾಡಿಗೆ ಪಡೆಯುವುದು ಅನಧಿಕೃತವಾಗಿದೆ. ಯಾವುದೇ ದೋಣಿಚಾಲಕನು ನಿರ್ಧರಿತ ಶುಲ್ಕಕ್ಕಿಂತಲೂ ಹೆಚ್ಚಿನ ಹಣ ಪಡೆದರೆ ಭಾವಿಕರು ದೂರು ನೀಡಬೇಕು. ತಕ್ಷಣ ಅಂತಹವರ ಮೇಲೆ ಯೋಗ್ಯ ಕ್ರಮ ಕೈಗೊಳ್ಳಲಾಗುವುದು, ಎಂದು ಹೇಳಿದರು. (ಹಾಡುಹಗಲೇ ದೋಣಿಚಾಲಕರು ಮನಸ್ಸಿಗೆ ಬಂದಂತೆ ವರ್ತಿಸಿರುವುದು ಕಾಣುತ್ತಿರುವಾಗ ಪೊಲೀಸರು ಸ್ವತಃ ಅದರ ಬಗ್ಗೆ ಗಮನ ಹರಿಸಿ ಕ್ರಮಕೈಗೊಳ್ಳಬೇಕು. ಭಾವಿಕರಿಂದ ದೂರಿನ ಅಪೇಕ್ಷೆಯಿಡುವುದು, ಬೇಜವಾಬ್ದಾರಿತನವಲ್ಲವೇ ? – ಸಂಪಾದಕರು)

ಸಂಪಾದಕೀಯ ನಿಲುವು

  • ಒಬ್ಬ ಭಾವಿಕನನ್ನು ಕರೆದುಕೊಂಡು ಹೋಗಲು ಸರಕಾರವು ನಿರ್ಧರಿಸಿದ ಶುಲ್ಕ ಕೇವಲ ೧೫೦ ರೂಪಾಯಿ; ಆದರೆ ದೋಣಿಯ ಮಾಲಿಕರು ಕನಿಷ್ಠ ೨೦೦೦ ರೂಪಾಯಿ ದೋಚುತ್ತಿದ್ದಾರೆ !
  • ಉತ್ತರಪ್ರದೇಶ ಸರಕಾರವು ಈ ಬಗ್ಗೆ ಗಮನ ಹರಿಸಿ ಸಂಬಂಧಿಸಿದ ದೋಣಿ ಚಾಲಕರ ಮೇಲೆ ಕಠಿಣ ಕ್ರಮಕೈಗೊಳ್ಳಬೇಕು, ಎಂಬುದು ಶ್ರದ್ಧೆಯುಳ್ಳ ಹಿಂದೂಗಳ ಅಪೇಕ್ಷೆಯಾಗಿದೆ !
  • ಈ ದೋಣಿ ಚಾಲಕರಿಂದ ಕನಿಷ್ಠ ೧೫ ಪಟ್ಟು ಹೆಚ್ಚಿನ, ಅಂದರೆ ಹಿಡಿತವಿಲ್ಲದ ಬಾಡಿಗೆ ಹೆಚ್ಚಳದ ಹಿಂದೆ ಯಾವುದಾದರೂ ಷಡ್ಯಂತ್ರವಿದೆಯೇ ಎಂಬುದನ್ನು ಗಮನಿಸುವುದೂ ಅಗತ್ಯವಾಗಿದೆ !