‘ಜಯ ಶ್ರೀ ರಾಮ’, ‘ಹರ ಹರ ಮಹಾದೇವ’ ಎಂದು ಘೋಷಣೆ ಕೂಗುತ್ತಾ, ಲಕ್ಷಾಂತರ ಸಾಧು-ಸಂತರು ಮತ್ತು ಭಕ್ತರಿಂದ ಅಮೃತ ಸ್ನಾನ !

ಪ್ರಯಾಗರಾಜ ಕುಂಭಮೇಳ 2025

ಜನಸಂದಣಿಯನ್ನು ನಿಯಂತ್ರಿಸುವಲ್ಲಿ ಪೊಲೀಸರು ಯಶಸ್ವಿ!

ಸ್ನಾನದ ಸಮಯದಲ್ಲಿ ಸಾಧು-ಸಂತರ ಉತ್ಸಾಹ

ಪ್ರಯಾಗರಾಜ, ಫೆಬ್ರವರಿ 3 (ಸುದ್ದಿ) – ‘ಜಯ ಶ್ರೀ ರಾಮ’ ಮತ್ತು ‘ಹರ ಹರ ಮಹಾದೇವ’ ಎಂದು ಜಯಘೋಷ ಮಾಡುತ್ತಾ, ವಸಂತ ಪಂಚಮಿಯಂದು, ಅಂದರೆ ಫೆಬ್ರವರಿ 3 ರಂದು ಪವಿತ್ರ ತ್ರಿವೇಣಿ ಸಂಗಮದಲ್ಲಿ 2 ಕೋಟಿ 33 ಲಕ್ಷ ಭಕ್ತರು ಅಮೃತ ಸ್ನಾನ ಮಾಡಿದರು. ಮೌನಿ ಅಮಾವಾಸ್ಯೆಯ ದಿನದಂದು ಸಂಭವಿಸಿದ ದುರಂತದ ಹಿನ್ನೆಲೆಯಲ್ಲಿ, ಭಕ್ತರ ಗುಂಪನ್ನು ನಿಯಂತ್ರಿಸುವುದು ಪೊಲೀಸರ ಮುಂದಿದ್ದ ಸವಾಲಾಗಿತ್ತು ಮತ್ತು ಇದರಲ್ಲಿ ಪೊಲೀಸರು ಯಶಸ್ವಿಯಾದರು. ಬೆಳಿಗ್ಗೆಯಿಂದ ಎಲ್ಲಾ ಅಖಾಡಗಳು ಅವರಿಗೆ ನೀಡಲಾದ ಸ್ನಾನದ ಸಮಯವನ್ನು ಪಾಲಿಸಿದರು. ಆದ್ದರಿಂದ, ಅಮೃತಸ್ನಾನ ಶಿಸ್ತುಬದ್ಧವಾಗಿ, ಸಮಯೋಚಿತವಾಗಿ ಮತ್ತು ಉತ್ಸಾಹದಿಂದ ಜರುಗಿತು. ಸರಕಾರದಿಂದಲೂ ಅಮೃತ ಸ್ನಾನದ ದಿನದಂದು, ಸಂತರು ಮತ್ತು ಭಕ್ತರ ಮೇಲೆ ಹೆಲಿಕಾಪ್ಟರ್ ಮೂಲಕ ಹೂಮಳೆಯನ್ನು ಸುರಿಸಿತು.

ಸರಕಾರದಿಂದ ಹೆಲಿಕಾಪ್ಟರ್ ಮೂಲಕ ಭಕ್ತರ ಮೇಲೆ ಹೂಮಳೆ

ಜನಸಂದಣಿಯನ್ನು ನಿಯಂತ್ರಿಸಲು ಪೊಲೀಸರು ಈ ಉಪಾಯಯೋಜನೆಗಳನ್ನು ಮಾಡಿದರು

ತ್ರಿವೇಣಿ ಸಂಗಮಕ್ಕೆ ಹೋಗುವ ಮಾರ್ಗದಲ್ಲಿ ಪೊಲೀಸರು ಬ್ಯಾರಿಕೇಡ್‌ಗಳನ್ನು (ತಾತ್ಕಾಲಿಕ ತಡೆಗೋಡೆಗಳು) ಹಾಕಿದ್ದರು. ಇದರಲ್ಲಿ, ಭಕ್ತರು ತ್ರಿವೇಣಿ ಸಂಗಮ ತಲುಪಲು ಪ್ರತ್ಯೇಕ ಮಾರ್ಗವನ್ನು ಇಡಲಾಗಿತ್ತು. ಜನದಟ್ಟಣೆಯನ್ನು ತಡೆಗಟ್ಟಲು, ಸ್ನಾನ ಮಾಡಿದ ಭಕ್ತರನ್ನು ಪೊಲೀಸರು ಸಂಗಮ ಘಾಟನಿಂದ ಹೊರಗೆ ಕಳುಹಿಸಿದರು. ಹಾಗೆಯೇ ಸಂಗಮ ಘಾಟ ಹತ್ತಿರವಿರುವ ಮಾರಾಟಗಾರರನ್ನು ಸಹ ಪೊಲೀಸರು ಹೊರಗೆಕಳುಹಿಸಿದರು. ಅಖಾಡಾಗಳ ಮಾರ್ಗದಲ್ಲಿ ಯಾವುದೇ ಅಡೆತಡೆಗಳು ಉಂಟಾಗದಂತೆ ನೋಡಿಕೊಳ್ಳಲು ಮಾರ್ಗದಲ್ಲಿ ಬಿಗಿ ಪೊಲೀಸ್ ಕಾವಲು ಇರಿಸಲಾಗಿತ್ತು. ಈ ಮಾರ್ಗದಲ್ಲಿ ಇತರ ಭಕ್ತರು ಬರದಂತೆ ಸಂಪೂರ್ಣ ಮಾರ್ಗದುದ್ದಕ್ಕೂ ಬ್ಯಾರಿಕೇಡ್‌ಗಳನ್ನು ಹಾಕಲಾಗಿತ್ತು. ಹಿಂದಿನ ದಿನವೇ ತ್ರಿವೇಣಿ ಮಾರ್ಗದಲ್ಲಿರುವ ಎಲ್ಲಾ ಅಂಗಡಿಗಳನ್ನು ಪೊಲೀಸರು ತೆಗೆದುಹಾಕಿದ್ದರು. ಹಾಗೆಯೇ ಈ ಮಾರ್ಗದಲ್ಲಿ ಯಾರಿಗೂ ಮಲಗಲು ನಿರ್ಬಂಧಿಸಲಾಗಿತ್ತು. ಇದರಿಂದ ತ್ರಿವೇಣಿ ಸಂಗಮಕ್ಕೆ ಹೋಗುವವರಿಗೆ ಮಾರ್ಗ ವಿಶಾಲವಾಗಿತ್ತು. ಪರಿಣಾಮವಾಗಿ, ಭಕ್ತರಿಗೆ ಸುಲಭವಾಗಿ ಸಂಗಮ ಘಾಟ ಅನ್ನು ತಲುಪಲು ಸಾಧ್ಯವಾಯಿತು.

ಶಿವಲಿಂಗಕ್ಕೆ ಸ್ನಾನ ಹಾಕುತ್ತಿರುವ ಸಾಧು-ಸಂತರು

ಸಾಧು-ಸಂತರ ಬಗ್ಗೆ ಭಕ್ತರ ಶ್ರದ್ಧೆ !

ತ್ರಿವೇಣಿ ಸಂಗಮಕ್ಕೆ ಹೋಗುತ್ತಿದ್ದ ವಿವಿಧ ಆಖಾಡಾಗಳು ನಡೆಸಿದ ಶೋಭಾಯಾತ್ರೆಯನ್ನು ಭಕ್ತರು ಭಾವಪೂರ್ಣ ಸ್ವಾಗತಿಸಿದರು. ಅಮೃತ ಸ್ನಾನದ ನಂತರ, ಸಂತರು ಮತ್ತು ನಾಗಾ ಸಾಧುಗಳು ಮರಳುತ್ತಿರುವಾಗ ಪ್ರತಿಯೊಂದು ಅಖಾಡ ಹಾದುಹೋದ ಬಳಿಕ ಭಕ್ತರು ಆ ಮಾರ್ಗದ ಮಣ್ಣನ್ನು ತಮ್ಮ ಹಣೆಗೆ ಹಚ್ಚಿಕೊಳ್ಳುತ್ತಿದ್ದರು. ಆ ದಾರಿಯಲ್ಲಿ ಅನೇಕ ಜನರು ತಮ್ಮ ಕೈಯಲ್ಲಿ ಮಣ್ಣನ್ನು ತೆಗೆದುಕೊಂಡು ಹೋಗುತ್ತಿದ್ದರು. ಸಾಧು-ಸಂತರು ಭಕ್ತರಿಗಾಗಿ ಹಾರಿಸಿದ ಹೂವುಗಳು ಮತ್ತು ಮಾಲೆಗಳನ್ನು ಸ್ವೀಕರಿಸಲು ಭಕ್ತರು ಕಿಕ್ಕಿರಿದು ತುಂಬಿದ್ದರು. ಅಖಾಡದಿಂದ ಸ್ನಾನ ಮಾಡಿ ಹಿಂತಿರುಗುವಾಗ, ಭಕ್ತರು ಎರಡೂ ಬದಿಗಳಲ್ಲಿ ನಿಂತು ಸಾಧು ಮತ್ತು ಸಂತರಿಗೆ ನಮಸ್ಕಾರ ಮಾಡುತ್ತಿದ್ದರು. ಶಸ್ತ್ರಧಾರಿ ನಾಗಾ ಸಾಧುಗಳು ಈ ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಿದ್ದರು.

ಅಮೃತ ಸ್ನಾನಕ್ಕಾಗಿ ಅಖಾಡಗಳ ಶಿಸ್ತುಬದ್ಧವಾಗಿ ನಡೆದ ಮೆರವಣಿಗೆ

ಭಕ್ತರಿಗೆ ಪೊಲೀಸರಿಂದ ಸಹಕಾರ !

ಹಿಂದಿರುಗುವ ಮಾರ್ಗದಲ್ಲಿ ಅಖಾಡಗಳ ಶೋಭಾಯಾತ್ರೆ ಹಾದು ಹೋಗುತ್ತಿದ್ದಂತೆ, ದಾರಿಯಲ್ಲಿ ಬಿದ್ದ ಹೂವುಗಳು ಮತ್ತು ಹೂಮಾಲೆಗಳನ್ನು ಪೊಲೀಸರು ಎತ್ತಿಕೊಂಡು ಭಕ್ತರಿಗೆ ನೀಡುತ್ತಿದ್ದರು. ಪ್ರತಿ ಅಖಾಡಗಳು ಮಾರ್ಗದಿಂದ ಹೋದ ಬಳಿಕ ಭಕ್ತರಿಗೆ ಹೂವುಗಳು ಮತ್ತು ಮಣ್ಣನ್ನು ತೆಗೆದುಕೊಳ್ಳಲು ಪೊಲೀಸರು ಅವರಿಗೆ ಮಾರ್ಗದಲ್ಲಿ ಬಿಟ್ಟು ಅವರ ಧಾರ್ಮಿಕ ಭಾವನೆಗಳನ್ನು ಗೌರವಿಸುತ್ತಿದ್ದರು. ಅನೇಕ ಪೊಲೀಸರು ನಾಗಾ ಸಾಧುಗಳಿಂದ ಆಶೀರ್ವಾದ ಪಡೆಯುತ್ತಿದ್ದರು. ಇದಲ್ಲದೇ ಜನಸಂದಣಿ ಹೆಚ್ಚಾದಂತೆ, ಪೊಲೀಸರು ಸಾಧು-ಸಂತರು ಮತ್ತು ಭಕ್ತರೊಂದಿಗೆ ಹೆಚ್ಚು ಪ್ರೀತಿ ಮತ್ತು ನಮ್ರತೆಯಿಂದ ವರ್ತಿಸಿ ಪರಿಸ್ಥಿತಿಯನ್ನು ಚೆನ್ನಾಗಿ ನಿಭಾಯಿಸಿದ್ದರು. ಜನಸಂದಣಿಯನ್ನು ನಿಯಂತ್ರಿಸಲು ಕೆಲವು ಕುದುರೆ ಏರಿದ ಪೊಲೀಸರನ್ನು ನಿಯೋಜಿಸಲಾಗಿತ್ತು

ಅಮೃತ ಸ್ನಾನಕ್ಕೆ ಹೋಗುತ್ತಿರುವ ನಾಗ ಸಾಧು

ನೈರ್ಮಲ್ಯ ಕಾರ್ಮಿಕರಿಂದ ರಾತ್ರಿಯಿಡೀ ಸ್ವಚ್ಛತೆ !

ವಸಂತ ಪಂಚಮಿಯ ದಿನದಂದು, ಕುಂಭ ಕ್ಷೇತ್ರಕ್ಕೆ ಸ್ನಾನ ಮಾಡಲು ಬಂದಿದ್ದ ಲಕ್ಷಾಂತರ ಭಕ್ತರು ಚಹಾ ಕಪ್‌ಗಳು, ಊಟದ ಪತ್ರಾವಳಿ ಮತ್ತು ತಿಂಡಿ ತಿನಿಸಿನ ತ್ಯಾಜ್ಯವನ್ನು ಎಲ್ಲೆಡೆ ಎಸೆದಿದ್ದರು. ಅನೇಕ ಸ್ಥಳಗಳಲ್ಲಿ ಕಸದ ತೊಟ್ಟಿಗಳ ಹೊರಗೆ ಕಸ ಬಿದ್ದಿತ್ತು. ಈ ಎಲ್ಲಾ ಶುಚಿಗೊಳಿಸಲು ನೂರಾರು ನೈರ್ಮಲ್ಯ ಕಾರ್ಮಿಕರು 2 ದಿನಗಳ ಕಾಲ ಹಗಲು ರಾತ್ರಿ ಕೆಲಸ ಮಾಡುತ್ತಿದ್ದರು. ಆದ್ದರಿಂದ, ಅಮೃತಸ್ನಾನದ ಹಿಂದಿನ ರಾತ್ರಿ ಕುಂಭ ಕ್ಷೇತ್ರದ ಸಂಪೂರ್ಣ ಮಾರ್ಗವು ತುಂಬಾ ಸ್ವಚ್ಛವಾಗಿ ಕಾಣಿಸುತ್ತಿತ್ತು. ಫೆಬ್ರವರಿ 3 ರಂದು ಸ್ನಾನದ ದಿನದಂದು ಸ್ನಾನದ ಮಾರ್ಗದ ಮೇಲಿನ ಸ್ವಚ್ಛತಾಕಾರ್ಯ ನಡೆಯುತ್ತಲೇ ಇತ್ತು. ಕುಂಭ ಕ್ಷೇತ್ರದಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ಈ ಎಲ್ಲಾ ನೈರ್ಮಲ್ಯ ಕಾರ್ಮಿಕರು ಬಹುದೊಡ್ಡ ಕೊಡುಗೆ ನೀಡಿದ್ದಾರೆ.

ಇಲ್ಲಿಯವರೆಗೆ ನಡೆದ ಸ್ನಾನಗಳಿಗೆ ಹೋಲಿಸಿದರೆ, ಈ ವರ್ಷ ಭಕ್ತರ ಸಂಖ್ಯೆ ಅತ್ಯಂತ ಕಡಿಮೆ !

ವಸಂತ ಪಂಚಮಿ ಫೆಬ್ರವರಿ 2 ರ ರಾತ್ರಿಯಿಂದಲೇ ಪ್ರಾರಂಭವಾಗಿದ್ದರಿಂದ ಆಡಳಿತವು ಫೆಬ್ರವರಿ 2 ರ ರಾತ್ರಿಯೇ ಭಕ್ತರಿಗೆ ಸ್ನಾನ ಮಾಡಬೇಕೆಂದು ನಿರಂತರವಾಗಿ ಘೋಷಿಸುತ್ತಿತ್ತು. ಆದ್ದರಿಂದ, ಅನೇಕ ಭಕ್ತರು ಫೆಬ್ರವರಿ 2 ರ ರಾತ್ರಿಯಿಂದ ಘಾಟ್‌ಗಳಲ್ಲಿ ಸ್ನಾನ ಮಾಡಲು ಪ್ರಾರಂಭಿಸಿದರು. ಇದರಿಂದಾಗಿ ಫೆಬ್ರವರಿ 3 ರ ಬೆಳಿಗ್ಗೆಯಿಂದ ಜನಸಂದಣಿ ಕಡಿಮೆಯಾಯಿತು. ಇಲ್ಲಿಯವರೆಗೆ ನಡೆದ ಸ್ನಾನಗಳಿಗೆ ಹೋಲಿಸಿದರೆ, ಈ ವರ್ಷ ಭಕ್ತರ ಸಂಖ್ಯೆ ಅತ್ಯಂತ ಕಡಿಮೆಯಾಗಿತ್ತು. ವಸಂತ ಪಂಚಮಿಯಂದು ಮಧ್ಯಾಹ್ನ 2 ಗಂಟೆಯವರೆಗೆ 1 ಕೋಟಿ 35 ಲಕ್ಷ ಭಕ್ತರು ಸ್ನಾನ ಮಾಡಿದರು.